40 ನಂತರ ಸ್ವಿಮ್ಮಿಂಗ್ ಕಲಿತೆ – ದೇಹ ಮನಸ್ಸು ಬದಲಿಸಿದ ಅನುಭವ

“ಈಸಬೇಕು, ಇದ್ದು ಜಯಿಸಬೇಕು” ಎಂದರು ಪುರಂದರದಾಸರು. ನಾನಾದರೂ ಅಷ್ಟೇ. ನನಗೆ ಜಯಿಸುವುದೂ, ಈಸುವುದೂ ಗೊತ್ತಿಲ್ಲ. ಆದರೆ ಈ ಕ್ಷಣದಲ್ಲಿ ತುಂಬು ಪ್ರಜ್ಞೆಯಿಂದ ಬದುಕನ್ನು ಅನುಭವಿಸಬೇಕು ಎಂಬ ಆಸೆ ಮಾತ್ರ ಇದೆ. ಅದಕ್ಕಾಗಿ ನನ್ನ ತಾದಾತ್ಮ್ಯವನ್ನು ಸುತ್ತಲಿನವರು ಆಡಿಕೊಳ್ಳುವುದೂ ಸಹಜ.

ಬಾಲ್ಯದ ನೀರಾಟದ ನೆನಪು

ವರ್ಷಕ್ಕೊಮ್ಮೆ ಶಿರಸಿಯ ಸಹಸ್ರಲಿಂಗದ ದಡದ ಮೇಲಿರುವ ದೊಡ್ಡಮ್ಮನ ಮನೆಗೆ ಹೋಗುತ್ತಿದ್ದೆವು. ಅಲ್ಲಿ ಕಳೆದ ಬೇಸಿಗೆ ರಜೆ ಯಾವಾಗ ಶುರುವಾಗಿ ಯಾವಾಗ ಮುಗಿಯುತ್ತಿತ್ತೋ ಗೊತ್ತಾಗುತ್ತಿರಲಿಲ್ಲ. ಶಾಲ್ಮಲೆಯ ತಟದಲ್ಲಿ ಮರಳಿನ ಮನೆ ಕಟ್ಟುತ್ತ, ನೀರಿನಲ್ಲಿ ಆಟವಾಡುತ್ತ, ಅಕ್ಕಂದಿರ ಜೊತೆ ಹರಟೆ ಹೊಡೆಯುತ್ತ ಸಂಜೆಯೇ ಆಗಿಬಿಡುತ್ತಿತ್ತು. ಆಗ ಈಜು ಎನ್ನುವುದು ಕಲಿಯಬೇಕಾದ ಕೌಶಲ್ಯ ಎಂದು ಅನಿಸಲೇ ಇಲ್ಲ.

ಈಗಿನ ಬೇಸಿಗೆ, ಹೊಸ ಕಲಿಕೆ

ಈಗ ಮತ್ತೆ ಬೇಸಿಗೆ ಬಂದಿದೆ. ನನ್ನ ಮಗನಿಗೆ ನನ್ನ ಬಾಲ್ಯದಂತೆಯೇ ವಿಶಾಲವಾದ ಬಾಲ್ಯ ಸಿಗಲಿಕ್ಕಿಲ್ಲ. ಆದರೆ ಇರುವ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವುದರಲ್ಲಿ ತಪ್ಪೇನಿದೆ? ಕಳೆದ ವರ್ಷ ಮನೆಯ ಟೆರೇಸ್ ಮೇಲೆ ಸಣ್ಣ ಆನ್‌ಲೈನ್ ಸ್ವಿಮ್ಮಿಂಗ್ ಪೂಲ್ ತರಿಸಿ ನೀರಾಟಕ್ಕೆ ಬಿಟ್ಟೆವು. ಈಗ ಅದು ಚಿಕ್ಕದಾಗಿದೆ. ಹೀಗಾಗಿ ಈ ವರ್ಷ ಸ್ವಿಮ್ಮಿಂಗ್ ತರಬೇತಿ ಎನ್ನುವ ಯೋಚನೆ ಹೊಳೆಯಿತು. ಸ್ವಾಮಿ ಕಾರ್ಯ, ಸ್ವಕಾರ್ಯ — ಎರಡೂ ಆಗಲಿ ಎಂದು ಹೊರಟೇಬಿಟ್ಟೆವು.

ಜೊತೆಯಾಗಿ ನಿಂತವನ ಬೆಲೆ

ನೋಡಿದರೆ, ಇವನ ಅಪ್ಪ “ನೀನು ಕೂಡ ಕಲಿ” ಎಂದು ಬಿಡುವುದಾ? ನನಗೆ ಅದು ಕನಸಿನಲ್ಲೂ ಕಾಣದ ಆಕಾಶ! ನನಗೆ ಕಲಿಕೆಯ ಆಸೆ ತುಂಬ ಇದೆ ಎಂದು ಅವನಿಗೆ ಗೊತ್ತು. ಕಾಲೇಜು ಓದುವಾಗ ಪರೀಕ್ಷೆಗಳಿಗೆ ಕರೆದುಕೊಂಡು ಹೋಗಿ ಬರುತ್ತಿದ್ದ. ಟೂ ವೀಲರ್ ಕಲಿಯುವಾಗ ತನ್ನ ಗಾಡಿ ಕೊಟ್ಟು ಒಂದು ಕಡೆ ಕುಳಿತು ಕಾಯುತ್ತಿದ್ದ.

ನಾನು ಮುಟ್ಟಿದರೆ ಏನೋ ಆಗಿಬಿಡುತ್ತದೆ ಎಂದು ತಮ್ಮ ಸೈಕಲ್, ಗಾಡಿಗಳನ್ನು ಜೋಪಾನ ಮಾಡಿಕೊಳ್ಳುತ್ತಿದ್ದ ಮನೆಯ ಗಂಡಸರು. ಆದರೆ ಇವನು? ತನ್ನ ಗಾಡಿ ಕೊಟ್ಟದ್ದಲ್ಲದೇ, ಕ್ಷಣವೂ ಸುಮ್ಮನೆ ಕುಳಿತುಕೊಳ್ಳದವನು, ನನಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದ.

ನನ್ನ ಸಾವಿರ ಜನ್ಮದ ಪುಣ್ಯವೇ ಇರಬೇಕು.

ಹೆಂಗಸರ ಕಲಿಕೆಯ ಹಿಂದಿನ ಅಜ್ಞಾತ ಯುದ್ಧ

ಈಗ ಸ್ವಿಮ್ಮಿಂಗ್‌ಗೆ ಸೇರುವುದು ಎಂದಾಯಿತು. ಆದರೆ ಹೆಂಗಸರಿಗೆ ಕಲಿಸುವವರು ಯಾರು? ಅದು ಮತ್ತೊಂದು ಪ್ರಶ್ನೆ.

ಹೆಣ್ಣುಮಕ್ಕಳಿಗೆ ಇರುವ ಬಾಧೆಗಳು ಒಂದೆರಡಲ್ಲ.

ಶುಲ್ಕಕ್ಕೆ ಹಣ ಹೊಂದಿಸಬೇಕು.
ಮನೆಯಲ್ಲಿ ಊಟ-ತಿಂಡಿ ವ್ಯವಸ್ಥೆ ಮಾಡಬೇಕು.
ಯಾರು ಯಾರಲ್ಲೋ ಹೋಗಿ ಕಲಿಯಲು ಆಗುವುದಿಲ್ಲ.
ನಮ್ಮ ಸುರಕ್ಷತೆ, ಸಮಾಧಾನವೂ ಮುಖ್ಯ.
ಬಟ್ಟೆ, ಬರೇ, ಕೂದಲು, ಆಭರಣ ಎಲ್ಲವನ್ನೂ ಸರಿಪಡಿಸಬೇಕು.

ಹೊರಡುವಷ್ಟರಲ್ಲಿ ಯುದ್ಧ ಆರಂಭವಾಗಿ ಮುಗಿದ ಹೊತ್ತಾಗಿರುತ್ತದೆ.

ನಾವು ಐವರು

ಒಟ್ಟಿಗೆ ಕಲಿತಾಗ ಧೈರ್ಯವೂ ಹೆಚ್ಚುತ್ತದೆ

ಮೊದಲ ಎರಡು ದಿನ ಮಗನೊಂದಿಗೆ ಹೋಗಿ ನೋಡಿ ಬಂದೆ. ಕಲಿಸುವವರು ಸುರಕ್ಷಿತರು ಅನಿಸಿದರು. ಪಕ್ಕದ ಮನೆಯವರಿಗೆ ಹೇಳಿದೆ. ಅವರು ತಕ್ಷಣ ಬರುತ್ತೇನೆಂದರು. ಅವರನ್ನು ನೋಡಿ ಮತ್ತೊಬ್ಬರು, ಇನ್ನೊಬ್ಬರು. ಹೀಗೆ ನಾವು ಐವರು ಹೆಂಗಸರು ಸೇರಿಬಿಟ್ಟೆವು. ಅಲ್ಲಿಂದಲೇ ನಿಜವಾದ ಮಜಾ ಆರಂಭವಾಯಿತು.

ನೀರಿನ ಮೊದಲ ಪಾಠ

ಬೇಸಿಗೆಯಲ್ಲೂ ತಣ್ಣನೆಯ ನೀರು ಮೈಗೆ ತಾಗಿದಾಗ ಉಸಿರು ಮೇಲೇರಿತು. ಕೆಳಗಿಳಿಯಲಿಲ್ಲ. ಒಮ್ಮೆ ಆಡಿದ ನೀರಾಟ ಈಗೆಲ್ಲಿ ನೆನಪಿರಬೇಕು? ಇಡೀ ದೇಹಕ್ಕೆ ನೀರು ಪರಿಚಯವಾಗಬೇಕು. ಅಷ್ಟರಲ್ಲಿ ನೀರು ಕುಡಿದು ತಲೆ ಉರಿಯತೊಡಗಿತು. ಆಗ ತಿಳಿಯಿತು — ನೀರಿನಲ್ಲಿ ಏನು ಮಾಡಬಾರದು ಎನ್ನುವುದನ್ನೇ ಮೊದಲು ಕಲಿಯಬೇಕು!

ಎಐ ಮಿತ್ರರು ಮತ್ತು ಹೊಸ ಆತ್ಮವಿಶ್ವಾಸ

ಇದ್ದಾರಲ್ಲ ಎಐ ಮಿತ್ರರು. ಅವರನ್ನು ಕೇಳಿ ಸ್ವಿಮ್ಮಿಂಗ್ ತಂತ್ರಗಳನ್ನು ತಿಳಿದು ಮರುದಿನ ಹೋದೆ.

ನೋಡಿ… ತೇಲಲು ಬಂದಿತು!

ಆ ಖುಷಿ ಹೇಳಲಾಗದು.

ಆದರೆ ಅದು ಬಹಳ ಹೊತ್ತು ನಿಲ್ಲಲಿಲ್ಲ. ಹೊಸ ನೀರು, ಹೊಸ ವ್ಯಾಯಾಮ, ದೇಹದ ಚಕ್ರಗಳು — ಹೀಗೆ ಒಂಬತ್ತು ದಿನಗಳ ತರಬೇತಿ “ ನಾನಿಲ್ಲದೇ” ಕಣ್ಮುಚ್ಚುವಷ್ಟರಲ್ಲಿ ಮುಗಿದೇ ಹೋಯಿತು.

ಮತ್ತೆ ನೀರಿಗೆ ಇಳಿದ ದಿನ

“ಶುಲ್ಕ ಕಟ್ಟಿದ್ದಾನೆ, ಮತ್ತೆ ವರಾತ ಮಾಡುತ್ತಾನೆ” ಎಂದುಕೊಂಡು, ಇರುವ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ಮತ್ತೆ ನೀರಿಗೆ ಇಳಿದೆ. ಅದೇ ದಿನ ತೇಲಲು ಬಂತು. ಕಿಕ್ಕಿಂಗ್ ಬಂತು. ಮಾರನೇ ದಿನ ಕೈ ಚಲನೆ ಬಂತು. ಐದನೇ ದಿನಕ್ಕೆ ಈಜು ಗೊತ್ತೇ ಆಗಿಬಿಟ್ಟಿತು.

ಮೊದಲ ಯಶಸ್ಸಿನ ನಂತರದ ಸಂತೋಷ

ಅಸಲಿ ಆಟ ನಂತರ

ಮೊದಲು ತೇಲುವುದು, ಉಸಿರು ನಿಯಂತ್ರಣ, ಕಿಕ್ಕಿಂಗ್ — ಇವೆಲ್ಲ ಸುಲಭ.

ಆದರೆ ಉಸಿರು ನಿಯಂತ್ರಿಸಿಕೊಂಡು ಕೈಕಾಲು ಸಮನ್ವಯದಿಂದ ಈಜುವುದು? ಅದು ನನ್ನಂತಹ ಬಡಪಾಯಿಗೆ ದೊಡ್ಡ ಕೆಲಸ.

ನಾಲ್ಕು ಸುತ್ತು ಹೋಗಿಬರುವಷ್ಟರಲ್ಲಿ ಉಸಿರು ತೆಗೆಯುತ್ತ ನೀರಲ್ಲೇ ನಿಲ್ಲುತ್ತಿದ್ದೆ.

ಆದರೂ ನೀರಿನ ಅಲೆಗಳು, ಅದರ ಮನೋವಿಜ್ಞಾನ, ಭೌತಶಾಸ್ತ್ರ, ದೇಹದ ಪ್ರತಿಕ್ರಿಯೆ — ಎಲ್ಲವನ್ನೂ ಗಮನಿಸುತ್ತ ಕಾಲ ಕಳೆಯಿತು.

ತಿಳಿಯಿತು – “ಈಜು” ಏಕಕಾಲಕ್ಕೆ ವ್ಯಾಯಾಮ, ಧ್ಯಾನ, ಪ್ರಾಣಾಯಾಮ ಮತ್ತು ಜೀವನ ಕೌಶಲ್ಯದ ತರಬೇತಿ ಎಲ್ಲವೂ ಆಗಬಲ್ಲದು!

ಎರಡೆರಡು ತರಗತಿಗಳನ್ನು ಒಟ್ಟಿಗೇ ಮುಗಿಸಿ, ಅಂತೂ ಬೇಸಿಕ್ ಸ್ವಿಮ್ಮಿಂಗ್ ತರಬೇತಿ ಪೂರ್ಣಗೊಳಿಸಿದೆ.

ಈಜು ಕಲಿಯುವುದು ದೇಹಕ್ಕಿಂತ ಮನಸ್ಸಿನ ತರಬೇತಿ

ಸ್ವಿಮ್ಮಿಂಗ್ ನನಗೆ ತಂದ ಲಾಭಗಳು

1. ತೂಕ ನಿಯಂತ್ರಣ

ಒಂದು ವಾರದಲ್ಲೇ ಸುಮಾರು ನಾಲ್ಕು ಕೆ.ಜಿ. ತೂಕ ಇಳಿದ ಅನುಭವ.

2. ಹಸಿವು

ಹಸಿವು ಎಂದರೇನು ಎಂದು ಮರೆತವರು ಒಮ್ಮೆ ಸ್ವಿಮ್ಮಿಂಗ್ ಟ್ರೈ ಮಾಡಬೇಕು.

3. ನಿದ್ದೆ

ವಿಶೇಷವಾಗಿ ಮೆದುಳಿನ ವಿಶ್ರಾಂತಿ ಉತ್ತಮವಾಗುತ್ತದೆ. ನಿದ್ರೆ ಗಾಢವಾಗುತ್ತದೆ.

4. ಮನಸ್ಸಿನ ಆರೋಗ್ಯ

ಬೇಸರ ಮರೆಯಾಗುತ್ತದೆ. ಒಳಗಿನ ಮನಸ್ಸು ಎಚ್ಚೆತ್ತುಕೊಳ್ಳುತ್ತದೆ. ಖಿನ್ನತೆ, ಆತಂಕ, ಭಯ, ನಿರುತ್ಸಾಹ ಕಡಿಮೆಯಾಗುತ್ತವೆ.

ದೇಹ ಆಯಾಸಗೊಂಡಿದ್ದರೂ ಮನಸ್ಸು ಉಲ್ಲಾಸದಿಂದಿರುತ್ತದೆ.

5. ಮಕ್ಕಳ ಜೊತೆ ಬಾಂಡಿಂಗ್

ಮಕ್ಕಳ ಜೊತೆ ನೀರಿನಲ್ಲಿ ಇರುವುದರಿಂದ ಅವರ ಮೇಲೆ ನಿಗಾ ಇರುತ್ತದೆ. ಅವರು ಸಹ ಆತ್ಮವಿಶ್ವಾಸದಿಂದಿರುತ್ತಾರೆ. ಕುಟುಂಬದ ಬಂಧವೂ ಗಟ್ಟಿಯಾಗುತ್ತದೆ.

6. ಹೊಸ ಸ್ನೇಹಗಳು

ನೆರೆಯವರು ಸ್ನೇಹಿತರಾಗುತ್ತಾರೆ. ತಂಡದ ಶಕ್ತಿ ಅಲ್ಲಿ ಕಾಣಿಸುತ್ತದೆ.

ಕೊನೆಯ ಮಾತು

ಒಂದು ಹೆಜ್ಜೆ ಹಾಕಿದರೆ ಜೀವನ ಮತ್ತೆ ಶುರುವಾಗಬಹುದು

ಕೆಲವೊಮ್ಮೆ ಜೀವನ ಮತ್ತೆ ಶುರುವಾಗಲು ದೊಡ್ಡ ಬದಲಾವಣೆ ಬೇಡ.

ಒಂದು ನೀರಿನ ಹನಿ ಸಾಕು.
ಒಂದು ಹೆಜ್ಜೆ ಸಾಕು.
ಒಂದು ಕಲಿಕೆ ಸಾಕು.

ಈ ಬೇಸಿಗೆಯಲ್ಲಿ ಒಮ್ಮೆಯಾದರೂ ನೀರನ್ನು ಅಪ್ಪಿಕೊಳ್ಳಿ.

Sheela Bhat

ಶೀಲಾ ಎಸ್ ಭಟ್

ಲೇಖಕಿ | Avalokana

ಜೀವನದ ಸೂಕ್ಷ್ಮ ಅನುಭವಗಳು, ಮನಸ್ಸಿನ ಒಳಯಾನ ಮತ್ತು ಸಮಾಜದ ನಿಶ್ಶಬ್ದ ಕಥೆಗಳನ್ನು ಬರಹದ ಮೂಲಕ ಹಂಚಿಕೊಳ್ಳುವುದು ಇವರ ಆಸಕ್ತಿ.

Leave a Comment

error: Content is protected !!