ಸಂಬಂಧದಲ್ಲಿ ಸೌಂದರ್ಯ ಮಾನದಂಡವಾಗುವ ಮೌನ ದುರಂತ
“ನಿನಗೆ ನಾನು ಸಾಕಾಗದಾ?”
ಈ ಪ್ರಶ್ನೆ ಮುಖದ ಬಗ್ಗೆ ಅಲ್ಲ.
ಇದು ಸ್ವೀಕಾರದ ಬಗ್ಗೆ.
ಪ್ರತಿ ಸಂಬಂಧದ ಒಳಗೆಯೂ ಒಂದು ಮೌನ ಅಳತೆ ಕೆಲಸ ಮಾಡುತ್ತದೆ. ಕೆಲವೊಮ್ಮೆ ಅದು ಗುಣ, ಮೌಲ್ಯ, ನಿಷ್ಠೆ, ವ್ಯಕ್ತಿತ್ವವನ್ನು ಅಳೆಯುತ್ತದೆ. ಆದರೆ ಕೆಲವೊಮ್ಮೆ — ಸೌಂದರ್ಯವೇ ಮಾನದಂಡವಾಗುತ್ತದೆ. ಅಲ್ಲಿ ದುರಂತ ಆರಂಭವಾಗುತ್ತದೆ.
ಪ್ರೇಮದಲ್ಲಾಗಲಿ, ವಿವಾಹದಲ್ಲಾಗಲಿ, ದಾಂಪತ್ಯದಲ್ಲಾಗಲಿ — ಯಾರನ್ನು ಆಯ್ಕೆ ಮಾಡಬೇಕು? ಯಾರನ್ನು ನಿರಾಕರಿಸಬೇಕು? ಈ ತೀರ್ಮಾನಗಳಲ್ಲಿ ಸೌಂದರ್ಯ ಮೌನ ಜರಡಿ ಆಗಿಬಿಟ್ಟರೆ, ಆತ್ಮಗೌರವವೇ ಮೊದಲ ಬಲಿಯಾಗುತ್ತದೆ.
ಕಪ್ಪು ಮೈಬಣ್ಣ – ಮೌನ ನಿರಾಕರಣೆಯ ಅನುಭವ
ಒಬ್ಬ ಕಪ್ಪು ಮೈಬಣ್ಣದ ಹುಡುಗಿ ವಿದ್ಯಾವಂತಳಾಗಿರಬಹುದು. ಆತ್ಮವಿಶ್ವಾಸಿ ಆಗಿರಬಹುದು. ಪ್ರತಿಭಾವಂತಳಾಗಿರಬಹುದು. ಆದರೆ ಮದುವೆ ಮಾತುಕತೆಗಳಲ್ಲಿ ಕೇಳಿಬರುವ ಒಂದು ಮಾತು ಸಾಕು: “ಬಣ್ಣ ಸ್ವಲ್ಪ ಕಪ್ಪು!” ಅಲ್ಲಿಯೇ ಅವಳ ಸಂಪೂರ್ಣ ಅಸ್ತಿತ್ವಕ್ಕೆ ಶರತ್ತನ್ನು ಸೇರಿಸಲಾಗುತ್ತದೆ. “ಅವಳು ಒಳ್ಳೆಯವಳು… ಆದರೆ.” ಈ “ಆದರೆ” ಎಂಬ ಪದ ಮೌನ ನಿರಾಕರಣೆಯ ಶಬ್ದವಾಗಿದೆ. ಪ್ರೇಮದಲ್ಲಿಯೂ ಇದೇ ಅನುಭವ. “ನೀನು ತುಂಬಾ ಒಳ್ಳೆಯವಳು… ಆದರೆ…” — ಈ ಅಪೂರ್ಣ ವಾಕ್ಯ ಅವಳ ಮನಸ್ಸಿನಲ್ಲಿ ಸಂಪೂರ್ಣ ಪ್ರಶ್ನೆಯಾಗುತ್ತದೆ: ನಿನಗೆ ನಾನು ಸಾಕಾಗದಾ?
ಇದು ಸೌಂದರ್ಯದ ಪ್ರಶ್ನೆಯಲ್ಲ. ಇದು ಸ್ವೀಕಾರದ ಪ್ರಶ್ನೆ.
ತೂಕ, ಆಕಾರ ಮತ್ತು ಆಯ್ಕೆಯ ಹೊರಗಿನ ನೋವು
ಒಬ್ಬ ದಪ್ಪಗಿರುವ ಹುಡುಗ. ಸ್ನೇಹದಲ್ಲಿ ಎಲ್ಲರಿಗೂ ಪ್ರಿಯ. ಆದರೆ ಆಯ್ಕೆ ಮಾಡುವಾಗ ಅವನ ಹೆಸರು ಮೊದಲ ಪಟ್ಟಿಯಲ್ಲಿ ಇರೋದಿಲ್ಲ. “Nice guy” ಎಂಬ ಪದ ಅವನಿಗೆ ನೀಡಲಾಗುತ್ತದೆ. ಆದರೆ “nice” ಎಂದರೆ “desirable” ಅಲ್ಲ.
ಅವನು ಮೌನವಾಗಿ ಅರ್ಥಮಾಡಿಕೊಳ್ಳುತ್ತಾನೆ — looks matter.
ಅವನು ಕೇಳುತ್ತಾನೆ:
ನಾನು ನಗಣ್ಯನಾ?
ಅಥವಾ ನನ್ನ ದೇಹ ನಿನ್ನ ಅಳತೆಗೆ ಹೊಂದಿಕೆ ಆಗಲಿಲ್ಲವೆ?
ಇದು ದೇಹದ ಪ್ರಶ್ನೆಯಲ್ಲ. ಇದು ಆದ್ಯತೆಯ ಪ್ರಶ್ನೆ.
ಸಂಬಂಧದ ಮೌನ ಹೋಲಿಕೆ
ಸಂಬಂಧದಲ್ಲಿ ಯಾರೂ ನೇರವಾಗಿ “ನೀನು ಸುಂದರ ಅಲ್ಲ” ಎಂದು ಹೇಳದೇ ಇರಬಹುದು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಯಾರನ್ನು ಅನುಸರಿಸಲಾಗುತ್ತಿದೆ? ಯಾರನ್ನು ಆರಾಧಿಸಲಾಗುತ್ತಿದೆ? ಯಾರನ್ನು ಹೋಲಿಕೆ ಮಾಡಲಾಗುತ್ತಿದೆ?
ಬೆಳ್ಳಗಿರುವ ಮಾಡೆಲ್ ಗಳು, ತೆಳ್ಳಗಿರುವ ಹುಡುಗಿಯರು, ಗ್ಲಾಮರ್ ಆಗಿರುವ ಇನ್ ಫ್ಲ್ಯೂಯರ್ಸ್ ಗಳು.
ಅಲ್ಲಿ ಸಣ್ಣ ಸಂದೇಶ ಬರುತ್ತದೆ — “ನೀನು ಉತ್ತಮಗೊಳ್ಳು!”
ಆದರೆ ಉತ್ತಮಗೊಳ್ಳು ಎಂದರೆ ಏನು? ವ್ಯಕ್ತಿತ್ವವೇ? ಅಥವಾ ರೂಪವೇ?
ಈ ಮೌನ ಹೋಲಿಕೆ ಆತ್ಮಗೌರವವನ್ನು ನಿಧಾನವಾಗಿ ಕುಗ್ಗಿಸುತ್ತದೆ.
“ಆದ್ಯತೆ” ಎನ್ನುವ ಮುಖವಾಡ
ಜನರು ಹೇಳುತ್ತಾರೆ: “ಇದು ನನ್ನ ಆದ್ಯತೆಯಷ್ಟೆ!”
ಬೆಳ್ಳಗಿದ್ದರೆ , ತೆಳ್ಳಗಿದ್ದರೆ, ಎತ್ತರವಾಗಿದ್ದರೆ – ಇಷ್ಟ!
ಆದರೆ ಆದ್ಯತೆ ನಿಜವಾಗಿಯೂ ವೈಯಕ್ತಿಕವೇ? ಅಥವಾ ಸಮಾಜದ ತರಬೇತಿಯ ಫಲವೇ?
ದಶಕಗಳಿಂದ ಮಾಧ್ಯಮವು ಒಂದು ನಿರ್ದಿಷ್ಟ ರೂಪವನ್ನು “ಮಾದರಿ ಸೌಂದರ್ಯ” ಎಂದು ಮುದ್ರಿಸಿದೆ. ಬೆಳ್ಳಗಿರುವುದು = ಸುಂದರ, ತೆಳ್ಳಗಿರುವುದು = ಅಪೇಕ್ಷಣೀಯ, ಚಿಕ್ಕವರಾಗಿರುವುದು = ಆಕರ್ಷಕ. ಈ ನಿರಂತರ ದೃಶ್ಯೀಕರಣ ನಮ್ಮ ಮೆದುಳಿನಲ್ಲಿ ಅಚ್ಚೊತ್ತಿವೆ.
ನಾವು ಅದನ್ನು ಸಹಜ ಆಯ್ಕೆ ಎಂದು ನಂಬುತ್ತೇವೆ. ಆದರೆ ಅದು ತರಬೇತುಗೊಂಡ ಪ್ರತಿಕ್ರಿಯೆ ಆಗಿರಬಹುದು.
ದಾಂಪತ್ಯದಲ್ಲಿ ಸೌಂದರ್ಯ ಆಯ್ಕೆಯಾಗುವಾಗ
ಗರ್ಭಿಣಿಯಾದ ನಂತರ ದೇಹ ಬದಲಾಗುತ್ತದೆ. ಕಾಲದೊಂದಿಗೆ ಮುಖ ಬದಲಾಗುತ್ತದೆ. ಕೂದಲು ಬಿಳಿಯಾಗುತ್ತದೆ. ತೂಕ ಹೆಚ್ಚಾಗುತ್ತದೆ. ಮೆಚ್ಚುಗೆಗಳು ಕಡಿಮೆಯಾಗುತ್ತವೆ. ಮೌನ ಹೆಚ್ಚಾಗುತ್ತದೆ.
ಒಬ್ಬ ಹೆಣ್ಣು ಕೇಳುತ್ತಾಳೆ:
“ನಾನು ಈಗ ನಿನಗೆ ಸಾಕಾಗದಾ?”
ಈ ಪ್ರಶ್ನೆ ತೂಕದ ಬಗ್ಗೆ ಅಲ್ಲ. ಇದು ಗಮನ ವರ್ಗಾವಣೆಗೊಂಡ ಬಗ್ಗೆ.
ಸ್ವೀಕಾರ ಷರತ್ತಿಗೆ ಒಳಪಟ್ಟಾಗ ಅಭದ್ರತೆ ಸ್ವಾಭಾವಿಕವಾಗುತ್ತದೆ.
ಪುರುಷರ ಮೌನ ಅಭದ್ರತೆ
ಪುರುಷರು “ನಾನು ಆಕರ್ಷಕವಾಗಿಲ್ಲ” ಎಂದು ಹೇಳುವುದಿಲ್ಲ. ಆದರೆ ಕುಳ್ಳ, ಬಾಲ್ಡ್ ತಲೆ, ಕಪ್ಪು ಬಣ್ಣ, ಮೊಡವೆ ಕಲೆ — ಇವೆಲ್ಲ ಡೇಟಿಂಗ್ ಮತ್ತು ಸಂಬಂಧಗಳಲ್ಲಿ ತಿರಸ್ಕಾರವಾದಾಗ ಮೌನವಾಗಿ ಗಾಯ ಮಾಡುತ್ತವೆ.
ನಿರಂತರ ತಿರಸ್ಕಾರ ಸ್ವಗೌರವವನ್ನು ಅಲ್ಲಾಡಿಸುತ್ತದೆ.
ಅವನು ಕೇಳುತ್ತಾನೆ:
“ನಾನು ಆಯ್ಕೆಯ ಹೊರಗಿನವನಾ?”
ಇದು ಇಗೊ ಅಲ್ಲ. ಇದು ಗಮನಕ್ಕೆ ಯೋಗ್ಯವಾಗಿಲ್ಲ ಎನ್ನುವ ನೋವು.
ನಾನು ನಗಣ್ಯನಾಗುವ ಆಳವಾದ ನೋವು
ನನಗಿಂತ ಚೆನ್ನಾಗಿ ಅಲಂಕರಿಸಿಕೊಳ್ಳುವ, ನನಗಿಂತ ಹೆಚ್ಚು ಸೌಂದರ್ಯ ಪ್ರದರ್ಶಿಸುವ ವ್ಯಕ್ತಿಯ ಮುಂದೆ ನಾನು ನಗಣ್ಯನಾಗುವ ನೋವು ಬಹಳ ಆಳವಾಗಿರುತ್ತದೆ.
ಅದು ಅಸೂಯೆಯಲ್ಲ. ಅದು ಹೋಲಿಕೆಯಲ್ಲ. ಅದು “ನಾನಿದ್ದರೂ ನನ್ನನ್ನು ಗಮನಿಸಲಿಲ್ಲ, ಆಯ್ಕೆ ಮಾಡಲಿಲ್ಲ” ಅನ್ನುವ ಅನುಭವ. ಸಂಬಂಧದಲ್ಲಿ ಗಮನವಿಲ್ಲದೇ ಇರುವ ಈ ಅನುಭವ ಒಂದು ಗಂಭೀರ ಮನೋವೈಜ್ಞಾನಿಕ ನೋವು.
ಅಧಿಕಾರ ಅಸಮತೋಲನ
ಸಂಬಂಧದಲ್ಲಿ ಯಾರ ದೃಷ್ಟಿ ಮಹತ್ವದ್ದಾಗುತ್ತದೆ? ಒಬ್ಬರ ಅನುಮೋದನೆ ಪ್ರಬಲವಾಗಿದ್ದರೆ, ಇನ್ನೊಬ್ಬರು ಮೌಲ್ಯೀಕರಣ ಕೋರುತ್ತಲೇ ಇರಬೇಕಾಗುತ್ತದೆ. ಅಲ್ಲಿ ಗೌರವಕ್ಕೆ ಧಕ್ಕೆ ಬರುತ್ತದೆ.
ನಾನು ನನಗೆ ಸಾಕಾಗಿದ್ದರೂ, ನಿನ್ನ ದೃಷ್ಟಿಯಲ್ಲಿ ಸಾಕಾಗಬೇಕು ಎನ್ನುವ ಅಗತ್ಯ ನನ್ನ ಆತ್ಮಗೌರವವನ್ನು ನಿನ್ನ ಅನುಮೋದನೆಯ ಮೇಲೆ ನಿಲ್ಲಿಸುತ್ತದೆ.
ಇದು ಅಪಾಯಕಾರಿ ಸ್ಥಿತಿ.
ಪ್ರಶ್ನೆಯ ತಿರುವು
“ನಿನಗೆ ನಾನು ಸಾಕಾಗದಾ?” ಎಂಬ ಪ್ರಶ್ನೆಯನ್ನು ತಿರುಗಿಸೋಣ.
ನಿನ್ನ ಅಳತೆ ಯಾವ ಮಾನದಂಡದ ಮೇಲೆ ನಿಂತಿದೆ?
ಅದು ಸಮಾಜದ ಸೂಚನೆಯಾ?
ಅಥವಾ ನಿನ್ನ ಸ್ವಂತ ಅರಿವಿನ ಆಯ್ಕೆಯಾ?
ನಾನು ಆ ಅಳತೆಯಲ್ಲಿ ಬದುಕಬೇಕೆ?
ಈ ಪ್ರಶ್ನೆ ಕೇಳಿದ ಕ್ಷಣ ಅಧಿಕಾರ ವರ್ಗಾವಣೆಯಾಗುತ್ತದೆ.
ಸೌಂದರ್ಯ ಕಾಲ್ಪನಿಕ, ಗೌರವ ವಸ್ತುನಿಷ್ಠ
ನಾನು ನಿನ್ನ ಆದ್ಯತೆಗೆ ಸರಿಹೊಂದಲಿಲ್ಲ ಎಂದರೆ ಅದು ನನ್ನ ಮೌಲ್ಯ ಕುಗ್ಗುವುದಿಲ್ಲ. ಸುಂದರತೆ ಕಾಲ್ಪನಿಕ, ವ್ಯಕ್ತಿಗತ. ಆದರೆ ಗೌರವ ವಸ್ತುನಿಷ್ಠ.
ನಾನು ಯಾರಿಗೋ ಆಯ್ಕೆಯಾಗಲು ನನ್ನನ್ನು ಕುಗ್ಗಿಸಿಕೊಳ್ಳುವುದಿಲ್ಲ. ಸ್ವೀಕಾರ ಬೇಡಿಕೊಳ್ಳುವುದಿಲ್ಲ. ಹೋಲಿಕೆಯಲ್ನಿ ನನ್ನ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ.
ಅಂತಿಮ ಚಿಂತನೆ
“ನಿನಗೆ ನಾನು ಸಾಕಾಗದಾ?” — ಈ ಪ್ರಶ್ನೆ ಪ್ರತಿ ಸಂಬಂಧದ ಒಳಗೆ ಮೌನವಾಗಿ ಕೇಳಲ್ಪಡುತ್ತದೆ.
ಆದರೆ ಒಂದು ದಿನ ಸ್ಪಷ್ಟತೆ ಬರುತ್ತದೆ:
ನಿನಗೆ ನಾನು ಸಾಕಾಗದಿರಬಹುದು.
ಆದರೆ ನನಗೆ ನಾನು ಸಾಕಾಗುತ್ತೇನೆ.
ಅಲ್ಲಿಯೇ ಆತ್ಮಗೌರವ ಆರಂಭವಾಗುತ್ತದೆ.
ನಿಲ್ಲಿಸಿ.
ನೋಡಿ.
ಅರಿತುಕೊಳ್ಳಿ.
— Sheela Bhat
ಮುಂದಿನ ಅವಲೋಕನ
ಸಂಬಂಧದಲ್ಲಿ ಸೌಂದರ್ಯ ಮಾನದಂಡವಾಗುವುದಾದರೆ,
ಆ ಮಾನದಂಡವನ್ನು ಯಾರು ರೂಪಿಸುತ್ತಾರೆ?
ಮುಂದಿನ ಲೇಖನದಲ್ಲಿ —
👉 “ಅವರು ಸುಂದರತೆಯನ್ನು ಹೇಗೆ ನಿರ್ಧರಿಸುತ್ತಾರೆ?”
ಮಾಧ್ಯಮ, ಮಾರುಕಟ್ಟೆ ಮತ್ತು ಸಮಾಜ ಸೌಂದರ್ಯದ ಅಳತೆಯನ್ನು ಹೇಗೆ ನಿರ್ಮಿಸುತ್ತವೆ ಎಂಬುದನ್ನು ವಿಶ್ಲೇಷಿಸುತ್ತೇವೆ.