ಇವತ್ತು ಜಗತ್ತು ಯಾವುದೋ ಅಘೋಷಿತ ಕರ್ಫ್ಯೂವಿನತ್ತ ಸಾಗುತ್ತಿರುವಂತೆ ಕಾಣುತ್ತದೆ. ನಗರಗಳ ಚಲನವಲನ ನಿಧಾನವಾಗುತ್ತಿದೆ. ಆಟೋಗಳು, ಹೋಟೆಲ್ಗಳು, ಉದ್ಯಮಗಳು — ಇವೆಲ್ಲವೂ ಇಂಧನ, ಅನಿಲ, ತೈಲಗಳ ಕೊರತೆಯಿಂದ ನೆನೆಗುದಿಗೆ ಬಿದ್ದಂತಿವೆ. ಕೆಲವು ಕಡೆಗಳಲ್ಲಿ ಕಾಳಸಂತೆಕೋರರು ಹೆಚ್ಚಾಗುತ್ತಿದ್ದಾರೆ. ಒಂದೆಡೆ ಎಲ್ಲೋ ನಡೆಯುತ್ತಿರುವ ಯುದ್ಧ… ಇನ್ನೊಂದೆಡೆ ದೇಶಗಳೊಳಗೆ ಸಾಮಾನ್ಯ ಜನರು ಬದುಕಿಗಾಗಿ ಹೋರಾಟ..
ಯಾಕಾಗಿ ಯುದ್ಧ?
ಈ ಎಲ್ಲಾ ದೃಶ್ಯಗಳ ನಡುವೆ ಒಂದು ಪ್ರಶ್ನೆ ನಿಧಾನವಾಗಿ ಮೂಡುತ್ತದೆ — ಯಾಕಾಗಿ ಯುದ್ಧ?
ಯುದ್ಧ ಅಂದ್ರೆ ಸಾಮಾನ್ಯವಾಗಿ ನಮಗೆ ನೆನಪಾಗುವುದು — ಧರ್ಮ, ನೆಲ, ಸಂಪನ್ಮೂಲಗಳು. ಆದರೆ ಇವತ್ತು ನೋಡಿದರೆ, ಈ ಕಾರಣಗಳು ಮಾತ್ರ ಸಾಕಾಗುತ್ತಿಲ್ಲ ಅನ್ನಿಸುವುದು. ಇನ್ನೇನೋ ಒಂದು ಸೂಕ್ಷ್ಮ ಹಂಬಲ ಅದರ ಹಿಂದೆ ಕೆಲಸ ಮಾಡುತ್ತಿರುವಂತೆ ಕಾಣುತ್ತದೆ. ಬಹುಶಃ — ಅದು ನಿಯಂತ್ರಣ ಆಗಿರಬಹುದೇ?
ಒಂದು ಮನೆಯ ಚಿತ್ರ
ಈ ಪ್ರಶ್ನೆ ಬಂದಾಗ, ನನ್ನ ಮನಸ್ಸಿಗೆ ಅನಾಯಾಸವಾಗಿ ಒಂದು ಚಿತ್ರ ಬರುತ್ತದೆ — ನಮ್ಮ ಮನೆಯಲ್ಲಿರುವ “ಹಿರಿಯಣ್ಣ”. ನಮ್ಮ ಕಡೆ ಹಿರಿಯಣ್ಣ ಅಂದ್ರೆ, ಅವನು ಒಂದು ರೀತಿಯಲ್ಲಿ ಮನೆಯ ಕೇಂದ್ರಬಿಂದು. ಅವನಿಗೆ ಒಂದು ಸ್ಥಾನವಿರುತ್ತದೆ. ಒಂದು ಅಧಿಕಾರವಿರುತ್ತದೆ. ಮತ್ತು ಜೊತೆಗೆ ಒಂದು ಜವಾಬ್ದಾರಿಯೂ ಇರುತ್ತದೆ.
ಜವಾಬ್ದಾರಿ ಅಥವಾ ನಿಯಂತ್ರಣ?
ಚಿಕ್ಕವಯಸ್ಸಿನಿಂದಲೇ ಅವನನ್ನು ಮನೆಯ ಯಜಮಾನ, ಉತ್ತರಾಧಿಕಾರಿ ಎಂದು ನೋಡುತ್ತ ಬೆಳೆಸಿರುತ್ತಾರೆ. ಅವನು ಚಿಕ್ಕವರನ್ನು ಬೆಳೆಸಬೇಕು… ಹಿರಿಯರನ್ನು ನೋಡಿಕೊಳ್ಳಬೇಕು… ಮನೆಯನ್ನು ಸಮತೋಲನದಲ್ಲಿ ಕೊಂಡೊಯ್ಯಬೇಕು. ಇಲ್ಲಿವರೆಗೆ ನೋಡಿದರೆ — ಇದು ಸಮತೋಲನದ ವ್ಯವಸ್ಥೆಯಂತೆ ಕಾಣಬಹುದು. ಆದರೆ ಇಲ್ಲಿ ಒಂದು ಸೂಕ್ಷ್ಮ ತಿರುವು ಕಾಣಿಸುತ್ತದೆ.
ಸೂಕ್ಷ್ಮವಾಗಿ ಬದಲಾಗುವ ನಾಯಕತ್ವ
ಈ ಅಧಿಕಾರ ಮತ್ತು ಸ್ವಾತಂತ್ರ್ಯ ನಿಧಾನವಾಗಿ, ಅವನಿಗೆ ಗೊತ್ತಾಗದಂತೆ, ನಿಯಂತ್ರಣದ ಮನೋಭಾವವಾಗಿ ಬದಲಾಗಬಹುದು.ಅವನು ನಾಯಕನಾಗಿ ನಿಂತಿದ್ದಾಗ, ಸರ್ವಾಧಿಕಾರದ ನೆರಳಿಗೆ ಜಾರುತ್ತಿರುವಂತಿರಬಹುದು.
ತಮ್ಮಂದಿರು ಸ್ವತಂತ್ರವಾಗಿ ಯೋಚಿಸಬಾರದು…
ತಂಗಿಯರನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮದುವೆ ಮಾಡಬೇಕು…
ಇವೆಲ್ಲವೂ ಕೆಲವೊಮ್ಮೆ ಜವಾಬ್ದಾರಿಯಂತೆ ಕಾಣಬಹುದು.
ಆದರೆ — ಅದರಲ್ಲಿ ನಿಯಂತ್ರಣದ ಗುರುತುಗಳೂ ಕಾಣುತ್ತವೆಯೇ?
ಯಾರ ಯುದ್ಧ? ಯಾರ ಬೆಲೆ?
ಈ ಹಿರಿಯಣ್ಣನ ಹಿತಾಸಕ್ತಿಗಳು ಮನೆಯೊಳಗೆ ಮಾತ್ರ ಸೀಮಿತವಾಗಿರುವುದಿಲ್ಲ.
ಅವು ಹೊರಗೂ ಪಸರಿಸುತ್ತವೆ — ನೆರೆಮನೆಯ ತೋಟ, ಸೊಸೈಟಿ, ಸ್ಥಾನಮಾನ, ಸೌಲಭ್ಯಗಳು…
ಈ ಎಲ್ಲದರಿಗಾಗಿ — ಮನೆಯವರೇ ಮೊದಲ ಬಲಿ ಆಗಬೇಕಾಗುತ್ತದೆ.
ತಮ್ಮಂದಿರು ಅವನ ಪರವಾಗಿ ನಿಲ್ಲಬೇಕಾಗುತ್ತದೆ.
ಅವರು ನಡೆಸುವ ಯುದ್ಧಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.
ಆ ಯುದ್ಧದಲ್ಲಿ ಏನು ಕಳೆದುಹೋಗಬಹುದು?
ಸಮಯ… ಹಣ… ಕೆಲವೊಮ್ಮೆ ಸಂಬಂಧಗಳು… ಇನ್ನೊಮ್ಮೆ ಬದುಕಿನ ದಿಕ್ಕೇ…
ಮನೆಯಿಂದ ಜಗತ್ತಿನವರೆಗೆ
ಈ ಚಿತ್ರವನ್ನು ಸ್ವಲ್ಪ ದೂರದಿಂದ ನೋಡಿದಾಗ —
ಇದೇ ಏನೋ ದೊಡ್ಡ ಮಟ್ಟದಲ್ಲಿ, ಜಗತ್ತಿನಲ್ಲಿ ನಡೆಯುತ್ತಿರುವಂತೆಯೇ ಕಾಣುತ್ತದೆ. ಒಬ್ಬ “ಹಿರಿಯಣ್ಣ”ನ ನಿಯಂತ್ರಣದ ಹಂಬಲಕ್ಕೆ, ಅನೇಕ ಜನರು ತಮ್ಮದೇ ರೀತಿಯಲ್ಲಿ ಬದುಕಲು ಸಾಧ್ಯವಾಗದೆ ಹೋರಾಡುತ್ತಿರುವಂತೆ ಕಾಣುತ್ತದೆ.
ಒಂದು ಒಳಗಿನ ಪ್ರಶ್ನೆ
ಇಲ್ಲಿಗೆ ಬಂದಾಗ, ಮತ್ತೊಂದು ಪ್ರಶ್ನೆ ನಿಧಾನವಾಗಿ ಮೂಡುತ್ತದೆ —
ನಮಗೆ ಯಾಕೆ ನಿಯಂತ್ರಣ ಮಾಡಬೇಕು ಅನಿಸುತ್ತದೆ?
ಇದು ಕೇವಲ ರಾಜಕೀಯದ ಪ್ರಶ್ನೆಯಾ?
ಅಥವಾ ನಮ್ಮ ಪ್ರತಿಯೊಬ್ಬರ ಜೀವನದಲ್ಲೂ ಕಾಣಿಸುವ ಒಂದು ಅನುಭವವೇ?
ನಾವು ಯಾರನ್ನಾದರೂ ಬದಲಾಯಿಸಲು ಪ್ರಯತ್ನಿಸುವಾಗ…
ನಮ್ಮ ಮಾತು ಕೇಳಿಸಿಕೊಳ್ಳಲು ಯತ್ನಿಸುವಾಗ…
ಅದು ಕೇವಲ ಕಾಳಜಿಯೇ?
ಅಥವಾ ಅದರೊಳಗೆ ನಿಯಂತ್ರಣವೂ ಇರುತ್ತದೆಯೇ?
ಗಮನಿಸೋಣ
ಈ ಪ್ರಶ್ನೆಗೆ ತಕ್ಷಣ ಉತ್ತರ ಸಿಗದೇ ಇರಬಹುದು.
ಆದರೆ ಒಂದು ವಿಚಾರ ಮಾತ್ರ ನಿಧಾನವಾಗಿ ಸ್ಪಷ್ಟವಾಗುವಂತೆ ಕಾಣುತ್ತದೆ —
ನಿಯಂತ್ರಣ ಅನ್ನೋದು ಕೇವಲ ದೊಡ್ಡ ಯುದ್ಧಗಳಲ್ಲಿ ಮಾತ್ರ ಕಾಣಿಸುವುದಲ್ಲ…
ಅದು ನಮ್ಮ ಮನೆಯಲ್ಲೂ… ನಮ್ಮ ಸಂಬಂಧಗಳಲ್ಲಿ…
ಕೆಲವೊಮ್ಮೆ ನಮ್ಮೊಳಗೂ ಹುಟ್ಟುವ ಒಂದು ಸೂಕ್ಷ್ಮ ಚಲನೆ.