ಇವತ್ತು ಕರ್ನಾಟಕದ ಎರಡು ಪ್ರಮುಖ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದೆ.
ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ಶಾಶ್ವತ ತೆರವಿನ ನಂತರ ಆ ಸ್ಥಾನಗಳಿಗೆ ಈ ಚುನಾವಣೆ ನಡೆಯುತ್ತಿದೆ.
ಆದರೆ ನನಗೆ ಕಾಡುತ್ತಿರುವುದು ಯಾರು ಗೆಲ್ಲುತ್ತಾರೆ ಎನ್ನುವುದಲ್ಲ.
ಪದೇ ಪದೇ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಒಂದೇ —
ಚುನಾವಣೆ ಯಾಕೆ ಬೇಕು? ಅದರ ಅಸಲಿ ಮಹತ್ವವೇನು?
ಚುನಾವಣೆ ಎಂದರೆ ಒಬ್ಬ ನಾಯಕನ ಸಾಮೂಹಿಕ ಆಯ್ಕೆ.
ಆ ಆಯ್ಕೆ ಆತನ ಅರ್ಹತೆ ಮತ್ತು ಜನರತ್ತ ಆತ ಈಡೇರಿಸಬಹುದಾದ ನಿರೀಕ್ಷೆಗಳ ಆಧಾರದ ಮೇಲೆ ಆಗಬೇಕು.
ಆದರೆ, ಪ್ರಸ್ತುತ ಹಾಗಾಗುತ್ತಿದೆಯೇ?
ಇಂದು ಅರ್ಹತೆಯಿಗಿಂತಲೂ, ಆತನ ಕೌಟುಂಬಿಕ ಹಿನ್ನೆಲೆ, ಜಾತಿ, ಮತ್ತು ಆರ್ಥಿಕ ಸಾಮರ್ಥ್ಯದ ಮೇಲೆ ಜನರ ನಿರ್ಧಾರಗಳು ನಿಂತಿವೆ.
“ಸರ್ವೇ ಗುಣಾಃ ಕಾಂಚನಮಾಶ್ರಯಂತಿ” ಎಂಬ ಮಾತಿನಂತೆ —
ದುಡ್ಡಿದ್ದವನೇ ದೊಡ್ಡವನಾಗುತ್ತಿರುವುದು ನಮ್ಮ ಸಮಾಜದ ನಿಜ.
ಹಾಗಾದರೆ, ನಾವು ಚುನಾವಣೆಯ ಅಸಲಿ ಧ್ಯೇಯವನ್ನು ಮರೆತಿದ್ದೇವೆಯೇ?
ಇನ್ನೊಂದು ಗಂಭೀರ ಪ್ರಶ್ನೆ —
ಈ ದೇಶದಲ್ಲಿ ಒಮ್ಮೆ ಆಯ್ಕೆಯಾದ ವ್ಯಕ್ತಿ ಸರಿಯಾಗಿ ಕೆಲಸ ಮಾಡದಿದ್ದರೆ, ಅವನನ್ನು ಹಿಂತೆಗೆದುಕೊಳ್ಳುವ ಶಕ್ತಿ ಮತದಾರನಿಗೆ ಇಲ್ಲ.
ಒಮ್ಮೆ ಮತ ಚಲಾಯಿಸಿದ ನಂತರ, ಫಲಿತಾಂಶವನ್ನು ಸ್ವೀಕರಿಸುವುದರಲ್ಲೇ ಮತದಾರನ ಪಾತ್ರ ಮುಗಿಯುತ್ತದೆ. ಉದಾಃಗೆ, ಇವತ್ತಿಗೂ ವಯಸ್ಸಾಗಿ ನಿಲ್ಲಲಾಗುತ್ತಿಲ್ಲ ಎಂದರೂ ಕನಿಷ್ಠ ೫-೬ ಅವಧಿಗೆ ಚುನಾಯಿತರಾದ ಜನಪ್ರತಿನಿಧಿಗಳು ಇದ್ದಾರೆ. ಅಂದರೆ ಕನಿಷ್ಠ ೨೦-೩೦ ವರ್ಷಗಳಿಂದ ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇವರಿಗೆ ಪರ್ಯಾಯ ಎಂದರೆ ಇವರ ಮಕ್ಕಳು, ಮೊಮ್ಮಕ್ಕಳಾಗಿದ್ದಾರೆ. ಈಗ ಆಯ್ಕೆ ಮಾಡು ಎಂದರೆ ಮತದಾರನಿಗೆ ಯಾವ ಆಯ್ಕೆ ಇದೆ?
ಇಷ್ಟಕ್ಕೂ ಮತದಾನ ಮಾಡಲೇ ಬೇಕು, ಅದು ತನ್ನ ಕರ್ತವ್ಯ ಎಂದು ಚಲಾಯಿಸಿದ ಮತದ ಬೆಲೆ ಎಷ್ಟು? ಆ ನಂತರ ಏನಾಗಬಹುದು?
ಆಯ್ಕೆಯಾದ ವ್ಯಕ್ತಿ ಪಕ್ಷಾಂತರ ಮಾಡಬಹುದು. – ಪಕ್ಷಾಂತರ ನಿಷೇಧ ಕಾನೂನು ಇದೆ ಎನ್ನಬಹುದು. ಅದಿದ್ದರೆ ಏನು ಪ್ರಯೋಜನ? ಇರುವ ಪಕ್ಷಕ್ಕೆ ರಾಜೀನಾಮೆ ಕೊಟ್ಟು, ಇನ್ನೊಂದು ಪಕ್ಷವನ್ನು ಸೇರುತ್ತಾರೆ.
ಮತ್ತೆ ಉಪಚುನಾವಣೆ ಬರುತ್ತದೆ. – ಮತ್ತೊಂದಿಷ್ಟು ಜನ, ಧನದ ಆಟ ನಡೆಯುತ್ತದೆ.
ಮತ್ತೆ ಮತದಾರನ ಅಭಿಪ್ರಾಯ ಕೇಳಲಾಗುತ್ತದೆ. – ಮತದಾರನ ಸಹನೆ ಮತ್ತು ಸಮಯದ ಬೆಲೆ ಗಣನೆಗೆ ಬರುವುದಿಲ್ಲ.
ಇದು ವ್ಯವಸ್ಥೆಯ ನಿಯಂತ್ರಣ ತಪ್ಪಿದ ಸೂಚನೆ ಅಲ್ಲವೇ?
ಒಮ್ಮೆ ಗೆದ್ದು, ಧನಬಲ ಮತ್ತು ಜನಬಲ ಗಳಿಸಿದ ನಾಯಕ, ನಿಧಾನವಾಗಿ ಜನನಾಯಕನಿಂದ “ದೊರೆ”ಯಾಗಿ ಮಾರ್ಪಡುತ್ತಾನೆ.
ಪ್ರಜಾಪ್ರಭುತ್ವದ ಮೌಲ್ಯಗಳು ಮಂಕಾಗುತ್ತ, ರಾಜಪ್ರಭುತ್ವದ ಮನೋಭಾವಗಳು ಬಲವಾಗುತ್ತವೆ.
ಅಮೆರಿಕದಂತಹ ದೇಶಗಳಲ್ಲಿ ರಾಷ್ಟ್ರಪತಿಗೆ ಎರಡು ಅವಧಿಗಳ ಮಿತಿ ಇದೆ.
ಆದರೆ ಭಾರತದಲ್ಲಿ, ಒಬ್ಬ ವ್ಯಕ್ತಿ ಅನೇಕ ಬಾರಿ ಅಧಿಕಾರದಲ್ಲಿರಬಹುದು.
ಹೀಗಾದರೆ, ಚುನಾವಣೆಗಳ ಅರ್ಥ ಏನು?
ಮತದಾರನ ಪಾತ್ರ ಕೇವಲ ಮತ ಚಲಾಯಿಸುವ ಮಟ್ಟಕ್ಕೆ ಸೀಮಿತವಾದಾಗ,
ಅವನ ಹಿತಾಸಕ್ತಿಗಳು ಹಿಂಬದಿಗೆ ಸರಿಯುತ್ತವೆ.
ಅವನು ಒಂದು ಸಂಖ್ಯೆಯಾಗಿ ಮಾತ್ರ ಉಳಿಯುತ್ತಾನೆ.
ಆದರೆ, ಇಲ್ಲಿ ಒಂದು ಸತ್ಯವನ್ನು ನಾವು ಮರೆತರೆ ಆಗುವುದಿಲ್ಲ —
ಮತದಾರ ರಾಜಿಯಾಗುವ ಕ್ಷಣದಿಂದಲೇ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ.
ಚುನಾವಣೆ ಇರಲಿ, ಉಪಚುನಾವಣೆ ಇರಲಿ —
ಮತದಾರ ತನ್ನ ಆಯ್ಕೆಯಲ್ಲಿ ರಾಜಿಯಾಗಬಾರದು.
ಅರ್ಹತೆಯುಳ್ಳ, ತನ್ನ ಊರು-ಕ್ಷೇತ್ರದ ಬೇಡಿಕೆಗಳನ್ನು ಈಡೇರಿಸಬಲ್ಲ,
ರಾಜ್ಯ ಮತ್ತು ರಾಷ್ಟ್ರದ ಹಿತ ಕಾಯುವ ನಾಯಕನನ್ನೇ ಆಯ್ಕೆ ಮಾಡಬೇಕು.
ಆಯ್ಕೆಗಳಿಲ್ಲದಾಗ ಸ್ಪಷ್ಟವಾಗಿ “ನೋಟಾ” ಒತ್ತಬೇಕು. ಅದಕ್ಕೂ ಬೆಲೆ ಇಲ್ಲ ಎನ್ನಿಸಿದರೆ ನೇರವಾಗಿ ಆಯಾ ಪಕ್ಷಗಳ ಪ್ರಧಾನರಿಗೆ ನಿಮ್ಮ ಆಯ್ಕೆ ಸರಿಯಿಲ್ಲ, ನಾವು ಮತ ಚಲಾಯಿಸುವುದಿಲ್ಲ ಎನ್ನಬಹುದು. ಮತ್ತೆ, ಆಯ್ಕೆ ಮಾಡಿದ ವ್ಯಕ್ತಿಗೆ ಸೀಮಿತ ಅವಧಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಿ, ಅವನು ವಿಫಲವಾದರೆ, ಮತ್ತೊಮ್ಮೆ ಅವಕಾಶ ನೀಡಬಾರದು.
ಆದರೆ, ಒಂದು ದೊಡ್ಡ ಪ್ರಶ್ನೆ ಇಲ್ಲಿ ನಿಂತಿದೆ —
ಸ್ವಲ್ಪ ಸಹಾಯಕ್ಕಾಗಿ ರಾಜಿಯಾಗುವ ಮತದಾರ,
ಸುಳ್ಳು ಪ್ರಚಾರದಲ್ಲಿ ಸತ್ಯವನ್ನು ಮರೆತ ಮತದಾರ,
ಜಾತಿ ಮತ್ತು ಕುಟುಂಬದ ಆಧಾರದ ಮೇಲೆ ನಾಯಕತ್ವ ಒಪ್ಪಿಕೊಂಡಿರುವ “ಪ್ರಜೆ” —
ತನ್ನ ಹಕ್ಕು ಮತ್ತು ಕರ್ತವ್ಯಗಳನ್ನು ನಿಜವಾಗಿಯೂ ಅರಿತುಕೊಂಡಾನೆಯೇ?