ಸಂಬಂಧಗಳು ನಮ್ಮ ಜೀವನದ ಪ್ರಮುಖ ಭಾಗ. ಕುಟುಂಬ, ಸ್ನೇಹ, ದಾಂಪತ್ಯ, ಕೆಲಸದ ಸಂಬಂಧಗಳು — ಎಲ್ಲವೂ ನಮ್ಮ ಭಾವನಾತ್ಮಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಸಂಬಂಧಗಳು ಆರೋಗ್ಯಕರವಾಗಿರಲು ಕೇವಲ ಪ್ರೀತಿ ಸಾಕಾಗುವುದಿಲ್ಲ. ಗಡಿಗಳು (Boundaries) ಕೂಡ ಅಗತ್ಯ. ಗಡಿಗಳು ಎಂದರೆ ದೂರ ಇಡುವ ಗೋಡೆಗಳು ಅಲ್ಲ. ಅವು ನಮ್ಮನ್ನು ಕಾಪಾಡುವ ರೇಖೆಗಳು.
ಗಡಿ ಎಂದರೆ ಏನು?
ಗಡಿ ಎಂದರೆ ನಮಗೆ ಯಾವ ವರ್ತನೆ ಒಪ್ಪಿಗೆಯಾಗಿದೆ, ಯಾವುದು ಅಲ್ಲ ಎಂಬುದನ್ನು ಸ್ಪಷ್ಟಪಡಿಸುವುದು. ಉದಾಹರಣೆಗೆ ಒಬ್ಬ ಸ್ನೇಹಿತ ಪದೇಪದೇ ರಾತ್ರಿ 12 ಗಂಟೆಗೆ ಕರೆ ಮಾಡುತ್ತಾನೆ. ನಿಮಗೆ ಅದು ಅಸೌಕರ್ಯ ತರುತ್ತದೆ. ಗಡಿ ಇಲ್ಲದೆ ನೀವು ಕರೆ ತೆಗೆದುಕೊಳ್ಳುತ್ತೀರಿ. ಆದರೆ ಒಳಗೆ ಕಿರಿಕಿರಿ. ಆದರೂ ಮರು ಮಾತನಾಡದೆ ಒಂದೆರಡು ದಿನಗಳ ಕಾಲ ತಡೆದುಕೊಳ್ಳುತ್ತೀರಿ. ಮೂರನೇ ದಿನ ಇಲ್ಲಪ್ಪ, ನೀನು ೧೦ ಗಂಟೆ ನಂತರ ಕರೆ ಮಾಡಬೇಡ, ಬೆಳಿಗ್ಗೆ ಮಾತನಾಡೋಣ ಎನ್ನುತ್ತೀರಿ. ಇದು ಗಡಿ.
ಗಡಿಗಳು ಇಲ್ಲದಾಗ ಏನಾಗುತ್ತದೆ?
- ಅಸಮಾಧಾನ ಜಮೆಯಾಗುತ್ತದೆ
- ಕೋಪ ಹೆಚ್ಚುತ್ತದೆ
- ದಣಿವು ಬರುತ್ತದೆ
- ಸ್ವಗೌರವ ಕುಸಿಯುತ್ತದೆ
ಉದಾಹರಣೆಗೆ ಒಬ್ಬ ಮಹಿಳೆ ಮನೆಯ ಎಲ್ಲ ಕೆಲಸವನ್ನು ಒಬ್ಬಳೇ ಮಾಡುತ್ತಾಳೆ. ಯಾರಿಗೂ “ಇದು ತನಗೆ ಕಷ್ಟ” ಎಂದು ಹೇಳುವುದಿಲ್ಲ. ಒಳಗೆ ಬೇಸರ. ಎಲ್ಲರ ಮೇಲೆ ಅಸಮಾಧಾನ. ಯಾರೂ ತನ್ನ ಕಷ್ಟವನ್ನು ಅರ್ಥಮಾಡಿಕೊಳ್ಳುತ್ತಿಲ್ಲ, ಇವರೆಲ್ಲ ತನ್ನನ್ನು ಪ್ರೀತಿ ಮಾಡುತ್ತಿಲ್ಲ, ಅಥವಾ ತಾನು ಪ್ರೀತಿಗೆ ಅರ್ಹಳಲ್ಲ ಹೀಗೆ ಹಲವಾರು ಋಣಾತ್ಮಕ ಭಾವನೆಗಳು ಮನಸ್ಸಿನಲ್ಲಿ ಕೂಡಿಕೊಳ್ಳುತ್ತ ಪ್ರೀತಿ ರಾಹಿತ್ಯವನ್ನು ಹೊಂದುತ್ತಾಳೆ. ಇಡೀ ಮನೆ ರಣಾಂಗಣವಾಗಿ ಬದಲಾಗುತ್ತದೆ. ಹೀಗೆ ಗಡಿ ಇಲ್ಲದ ಸಂಬಂಧಗಳಲ್ಲಿ ಪ್ರೀತಿ ನಿಧಾನವಾಗಿ ಕರಗುತ್ತದೆ.
ಗಡಿ ಇಡುವುದರ ಬಗ್ಗೆ ಇರುವ ಭಯ
ಬಹುಮಂದಿ ಭಾವಿಸುವುದೇನೆಂದರೆ “ನಾನು ಗಡಿ ಇಟ್ಟರೆ ಅವರು ನನ್ನನ್ನು ಬಿಟ್ಟುಹೋಗುತ್ತಾರೆ.” ನಾನು “ಇಲ್ಲ ಆಗುವುದಿಲ್ಲ” ಎಂದರೆ ಈ ಸಂಬಂಧ ಬಿಟ್ಟು ಹೋಗಬಹುದು, ಇಲ್ಲವಾಗಬಹುದು ಎಂದು. ಆದರೆ ಗಡಿ ಇಟ್ಟರೆ ಹೋಗುವವರು ಈಗಾಗಲೇ ನಿಮ್ಮನ್ನು ಗೌರವಿಸುತ್ತಿರಲಿಲ್ಲ ಎಂದರ್ಥ. ಉದಾಹರಣೆಗೆ ಒಬ್ಬ ಯುವಕ ತನ್ನ ಸ್ನೇಹಿತನಿಗೆ “ನೀನು ನನ್ನನ್ನು ಅವಮಾನಿಸಿದಾಗ ನನಗೆ ನೋವಾಗುತ್ತದೆ.” ಎಂದರೆ ಸ್ನೇಹಿತ ನಗಬಹುದು. ಹೀಗೆ ಯೋಚನೆ ಮಾಡುತ್ತ ಸ್ನೇಹಿತನಿಗೆ ತನ್ನ ಭಾವನೆಗಳನ್ನು ತಿಳಿಸುವುದೇ ಇಲ್ಲ. ಒಂದು ವೇಳೆ ತಿಳಿಸಿದಾಗ ಸ್ನೇಹಿತ ಆ ಭಾವನೆಗೆ ಗೌರವ ಕೊಡದಿದ್ದರೆ ಆತ ಸ್ನೇಹಿತನೇ ಆಗಿರಲಿಲ್ಲ ಎಂಬ ಸತ್ಯವನ್ನು ಎದುರಿಸುವ ಭಯ. ಇದು ಸಮಸ್ಯೆ.
ಗಡಿಗಳ ವಿಧಗಳು
ಸಮಯದ ಗಡಿ
ನಿಮ್ಮ ಸಮಯವನ್ನು ಗೌರವಿಸುವುದು. ನೀವು ಕೆಲಸ ಮಾಡುತ್ತಿರುವಾಗ ಯಾರೋ ಕರೆ ಮಾಡುತ್ತಾರೆ, ನಿಮ್ಮ ಕೆಲಸದ ಮಧ್ಯೆ ನೀವು ಯಾವು ಯಾವುದಕ್ಕೋ ಸಮಯ ನೀಡಬೇಕಾಗುತ್ತದೆ. ಇದೆಲ್ಲ ನಿಮ್ಮ ಸಮಯದ ದುರುಪಯೋಗ. ನೀವು ಸಮಯದ ಗಡಿ ಹಾಕಿಲ್ಲದಿದ್ದರೆ ನಿಮ್ಮ ಸಮಯ ವ್ಯರ್ಥವಾಗಿ ಪೋಲಾಗಿ ನಿಮ್ಮ ಬೆಳವಣಿಗೆಗೆ ಕುಂದು ಖಚಿತವಾಗುತ್ತದೆ. ಆದ್ದರಿಂದ ಸಂಬಂಧಗಳಲ್ಲಿ ಸಮಯದ ಗಡಿ ಹಾಕುವುದು ಬಹಳ ಮುಖ್ಯ. ಸಮಯದ ಗಡಿ ಎಂದರೆ — ನಿಮ್ಮ ಸಮಯವೂ ಮೌಲ್ಯಯುತ ಎಂದು ನೀವು ಒಪ್ಪಿಕೊಳ್ಳುವುದು. ದಿನದ ಪ್ರತಿಕ್ಷಣವನ್ನು ಎಲ್ಲರಿಗೂ ನೀಡಬೇಕೆಂಬ ಹೊಣೆ ನಿಮ್ಮದು ಅಲ್ಲ. ಉದಾಹರಣೆಗೆ, ಕೆಲಸದ ನಂತರ ನೀವು ವಿಶ್ರಾಂತಿ ಬೇಕೆಂದು ನಿರ್ಧರಿಸಿದಾಗ, ಯಾರಾದರೂ “ಈಗಲೇ ಮಾತನಾಡೋಣ” ಎಂದರೆ, ನೀವು ಶಾಂತವಾಗಿ “ನಾಳೆ ಮಾತನಾಡೋಣ, ಇಂದು ನನಗೆ ಸ್ವಲ್ಪ ವಿಶ್ರಾಂತಿ ಬೇಕು” ಎಂದು ಹೇಳಬಹುದು. ಇದು ನಿರ್ಲಕ್ಷ್ಯವಲ್ಲ. ಇದು ಸ್ವಯಂ-ಕಾಳಜಿ. ಇನ್ನೊಂದು ಉದಾಹರಣೆ — ಸ್ನೇಹಿತನು ಪ್ರತಿಬಾರಿ ತಡವಾಗಿ ಬಂದು ನಿಮ್ಮನ್ನು ಕಾಯಿಸುತ್ತಿದ್ದರೆ, ನೀವು “ನನ್ನ ಸಮಯವೂ ಮುಖ್ಯ, ದಯವಿಟ್ಟು ಸಮಯಕ್ಕೆ ಬರೋಣ” ಎಂದು ಹೇಳುವ ಹಕ್ಕು ಹೊಂದಿದ್ದೀರಿ. ನಿಮ್ಮ ಸಮಯವನ್ನು ಗೌರವಿಸುವುದು ಎಂದರೆ ಇತರರನ್ನು ತಳ್ಳಿಹಾಕುವುದು ಅಲ್ಲ. ನಿಮ್ಮ ಜೀವನಕ್ಕೆ ಮೌಲ್ಯ ನೀಡುವುದು. ಸಮಯದ ಗಡಿ ನಮಗೆ ಕಲಿಸುವ ಸತ್ಯವೇನೆಂದರೆ: ನಾವು ಎಲ್ಲರಿಗೂ ಲಭ್ಯವಿರುವವರು ಆಗಬೇಕಾಗಿಲ್ಲ, ಆದರೆ ನಮ್ಮ ಜೀವನಕ್ಕೆ ಹಾಜರಿರುವವರು ಆಗಬೇಕು.
ಭಾವನಾತ್ಮಕ ಗಡಿ
ಇತರರ ಭಾವನೆಗಳ ಹೊಣೆ ನಿಮ್ಮದಾಗಿಲ್ಲ. ಇದು ಬಹಳಷ್ಟು ಮುಗ್ದ ಜನರಿಗೆ ಅರ್ಥವಾಗುವುದಿಲ್ಲ. ಭಾವನಾತ್ಮಕ ಗಡಿ ಎಂದರೆ ಇತರರು ಏನು ಭಾವಿಸುತ್ತಾರೆ, ಏನು ಅನುಭವಿಸುತ್ತಾರೆ ಎಂಬುದಕ್ಕೆ ನಾವು ಕಾರಣರಾಗಬೇಕೆಂದಿಲ್ಲ ಎಂಬ ಅರಿವು. ಉದಾಹರಣೆಗೆ, ನೀವು ಶಾಂತವಾಗಿ “ಇಂದು ನಾನು ಬರಲಾರೆ” ಎಂದು ಹೇಳಿದಾಗ, ಎದುರಿನ ವ್ಯಕ್ತಿಗೆ ಬೇಸರವಾಗಬಹುದು. ಆ ಬೇಸರವನ್ನು ನೀವು ಸೃಷ್ಟಿಸಿಲ್ಲ. ನೀವು ನಿಮ್ಮ ಮಿತಿಯನ್ನು ಗೌರವಿಸಿದ್ದೀರಿ. ಅದೇ ರೀತಿ, ಒಬ್ಬ ಸ್ನೇಹಿತ ತನ್ನ ಸಮಸ್ಯೆಗಳನ್ನು ನಿಮಗೆ ಹೇಳಿಕೊಳ್ಳಬಹುದು. ನೀವು ಕೇಳಬಹುದು, ಬೆಂಬಲ ಕೊಡಬಹುದು. ಆದರೆ ಆ ಸಮಸ್ಯೆಯನ್ನು ಪರಿಹರಿಸುವ ಸಂಪೂರ್ಣ ಹೊಣೆ ನಿಮ್ಮದು ಅಲ್ಲ. ಇನ್ನೊಂದು ಉದಾಹರಣೆ — ಯಾರಾದರೂ ನಿಮ್ಮ ಮೇಲೆ ಕೋಪಗೊಂಡಿದ್ದರೆ, ಅದಕ್ಕೆ ಪ್ರತಿಯಾಗಿ ನೀವು ತಪ್ಪಿತಸ್ಥರೆಂದು ಭಾವಿಸಬೇಕಾಗಿಲ್ಲ. ಅವರ ಕೋಪ ಅವರ ಭಾವನೆ. ನಿಮ್ಮ ಮೌಲ್ಯ ಅದರ ಮೇಲೆ ಅವಲಂಬಿತವಲ್ಲ. ಭಾವನಾತ್ಮಕ ಗಡಿ ಕಲಿಸಿದ ಸತ್ಯವೇನೆಂದರೆ: ನಾವು ಇತರರನ್ನು ನೋಯಿಸದೆ ನಮ್ಮ ಸತ್ಯವನ್ನು ಹೇಳಬಹುದು, ಇತರರ ಭಾವನೆಗಳನ್ನು ಹೊತ್ತುಕೊಳ್ಳದೆ ಸಹಾನುಭೂತಿ ತೋರಿಸಬಹುದು, ಮತ್ತು ಎಲ್ಲರನ್ನು ಸಂತೋಷಪಡಿಸಬೇಕೆಂಬ ಹೊರೆ ಇಲ್ಲದೆ ಸ್ವಯಂ ಜೊತೆ ಶಾಂತವಾಗಿ ಬದುಕಬಹುದು.
ದೈಹಿಕ ಗಡಿ
ಸ್ಪರ್ಶದ ಬಗ್ಗೆ ನಿಮ್ಮ ಆಯ್ಕೆ. ದೈಹಿಕ ಗಡಿ ಎಂದರೆ — ನಿಮ್ಮ ದೇಹದ ಮೇಲೆ ನಿಮ್ಮ ಹಕ್ಕು, ನಿಮ್ಮ ದೇಹಕ್ಕೆ ಏನು ಒಪ್ಪಿಗೆಯಾಗಿದೆ ಮತ್ತು ಏನು ಅಲ್ಲ ಎಂಬುದನ್ನು ನೀವು ನಿರ್ಧರಿಸುವ ಸ್ವಾತಂತ್ರ್ಯ. ಕೆಲವರಿಗೆ ಅಪ್ಪಿಕೊಳ್ಳುವುದು ಆರಾಮವಾಗಿರಬಹುದು, ಕೆಲವರಿಗೆ ಕೈಹಿಡಿಯುವುದು ಸಹ ಅಸೌಕರ್ಯವಾಗಿರಬಹುದು. ಉದಾಹರಣೆಗೆ, ಒಂದು ಕುಟುಂಬ ಸಮಾರಂಭದಲ್ಲಿ ಯಾರಾದರೂ ನಿಮ್ಮನ್ನು ಬಲವಂತವಾಗಿ ಅಪ್ಪಿಕೊಳ್ಳಲು ಬಂದರೆ, ನೀವು ಮೃದುವಾಗಿ ಹಿಂದೆ ಸರಿದು “ನನಗೆ ಇದರಲ್ಲಿ ಅಸೌಕರ್ಯವಾಗುತ್ತದೆ” ಎಂದು ಹೇಳಬಹುದು. ಇದು ಅಸಭ್ಯತೆ ಅಲ್ಲ. ಇದು ಸ್ವಗೌರವ. ಇನ್ನೊಂದು ಉದಾಹರಣೆ — ಸ್ನೇಹಿತನು ಹಾಸ್ಯವಾಗಿ ನಿಮ್ಮ ಭುಜಕ್ಕೆ ಪದೇಪದೇ ತಟ್ಟುತ್ತಿದ್ದಾನೆ. ನಿಮಗೆ ಅದು ಇಷ್ಟವಿಲ್ಲ. ನೀವು “ಹೀಗೆ ಮಾಡಬೇಡಿ” ಎಂದು ಹೇಳುವ ಹಕ್ಕು ಹೊಂದಿದ್ದೀರಿ. ನಿಮ್ಮ ದೇಹ ಎಲ್ಲರಿಗೂ ಲಭ್ಯವಿರುವ ವಸ್ತು ಅಲ್ಲ. ಅದು ನಿಮ್ಮ ಮನೆ. ದೈಹಿಕ ಗಡಿ ನಮಗೆ ಕಲಿಸುವ ಸತ್ಯವೇನೆಂದರೆ: ಯಾರನ್ನಾದರೂ ಗೌರವಿಸುವುದು ಎಂದರೆ ಅವರ ದೇಹದ ಆಯ್ಕೆಯನ್ನು ಗೌರವಿಸುವುದು, ಮತ್ತು ನಮ್ಮ ಆಯ್ಕೆಯನ್ನು ಹೇಳುವುದು ಎಂದರೆ ತಪ್ಪಲ್ಲ, ಅದು ಆತ್ಮರಕ್ಷಣೆಯ ಒಂದು ರೂಪ.
ಡಿಜಿಟಲ್ ಗಡಿ
ಫೋನ್, ಮೆಸೇಜ್ ಸಮಯ. ಡಿಜಿಟಲ್ ಗಡಿ ಎಂದರೆ — ಫೋನ್, ಮೆಸೇಜ್, ನೋಟಿಫಿಕೇಶನ್‌ಗಳು ನಿಮ್ಮ ಜೀವನವನ್ನು ನಿಯಂತ್ರಿಸಬೇಕಾಗಿಲ್ಲ ಎಂಬ ಅರಿವು. ನೀವು ಯಾರ ಮೆಸೇಜ್‌ಗೆ ತಕ್ಷಣ ಉತ್ತರಿಸದಿದ್ದರೆ, ಅದು ಅವಮಾನವಲ್ಲ. ಅದು ನೀವು ಬದುಕುತ್ತಿದ್ದೀರಿ ಎಂಬ ಸೂಚನೆ. ಉದಾಹರಣೆಗೆ, ರಾತ್ರಿ ನೀವು ಮಲಗಲು ಫೋನ್ ಸೈಲೆಂಟ್‌ಗೆ ಇಟ್ಟಾಗ, ಯಾರಾದರೂ ಮೆಸೇಜ್ ಮಾಡಬಹುದು. ಬೆಳಿಗ್ಗೆ ಉತ್ತರಿಸಿದರೆ ತಪ್ಪಲ್ಲ. ಇದು ನಿಮ್ಮ ನಿದ್ರೆಯನ್ನು ಗೌರವಿಸುವುದು. ಇನ್ನೊಂದು ಉದಾಹರಣೆ — ಕೆಲಸದ ಸಮಯ ಮುಗಿದ ನಂತರ ಆಫೀಸ್ ಮೆಸೇಜ್‌ಗೆ ಉತ್ತರಿಸದೇ ಇರಲು ನೀವು ಆಯ್ಕೆಮಾಡಬಹುದು. ಇದು ಕೆಲಸವನ್ನು ನಿರ್ಲಕ್ಷ್ಯಿಸುವುದು ಅಲ್ಲ. ಇದು ನಿಮ್ಮ ಜೀವನಕ್ಕೆ ಜಾಗ ಕೊಡುವುದು. ಡಿಜಿಟಲ್ ಗಡಿ ನಮಗೆ ಕಲಿಸುವ ಸತ್ಯವೇನೆಂದರೆ: ನಾವು ಯಾವಾಗ ಲಭ್ಯವಾಗಬೇಕು ಎಂಬುದನ್ನು ನಾವು ನಿರ್ಧರಿಸಬಹುದು, ಮತ್ತು ಸದಾ ಲಭ್ಯವಿರಬೇಕೆಂಬ ಒತ್ತಡವಿಲ್ಲದೆ ಬದುಕುವುದು ಸಹ ಆರೋಗ್ಯಕರ.
ಆರೋಗ್ಯಕರ ಗಡಿಯನ್ನು ಹೇಗೆ ಹೇಳುವುದು?
ನಿಮ್ಮ ಮಾತು ಶಾಂತವಾಗಿ, ಸ್ಪಷ್ಟವಾಗಿ, ದೋಷಾರೋಪಣೆ ಇಲ್ಲದೆ ಸಹಜವಾಗಿ “ಇಲ್ಲ” ಎಂದರೆ ಅದು ಆರೋಗ್ಯಕರ ಮಾತು. ಆರೋಗ್ಯಕರ ಗಡಿಯನ್ನು ಹೇಳುವುದು ಎಂದರೆ ಜೋರಾಗಿ ಮಾತನಾಡುವುದು ಅಲ್ಲ, ಜಗಳ ಮಾಡುವುದು ಅಲ್ಲ, ಅಥವಾ ಇನ್ನೊಬ್ಬರನ್ನು ತಪ್ಪು ಎಂದು ಘೋಷಿಸುವುದೂ ಅಲ್ಲ. ಅದು ಶಾಂತವಾಗಿ, ಸ್ಪಷ್ಟವಾಗಿ, ಮತ್ತು ಗೌರವದಿಂದ ನಿಮ್ಮ ಸತ್ಯವನ್ನು ಹೇಳುವುದು. ಉದಾಹರಣೆಗೆ, ಯಾರಾದರೂ ಪದೇಪದೇ ನಿಮ್ಮ ಮಾತನ್ನು ಮಧ್ಯೆ ಕಡಿದರೆ, “ನೀನು ಯಾವಾಗಲೂ ನನ್ನ ಮಾತು ಕೇಳಲ್ಲ” ಎಂದು ಹೇಳುವ ಬದಲು, “ನಾನು ಮಾತನಾಡುವಾಗ ನನ್ನ ಮಾತನ್ನು ಪೂರ್ಣಗೊಳಿಸಲು ಅವಕಾಶ ಕೊಟ್ಟರೆ ನನಗೆ ಸಂತೋಷವಾಗುತ್ತದೆ” ಎಂದು ಹೇಳಬಹುದು. ಇಲ್ಲಿ ದೋಷಾರೋಪಣೆ ಇಲ್ಲ, ಆದರೆ ನಿಮ್ಮ ಅಗತ್ಯ ಸ್ಪಷ್ಟವಾಗಿದೆ. ಇನ್ನೊಂದು ಉದಾಹರಣೆ — ಸ್ನೇಹಿತನು ಪದೇಪದೇ ನಿಮ್ಮ ಸಮಯವನ್ನು ತೆಗೆದುಕೊಳ್ಳುತ್ತಿದ್ದರೆ, “ನೀನು ತುಂಬಾ ತೊಂದರೆ ಕೊಡ್ತೀಯ” ಎಂದು ಹೇಳುವ ಬದಲು, “ನಾನು ದಿನಕ್ಕೆ ಒಂದು ಗಂಟೆ ಮಾತ್ರ ಮಾತನಾಡಲು ಸಾಧ್ಯ, ಅದಕ್ಕಿಂತ ಹೆಚ್ಚು ಆಗಿದ್ರೆ ನನಗೆ ದಣಿವಾಗುತ್ತದೆ” ಎಂದು ಹೇಳಬಹುದು. ಆರೋಗ್ಯಕರ ಗಡಿ ಹೇಳುವಾಗ ನಮ್ಮ ಧ್ವನಿಯಲ್ಲಿ ಶಾಂತಿ, ನಮ್ಮ ಮಾತಿನಲ್ಲಿ ಸತ್ಯ, ಮತ್ತು ನಮ್ಮ ಹೃದಯದಲ್ಲಿ ಸ್ವಗೌರವ ಇರಬೇಕು. ಗಡಿ ಇಡುವುದು ಎಂದರೆ ಸಂಬಂಧವನ್ನು ಮುರಿಯುವುದು ಅಲ್ಲ; ಅದು ಸಂಬಂಧವನ್ನು ಆರೋಗ್ಯಕರವಾಗಿಡುವ ಒಂದು ಪ್ರಾಮಾಣಿಕ ಪ್ರಯತ್ನ.
ಗಡಿ ಮತ್ತು ಸ್ವಮೌಲ್ಯ
ಗಡಿ ಇಡುವುದು ಹೇಳುತ್ತದೆ – “ನಾನು ಗೌರವಕ್ಕೆ ಅರ್ಹ.” ಸ್ವಮೌಲ್ಯ ಹೆಚ್ಚಾದಂತೆ ಗಡಿ ಇಡುವುದು ಸುಲಭವಾಗುತ್ತದೆ. ಗಡಿ ಮತ್ತು ಸ್ವಮೌಲ್ಯ ಒಂದೇ ನಾಣ್ಯದ ಎರಡು ಮುಖಗಳು. ನಾವು ನಮ್ಮನ್ನು ಎಷ್ಟು ಮೌಲ್ಯಯುತವೆಂದು ಭಾವಿಸುತ್ತೇವೋ, ಅಷ್ಟೇ ಮಟ್ಟಿಗೆ ನಾವು ಗಡಿಗಳನ್ನು ಇಡಲು ಧೈರ್ಯ ಪಡುತ್ತೇವೆ. ಉದಾಹರಣೆಗೆ, ಒಬ್ಬ ಮಹಿಳೆ ತನ್ನ ಮೇಲೆ ಪದೇಪದೇ ಅವಮಾನ ಮಾಡುವ ಸಂಬಂಧದಲ್ಲೇ ಉಳಿಯುತ್ತಿದ್ದಾಳೆ. ಏಕೆಂದರೆ ಅವಳೊಳಗೆ ಒಂದು ನಂಬಿಕೆ ಇದೆ — “ನನಗೆ ಇದಕ್ಕಿಂತ ಉತ್ತಮ ಸಿಗುವುದಿಲ್ಲ.” ಇದು ಕಡಿಮೆ ಸ್ವಮೌಲ್ಯದ ಧ್ವನಿ. ಆದರೆ ಅವಳು ನಿಧಾನವಾಗಿ ತನ್ನನ್ನು ಅರಿತುಕೊಳ್ಳುತ್ತಾಳೆ, ತನ್ನ ನೋವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾಳೆ, ಮತ್ತು ಒಂದು ದಿನ ಹೇಳುತ್ತಾಳೆ: “ನನ್ನ ಜೊತೆ ಗೌರವದಿಂದ ಮಾತನಾಡದಿದ್ದರೆ ನಾನು ಈ ಸಂಬಂಧದಲ್ಲಿ ಇರಲಾರೆ.” ಇದು ಗಡಿ. ಈ ಗಡಿಯ ಹಿಂದಿರುವ ಶಕ್ತಿ ಸ್ವಮೌಲ್ಯ. ಗಡಿ ಇಡುವುದು ಹೇಳುತ್ತದೆ: “ನಾನು ಗೌರವಕ್ಕೆ ಅರ್ಹ.” ಸ್ವಮೌಲ್ಯ ಬೆಳೆದಾಗ ನಾವು ಇತರರನ್ನು ಸಂತೋಷಪಡಿಸಲು ನಮ್ಮನ್ನೇ ಕಳೆದುಕೊಳ್ಳುವುದನ್ನು ನಿಲ್ಲಿಸುತ್ತೇವೆ. ಗಡಿ ಇಡುವುದು ಸ್ವಾರ್ಥವಲ್ಲ; ಅದು ನಮ್ಮ ಅಸ್ತಿತ್ವಕ್ಕೆ ಕೊಡುವ ಗೌರವ.
ತಪ್ಪಿತಸ್ಥ ಭಾವನೆ (Guilt)
ಗಡಿ ಇಟ್ಟಾಗ ತಪ್ಪಿತಸ್ಥ ಭಾವನೆ ಬರಬಹುದು. ಇದು ಸಹಜ. ತಪ್ಪಿತಸ್ಥ ಭಾವನೆ ಎಂದರೆ ತಪ್ಪು ಎಂದಲ್ಲ. ಇದು ಹೊಸ ಅಭ್ಯಾಸದ ಸೂಚನೆ. ಗಡಿಗಳನ್ನು ಇಡಲು ಪ್ರಾರಂಭಿಸಿದಾಗ ಬಹುತೇಕ ಜನರಿಗೆ ಮೊದಲಾಗಿ ಎದುರಾಗುವುದು ತಪ್ಪಿತಸ್ಥ ಭಾವನೆ. “ನಾನು ಸ್ವಾರ್ಥಿಯಾಗಿಬಿಟ್ಟೇನಾ?”, “ಅವರಿಗೆ ನೋವಾಗಿಬಿಡುತ್ತೇನಾ?”, “ನಾನು ಕೆಟ್ಟವಳಾಗಿಬಿಟ್ಟೇನಾ?” ಎಂಬ ಪ್ರಶ್ನೆಗಳು ಒಳಗೆ ಬರುತ್ತವೆ. ಉದಾಹರಣೆಗೆ, ಒಬ್ಬ ಮಹಿಳೆ ವರ್ಷಗಳ ಕಾಲ ಎಲ್ಲರ ಕೆಲಸವನ್ನು ತಾನು ಮಾಡುತ್ತಿದ್ದಾಳೆ. ಒಂದು ದಿನ ಅವಳು “ಈ ಕೆಲಸವನ್ನು ನಾನು ಮಾಡಲಾರೆ” ಎಂದು ಹೇಳುತ್ತಾಳೆ. ಆ ಕ್ಷಣ ಅವಳೊಳಗೆ ಭಾರವಾದ ತಪ್ಪಿತಸ್ಥ ಭಾವನೆ ಬರುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಸತ್ಯವೇನೆಂದರೆ — ಅವಳು ಯಾರನ್ನೂ ನೋಯಿಸಲು ಪ್ರಯತ್ನಿಸುತ್ತಿಲ್ಲ. ಅವಳು ತನ್ನ ಮಿತಿಯನ್ನು ಹೇಳುತ್ತಿದ್ದಾಳೆ. ತಪ್ಪಿತಸ್ಥ ಭಾವನೆ ಅಂದರೆ ತಪ್ಪು ಮಾಡಿದ್ದೇವೆ ಎಂಬ ಸಾಬೀತು ಅಲ್ಲ. ಅದು ಹೊಸ ಆರೋಗ್ಯಕರ ಅಭ್ಯಾಸವನ್ನು ಕಲಿಯುತ್ತಿರುವ ಸಂಕೇತ. ಗಡಿಗಳನ್ನು ಇಡುವಾಗ ಈ ತಪ್ಪಿತಸ್ಥ ಭಾವನೆ ಬಂದರೆ, “ನಾನು ನನ್ನನ್ನು ಕಾಪಾಡಿಕೊಳ್ಳುತ್ತಿದ್ದೇನೆ” ಎಂದು ಒಳಗೇ ಹೇಳಿಕೊಳ್ಳುವುದು ಸಹಾಯ ಮಾಡುತ್ತದೆ. ನಿಧಾನವಾಗಿ ನಾವು ಕಲಿಯುತ್ತೇವೆ: ಎಲ್ಲರ ನಿರೀಕ್ಷೆಗಳನ್ನು ಪೂರೈಸುವುದು ನಮ್ಮ ಹೊಣೆ ಅಲ್ಲ, ಆದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಹೊಣೆ. ಗಡಿಗಳ ಜೊತೆ ಬರುವ ತಪ್ಪಿತಸ್ಥ ಭಾವನೆ ಕಾಲಕ್ರಮೇಣ ಕಡಿಮೆಯಾಗುತ್ತದೆ, ಆದರೆ ಸ್ವಗೌರವ ಹೆಚ್ಚಾಗುತ್ತದೆ. ಮತ್ತು ಅದೇ ನಿಜವಾದ ಗುಣಮುಖತೆ.
ಗಡಿಗಳು ಸಂಬಂಧ ಹಾಳುಮಾಡುತ್ತವೆಯೇ?
ಇಲ್ಲ. ಅವು ಸಂಬಂಧ ಉಳಿಸುತ್ತವೆ. ಗಡಿ ಇಲ್ಲದ ಪ್ರೀತಿ ದಣಿವುಂಟು ಮಾಡುತ್ತದೆ. ಗಡಿ ಇರುವ ಪ್ರೀತಿ ಸಮತೋಲನ ತರುತ್ತದೆ. ಗಡಿಗಳು ಸಂಬಂಧವನ್ನು ಹಾಳುಮಾಡುವುದಿಲ್ಲ; ಗಡಿ ಇಲ್ಲದಿರುವುದೇ ಸಂಬಂಧವನ್ನು ನಿಧಾನವಾಗಿ ಕುಗ್ಗಿಸುತ್ತದೆ. ಉದಾಹರಣೆಗೆ, ಒಬ್ಬ ಸ್ನೇಹಿತ ಪದೇಪದೇ ನಿಮ್ಮ ಸಮಯವನ್ನು ತೆಗೆದುಕೊಳ್ಳುತ್ತಾನೆ, ನಿಮ್ಮ ಮಾತು ಕೇಳುವುದಿಲ್ಲ, ಆದರೆ ನೀವು ಏನೂ ಹೇಳದೆ ಒಳಗೊಳಗೆ ಬೇಸರ ಇಟ್ಟುಕೊಳ್ಳುತ್ತೀರಿ. ಹೊರಗೆ ಸ್ನೇಹ ಇದೆ, ಒಳಗೆ ಅಸಮಾಧಾನ ಜಮಾಗುತ್ತಿದೆ. ಒಂದು ದಿನ ಆ ಅಸಮಾಧಾನ ಕೋಪವಾಗಿ ಹೊರಬರುತ್ತದೆ ಮತ್ತು ದೊಡ್ಡ ಜಗಳವಾಗುತ್ತದೆ. ಆದರೆ ಇದೇ ಸಂದರ್ಭದಲ್ಲಿ ನೀವು ಮೊದಲೇ ಶಾಂತವಾಗಿ “ನನಗೆ ಈ ರೀತಿಯ ವರ್ತನೆ ಇಷ್ಟವಿಲ್ಲ” ಎಂದು ಹೇಳಿದ್ದರೆ, ಅಂದರೆ ಗಡಿ ಇಟ್ಟಿದ್ದರೆ, ಆ ಸಂಬಂಧ ಉಳಿಯುವ ಸಾಧ್ಯತೆ ಹೆಚ್ಚು ಇತ್ತು. ಗಡಿಗಳು ಸಂಬಂಧಕ್ಕೆ ಸತ್ಯವನ್ನು ತರುತ್ತವೆ. ಸತ್ಯ ಇರುವಲ್ಲಿ ನಟನೆ ಕಡಿಮೆಯಾಗುತ್ತದೆ, ಅಸಮಾಧಾನ ಜಮಾಗುವುದಿಲ್ಲ. ಕೆಲವರು ಗಡಿ ಇಟ್ಟಾಗ ದೂರವಾಗಬಹುದು. ಆದರೆ ಅದು ಗಡಿಗಳ ತಪ್ಪಲ್ಲ. ಅದು ಅವರು ಗಡಿಯೊಳಗಿನ ಸಂಬಂಧಕ್ಕೆ ಸಿದ್ಧರಿಲ್ಲ ಎಂಬ ಸೂಚನೆ. ಗಡಿ ಇರುವ ಸಂಬಂಧಗಳು ಪರಿಪೂರ್ಣವಾಗಿರಲಿಲ್ಲವಾದರೂ, ಅವು ಪ್ರಾಮಾಣಿಕವಾಗಿರುತ್ತವೆ. ಮತ್ತು ಪ್ರಾಮಾಣಿಕತೆಯ ಮೇಲೆ ನಿಂತ ಸಂಬಂಧವೇ ನಿಜವಾದ ಆರೋಗ್ಯಕರ ಸಂಬಂಧ.
ಅಂತಿಮವಾಗಿ
ಗಡಿಗಳು ಸ್ವಾರ್ಥವಲ್ಲ, ಅವು ಸ್ವಗೌರವ. ನಿಮ್ಮ ಅಗತ್ಯಗಳಿಗೆ ಜಾಗ ಕೊಡುವುದು ನಿಮ್ಮ ಹಕ್ಕು. ನೀವು ನಿಮ್ಮ ಅಗತ್ಯಗಳಿಗೆ ಜಾಗ ಕೊಟ್ಟಾಗ, ನೀವು ಯಾರನ್ನೂ ತಳ್ಳಿಹಾಕುತ್ತಿಲ್ಲ — ನೀವು ನಿಮ್ಮನ್ನು ಕಂಡುಕೊಳ್ಳುತ್ತಿದ್ದೀರಿ. ವರ್ಷಗಳ ಕಾಲ ಎಲ್ಲರಿಗಾಗಿ ಬದುಕುತ್ತಾ, ಎಲ್ಲರ ಸಂತೋಷಕ್ಕೆ ಹೊಣೆ ಹೊತ್ತು, ನಿಮ್ಮ ದಣಿವು, ನಿಮ್ಮ ನೋವು, ನಿಮ್ಮ ಮೌನವನ್ನು ನೀವು ಮರೆತಿರಬಹುದು. ಆದರೆ ಒಂದು ದಿನ ನಿಮ್ಮೊಳಗೆ ಒಂದು ಸಣ್ಣ ಧ್ವನಿ ಎದ್ದು ಹೇಳುತ್ತದೆ: “ನಾನೂ ಮುಖ್ಯ.” ಆ ಧ್ವನಿಯನ್ನು ಕೇಳುವುದು ಸ್ವಾರ್ಥವಲ್ಲ. ಅದು ಆತ್ಮದ ಕೂಗು. ನಿಮ್ಮ ದೇಹ ದಣಿದಾಗ ವಿಶ್ರಾಂತಿ ಕೇಳುವುದು, ನಿಮ್ಮ ಹೃದಯ ನೋವಿನಲ್ಲಿದ್ದಾಗ ಮೌನ ಕೇಳುವುದು, ನಿಮ್ಮ ಮನಸ್ಸು ಗೊಂದಲದಲ್ಲಿದ್ದಾಗ ಜಾಗ ಕೇಳುವುದು — ಇವೆಲ್ಲವೂ ಬದುಕಿನ ಸಹಜ ಹಕ್ಕುಗಳು. ನೀವು ನಿಮ್ಮ ಅಗತ್ಯಗಳಿಗೆ ಜಾಗ ಕೊಟ್ಟಾಗ, ನೀವು ಇತರರನ್ನು ಕಡಿಮೆ ಪ್ರೀತಿಸುವುದಿಲ್ಲ. ನೀವು ನಿಮ್ಮನ್ನೂ ಪ್ರೀತಿಸಲು ಕಲಿಯುತ್ತೀರಿ. ಮತ್ತು ಆ ಕ್ಷಣದಲ್ಲಿ, ನೀವು ಮೊದಲ ಬಾರಿಗೆ ಅರಿಯುತ್ತೀರಿ… ನೀವು ಎಲ್ಲರಿಗೂ ಏನಾಗಬೇಕೆಂದು ಹುಟ್ಟಿಲ್ಲ. ನೀವು ನಿಮ್ಮದೇ ಜೀವನವನ್ನು ಬದುಕಲು ಹುಟ್ಟಿದ್ದೀರಿ.