ನಿಧಾನವಾಗಿ ಅಳಿಯುತ್ತಿರುವುದು ಬದುಕೇ… ಅಥವಾ ಅಸ್ತಿತ್ವವೇ?

ಆಕೆಗೆ ಆಗ ಇನ್ನೂ ೧೭ ವರ್ಷ. ತಂದೆ ಹಾಸಿಗೆ ಹಿಡಿದಿದ್ದ. ತಾಯಿಗೆ ಮನೆಯಲ್ಲಿ ಕೆಲಸ ಮಾಡುವುದೊಂದು ಬಿಟ್ಟರೆ ಬೇರೆ ಯಾವುದೇ ಅಸ್ತಿತ್ವ ಇಲ್ಲ. ಅಜ್ಜಿ ಮಡಿ–ಮೈಲಿಗೆಯ ಹಳೆಯ ಕಂದಾಚಾರಗಳಲ್ಲಿ ಬದುಕುತ್ತಾಳೆ. ಹಾಸಿಗೆ ಹಿಡಿದ ತಂದೆಗೆ ಕನ್ಯಾದಾನದ ಪುಣ್ಯ ಸಿಗಬೇಕು ಎಂಬ ಯೋಚನೆ ಮನೆಯೊಳಗೆ ಹರಿದಾಡುತ್ತಿತ್ತು. ಅದೇ ಸಮಯಕ್ಕೆ ಗಂಡಿನ ಕಡೆಯವರೊಬ್ಬರು ಇವರಲ್ಲಿಗೆ ಹೆಣ್ಣು ಕೇಳಿಕೊಂಡು ಬಂದರು. ಅಷ್ಟೇ ಸಾಕಾಯಿತು. ಹೆಣ್ಣನ್ನು ಕೇಳದೆ, ಅತ್ತೂ ಕರೆದು, ಬಲವಂತದಿಂದ ಒಪ್ಪಿಸಿ ಮದುವೆ ಮಾಡಲಾಯಿತು. ಒಲ್ಲದ ಮದುವೆಯೆಂಬ ಮೊಸರಿನಲ್ಲಿ ಕಲ್ಲು ಹುಡುಕುತ್ತ ಇಬ್ಬರೂ ಹೇಗೋ ಬದುಕುತ್ತಿದ್ದಾರೆ. “ಇವತ್ತಲ್ಲ ನಾಳೆ ಸರಿಹೋಗುತ್ತದೆ”, “ನಂಬಿಕೆಯಿಂದಿರು”, “ಜವಾಬ್ದಾರಿಯುತವಾಗಿರು” ಎಂದು ಹಿರಿಯರು ಪಂಚಾಯಿತಿ ಮಾಡಿ, ಮತ್ತೆ ಮತ್ತೆ ಹೆಣ್ಣುಮಗಳನ್ನು ಗಂಡನ ಮನೆಗೆ ವಾಪಸ್ಸು ಕಳಿಸುತ್ತಿರುತ್ತಾರೆ. ಆದರೆ ದಿನದಿಂದ ದಿನಕ್ಕೆ ತನ್ನೊಳಗೆ ಕುಗ್ಗುತ್ತಿರುವವಳು ಆಕೆಯಾಗಿದ್ದಾಳೆ.

ಹೀಗೆ ಕೆಲವರು ಜೀವನಪೂರ್ತಿ ನಂಬಿಕೆಯಿಂದಿರುತ್ತಾರೆ. ಜವಾಬ್ದಾರಿಯುತರು, ಲಭ್ಯವಿರುವವರು, ಸಮಯದ ಜೊತೆ ಹೊಂದಾಣಿಕೆ  ಮಾಡಿಕೊಳ್ಳುವವರು ಎಂಬ ಬಿರುದು–ಬಾವಲಿಗಳು ಅವರ ಹೆಸರಿನ ಜೊತೆಗೆ ಅಂಟಿಕೊಳ್ಳುತ್ತವೆ. ಆದರೆ ಆ ವ್ಯಕ್ತಿಯಲ್ಲಿ ಒಂದು ಸೂಕ್ಷ್ಮ ಬದಲಾವಣೆ ನಡೆಯುತ್ತದೆ. ಅವರು ಪಾತ್ರಗಳಲ್ಲಿ ಜೀವಂತವಾಗಿರುತ್ತಾರೆ, ಆದರೆ ತಮ್ಮೊಳಗೆ ಬದುಕಿರುವುದಿಲ್ಲ.

ಸ್ವಯಂ–ಅಳಿವು ಎಂದರೇನು?

ಒಬ್ಬ ವ್ಯಕ್ತಿ ಸಮಾಜದಲ್ಲಿ ಪ್ರತಿಷ್ಠಿತನಾಗಿದ್ದಾನೆ. ಆತ ಕೇವಲ ತನ್ನ ಹೆಂಡತಿ ಮತ್ತು ಮಕ್ಕಳ ಬೇಕು–ಬೇಡಗಳನ್ನು ಪೂರೈಸುವುದರಲ್ಲಿಯೇ ಇಷ್ಟು ಮಗ್ನನಾಗಿದ್ದಾನೆ ಎಂದರೆ, ಆತನ ಬಳಿ ಒಳ್ಳೆಯ ಬಟ್ಟೆಗಳಿಲ್ಲ, ಸ್ವಂತದ್ದಾದ ಒಂದು ಲ್ಯಾಪ್‌ಟಾಪ್ ಇಲ್ಲ. ಗಡ್ಡ, ಕೂದಲು, ಉಗುರುಗಳು — ಯಾವಾಗಲೋ ಒಮ್ಮೆ ಹೆಂಡತಿ ಗಮನಿಸಿದರೆ ಮಾತ್ರ ಸ್ವಚ್ಛವಾಗುತ್ತವೆ. ಇಲ್ಲವಾದರೆ ಅವನಿಗೆ ಅವುಗಳ ಬಗ್ಗೆ ವಿಶೇಷ ಧ್ಯಾಸವೇ ಇಲ್ಲ.

ಬೆಳಗ್ಗೆ ಎದ್ದು ಸ್ಕೂಟರ್ ಚಲಾಯಿಸಿ ಕಚೇರಿಗೆ ಹೋಗುವುದು, ಕೆಲಸ ಮಾಡುವುದು, ಸಂಜೆಯಿಂದ ಬೆಳಗಿನವರೆಗೆ ಹೆಂಡತಿ–ಮಕ್ಕಳ ಅಗತ್ಯಗಳನ್ನು ಪೂರೈಸುವುದು — ಅಷ್ಟೇ ಅವನ ದಿನಚರಿ. ಹೋಟೆಲ್ ಆಗಿರಲಿ, ಮನೆ ಆಗಿರಲಿ — “ಹೊತ್ತಿಗೆ ಏನೋ ಒಂದು ತಿಂದರೆ ಸಾಕು” ಎಂಬ ಮನೋಭಾವ. ಆದರೂ ಕೆಲವೊಮ್ಮೆ ಮನಸ್ಸು ಪ್ರಶ್ನಿಸುತ್ತದೆ: “ನೀನು ಇಷ್ಟು ವರ್ಷ ಬೇರೆಯವರಿಗೋಸ್ಕರವೇ ಬದುಕಿದ್ದೀಯಲ್ಲ, ನಿನಗೋಸ್ಕರ ಯಾವಾಗ ಬದುಕುತ್ತೀಯ?” ಆತ ಮೌನವಾಗುತ್ತಾನೆ.

ಇದು ಸ್ವಯಂ–ಅಳಿವು.

ಆ ವ್ಯಕ್ತಿ ಹೆಸರಿಗಷ್ಟೇ ಇದ್ದಾನೆ. ಆತನೊಳಗಿನ ಬೇಗುದಿಗಳು, ಆಸೆಗಳು, ನೋವುಗಳು — ಹೆಸರಿಲ್ಲದೇ ಅಡಗಿಹೋಗಿವೆ. ಆತ ಎದುರಿಗಿದ್ದಾನೆ. ಆದರೂ ಇಲ್ಲ. ಈ ಸ್ಥಿತಿಯೇ ಸ್ವಯಂ–ಅಳಿವು.

ಬಹಳ ಸಾರಿ ನಾವು ಹೀಗೆ ಯೋಚಿಸುತ್ತೇವೆ . ಎಲ್ಲರೂ ಬದುಕುವುದು ಬೇರೆಯವರಿಗೋಸ್ಕರವೇ ಅಲ್ಲವೆ? ಬದುಕಲು ಒಂದು ನೆಪ ಬೇಕಲ್ಲವೆ?

ಬೇರೆಯವರ ಬದುಕಿಗಾಗಿ ಸ್ವಲ್ಪ ತನ್ನತನವನ್ನು ಬಿಟ್ಟುಕೊಡುವುದು ಸ್ವಯಂ–ತ್ಯಾಗ. ಆದರೆ ಬೇರೆಯವರ ಸಲುವಾಗಿ ತನ್ನತನವನ್ನೇ ಸಂಪೂರ್ಣವಾಗಿ ಬಿಟ್ಟುಕೊಟ್ಟು, ಸದಾ ಸೇವಕಿಯಾಗಿ ಅಥವಾ ಸೇವಕರಾಗಿ ಬದುಕುವುದು — ಸ್ವಯಂ–ಅಳಿವು. ಸ್ವಯಂ–ತ್ಯಾಗ ಒಂದು ಆಯ್ಕೆ. ಸ್ವಯಂ–ಅಳಿವು ಸಮಯದ ಜೊತೆ ನಿಧಾನವಾಗಿ ನಿರ್ಮಾಣವಾಗುವ ಸ್ಥಿತಿ. ವ್ಯಕ್ತಿ ತನ್ನೊಳಗಿನ ಆಳವಾದ ಸಂಪರ್ಕವನ್ನು ಕಡಿದುಕೊಳ್ಳುತ್ತಾನೆ. ತನ್ನ ಅಂತರಂಗದ ಬೇಡಿಕೆಗಳನ್ನು ಮೌನಗೊಳಿಸುತ್ತಾನೆ. “ಇದನ್ನು ಕೇಳಿದರೆ ಅವರು ಏನೆಂದುಕೊಳ್ಳುತ್ತಾರೆ?” “ಇದು ಅವರಿಗೆ ತೊಂದರೆ ಕೊಡುತ್ತದೆಯೇ?” ಎಂಬ ಭಯದಲ್ಲಿ ಬದುಕುತ್ತಾನೆ.

ಉದಾಹರಣೆಗೆ , ಒಂದು ಸೀರೆ ಬೇಕೆಂಬ ಆಸೆ. ಅವಳು ಪದೇಪದೆ ಬೇಡಿಕೆ ಇಡುವವಳಲ್ಲ. ಎಷ್ಟೋ ವರ್ಷಗಳಿಗೊಮ್ಮೆ ಮನಸ್ಸು ಆಸೆಪಟ್ಟಿದೆ. ಆದರೆ ಅದನ್ನು ಯಜಮಾನರಲ್ಲಿ ಕೇಳಿಕೊಳ್ಳಲು ಸಂಕೋಚ. “ಅವರು ಈಗಾಗಲೇ ಎಷ್ಟೋ ಕಷ್ಟದಲ್ಲಿದ್ದಾರೆ” ಎಂದುಕೊಂಡು,
ಈ ಸಮಯದಲ್ಲಿ ಬೇಡಿಕೆ ಇಟ್ಟಿದ್ದಕ್ಕಾಗಿ ಅಪರಾಧಭಾವ. “ಛೆ… ಈಗ ಕೇಳಬಾರದಿತ್ತು” ಎಂಬ ಹಳಹಳಿ.

ಹೀಗೆ ಮನೆಯಲ್ಲಿ, ಸಂಬಂಧದಲ್ಲಿ ಶಾಂತಿ ಉಳಿಸಲು ಮೌನವಾಗಿ ಸಹಿಸುತ್ತಾರೆ. ತಮ್ಮ ಅಗತ್ಯಗಳ ಬಗ್ಗೆ ಅಪರಾಧಭಾವ ಹೊಂದುತ್ತಾರೆ. ಅವರ ಗುರುತು ಅವರ ಉಪಯುಕ್ತತೆಯ ಮೇಲೆ ನಿಂತಿರುತ್ತದೆ. ಆ ಉಪಯುಕ್ತತೆ ಕಡಿಮೆಯಾದ ಕ್ಷಣ, ಅವರು ಅಪ್ರಸ್ತುತರಾಗುತ್ತಾರೆ.

ಇದು ಗಮನಕ್ಕೆ ಬರದೇ ಹೋಗುವುದೇಕೆ?

ಸಮಾಜವು ಯಾವಾಗಲೂ ನೋವುಂಟುಮಾಡುವುದಿಲ್ಲ. ಬಹಳಷ್ಟು ಸಲ ಅದು ಆರಾಮವಾಗಿ ನಡೆಯುತ್ತದೆ. ತಮ್ಮನ್ನೇ ಕಡಿಮೆ ಮಾಡಿಕೊಂಡು ಬದುಕುವವರು ಯಾವುದೇ ಅಶಾಂತಿಯನ್ನು ಉಂಟುಮಾಡುವುದಿಲ್ಲ. ಪ್ರಶ್ನೆ ಕೇಳುವುದಿಲ್ಲ. ತಮ್ಮ ಅಗತ್ಯಗಳಿಗೆ ಜಾಗ ಬಯಸುವುದಿಲ್ಲ. ಅವರ ಮೌನವೇ ವ್ಯವಸ್ಥೆಗೆ ಅನುಕೂಲವಾಗುತ್ತದೆ. ಅದಕ್ಕಾಗಿ ಸಮಾಜ ಇಂತಹವರನ್ನು “ಒಳ್ಳೆಯವರು” ಎಂದು ಗುರುತಿಸುತ್ತದೆ. ಈ ಗುರುತಿಸುವಿಕೆ ಪ್ರಶಂಸೆಯಂತೆ ಕಾಣಬಹುದು, ಆದರೆ ಅದರೊಳಗೆ ಒಂದು ನಿರೀಕ್ಷೆ ಅಡಗಿರುತ್ತದೆ — ಹೀಗೆಂದೇ ಮುಂದುವರಿಯಬೇಕು ಎಂಬ ನಿರೀಕ್ಷೆ.

ಈ ನಿರೀಕ್ಷೆಯೊಳಗೆ ಗಡಿ ಹಾಕುವುದು ಅಪಾಯವಾಗುತ್ತದೆ. ಗಡಿ ಎಂದರೆ ಸಂಬಂಧ ಕತ್ತರಿಸುವುದಲ್ಲ. ಆದರೆ ಮೌನಕ್ಕೆ ಒಗ್ಗಿಕೊಂಡ ಸಮಾಜಕ್ಕೆ ಸ್ಪಷ್ಟತೆ ಅಸ್ವಸ್ಥತೆಯಂತೆ ಕಾಣುತ್ತದೆ.  ಇಲ್ಲಿಯವರೆಗೆ ಎಲ್ಲವನ್ನೂ ಸಹಿಸಿಕೊಂಡವರು ಒಮ್ಮೆ “ಇಲ್ಲ” ಎಂದಾಗ — ಅವರು ಬದಲಾಗಿದ್ದಾರೆ ಎಂದು ಹೇಳಲಾಗುತ್ತದೆ. ಅಹಂಕಾರ ಬಂದಿದೆ ಎಂದು ತೀರ್ಮಾನಿಸಲಾಗುತ್ತದೆ. ಹಿಂದಿನ ಸಹನೆಯನ್ನು ಮಾಪಕವನ್ನಾಗಿ ಮಾಡಿಕೊಂಡು, ಇಂದಿನ ಸ್ವರವನ್ನು ತಪ್ಪೆಂದು ನಿರ್ಣಯಿಸಲಾಗುತ್ತದೆ. ಈ ಭಯದಿಂದಲೇ ಬಹಳ ಒಳ್ಳೆಯವರು ಶಬ್ದ ಮಾಡುವುದನ್ನು ಕಲಿಯುವುದಿಲ್ಲ.

ಅವರು ಸಂಬಂಧಗಳಿಂದ ಹೊರಟು ಹೋಗುವುದಿಲ್ಲ. ವ್ಯವಸ್ಥೆಗಳಿಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಅವರು ಮೌನವಾಗಿಯೇ ತಮ್ಮ ಆಸೆಗಳನ್ನು ಚಿಕ್ಕದಾಗಿಸಿಕೊಳ್ಳುತ್ತಾರೆ, ತಮ್ಮ ಅಗತ್ಯಗಳನ್ನು ತಮಗೇ ನಿರಾಕರಿಸುತ್ತಾರೆ. ಉದಾಹರಣೆಗೆ — ತಂದೆ–ತಾಯಿ ತನಗೆ ಮಾತ್ರ ಹೊಸ ಬಟ್ಟೆ ತಂದಿಲ್ಲ ಎಂದು ಹೆಣ್ಣು ಮಗುವಿಗೆ ಅನಿಸುತ್ತದೆ. ಪ್ರಶ್ನಿಸಿದರೆ ? “ಸ್ವಾರ್ಥಿ”, “ಅರ್ಥ ಮಾಡಿಕೊಳ್ಳದವಳು” ಎನ್ನುವ ಮಾತು. ಅಪ್ಪನ ಆರ್ಥಿಕ ಪರಿಸ್ಥಿತಿ ಕಣ್ಣಮುಂದೆ ಬಂದು, ಆ ಮಗು ತನ್ನ ಆಸೆಯನ್ನು ಚಿಕ್ಕದಾಗಿಸಿಕೊಳ್ಳುತ್ತದೆ. “ಇನ್ನೊಮ್ಮೆ ಕೇಳಿದರಾಯಿತು” ಎಂದು ತನ್ನ ಅಗತ್ಯವನ್ನು ತಾನೇ ನಿರಾಕರಿಸುತ್ತದೆ.

ಬಾಹ್ಯವಾಗಿ ಅವರು ಇನ್ನೂ ಬದುಕುತ್ತಿರುವಂತೆ ಕಾಣುತ್ತಾರೆ. ಪಾತ್ರಗಳಲ್ಲಿ, ಹೊಣೆಗಾರಿಕೆಯಲ್ಲಿ, ಸಂಬಂಧಗಳಲ್ಲಿ ಜೀವಂತವಾಗಿರುವಂತೆ ತೋರುತ್ತಾರೆ. ನಗುತ್ತಾರೆ. ಮಾತನಾಡುತ್ತಾರೆ. ಆದರೆ ಅವರೊಳಗೆ ಸತ್ತಿರುವ ಜೀವಂತಿಕೆಯ ಗುರುತು ನೋಡುವವರಿಗೆ ಸುಲಭವಾಗಿ ಕಾಣುವುದಿಲ್ಲ. ನಿಜವಾಗಿ ಪ್ರೀತಿಸುವವರಿಗೆ ಮಾತ್ರ ಅದು ತಿಳಿಯುತ್ತದೆ. ಆದರೂ ಬಹಳ ಸಲ, ತಮ್ಮೊಳಗೆ ತಾವು ಸತ್ತಿರುವವರು ಯಾರ ಪ್ರೀತಿಗೂ ಅರ್ಹರೆನಿಸಿಕೊಳ್ಳುವುದಿಲ್ಲ. ಅವರಿಂದ ಸುತ್ತಲಿನವರಿಗೆ ಸಂಬಂಧಿಸುವುದು ಸೇವೆ ಮತ್ತು ಉಪಯುಕ್ತತೆ ಮಾತ್ರ. ಅಸ್ತಿತ್ವವನ್ನೇ ಕಳೆದುಕೊಂಡ ಜೀವ ಬದುಕಿದ್ದೂ ಸತ್ತಂತೆ ಇರುತ್ತದೆ.

ಇಲ್ಲಿ ತಪ್ಪು ವ್ಯಕ್ತಿಯದಲ್ಲ. ಇದು ಒಬ್ಬರ ಮೇಲಿನ ಆರೋಪವೂ ಅಲ್ಲ. ಇದು ಮೌನವನ್ನು ಸದ್ಗುಣವೆಂದು, ಸ್ವಯಂ–ಅಳಿವನ್ನು ತ್ಯಾಗವೆಂದು, ಮತ್ತು ಅಸ್ತಿತ್ವವನ್ನು ಐಚ್ಛಿಕವೆಂದು ನೋಡಲು ಕಲಿಸಿದ ಒಂದು ದೀರ್ಘ ಸಾಮಾಜಿಕ ಅಭ್ಯಾಸ. ಅದರಿಂದಲೇ, ಬಹಳ ಒಳ್ಳೆಯವರು ಯಾರಿಗೂ ಅಡ್ಡಿಯಾಗದೇ, ಯಾರಿಗೂ ತೊಂದರೆ ಕೊಡದೇ, ಮೌನವಾಗಿಯೇ ಕಾಣೆಯಾಗುತ್ತಾರೆ.

ಹಾಗಿದ್ದರೆ ಅಂತವರೂ ಬದುಕಬೇಕಲ್ಲವೆ? ಬದುಕುವುದು ಹೇಗೆ?

ಮೊದಲು ಅರಿಯಬೇಕು —

ನೀವು ಇತರರನ್ನು ಪ್ರೀತಿಸುವುದನ್ನು ನಿಲ್ಲಿಸಬೇಕಿಲ್ಲ. ನಿಮ್ಮ ಪ್ರೀತಿಯನ್ನು ಸಾಬೀತುಪಡಿಸಲು ನೀವೇ ಕಾಣೆಯಾಗುವುದನ್ನು ಮಾತ್ರ ನಿಲ್ಲಿಸಬೇಕು.

ಅಸ್ತಿತ್ವ ಸ್ವಾರ್ಥವಲ್ಲ.
ಅದು ಅವಶ್ಯಕತೆ.

ಯಾರು ಯಾರಿಗೋ ದುಡಿಯುವ ನೀವು, ನಿಮಗೋಸ್ಕರ ಸ್ವಲ್ಪ ಹಣ ಮತ್ತು ಸಮಯವನ್ನು ಉಳಿಸಿಕೊಳ್ಳುವ ಅವಕಾಶ ನಿಮಗಿದೆ. ನಿಮಗೂ ಆಸೆಗಳಿವೆ. ಆಕಾಂಕ್ಷೆಗಳಿವೆ. ಗುರಿಗಳಿವೆ. ಕನಸುಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮದೇ ಒಂದು ದೇಹವಿದೆ. ಅದನ್ನು ಸಿಂಗರಿಸದಿದ್ದರೂ ಪರವಾಗಿಲ್ಲ. ಆದರೆ ದೇಹವನ್ನು ಸ್ವಚ್ಛವಾಗಿಟ್ಟುಕೊಂಡು, ಆರೋಗ್ಯದ ಕಡೆ ಗಮನ ಹರಿಸುವ ಹಕ್ಕು ನಿಮಗಿದೆ. ಸ್ವಯಂ–ಸ್ವಚ್ಛತೆ ಮತ್ತು ದೇಹ–ಪ್ರಜ್ಞೆ ನಿಧಾನವಾಗಿ ಬೆಳೆಯಬೇಕು. ಇದಕ್ಕಾಗಿ ನೀವು ಅಪರಾಧಿಗಳಲ್ಲ.

ದುಡ್ಡಿಲ್ಲದ ಅಪ್ಪ, ತಮ್ಮನಿಗೋ ಅಣ್ಣನಿಗೋ ಅಂಗಿ ತರಬಲ್ಲವನಾದರೆ, ನಿಮಗೂ ತರಬೇಕು ಎಂದು ಪ್ರಶ್ನಿಸುವ ಹಕ್ಕು ನಿಮಗಿದೆ. ಆ ಪ್ರಶ್ನೆಯಿಂದ ಮೂಡುವ ಮೂದಲಿಕೆ, ಅಪಮಾನ, ತುಚ್ಚೀಕರಣ — ಇವುಗಳನ್ನು ನಿಭಾಯಿಸುವ ಶಕ್ತಿ ಪ್ರಶ್ನಿಸಿದ ನಂತರವೇ ಬರುತ್ತದೆ.

ಅದಕ್ಕೂ ಮೊದಲಲ್ಲ.

ಇದು ಉಪದೇಶವಲ್ಲ. ಇದು ಒಂದು ನೆನಪಿಸುವಿಕೆ. ನೀವು ಅಸ್ತಿತ್ವ ಹೊಂದಲು ಅರ್ಹರು.

Leave a Comment

error: Content is protected !!