ಹಣಕ್ಕಾಗಿ ಅಸ್ತಿತ್ವವನ್ನೇ ಗಿರವಿ ಇಡುತ್ತಿದ್ದೇನೆಯೇ?

ಒಬ್ಬ ದೊಡ್ಡ ಅಧಿಕಾರಿ. ಸಂಸ್ಥೆಯಲ್ಲಿ ಗೌರವ, ಸಮಾಜದಲ್ಲಿ ಮಾನ. ಬರುವ ಸಂಬಳದಲ್ಲಿ ಆತ ಸುಖಿಯಾಗಿ ಬದುಕಿದ. ಅಡ್ಡದಾರಿ ಹಿಡಿದು ದುಡ್ಡು ಮಾಡಲಿಲ್ಲ. ಗೌರವಾನ್ವಿತವಾಗಿ ನಿವೃತ್ತಿಯನ್ನೂ ಹೊಂದಿದ. ಆದರೆ ನಿವೃತ್ತಿಯ ನಂತರ ನಿಜವಾದ ಸಂಕಟ ಶುರುವಾಗಿತ್ತು. ಪಿಂಚಣಿಯ ಹಣ ಸಂಪೂರ್ಣವಾಗಿ ಹೆಂಡತಿಯ ಕೈಗೆ ಹೋಗುತ್ತಿತ್ತು. ಈತ ನೆಂಟರಿಷ್ಟರ ಮನೆಗೆ ಹೋಗುವುದಿರಲಿ, ತಾನೇ ಬಳಸುವ ಸೋಪು, ಶೇವ್ ಮಾಡುವ ಬ್ಲೇಡು ಕೊಳ್ಳಲು ಬೇಕಾದ ಪುಡಿಗಾಸಿಗೂ ಹೆಂಡತಿಯನ್ನು ಕೇಳಬೇಕಾದ ಸ್ಥಿತಿ. ಆಗ ಆತ ಮನೆಯೊಳಗೆ ಇದ್ದೂ ಇಲ್ಲದವನಾಗುತ್ತಾನೆ. ಅಂಗಳದಲ್ಲೋ, ಒಂದು ಮೂಲೆಯಲ್ಲೋ, ಯಾರಿಗೂ ಕಾಣದಂತೆ ಬಿದ್ದಿರುವಂತಾಗುತ್ತಾನೆ. ಇದು ಬಡತನವಲ್ಲ.
ಇದು ಅಸ್ತಿತ್ವ ಕಳೆದುಕೊಳ್ಳುವ ಅನುಭವ.

ಗೃಹಿಣಿಯ ಮೌನ

ಆಕೆ ಗೃಹಿಣಿ. ತನ್ನ ಮಗುವಿನ ಹುಟ್ಟುಹಬ್ಬಕ್ಕೆ “ತನ್ನದಾಗಿ” ಏನಾದರೂ ಕೊಡಿಸಬೇಕೆಂಬ ಆಸೆ. ಆದರೆ ಗಂಡ ಈಗಾಗಲೇ ಕೇಕು, ಬಟ್ಟೆ, ಉಡುಗೊರೆ ಎಲ್ಲವನ್ನೂ ತಂದಿದ್ದಾನೆ. ಇನ್ನು ನನ್ನದೇನಿದೆ? ಅವೆಲ್ಲವೂ ನನ್ನದೇ ಅಲ್ಲವೇ? ಅವನ್ನೇ ಗಂಡನ ಜೊತೆ ಸೇರಿ ಮಗುವಿಗೆ ಕೊಡುವುದು. ಅಷ್ಟೇ. ಆದರೆ ಒಳಗೊಳಗೇ ಒಂದು ಪ್ರಶ್ನೆ ತಟ್ಟುತ್ತದೆ: “ನಿನ್ನದು ಅಂತ ಒಂದು ಬಿಡಿಗಾಸೂ ಇಲ್ಲವೇ?” ಈ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಮೌನ ಮಾತ್ರ ಉಳಿಯುತ್ತದೆ.

ತಂಗಿಯ ಕಥೆ

ಆಕೆ ಪುಟ್ಟ ಹುಡುಗಿ. ಅಣ್ಣ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಾನೆ. ಅವಳಿಗೆ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಬೇಕಿದೆ. ಆದರೆ ಅಣ್ಣನ ಹತ್ತಿರ ಹಣ ಕೇಳಲು ಬಾಯಿ ಬರುತ್ತಿಲ್ಲ. ಅವನು ಈಗಾಗಲೇ ಎಲ್ಲರನ್ನೂ ನೋಡಿಕೊಳ್ಳುತ್ತಿದ್ದಾನೆ. ನಾನು ಇನ್ನಷ್ಟು ತೊಂದರೆ ಕೊಡಬೇಕಾ? ಆ ಕಾರಣಕ್ಕೆ ಪ್ರವಾಸದ ಆಸೆ ಅಲ್ಲಿಯೇ ಕಮರುತ್ತದೆ.

ಇಲ್ಲಿ ಹಣ ಮತ್ತು ಸ್ವಯಂ–ಉಳಿವು ಒಂದಕ್ಕೊಂದು ಥಳಕು ಹಾಕಿಕೊಳ್ಳುತ್ತವೆ.

ಹಣದ ಬಗ್ಗೆ ಮಾತನಾಡಲು ಅಸೌಕರ್ಯ ಏಕೆ?

ಯಾರೋ ಆತನಿಗೆ ಹೇಳಿದರು: “ಸ್ವಲ್ಪ ಇನ್ನೂ ಹಣ ಮಾಡಯ್ಯ, ಹೆಚ್ಚಿಗೆ ದುಡಿ.” ಆತ ಮುನಿಸಿಕೊಂಡ. “ನನ್ನ ಹತ್ತಿರ ಶಾಂತಿ ಇದೆ. ಆರಾಮವಾಗಿದ್ದೇನೆ. ನಾಳೆಯದು ನಾರಾಯಣ ಬಲ್ಲ. ಇವತ್ತಿನದು ಇವತ್ತಿಗೆ.” ಹಣದ ಹಿಂದೆ ಬಿದ್ದವರು ಲೋಭಿಗಳು ಎಂದು ಬೈದುಕೊಂಡ. ನಿಜ, ಹಣದ ಬಗ್ಗೆ ಮಾತನಾಡುವುದು ಅನೇಕರಿಗೆ ಅಸೌಕರ್ಯ. ಯಾಕೆಂದರೆ ಹಣವನ್ನು ನಾವು ಸದಾ ಲಾಭ, ಲೋಭ, ಸ್ವಾರ್ಥದ ಜೊತೆ ಕಟ್ಟಿ ಹಾಕಿದ್ದೇವೆ. ಆದರೆ ಒಂದು ಸತ್ಯ ಇದೆ:

ಹಣ ಯಾವಾಗಲೂ ಲೋಭವಲ್ಲ.
ಬಹುಸಾರ ಅದು ಗೌರವದ ಭಾಷೆ.

ಮೌನದ ಅಪಾಯ

ಹಣ ಇಲ್ಲದಿರುವುದು ಮಾತ್ರ ಸಮಸ್ಯೆಯಲ್ಲ. ಹಣ ಕೇಳಬೇಕಾದಾಗ ಮೌನವಾಗಿಬಿಡಬೇಕಾಗುವುದು ಅಸ್ತಿತ್ವಕ್ಕೆ ಹೆಚ್ಚು ಹಾನಿಕಾರಕ. ನಿವೃತ್ತ ಅಧಿಕಾರಿ, ಗೃಹಿಣಿ, ತಂಗಿ — ಮೂರು ಕತೆಗಳಲ್ಲೂ ಒಂದೇ ಸಂಗತಿ: ಪ್ರತಿದಿನ ಸ್ವಯಂ–ಅಳಿವಿನ ಸದ್ದು ಕೇಳುತ್ತಾ ಮೌನವಾಗಿರುವ ಬದುಕು.

ಹಣ ಮತ್ತು ಅಧಿಕಾರ

ಬಹಳ ಜನ ಬೇರೆಯವರನ್ನು ನಿಯಂತ್ರಿಸಲು ಹಣದ ಮೇಲೆ ಅವಲಂಬಿತರಾಗಿರುತ್ತಾರೆ. ಆ ಅವಲಂಬನೆ ನಿಧಾನವಾಗಿ ಭಾವನಾತ್ಮಕ ಮೌನವಾಗಿ ಮಾರ್ಪಡುತ್ತದೆ. ಹಣ ಕೊಡುವವರು ನಿರ್ಧರಿಸುತ್ತಾರೆ. ಹಣ ಕೇಳುವವರು ಹೊಂದಿಕೊಳ್ಳುತ್ತಾರೆ. ಇದು ಬರೀ ಹಣದ ವ್ಯವಹಾರವಲ್ಲ. ಇದು ಶಕ್ತಿಯ ಸಮೀಕರಣ ತಪ್ಪುವ ರೀತಿ. ಒಬ್ಬರು ಬಲಾಢ್ಯರಾಗುತ್ತಾ ಹೋಗುತ್ತಾರೆ. ಇನ್ನೊಬ್ಬರು ಇದ್ದೂ ಇಲ್ಲವಾಗುತ್ತಾರೆ.

“ಇಷ್ಟೇ ಸಾಕು” ಎಂಬ ಮೌನ

ಹಣ ಕೇಳುವಾಗ ಬಹಳ ಜನ ತಮ್ಮ ಮಾತನ್ನೇ ತಗ್ಗಿಸಿಕೊಳ್ಳುತ್ತಾರೆ. “ಇಷ್ಟೇ ಸಾಕು.” “ಇದಕ್ಕೂ ಹೆಚ್ಚು ಬೇಡ.” “ಈಗ ಕೇಳುವುದು ಸರಿಯಲ್ಲ.” ಹಣ ಕೇಳುವುದೇ ಅಪರಾಧ ಎಂಬಂತೆ ತಮ್ಮ ಅಗತ್ಯಗಳನ್ನು ಮೌನಗೊಳಿಸುತ್ತಾರೆ. ಇಲ್ಲಿ ಸಮಸ್ಯೆ ಹಣವಲ್ಲ. ಸಮಸ್ಯೆ — ಹಣ ಕೇಳಬೇಕಾದಾಗ ತಮ್ಮ ಧ್ವನಿಯನ್ನೇ ಕಳೆದುಕೊಳ್ಳುವುದು.

ಕನಿಷ್ಠ ಅಗತ್ಯಗಳು

ಒಂದು ಹೊಸ ಬಟ್ಟೆ, ಒಂದು ಪುಸ್ತಕ, ಸ್ವಲ್ಪ ಸಮಯ, ಸ್ವಲ್ಪ ಆರಾಮ, ಇವು ಐಷಾರಾಮಿ ಅಲ್ಲ. ಇವು ಅಸ್ತಿತ್ವದ ಕನಿಷ್ಠ ಬೇಡಿಕೆಗಳು. ಆದರೂ “ಇದನ್ನು ಕೇಳಿದರೆ ಅವರು ಏನೆಂದುಕೊಳ್ಳುತ್ತಾರೆ?” ಎಂಬ ಭಯದಲ್ಲಿ . ಕಲ್ಪನೆಯಲ್ಲಿ, ಕೆಲವೊಮ್ಮೆ ಸತ್ಯವಾಗಿ ಅವುಗಳನ್ನು ತಾವೇ ನಿರಾಕರಿಸುತ್ತಾರೆ. ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಸ್ವಾಭಿಮಾನ ಅಲ್ಲಿ ನಿಧಾನವಾಗಿ ಕುಸಿಯುತ್ತಿದೆ.

ಸಮಾಜದ ಶ್ಲಾಘನೆ

ಸಮಾಜ ಹಣದ ನಿರಾಕರಣೆಯನ್ನು ತ್ಯಾಗವೆಂದು ಶ್ಲಾಘಿಸುತ್ತದೆ. “ಅವರು ತುಂಬಾ ತ್ಯಾಗ ಮಾಡುತ್ತಾರೆ.” “ಹಣದ ಹಿಂದೆ ಓಡುವವರಲ್ಲ.” ಆದರೆ ಯಾರೂ ಕೇಳುವುದಿಲ್ಲ: ಅವರು ಮಾತನಾಡಲು ಎಷ್ಟು ಜಾಗ ಹೊಂದಿದ್ದಾರೆ? ಹಣವನ್ನು ತ್ಯಾಗ ಮಾಡಿದವರಿಗೆ ವ್ಯವಸ್ಥೆಯಲ್ಲಿ ಎಷ್ಟು ಅಸ್ತಿತ್ವವಿದೆ ಎಂದು. ಹಣ ಇಲ್ಲದಾಗ ಮೌನವೇ ಶಿಷ್ಟಾಚಾರವಾಗಿಬಿಡುತ್ತದೆ.

ಒಂದು ಸ್ಪಷ್ಟತೆ

ಹಣವು ಶ್ರೇಷ್ಟತೆಯ ಸಂಕೇತವಲ್ಲ. ಹಣ ಇಲ್ಲದಿರುವುದು ಎಲ್ಲಾ ದೌರ್ಜನ್ಯಗಳಿಗೆ, ಸ್ವಯಂ-ನಾಶಕ್ಕೆ ಮೌನದ ಒಪ್ಪಿಗೆಯಾಗಿ ಮಾರ್ಪಡಬಾರದು. ಸ್ವಂತ ಹಣ ಹೊಂದುವುದು ಸ್ವಾರ್ಥವಲ್ಲ. ಅದು — ತನ್ನ ಅಸ್ತಿತ್ವದ ಮೇಲಿನ ಹಿಡಿತ. ಆದರೆ ಹಣದಿಂದ ಇತರರನ್ನು ನಿಯಂತ್ರಿಸಲು ಇಚ್ಛಿಸುವವರಿಗೆ ಈ ಹಿಡಿತವನ್ನು ಬಿಡಲು ಮನಸ್ಸಿರುವುದಿಲ್ಲ. ಆಗಲೇ ಹಣವು ಅಪರಾಧಭಾವನೆ ಹುಟ್ಟಿಸುವ ವಸ್ತುವಾಗುತ್ತದೆ.

ಸ್ವಯಂ–ಉಳಿವು

ತನಗಾಗಿ ಒಂದು ಪೈಸೆ ಉಳಿಸಿಕೊಳ್ಳದೆ ಎಲ್ಲವನ್ನೂ ಬೇರೆಯವರಿಗೆ ಕೊಟ್ಟು ಖಾಲಿಯಾಗುವವರು ಮೊದಲು ಬಲಿಕೊಡುವುದು ಸ್ವಯಂ–ಉಳಿವು. ಆದರೆ ಅವರಿಗೆ ಗೊತ್ತಿಲ್ಲದ ಸತ್ಯ ಒಂದಿದೆ.

ತನ್ನ ಮೇಲೆ ಹಣ ಖರ್ಚುಮಾಡುವುದು
ಐಷಾರಾಮವಲ್ಲ.

ಒಳ್ಳೆಯ ಆಹಾರ, ಆರೋಗ್ಯ, ಶಿಕ್ಷಣ, ಸಮಯ, ಇವುಗಳೆಲ್ಲ “ನಾನು ಇದ್ದೇನೆ” ಎಂದು ಹೇಳುವ ಸಣ್ಣ ಮಾರ್ಗಗಳು. ನೀವು ಇತರರನ್ನು ಪ್ರೀತಿಸುವುದನ್ನು ನಿಲ್ಲಿಸಬೇಕಿಲ್ಲ. ಆದರೆ ನಿಮ್ಮ ಗೌರವವನ್ನು ಮೌನದಲ್ಲಿ ಗಿರವಿ ಇಡಬೇಕಿಲ್ಲ. ಹಣವು ನಿಮ್ಮ ಮೌಲ್ಯವಲ್ಲ. ಆದರೆ ಹಣ ಇಲ್ಲದಿರುವುದು ನಿಮ್ಮ ಮೌಲ್ಯವನ್ನು ಮರೆಮಾಡಬಾರದು. ನೀವು ಹಣಕ್ಕಾಗಿ ಬದುಕಬೇಕಿಲ್ಲ. ಆದರೆ ಹಣ ಇಲ್ಲದೆ ನೀವು ಮೌನವಾಗಬೇಕಿಲ್ಲ.

ನಿಮ್ಮ ಅಸ್ತಿತ್ವಕ್ಕೆ ಧ್ವನಿ ಬೇಕು.
ಆ ಧ್ವನಿಗೆ —
ನಿಮ್ಮ ಉಳಿವಿಗೆ —
ಹಣ ತರುವ ಗೌರವ ಬೇಕು.

Leave a Comment