ಒಂದು ಚಿತ್ರದ ಕಥೆ… ಮನುಷ್ಯನ ನಿಯಂತ್ರಣದ ಸ್ವಭಾವದ ಅನಾವರಣ

“ಈ ಕಥೆ ನಿಮಗೆ Fanaa ಅಥವಾ Snowdrop ನೆನಪಿಸಬಹುದು…
ಆದರೆ ಇದು ಕೇವಲ ಒಂದು ಕಥೆಯಲ್ಲ.”

📜 ಹಿನ್ನೆಲೆ

ಅದೊಂದು ಚಿತ್ರ. ಅದೊಂದು ದೇಶದ ಭಾಷೆ. ಅದು ಹಿಂದಿ, ಕನ್ನಡ, ಕೊರಿಯಾ, ಚೀನಾ ಯಾವುದಾದರೂ ಆಗಬಹುದು. ಈ ಹಿನ್ನೆಲೆಯ ಹಲವಾರು ಚಿತ್ರಗಳನ್ನು ನೀವು ನೋಡುತ್ತೀರ. ಇದು ಭಿನ್ನ ಎಲ್ಲೆಂದರೆ ಅದರಲ್ಲಿನ ಒಂದು ವಿಶೇಷ ಮನೋವಿಜ್ಞಾನ. ದೇಶಪ್ರೇಮ, ಒಳ್ಳೆಯದು, ಕೆಟ್ಟದರ ನಡುವೆಹೋರಾಟ, ಪ್ರೇಮ , ಕಾಮ ಎಲ್ಲವೂ ಸಮಾನ ನೆಲೆಯಲ್ಲಿ ನಡೆಯುತ್ತವೆ. ಆದರೆ “ಮನುಷ್ಯನ ನಿಯಂತ್ರಣದ ಸ್ವಭಾವ”ವನ್ನು ಗಾಢವಾಗಿ ಚಿತ್ರಿಸಿದ್ದು ಚಿತ್ರದ ವಿಭಿನ್ನತೆ. ಇಂತಹ ಒಂದು ಚಿತ್ರಣವನ್ನು ಈಗ ನೋಡೋಣ.

ಮರಳುಗಾಡಿನ ನಿರ್ಜಲೀಕರಣ

ಆಕೆ ಮತ್ತು ಆತ ಇಬ್ಬರಿಗೂ ತನ್ನವರೆಂದು ಯಾರಿಲ್ಲ. ಆತ ಸ್ವಲ್ಪ ಬೇಗ ಹುಟ್ಟಿದ್ದಾನೆ. ತನ್ನ ಬಡತನದ ಮಧ್ಯೆ, ಅನಾಥ ಬದುಕಿನಲ್ಲಿ ಎದುರಾದದ್ದು ಭೂಗತ ಜಗತ್ತು. ನೇರ ದಾರಿಯಲ್ಲಿ ನಡೆಯುವುದಕ್ಕಿಂತಲೂ ಹೆಚ್ಚು ಬುದ್ದಿವಂತಿಕೆ ಮತ್ತು ಪ್ರತಿಭೆ ಈ ಅಡ್ಡದಾರಿಗಳಲ್ಲಿ ನಡೆಯುವವರಿಗೆ ಇರಬೇಕು. ಅದು ಅವನಿಗಿದೆ. ಆ ಜಗತ್ತಿನ ಉತ್ತರಾಧಿಕಾರಿಯಾಗಿ ಅವನು ಬೆಳೆದಿದ್ದಾನೆ – ತನ್ನದೇ ಪ್ರತಿಭೆ ಮತ್ತು ಪ್ರಯತ್ನಗಳ ಮೂಲಕ. ಹೀಗೆ ಬೆಳೆದವನಿಗೆ ಅಕಸ್ಮಾತ್ತಾಗಿ ಸಿಕ್ಕಿದವಳು ಅವಳು.

✨ ಓಯಸಿಸ್ ನ ಭೇಟಿ

“ನಾಯಕಿ” ಎನ್ನೋಣ. ತನ್ನ ಸಂಬಂಧಿಕ ಹಿರಿಯಳ ನೆರಳಲ್ಲಿ ಬೆಳೆಯುತ್ತಿದ್ದಾಳೆ. ಶಾಲೆಯಿಂದ ಮನೆಗೆ ಬಂದ ಮೇಲೆ ಅವಳಿಗೆ ವಿನಾಕಾರಣ ಏನಾದರೂ ನೆಪದಲ್ಲಿ ಬಾರುಕೋಲ್ ಹೊಡೆತ ನಿಕ್ಕಿ. ಅದನ್ನು ತಪ್ಪಿಸಿಕೊಂಡು ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರೆಸಬೇಕು ಎಂದು ಅವಳ ಸಂಕಲ್ಪ. ಈ ಸಂಕಲ್ಪದ ಈಡೇರಿಕೆಗೆ ಆಕೆ ಚರ್ಚಿನ “ಪಾಪ ನಿವೇದನೆ” ಗೆ ಬರುವವರಿಗೆ ಸಿಗರೇಟು ಮಾರುವ ಕೆಲಸ ಮಾಡುತ್ತಾಳೆ. ಇಂತಹ ವೈರುಧ್ಯದ ಚಿತ್ರಣ ಜೀವನಕ್ಕೆ ಹತ್ತಿರ ಎನಿಸುತ್ತದೆ. ಮನಸ್ಸಿನೊಳಗೆ ನೇರದಾರಿಯ ಹಂಬಲವಿದ್ದರೂ ಪರಿಸ್ಥಿತಿ ಅಡ್ಡದಾರಿಯಲ್ಲಿ ಕರೆದುಕೊಂಡು ಹೋಗುತ್ತದೆ.

✨ ಪ್ರೀತಿಯೆಂಬ ಮಾಯೆ

ಅವನನ್ನು ಭೇಟಿಯಾದ ದಿನ: ಅವಳ ಸಂಬಂಧಿಗೆ ಇವಳು ಸಿಗರೇಟು ಮಾರಿ, ಹಣ ಹೊಂಚುತ್ತಿರುವ ವಿಷಯ ಗೊತ್ತಾಗುತ್ತದೆ. ಈಗ ಹೊಡೆತದ ಸರದಿ. ಅದಾವ ಘಳಿಗೆಯೋ ಏನೋ ಆಂಟಿಯ ಹಳೆಯ ನಂಟನೂ ಆಗಿರುವ ನಾಯಕ ಅಲ್ಲಿಗೆ ಬರುತ್ತಾನೆ. ಹೊಡೆತ ತಿಂದ ಪುಟ್ಟ ಮೊಲದಂತಹ ಹುಡುಗಿ; ಅವನ ಕರುಣೆಯೊ, ಪ್ರೀತಿಯೊ ಅಥವಾ ತನ್ನ ಹಿನ್ನೆಲೆಯನ್ನೇ ಹೊಂದಿರುವ ಆಕೆಯ ಮೇಲೆ ನಿಧಾನವಾಗಿ ಅವಲಂಬನೆಯನ್ನು ಬೆಳೆಸಿಕೊಳ್ಳುತ್ತಾನೆ. ಈ ಅವಲಂಬನೆ ಅವನನ್ನೂ , ಅವನ ಪ್ರೇಮವನ್ನೂ ನಿಯಂತ್ರಿಸತೊಡಗುತ್ತದೆ.

✨ ಪ್ರೀತಿಯೊ? ನಿಯಂತ್ರಣವೊ?

ಇಡೀ ಭೂಗತ ಜಗತ್ತಿನಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡು, ಒಂದು ಇಶಾರೆಯಲ್ಲಿ ವ್ಯವಸ್ಥೆಯನ್ನು ನಡೆಸುವ ವ್ಯಕ್ತಿ ಆತ. ಆದರೆ ಈಗ ಇಡೀ ಅವನೇ ಒಂದು ಭಾವನೆಯ ನಿಯಂತ್ರಣಕ್ಕೆ ಸಿಲುಕಿದ್ದಾನೆ. ಅದರ ಹೆಸರು ಪ್ರೀತಿ. ಈ ಪ್ರೀತಿ ಇದೆಯಲ್ಲ, ಅದು ಆತ್ಮದ ಪ್ರತೀಕ. ಯಾರಲ್ಲಿ ಹೆಚ್ಚು ಪ್ರೀತಿ ಉತ್ಕಟವಾಗುತ್ತದೆಯೊ ಅವರಲ್ಲಿ ಆತ್ಮ ಎಚ್ಚೆತ್ತುಕೊಳ್ಳುತ್ತದೆ. ಇಲ್ಲಿಯೂ ಅಷ್ಟೆ. ಯಾವ ಹೊತ್ತಿನಲ್ಲಿ ನಾಯಕಿಯ ಮೇಲೆ ಪ್ರೀತಿಯೆಂಬ ಅವಲಂಬನೆ ಉದ್ಭವವಾಯಿತೊ ಆ ಕ್ಷಣದಲ್ಲಿ ನಿಯಂತ್ರಣದ ಹಂಬಲವೂ ಬಂತು. ಬಿಡುಗಡೆಯ ಆಸೆಯೂ ಹುಟ್ಟಿತು!

ಸ್ವಾತಂತ್ರ್ಯ : ಕೊಟ್ಟು, ತೆಗೆದುಕೊಳ್ಳುವುದೇ ಪ್ರೀತಿಯೆ?

ಆತ ಆರಿಸಿಕೊಂಡು ಮಾಡುತ್ತಿರುವ ಕೆಲಸವಲ್ಲ ಅದು. ಬದುಕಬೇಕೆಂದರೆ ಹಣ ಮತ್ತು ಅಧಿಕಾರ ಅನಿವಾರ್ಯ ಎಂಬ ಪಾಠ ಕಲಿತ ಹುಡುಗ ಅವನು. ಬದುಕಿಗೋಸ್ಕರ ಅನಿವಾರ್ಯವಾಗಿ ಮಾಡಲೇಬೇಕಾದ ಕರ್ಮ ಅದು. ಈ ಹುಡುಗಿಯ ಆಸೆಯಂತೆ ತನ್ನ ಕಸುಬು ಬಿಟ್ಟು, ಆಕೆಗೆ ಅವಳ ಸ್ವಾತಂತ್ರ್ಯ ಕೊಟ್ಟು, ತಾನೂ ಸ್ವತಂತ್ರನಾಗಬೇಕು. ಇದು ಅವನ ಕನಸು.

ಸಂಬಂಧಗಳಲ್ಲಿ ಸ್ವಾತಂತ್ರ್ಯದ ಬಗ್ಗೆ ಇನ್ನಷ್ಟು ತಿಳಿಯಲು ಈ ಲೇಖನವನ್ನೂ ಓದಿ.

ಅತಿಯಾದ ಸಾಮಿಪ್ಯದಲ್ಲಿ ನಾವು ಕಳೆದುಕೊಳ್ಳುವುದೇನು?

“ಅವಳೆಂಬ” ಗಾಜಿನ ಬಟ್ಟಲು

ಸಂಬಂಧಗಳು ಹೇಗೆಂದರೆ ಗಾಜಿದ್ದ ಹಾಗೆ. ಗಾಜಿನಂತಹ ಸಂಬಂಧವನ್ನು ಸರಿಯಾಗಿ ಹಿಡಿದುಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ. ಇಲ್ಲೂ ಅಷ್ಟೇ. ಎಷ್ಟೇ ಕಷ್ಟವಾದರೂ ಸರಿ, ಮೂರು ಹೊತ್ತು ಊಟ ಸಿಕ್ಕಿರೆ ಆಕಾಶದ ಕೆಳಗೆ ನಿನ್ನೊಂದಿಗೆ ಸುರಕ್ಷಿತವಾಗಿರಬೇಕು, ಇದು ಅವಳ ಹಂಬಲ. ನೈತಿಕತೆ ಮತ್ತು ಮನಸ್ಸೊಪ್ಪುವ ದಾರಿಯಲ್ಲಿ ಸ್ವತಂತ್ರತೆ ಇದೆ. ಅದು ತನ್ನದಾಗಬೇಕು. ಅದಕ್ಕಾಗಿ ಅವಳು ವೈದ್ಯಕೀಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ.

ನಿಯಂತ್ರಣದ ಮಗ್ಗಲುಗಳು

ಅವಳ ಕನಸು ಈಡೇರಿಸುವ ಗುರಿ ನಾಯಕನದ್ದು. ಆದರೆ ನಾಯಕನಿಗೆ

👉 ಆಕೆಯನ್ನು ತನ್ನ ಕಷ್ಟಗಳಿಂದ ಮುಕ್ತವಾಗಿ ಸುಖವಾಗಿಡಬೇಕು ಎನ್ನುವ ಕಾಳಜಿ,

👉 ತನ್ನ ಕೆಲಸದ ಕಾರಣಕ್ಕೆ ಆಕೆ ಎಲ್ಲಿಯಾದರೂ ತನ್ನನ್ನು ಬಿಟ್ಟು ಹೋಗಿಬಿಡುತ್ತಾಳೆ ಎನ್ನುವ ಭಯ,

👉 ಇನ್ನೂ ಪುಟ್ಟ ಹುಡುಗಿ, ತಾನು ಅವಳಿಗಿಂತ ಹೆಚ್ಚು ಅನುಭವಿ, ಬುದ್ಧಿವಂತ ಎನ್ನುವ ಅಹಂಕಾರ

ಎಲ್ಲಾ ಸೇರಿಸಿ ಸಂಬಂಧವನ್ನು ನಿಭಾಯಿಸುತ್ತಾನೆ.

ಪುರುಷರೇಕೆ ಹೀಗೆ?

ಇದು ನಾಯಕಿಗೆ ಸಂಬಂಧ ಉಸಿರುಗಟ್ಟಿಸುವ ಅನುಭವ ಕೊಡುತ್ತದೆ. ದಾರಿ ತಪ್ಪಿದವನ ಜೊತೆಗೆ ನಿಂತ ಅಪರಾಧ ಪ್ರಜ್ಞೆ. ಅದೇ ವೇಳೆ ಆತನ ಮೇಲಿನ ಪ್ರೀತಿಗೆ ಅವನನ್ನು ತನ್ನ ದಾರಿಗೆ ತರಲು ಹೆಣಗಾಟ. ಆದರೆ ಆತ ಸಾಮಾನ್ಯ ಗಂಡಸು.

🔍 ಈಕೆಯ ಚೌಕಟ್ಟಿನೊಳಗೆ ಬಂದ ಹಾಗೆ ಮಾಡುತ್ತಾನೆ.

🔍 ಮುಗ್ದೆಯೆಂದು ಭಾವಿಸುತ್ತಾನೆ.

🔍 ಮದುವೆ ಮತ್ತು ಮಗುವಿನ ಹೆಸರಲ್ಲಿ ಅವಳನ್ನು ಕಟ್ಟಿಹಾಕಲು ನೋಡುತ್ತಾನೆ.

ಪ್ರೇಮವೊ? ಮನಸ್ಸಾಕ್ಷಿಯೊ?

ಆದರೆ ಆಕೆ? ಎಲ್ಲವನ್ನೂ ಮೀರಿ ತನ್ನ ದಾರಿಯಲ್ಲಿ ತಾನು ನಡೆಯಲು ಮುಂದಾಗುತ್ತಾಳೆ. ಪೊಲೀಸರಿಗೆ ತಾನೇ ಅವನನ್ನು ಹಿಡಿದುಕೊಡುತ್ತಾಳೆ. ಮಗುವಿನ ಅಪ್ಪ ಮತ್ತು ತನ್ನ ಬದುಕಿನ ಸಂತೋಷಕ್ಕಿಂತ ಮನಸ್ಸಾಕ್ಷಿ ದೊಡ್ಡದಾಗುತ್ತದೆ. ಅದೇ ವೇಳೆ ಅವಳನ್ನು ಬದುಕಿಸಿ, ತಾನು ಗುಂಡಿಗೆ ಎದೆಯೊಡ್ಡುವ ನಾಯಕ ‘ಇದೇ ನಿನಗೆ ನನ್ನಿಂದ ಬಿಡುಗಡೆ’ ಎಂದು ಸಾಯುತ್ತಾನೆ.

ಅವಲೋಕನ

ಕೊನೆಗೆ “ಇಡೀ ಕತೆಯಲ್ಲಿ ನಿಯಂತ್ರಿಸಿದ್ದು ನಾಯಕನಾ? ನಾಯಕಿಯಾ? ಅಥವಾ ಜೀವನವಾ?/ವಿಧಿಯಾ? ” ಎನ್ನುವ ಪ್ರಶ್ನೆ ಉಳಿಯುತ್ತದೆ. ಪ್ರೀತಿ ಎಂಬ ಹೆಸರಿನಲ್ಲಿ ನಾವು ಹಿಡಿಯುವುದು — ಮನುಷ್ಯನನ್ನೋ? ಅಥವಾ ಅವನ ಸ್ವಾತಂತ್ರ್ಯವನ್ನೊ?

✍️ಶೀಲಾ ಭಟ್ – ಅವಲೋಕನ

ಇಂತಹ ಇನ್ನಷ್ಟು ಅವಲೋಕನಗಳಿಗಾಗಿ ಇವುಗಳನ್ನೂ ಓದಿ.

ನನ್ನ ಬಳಿ ಹಣವಿಲ್ಲದಿದ್ದರೆ ನೀನು ಜೊತೆಗಿದ್ದೀಯಾ?

ನಿನಗೆ ನಾನು ಸಾಕಾಗದಾ?

Sheela Bhat

ಶೀಲಾ ಎಸ್ ಭಟ್

ಲೇಖಕಿ | Avalokana

ಜೀವನದ ಸೂಕ್ಷ್ಮ ಅನುಭವಗಳು, ಮನಸ್ಸಿನ ಒಳಯಾನ ಮತ್ತು ಸಮಾಜದ ನಿಶ್ಶಬ್ದ ಕಥೆಗಳನ್ನು ಬರಹದ ಮೂಲಕ ಹಂಚಿಕೊಳ್ಳುವುದು ಇವರ ಆಸಕ್ತಿ.

Leave a Comment

error: Content is protected !!