ಮರಣದ ನೆರಳಲ್ಲೂ ಹಬ್ಬ… ಜೀವನದ ಮೇಲಿನ ಮಾನವೀಯ ನಂಬಿಕೆ| ಅವಲೋಕನ

ರಮ್ ಜಾನ್ ಉಪವಾಸ ಕೊನೆಗೊಂಡು ಈದ್-ಉಲ್-ಫಿತರ್  ಹಬ್ಬ ಬಂದಿದೆ. ಈ ಹೊತ್ತಲ್ಲಿ ಯುದ್ಧದ ಸಂತ್ರಸ್ತ ದೇಶ ಇರಾನ್ ನಲ್ಲಿ ಹೇಗಿದೆ ? ಇಂತಹದೊಂದು ಕುತೂಹಲದಿಂದ ಖಾಸಗಿ ವಾಹಿನಿಯಲ್ಲಿ ಇಣುಕಿದಾಗ ಕಂಡಿದ್ದಿದು. ಅಂಗಡಿ, ಮುಂಗಟ್ಟುಗಳು ಧ್ವಂಸವಾಗಿದ್ದರೂ ರಸ್ತೆಯಲ್ಲಿ ಜನರು ಹಬ್ಬದ ಖರೀದಿಯಲ್ಲಿ ತೊಡಗಿದ್ದರು. ಒಬ್ಬನೆಂತೂ ಆಗಷ್ಟೇ ಅರಳಿದ ಹೂವಿನ ಮೊಗ್ಗನ್ನು ಖರೀದಿಸಿ ಜೋಡಿಸಿಕೊಳ್ಳುತ್ತಿದ್ದ. ಇನ್ನೊಂದು ಜೋಡಿ ರಸ್ತೆಯಲ್ಲಿ ಹರಡಿದ್ದ ಹಣ್ಣುಗಳು, ಸಿಹಿತಿನಿಸುಗಳನ್ನು ಖರೀದಿಸುತ್ತಿತ್ತು. ಆಗ ಮೂಡಿದ ಪ್ರಶ್ನೆ, ಯುದ್ಧದಲ್ಲಿ ಗೆದ್ದವರು ಯಾರು?

ಯಾಕೆಂದರೆಯುದ್ಧದ ಮಧ್ಯೆಯೂ… ಜನರು ಹಬ್ಬಕ್ಕೆ ಸಿದ್ಧರಾಗುತ್ತಾರೆ. ಮೊದಲ ನೋಟಕ್ಕೆ ಇದು  ಅಸಾಧಾರಣವಾಗಿ ಕಾಣಬಹುದು. ಭಯ, ಅನಿಶ್ಚಿತತೆ, ಮರಣದ ನೆರಳು— ಇವೆಲ್ಲದರ ನಡುವೆ ಹಬ್ಬದ ಸಿದ್ಧತೆ?

ಸ್ವಲ್ಪ ಆಳವಾಗಿ ನೋಡಿದರೆ, ಇದು ಅಸಾಧಾರಣವಲ್ಲ. ಇದೇ ಮಾನವೀಯತೆ. ಇದು ಮನುಷ್ಯ ಸಹಜ ಗುಣಧರ್ಮ. ಪ್ರತಿ ಜೀವಿಯ ಆಂತರ್ಯ. ಒಂದು ಸಣ್ಣ ಜೇಡರ ಹುಳುವಿಗೂ ಬದುಕುವ ಆಸೆ ಇರುತ್ತದೆಂದರೆ ಮನುಷ್ಯ ಇದರ ಹೊರತಲ್ಲ. ಬದುಕನ್ನು ಸಂಭ್ರಮಿಸುವ ಮನಸ್ಸು ಸಾವಿನ ಭಯದಲ್ಲಿ ಇನ್ನಷ್ಟು ಹೆಚ್ಚಾಗುತ್ತದೆಯೇನೊ!?

ಇರಾನ್‌ನ ಬೀದಿಗಳಲ್ಲಿ ಇಂದು ಯುದ್ಧದ ಪರಿಣಾಮಗಳು ಗೋಚರಿಸುತ್ತಿವೆ. ನೂರಾರು ಜನರ ಸಾವು, ವರ್ಷಗಳಲ್ಲಿ ಕಟ್ಟಿದ ಕಟ್ಟಡಗಳು ಕ್ಷಣಾರ್ಧದಲ್ಲಿ ನಾಶವಾಗಿವೆ. ದೇಶದ ಆರ್ಥಿಕ ಮೂಲಗಳಾದ ತೈಲ ಬಾವಿಗಳು ಹೊತ್ತಿ ಉರಿಯುತ್ತಿವೆ. ದೇಶಕ್ಕೆ ಬರಬೇಕಾದ ಆಹಾರಕ್ಕೆ ಅನಿಶ್ಚಿತತೆ ಇದೆ.  ಆರ್ಥಿಕ ಒತ್ತಡ, ಬೆಲೆ ಏರಿಕೆ, ಭವಿಷ್ಯದ ಬಗ್ಗೆ ಅಸ್ಪಷ್ಟತೆ… ಆದರೂ, ಅದೇ ಬೀದಿಗಳಲ್ಲಿ ಜನರು ಹಬ್ಬದ ಖರೀದಿಯಲ್ಲಿ ತೊಡಗಿದ್ದಾರೆ. ಇದು ಕೇವಲ ಒಂದು ಆಚರಣೆ ಅಲ್ಲ. ಇದು ಒಂದು ಮೌನವಾದ ಹೇಳಿಕೆ: ನಾವಿನ್ನೂ ಬದುಕಿದ್ದೇವೆ.”

ಮಾನವ ಮನಸ್ಸಿನ ಒಂದು ಅಚ್ಚರಿಯ ಗುಣವೇ ಇದು. ಎಷ್ಟೇ ಕಷ್ಟ ಬಂದರೂ, ಜೀವನವನ್ನು ಸಂಪೂರ್ಣವಾಗಿ ಬಿಡುವುದಿಲ್ಲ. ಭಯ ಇದ್ದರೂ, ಒಂದು ಸಣ್ಣ ಸಂತೋಷವನ್ನು ಹುಡುಕುತ್ತದೆ. ನಷ್ಟ ಇದ್ದರೂ, ಒಂದು ಕ್ಷಣವನ್ನು ಅರ್ಥಪೂರ್ಣವಾಗಿಸಲು ಪ್ರಯತ್ನಿಸುತ್ತದೆ. ಯಾಕೆಂದರೆ ಹೃದಯ ಇರುವ ಮನುಷ್ಯ, ಭಾವನೆಗಳಿರುವ ಮನುಷ್ಯ ಕಷ್ಟ ಬಂದಾಗ, ಸಾವಿನ ಎದುರು ನಿಂತಾಗ ಬದುಕಿನ ಉತ್ಕಟತೆಯನ್ನು ಅನುಭವಿಸುತ್ತಾನೆ!

ನಾವು ಬಹಳ ಬಾರಿ ಬದುಕನ್ನು ಭವಿಷ್ಯದ ಭರವಸೆಯೊಂದಿಗೆ ಕಟ್ಟಿ ಹಾಕುತ್ತೇವೆ. “ನಾಳೆ ಎಲ್ಲವೂ ಸರಿಯಾಗುತ್ತದೆ” ಎಂದು ನಂಬುತ್ತೇವೆ. ಆದರೆ ಯುದ್ಧ ಒಂದು ಸತ್ಯವನ್ನು ತೋರಿಸುತ್ತದೆ: ನಾಳೆ ಖಚಿತವಲ್ಲ. ಆ, ಇಂದಿನ ಕ್ಷಣವೇ ಮುಖ್ಯವಾಗುತ್ತದೆ. ಅದರಲ್ಲೂ ಒಳ-ಹೊರಗಿನ ಯುದ್ಧದಲ್ಲಿ ನಾಳೆ ಎಂಬುದು ನಿತ್ಯದ ಪ್ರಶ್ನೆಯಾಗುತ್ತದೆ. ಮತ್ತು ಅಂತಹ ಕ್ಷಣಗಳಲ್ಲೇ ಇರುವಷ್ಟೇ ಘಳಿಗೆಗಳು ಮಹತ್ವಪೂರ್ಣ ಎನಿಸುತ್ತವೆ. ಸಂಬಂಧಗಳು, ಭಾವನೆಗಳು ಮುನ್ನೆಲೆಗೆ ಬಂದು ಸಾಮಾಜಿಕ ತಲ್ಲಣಗಳು ಹಿಂದೆ ಸರಿಯುತ್ತವೆ.

ಹಬ್ಬದ ಸಣ್ಣ ಸಿದ್ಧತೆಗಳು, ಮನೆಗೆ ತರಲಾಗುವ ಸಿಹಿ ಪದಾರ್ಥಗಳು, ಕುಟುಂಬದ ಜೊತೆ ಹಂಚಿಕೊಳ್ಳುವ ಊಟ, ಒಂದು ನಗು… ಇವೆಲ್ಲವೂ ಸಾಮಾನ್ಯವಾಗಿ ಕಾಣಬಹುದು. ಆದರೆ ಮರಣದ ನೆರಳಿನಲ್ಲಿ, ಅವು ಅಮೂಲ್ಯವಾಗುತ್ತವೆ.  

ಯುದ್ಧದ ಮಧ್ಯೆಯೂ ಹಬ್ಬ ಆಚರಿಸುವುದು ಅಜಾಗರೂಕತೆ ಅಲ್ಲ. ಅದು ಒಂದು ಪ್ರತಿರೋಧ.ಮರಣದ ವಿರುದ್ಧದ ಪ್ರತಿರೋಧ. ನಿರಾಶೆಯ ವಿರುದ್ಧದ ಪ್ರತಿರೋಧ.

ಇದು ಮಾನವೀಯತೆಯ ಗಾಢ ಸತ್ಯವನ್ನು ಹೇಳುತ್ತದೆ: ಜೀವನವು ಕೇವಲ ಉಸಿರಾಡುವುದಲ್ಲ… ಅದು ಅನುಭವಿಸುವುದು. ಇರಾನ್‌ನ ಜನರು ಇಂದು
ಬದುಕನ್ನು ಉಳಿಸಿಕೊಳ್ಳುವುದಷ್ಟೇ ಅಲ್ಲ, ಅದನ್ನು ಅರ್ಥಪೂರ್ಣವಾಗಿಸಲು ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಒಂದು ಸ್ಪಷ್ಟತೆ ಇದೆ: ಇಂದು ಇರುವ ಕ್ಷಣವೇ ನಿಜ.

ಇದು ನಮಗೆ ಒಂದು ಪ್ರಶ್ನೆ ಕೇಳುತ್ತದೆ: ನಾವು ಶಾಂತಿಯಲ್ಲಿದ್ದಾಗಲೂ ಬದುಕನ್ನು ಇಷ್ಟೇ ಮೌಲ್ಯವಾಗಿಸಿಕೊಳ್ಳುತ್ತೇವಾ? ಅಥವಾ, ನಾವು ಅದನ್ನು ಸಹಜವಾಗಿ ತೆಗೆದುಕೊಂಡು
ಅದರ ಮೌಲ್ಯವನ್ನು ಮರೆತಿದ್ದೇವಾ?

ಮರಣ ಯಾವಾಗ ಬೇಕಾದರೂ ಬರಬಹುದು. ಆದರೆ ಜೀವನ? ಅದು ಈಗ ಇದೆ. ಅದನ್ನು ಅನುಭವಿಸುವುದೇ ನಮ್ಮ ಮಾನವೀಯತೆ. ಅದನ್ನು ಅನುಭವಿಸುವುದೇ ಮನುಷ್ಯ ಜನ್ಮದ ಸಾರ್ಥಕತೆ.

– ಶೀಲಾ ಎಸ್ ಭಟ್ | ಅವಲೋಕನ (Avalokana)

Sheela Bhat

ಶೀಲಾ ಎಸ್ ಭಟ್

ಲೇಖಕಿ | Avalokana

ಜೀವನದ ಸೂಕ್ಷ್ಮ ಅನುಭವಗಳು, ಮನಸ್ಸಿನ ಒಳಯಾನ ಮತ್ತು ಸಮಾಜದ ನಿಶ್ಶಬ್ದ ಕಥೆಗಳನ್ನು ಬರಹದ ಮೂಲಕ ಹಂಚಿಕೊಳ್ಳುವುದು ಇವರ ಆಸಕ್ತಿ.

Leave a Comment

error: Content is protected !!