ಭಾಷೆಯ ಗಡಿ ಮೀರಿದ ಅವಲೋಕನ – ಹೊಸ ಸರಣಿಗಳ ಆರಂಭ

ಭಾಷೆ ಮತ್ತು ಸಂಸ್ಕೃತಿ

ಯಾವುದೇ ಭಾಷೆಯ ಸಾಹಿತ್ಯ ಆ ಭಾಷೆಯ ನೆಲದ ವ್ಯಕ್ತಿ, ಸಂಬಂಧಗಳು ಮತ್ತು ಸಮಾಜವನ್ನು ಚಿತ್ರಿಸುತ್ತದೆ. ಒಂದು ನೆಲದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಅರಿಯಲು ಆ ನೆಲದ ಭಾಷೆಯ ಅಭಿವ್ಯಕ್ತಿಗಳನ್ನು ಗಮನಿಸಿದರೆ ಸಾಕು.

ಎಷ್ಟೋ ವಿಷಯಗಳನ್ನು ಆ ನೆಲದ ಅನುಭವವಿಲ್ಲದೆಯೇ ಅನುಭಾವಿಸಬಹುದು. ಬರವಣಿಗೆ, ಭಾಷಣಗಳು, ಕವನ, ಕಥೆ, ನಾಟಕಗಳು ಮತ್ತು ಕಾದಂಬರಿಗಳು ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಡಿಜಿಟಲ್ ಯುಗ ಮತ್ತು ಕಥೆಗಳು

ಸಾಮಾಜಿಕ ಮಾಧ್ಯಮಗಳ ಆವಿಷ್ಕಾರದ ನಂತರ, ಈ ಅಭಿವ್ಯಕ್ತಿಗಳು ವಿಡಿಯೊಗಳ ಮೂಲಕ ಜನರನ್ನು ತಲುಪುತ್ತಿವೆ. ವಾಸ್ತವ ಬದುಕಿನ ವ್ಲಾಗ್‌ಗಳು ಮತ್ತು ಡ್ರಾಮಾಗಳ ಮೂಲಕ ಆಯಾ ದೇಶದ ಸಂಸ್ಕೃತಿ, ಹಿನ್ನೆಲೆ ಮತ್ತು ಇತಿಹಾಸದ ಆಧಾರದ ಮೇಲೆ ನಿರ್ಮಾಣವಾದ ಕಥೆಗಳು ಜಗತ್ತಿನ ಎಲ್ಲೆಡೆ ನೋಡುಗರನ್ನು ತಲುಪುತ್ತಿವೆ. ಇವುಗಳು ದೇಶ, ಸಮಯ ಮತ್ತು ಭಾಷೆಯ ಗಡಿಗಳನ್ನು ಮೀರಿಸಿ ಜನರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿವೆ.

ಏಕೆ ದಕ್ಷಿಣ ಕೊರಿಯಾ, ಜಪಾನ್ ಮತ್ತು ಚೀನಾ?

ಭಾರತೀಯ ಚಲನಚಿತ್ರ ಮತ್ತು ವೆಬ್ ಸರಣಿಗಳ ಜೊತೆಗೆ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಚೀನಾ ದೇಶಗಳ ಡ್ರಾಮಾಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ. ದಕ್ಷಿಣ ಕೊರಿಯಾ ಡ್ರಾಮಾಗಳು ಆ ದೇಶದ ಆಹಾರ, ಕೌಟುಂಬಿಕ ವ್ಯವಸ್ಥೆ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲೇ ಮನುಷ್ಯನ ಬದುಕಿನ ತಲ್ಲಣಗಳಿಗೆ ಉತ್ತರ ಹುಡುಕುತ್ತವೆ.

ಅವುಗಳಲ್ಲಿ ಕಾಣಿಸುವ ಪರಿಹಾರಗಳು ಕೆಲವೊಮ್ಮೆ ವಾಸ್ತವದಿಂದ ದೂರವಾಗಿದ್ದರೂ, ಅಸಾಧ್ಯವಲ್ಲ ಎಂಬ ಭಾವನೆ ಮೂಡಿಸುತ್ತವೆ. ವ್ಯಕ್ತಿ, ಸಂಬಂಧಗಳು ಮತ್ತು ಸಮಾಜದ ಸುತ್ತ ಸುತ್ತುವ ಈ ಕಥೆಗಳು ಮನಸ್ಸಿಗೆ ಹೊಸ ಹೊಳಹುಗಳನ್ನು ನೀಡುತ್ತವೆ — ಅದೇ ಅದರ ಶಕ್ತಿ.

ಜಪಾನ್ ಡ್ರಾಮಾಗಳೂ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ತಮ್ಮ ಸಂಸ್ಕೃತಿಯನ್ನು ಅಭಿವ್ಯಕ್ತಗೊಳಿಸುತ್ತವೆ.

ಚೀನಾ ಡ್ರಾಮಾಗಳು ಹೆಚ್ಚು ಜನಪ್ರಿಯವಾಗಿದ್ದರೂ, ಅವು ವಾಸ್ತವಕ್ಕಿಂತ ಕನಸುಗಳತ್ತ ಹೆಚ್ಚು ಒಲವು ಹೊಂದಿವೆ. ಆದರೂ, ಉದ್ಯಮ, ಕೆಲಸದ ಸ್ಥಳದ ವಾತಾವರಣ, ಸಂಘರ್ಷಗಳು, ರಾಜಕೀಯ, ವ್ಯಾಪಾರ ತಂತ್ರಗಳು ಮತ್ತು ವ್ಯಾಪಾರಿಕ ಆಲೋಚನೆಗಳು ನೋಡುಗರಿಗೆ ಹೊಸ ಸಾಧ್ಯತೆಗಳನ್ನು ತೆರೆದುಕೊಡುತ್ತವೆ.

ಭಾರತೀಯ ಹಿನ್ನೆಲೆ

ಈ ಹಿನ್ನಲೆಯಲ್ಲಿ ನೋಡಿದರೆ, ಕನ್ನಡ ಮತ್ತು ಭಾರತೀಯ ಚಿತ್ರಕಥೆಯ ಕ್ಷೇತ್ರ ಇನ್ನೂ ಬೆಳವಣಿಗೆಯ ಹಂತದಲ್ಲಿದೆ. ಅದರಿಂದಲೇ ಜನಮಾನಸಕ್ಕೆ ಹತ್ತಿರವಾದ ಈ ದೇಶಗಳ ಡ್ರಾಮಾಗಳನ್ನು ಅವಲೋಕಿಸುವ ಅಗತ್ಯ ಇದೆ.

ಈ ಸರಣಿಯ ಉದ್ದೇಶ

ಈ ಸರಣಿಯ ಮೂಲಕ ನಾನು ಮಾಡಬೇಕೆಂದಿರುವುದು –

೧. ಈ ನೆಲದ ಜನರಿಗೆ ಆ ಭಾಷೆಯ ಡ್ರಾಮಾಗಳ ಹಿನ್ನೆಲೆಯನ್ನು ತಿಳಿಸುವುದು. ಇದು ಪ್ರಚಾರವಲ್ಲ. ಗುಣಕ್ಕೆ ಮತ್ಸರವಿಲ್ಲ. ಯಾವುದು ಉತ್ತಮವಾಗಿದೆಯೋ ಅದನ್ನು ಮೆಚ್ಚುವುದರಲ್ಲಿ ತಪ್ಪಿಲ್ಲ. ಅದೇ ವೇಳೆ, ಭಾರತೀಯ ಚಲನಚಿತ್ರ ಮತ್ತು ವೆಬ್ ಸರಣಿಗಳೂ ಮನಸ್ಸಿಗೆ ಹತ್ತಿರವಾದಲ್ಲಿ ಅವುಗಳ ಅವಲೋಕನವೂ ಇಲ್ಲಿ ಇರುತ್ತದೆ.

೨. ಅನೇಕ ವಿಷಯಗಳಲ್ಲಿ ಈ ಡ್ರಾಮಾಗಳು ಭಾರತೀಯ ಮನಸ್ಸಿಗೆ ಹತ್ತಿರವಾಗಿವೆ. ಅವುಗಳಲ್ಲಿ ಕಾಣಿಸುವ “ನಾನು, ನೀನು ಮತ್ತು ಅವರು (ವ್ಯಕ್ತಿ, ಸಂಬಂಧ ಮತ್ತು ಸಮಾಜ)” ಎಂಬ ವೃತ್ತವನ್ನು ಇನ್ನಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ಕಥೆಯ ಮೂಲಕ ಮನಸ್ಸಿಗೆ ಪ್ರವೇಶಿಸುವುದು ಸುಲಭ. ಅದೇ ಇದರ ವಿಶೇಷತೆ.

ಈ ಸರಣಿಯ ಮೂಲಕ ನಾನು ನನ್ನ ಒಳಗಿನ ಚಿಂತನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಷ್ಟೇ ಅಲ್ಲ, ನಿಮ್ಮೊಂದಿಗೆ ಒಂದು ಸಹೃದಯಿ ಸಂಬಂಧವನ್ನು ನಿರ್ಮಿಸಲು ಬಯಸುತ್ತೇನೆ. ಅದೇ ಸಮಯದಲ್ಲಿ, ಈ ಬರಹಗಳು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಹುಟ್ಟಿಸಲಿ ಎಂಬ ಆಶಯವೂ ಇದೆ. ಈ ಪ್ರಯಾಣದಲ್ಲಿ ನಾನು ಮಾತ್ರವಲ್ಲ, ನೀವು ಓದುಗರೂ ನನ್ನ ಜೊತೆಯಲ್ಲಿರುತ್ತೀರಿ ಎಂಬ ನಂಬಿಕೆ ನನಗಿದೆ.

ಈ ಹೊಸ ಅವಲೋಕನ ಸರಣಿಗೆ ನಿಮ್ಮ ಬೆಂಬಲ ಮತ್ತು ಜೊತೆಯು ನನಗೆ ಮಹತ್ವದ್ದು.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment