ಆತ್ಮಗೌರವವನ್ನು ಮರಳಿ ಕಂಡುಕೊಳ್ಳುವ ಅವಲೋಕನ
“ನಾನು ಯಾಕೆ ಸುಂದರವಾಗಿಲ್ಲ?”
ಈ ಪ್ರಶ್ನೆ ಕನ್ನಡಿಯ ಮುಂದೆ ಹುಟ್ಟುವುದಿಲ್ಲ.
ಇದು ಹೋಲಿಕೆಯ ನಂತರ ಹುಟ್ಟುತ್ತದೆ.
ಒಬ್ಬರನ್ನು ನೋಡಿ.
ಒಂದು ಫೋಟೋ ನೋಡಿ.
ಒಂದು comment ಕೇಳಿ.
ಅಲ್ಲೇ ನಮ್ಮ ಮನಸ್ಸು ನಿಧಾನವಾಗಿ ಕೇಳುತ್ತದೆ —
“ನಾನು ಯಾಕೆ ಅವರಂತಿಲ್ಲ?”
ಆ ಕ್ಷಣದಲ್ಲಿ ಸುಂದರತೆ ಸಮಸ್ಯೆಯಾಗುವುದಿಲ್ಲ.
ಹೋಲಿಕೆ ಸಮಸ್ಯೆಯಾಗುತ್ತದೆ.
ಸುಂದರತೆ ಹುಟ್ಟಿದ ಕ್ಷಣ
ನಾವು ಹುಟ್ಟಿದಾಗ
ನಮಗೆ ನಮ್ಮ ಮುಖದ ಬಗ್ಗೆ ಅಭಿಪ್ರಾಯ ಇರೋದಿಲ್ಲ.
“ಸುಂದರ” ಅನ್ನೋ ಪದ
ಹೊರಗಿನಿಂದ ಬರುತ್ತದೆ.
- ಸಂಬಂಧಿಕರ ಮಾತುಗಳಿಂದ
- ಸಿನಿಮಾ ಮುಖಗಳಿಂದ
- ಜಾಹೀರಾತುಗಳ ಮಾನದಂಡಗಳಿಂದ
- ಸಾಮಾಜಿಕ ಮಾಧ್ಯಮಗಳ ಸೌಂದರ್ಯ ವರ್ಧಕ ಫಿಲ್ಟರ್ ಗಳ ಮೂಲಕ
ನಮ್ಮ ಆತ್ಮಮೌಲ್ಯ
ನಮ್ಮ ಕನ್ನಡಿಯಲ್ಲಿ ರೂಪುಗೊಳ್ಳುವುದಿಲ್ಲ.
ಅದು ಸಮಾಜದ ಪ್ರತಿಬಿಂಬದಲ್ಲಿ ರೂಪುಗೊಳ್ಳುತ್ತದೆ.
ಕನ್ನಡಿಯ ಸಮಸ್ಯೆನಾ? ಮನಸ್ಸಿನ ಸಮಸ್ಯೆನಾ?
ಕನ್ನಡಿಯಲ್ಲಿ ನೋಡಿದಾಗ
ನಮ್ಮ ಮುಖ ಮಾತ್ರ ಕಾಣಬೇಕು.
ಆದರೆ ನಾವು ನೋಡೋದು ಹೋಲಿಕೆ.
“ಅವಳು ಬೆಳ್ಳಗಿದ್ದಾಳೆ.”
“ಅವನು ಎತ್ತರವಾಗಿದ್ದಾನೆ.”
“ಅವರು ತೆಳ್ಳಗಿದ್ದಾರೆ.”
ಅಲ್ಲಿ ಪ್ರಶ್ನೆ ಬದಲಾಗುತ್ತದೆ:
ನಾನು ಯಾಕೆ ಸುಂದರವಾಗಿಲ್ಲ?
ಎಂಬುದರಿಂದ
ನಾನು ಯಾಕೆ ಅವರಂತಿಲ್ಲ? ಎಂಬಲ್ಲಿಗೆ.
ಸೌಂದರ್ಯ ಅಳತೆ ಆದ ಕ್ಷಣದಿಂದ
ನಮ್ಮ ಸ್ವಾಭಿಮಾನ ಅಳತೆಗಿಳಿಯುತ್ತದೆ.
ಹೆಣ್ಣುಮಕ್ಕಳಿಗೆ ಸೌಂದರ್ಯ — ಆಶೀರ್ವಾದವಾ? ಭಯವಾ?
ಕೆಲವೊಮ್ಮೆ
ಒಬ್ಬ ಹೆಣ್ಣುಮಗುವಿನ ಸೌಂದರ್ಯ
ಅವಳಿಗೆ ಗರ್ವವಾಗುವುದಿಲ್ಲ.
ಮನೆಯವರಿಗೆ ಭಯವಾಗುತ್ತದೆ.
“ಜಾಸ್ತಿ ಗಮನ ಬೇಡ.”
“ಹೀಗೆ ಸಿಂಗರಿಸ್ಕೋಬೇಡ.”
“ಹೊರಗೆ ಹೋಗೋಕೆ ಜಾಗ್ರತೆ.”
ರಕ್ಷಣೆ ಹೆಸರಿನಲ್ಲಿ
ಅವಳನ್ನು ಸಣ್ಣ ಮಾಡಲಾಗುತ್ತದೆ.
ಕೆಲವೊಮ್ಮೆ ಹೇಳುತ್ತಾರೆ:
“ನೀನು ಅಷ್ಟು ಸುಂದರ ಅಲ್ಲ.”
ಅವಳನ್ನು ಕಾಪಾಡಲು ಹೇಳಿದ ಮಾತು
ಅವಳ ಆತ್ಮವನ್ನೇ ಕುಗ್ಗಿಸುತ್ತದೆ.
ಅವಳು ಗೊಂದಲಗೊಳ್ಳುತ್ತಾಳೆ:
ನನ್ನ ಸೌಂದರ್ಯ ತಪ್ಪಾ?
ಅಥವಾ ನನ್ನ ಆತ್ಮವಿಶ್ವಾಸವೇ ಅಪಾಯವಾ?
ನಿರಂತರ ಟೀಕೆ — ಮೌನ ನಾಶ
ಒಬ್ಬ ಮಗು
ಪಾಠದಲ್ಲಿ ಮೊದಲ ಸ್ಥಾನ.
ಸಂಗೀತದಲ್ಲಿ ಬಹುಮಾನ.
ಕ್ರೀಡೆಯಲ್ಲಿ ನಾಯಕತ್ವ.
ಆದರೆ ಮನೆಯಲ್ಲಿ
ಒಂದು ಪ್ರಶಂಸೆ ಇಲ್ಲ.
ಬದಲಾಗಿ:
“ನೀನು lucky.”
“ನೀನು copy ಮಾಡಿದ್ದೀಯ.”
“ಇದು ದೊಡ್ಡ ಸಾಧನೆ ಅಲ್ಲ.”
ಇಲ್ಲಿ ಸೌಂದರ್ಯ ಮಾತ್ರವಲ್ಲ,
ಸಂಪೂರ್ಣ ಅಸ್ತಿತ್ವವೇ ಪ್ರಶ್ನೆಯಾಗುತ್ತದೆ.
ನಾವು ನಮ್ಮನ್ನು ಕನ್ನಡಿಯಲ್ಲಿ ನೋಡೋ ಮೊದಲು
ಮನಸ್ಸಿನಲ್ಲಿ ನೋಡಲು ಹೆದರುತ್ತೇವೆ.
ಸುಂದರತೆ ಎಂದರೆ ಏನು?
ಸರಿಯಾದ ಪ್ರಮಾಣವೆ?
ಚರ್ಮದ ಬಣ್ಣವೆ?
ದೇಹದ ಅಳತೆಯೆ?
ಅಥವಾ
ಅಸ್ತಿತ್ವ/ಹಾಜರಿ?
ಧ್ವನಿ?
ಚಾರಿತ್ರ್ಯ ?
ನೈತಿಕ ದೃಢತೆ?
ಯಾವುದು?
ಒಬ್ಬ ವ್ಯಕ್ತಿಯ ಮೌಲ್ಯ
ಮುಖದ ಆಕಾರದಲ್ಲಿ ಅಳೆಯಲು ಸಾಧ್ಯವೇ?
ಆದರೆ ನಾವು ಅದನ್ನೇ ಮಾಡುತ್ತೇವೆ.
ಯಾಕೆ?
ಯಾಕೆಂದರೆ ಸೌಂದರ್ಯವನ್ನು ಅಳೆಯಬಹುದು.
ಆತ್ಮಗೌರವವನ್ನು ಅಳೆಯಲಾಗುವುದಿಲ್ಲ!
ಸಮಾಜದ ಅಳತೆ — ಮಾರುಕಟ್ಟೆಯ ಲಾಭ
ಸೌಂದರ್ಯ ಉದ್ಯಮ
ನಮ್ಮ ಅಭದ್ರತೆ ಮೇಲೆ ನಿಂತಿದೆ.
ಬೆಳ್ಳಗಾಗಿಸುವ ಕ್ರೀಂ ಗಳು, ಕ್ಯಾಮರಾ, ಅಪ್ಲಿಕೇಶನ್ ಗಳ ಫಿಲ್ಟರ್ ಗಳು, ಮುಖದ , ಸೌಂದರ್ಯದ ತಿದ್ದುಪಡಿಗಳು, ಆದರೂ ನಮ್ಮ “ನಾನು ಸಾಕಾಗಿಲ್ಲ” ಅನ್ನೋ ಭಾವನೆ
ಮಾರುಕಟ್ಟೆಗೆ ಲಾಭ.
ನಾವು ನಮ್ಮನ್ನು ಹೋಲಿಸುವಷ್ಟು ಅವರು ಮಾರಾಟ ಹೆಚ್ಚಿಸುತ್ತಾರೆ.
ಆದರೆ ಪ್ರಶ್ನೆ ಇದು:
ನಾವು ಸುಂದರವಾಗಬೇಕೆ?
ಅಥವಾ ಸ್ವೀಕಾರಾರ್ಹವಾಗಬೇಕೆ?
ಆತ್ಮಗೌರವ ಮತ್ತು ಸೌಂದರ್ಯ
“ನಾನು ಸುಂದರ ಅಲ್ಲ” ಅನ್ನೋ ನಂಬಿಕೆ
ಸಾಧಾರಣ ವಿಚಾರ ಅಲ್ಲ.
ಅದು ನಿಧಾನವಾಗಿ:
- ನಮ್ಮ ಧ್ವನಿಯನ್ನು ಕಡಿಮೆ ಮಾಡುತ್ತದೆ.
- ನಮ್ಮ ಅಸ್ತಿತ್ವವನ್ನು ಸಣ್ಣ ಮಾಡುತ್ತದೆ.
- ನಮ್ಮ ಪ್ರಯತ್ನಗಳನ್ನು ಕುಗ್ಗಿಸುತ್ತದೆ.
ಒಂದು ಅಳತೆ
ನಮ್ಮ ಸಂಪೂರ್ಣ ಅಸ್ತಿತ್ವವನ್ನು ಹಿಡಿದುಕೊಳ್ಳುತ್ತದೆ.
ಅವಲೋಕನದ ಕ್ಷಣ
ಪ್ರಶ್ನೆ ಮತ್ತೆ ಕೇಳೋಣ.
ನಾನು ಯಾಕೆ ಸುಂದರವಾಗಿಲ್ಲ?
ಬಹುಶಃ
ನಾನು ಸುಂದರ ಅಲ್ಲ ಅನ್ನೋದು ಸತ್ಯವಲ್ಲ.
ಬಹುಶಃ
ನಾನು ಯಾರದೋ ಅಳತೆಗೆ ಸರಿಹೊಂದಿಲ್ಲ.
ಅವಲೋಕನ ಎಂದರೆ
ನನ್ನ ಮೇಲೆ ಹೇರಿದ ಅಳತೆಗಳನ್ನು ಗಮನಿಸುವುದು.
ನನ್ನ ಮುಖವನ್ನಲ್ಲ —
ನನ್ನ ನಂಬಿಕೆಯನ್ನು ಪರಿಶೀಲಿಸುವುದು.
ಅಂತಿಮ ಚಿಂತನೆ
ಸೌಂದರ್ಯ ಸ್ಪರ್ಧೆ ಅಲ್ಲ.
ಅದು ಅನುಭವ.
ನಾನು ಕನ್ನಡಿಯ ಮುಂದೆ ನಿಲ್ಲುವ ಮೊದಲು
ನನ್ನ ಮನಸ್ಸಿನ ಮುಂದೆ ನಿಲ್ಲಬೇಕು.
ಯಾರು ಹೇಳಿದ್ರು ನಾನು ಸುಂದರ ಅಲ್ಲ ಅಂತ?
ಯಾಕೆ ನಾನು ನಂಬಿದೆ?
ಅಲ್ಲೇ ಅವಲೋಕನ ಆರಂಭವಾಗುತ್ತದೆ.
ನಿಲ್ಲಿ.
ನೋಡಿ.
ಅರಿತುಕೊಳ್ಳಿ.
— Sheela Bhat