“ನಿರಂತರವಾಗಿ ಯಾಕೆ ಕಾಣಿಸಿಕೊಳ್ಳುವುದಿಲ್ಲ?” — ನನ್ನನ್ನು ನಾನು ಉಳಿಸಿಕೊಳ್ಳಲು ನಾನು ನಿಧಾನಿಸಿದೆ

ಬಹಳ ಜನ ಕೇಳುತ್ತಾರೆ.

“ಯಾಕೆ ಶೀಲಾ ನೀನು ಸರಿಯಾಗಿ ಪೋಸ್ಟ್ ಹಾಕುವುದಿಲ್ಲ?”
“ಯಾಕೆ ನಿರಂತರವಾಗಿ ಬರೆಯುವುದಿಲ್ಲ?”
“ಯಾಕೆ ವಿಡಿಯೋಗಳನ್ನು ನಿರಂತರವಾಗಿ ಮಾಡುವುದಿಲ್ಲ?”

ಆಗ ನಾನು ಸ್ವಲ್ಪ ಅಂತರ್ಮುಖಿಯಾಗುತ್ತೇನೆ.

ಅವರಿಗೆ ಹೇಗೆ ಹೇಳುವುದು?
ನನಗೆ ಆರೋಗ್ಯದ ಭಯ ಇದೆ ಎಂದು?
ಒಮ್ಮೆ ಕುಸಿದರೆ, ನಾನು ಕಟ್ಟಿಕೊಂಡಿರುವ ಎಲ್ಲವೂ ಮತ್ತೆ ಶೂನ್ಯಕ್ಕೆ ಹೋಗಿಬಿಡುತ್ತದೆ ಎಂದು?

ಕೆಲವೊಮ್ಮೆ ಹೇಳಬೇಕು ಅನಿಸುತ್ತದೆ.
ಆದರೆ ಹೇಳಿದರೆ “ಇವಳಿಗೆ ದುಡಿಯುವುದಕ್ಕೆ ಸೋಮಾರಿತನ” ಎಂದು ಅಲ್ಲಗಳೆಯುತ್ತಾರೆ ಎನ್ನುವ ಭಯವೂ ಬರುತ್ತದೆ.

ಆದರೆ ನನಗೆ ಒಳಗಿನಿಂದ ಗೊತ್ತು.

ಹುಷಾರು ತಪ್ಪಿ ಆಸ್ಪತ್ರೆಗೆ ಸೇರಿದರೆ, ನನ್ನ ಒಂದು ತಿಂಗಳ ದುಡಿಮೆ ಒಂದು ದಿನದಲ್ಲಿ ಖಾಲಿಯಾಗಬಹುದು.
ಒಂದು ತಿಂಗಳು ಒಂದು ಪೋಸ್ಟ್ ಇಲ್ಲ, ಒಂದು ವಿಡಿಯೋ ಇಲ್ಲ ಎಂದರೆ, ವರ್ಷಗಟ್ಟಲೆ ಕಟ್ಟಿದ consistency ಹಿನ್ನಡೆಯಾಗಬಹುದು.

ಈ ಭಯ ಕೇವಲ ಕಲ್ಪನೆ ಅಲ್ಲ. ಅದು ಅನುಭವ ಕಲಿಸಿದ ಪಾಠ. ಒಮ್ಮೆ ನಾಲ್ಕು ಹೆಜ್ಜೆ ನಡೆದರೂ ಬರುತ್ತಿದ್ದ ಏದುಸಿರು ನನಗೆ ಒಂದು ಸಂದೇಶ ಕೊಡುತ್ತಿತ್ತು. “ನಿಧಾನಿಸು” ಎಂದು. ಆದ್ದರಿಂದ ನಾನು ಉದ್ದೇಶಪೂರ್ವಕವಾಗಿ ನಿಧಾನಿಸಿದೆ. ವಿರಾಮ ತೆಗೆದುಕೊಂಡೆ.
ಇನ್ನೊಬ್ಬರ ಅವಲಂಬಿತಳಾದೆ. ಆರ್ಥಿಕವಾಗಿ ಹಿಂದೆ ಬಿದ್ದೆ. ಕಾರಣ ಒಂದೇ.

ನಾನು ಏನು ಸಾಧಿಸುವುದಿದ್ದರೂ ಮೊದಲು ನಾನು ಉಳಿಯಬೇಕು. ಈ ಸತ್ಯವನ್ನು ನನಗೆ ಜೀವನ ಸುಲಭವಾಗಿ ಕಲಿಸಲಿಲ್ಲ. ಕೆಲಸ, ಜವಾಬ್ದಾರಿ, ಓಟ, ಒತ್ತಡಗಳ ನಡುವೆ ನಾನು ಮೂರು ಬಾರಿ ಆಸ್ಪತ್ರೆ ವಾಸ ಕಂಡಿದ್ದೇನೆ. ಪ್ರತಿ ಬಾರಿ ಪುನರ್ಜೀವ ಪಡೆದು ಹೊರಬಂದಾಗಲೂ ಒಂದು ಬೇಸರ ಕಾಡುತ್ತಿತ್ತು.

ಇದನ್ನೂ ಓದಿ :

“ಎಷ್ಟು ಕಳೆದುಕೊಂಡೆ…”

ಸಮಯ, ಹಣ, ಕೆಲಸದ ಅವಕಾಶಗಳು, ನಿರಂತರತೆ, ಆವೇಗ ಇವೆಲ್ಲವೂ….

ಆದರೆ ಕೊನೆಯಲ್ಲಿ ಒಂದೇ ಒಂದು ಸಮಾಧಾನ ಉಳಿಯುತ್ತಿತ್ತು. “ಇನ್ನೂ ಜೀವ ಉಳಿದಿದೆ.” ಅದಕ್ಕಾಗಿಯೇ ಈಗ ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಕೆಲಸ ಮತ್ತು ಜವಾಬ್ದಾರಿಗಳಿಗಿಂತ ಜೀವ ಮತ್ತು ಜೀವನ ದೊಡ್ಡದು. ಬಹಳ ಜನರನ್ನು ನೋಡುತ್ತೇನೆ.

ಎಷ್ಟು ಗಟ್ಟಿಯಾಗಿ ಕೆಲಸ ಮಾಡುತ್ತಾರೆ.
ಎಷ್ಟು ಶಿಸ್ತಾಗಿರುತ್ತದೆ.
ಎಷ್ಟು ನಿರಂತರವಾಗಿರುತ್ತದೆ.

ಅವರನ್ನು ನೋಡಿದಾಗ ಕೆಲವೊಮ್ಮೆ ಹೆಮ್ಮೆ ಆಗುತ್ತದೆ.
ಕೆಲವೊಮ್ಮೆ ಹೊಟ್ಟೆಕಿಚ್ಚೂ ಆಗುತ್ತದೆ.

“ನನಗೇಕೆ ಹೀಗೆ?” ಎಂದು ಮನಸ್ಸು ಪ್ರಶ್ನಿಸುತ್ತದೆ.

ಆದರೆ ಅವರು ಸದ್ದಿಲ್ಲದೇ, ಯಾರಿಗೂ ಅವಕಾಶ ಕೊಡದೆ, ಹಠಾತ್ ಎದ್ದು ಹೋಗಿಬಿಡುವಾಗ ಕರುಳು ಮಿಡಿಯುತ್ತದೆ. “ಅಯ್ಯೋ… ಏನಾಗಿ ಹೋಯಿತು?” ಎಂದು ಬೇಸರವಾಗುತ್ತದೆ. ಆ ಕ್ಷಣ ಜೀವನ ನಮ್ಮ ಕಡೆ ತಿರುಗಿ ನೋಡುತ್ತದೆ. “ನಿನಗೆ ಇನ್ನೂ ಅವಕಾಶ ಇದೆ…” ಎಂದು. ರಾತ್ರಿಗಳಲ್ಲಿ ಎಚ್ಚರವಾಗಿ ಹೊಸ ಧಾರಾವಾಹಿ ನೋಡಿ, “ನಾನು ತುಂಬಾ ಅಪ್ಡೇಟೆಡ್” ಎಂದು ಬೀಗುವಾಗ ಜೀವನ ಎಚ್ಚರಿಸುತ್ತದೆ. “ನಿಧಾನಿಸು” ಎಂದು.

ನಿಮಗಿದು ಇಷ್ಟವಾಗಬಹುದು :-

ನ್ಯೂಸ್ ರೂಂನಲ್ಲಿ ಯಾವುದೋ ಸುದ್ದಿ ಸರಿಯಾಗಿ ಹೋಗಿಲ್ಲ ಎಂದು ಕೂಗುವ ಮೊದಲು ಮನಸ್ಸು ಕೇಳುತ್ತದೆ:

“ನೀನು ಮೊದಲು ಸರಿಯಾಗಿ ಬದುಕುತ್ತಿದ್ದೀಯಾ?” ಎಂದು. ಯಾರೋ ಬರೆದ, ಹೇಗೋ ಮಾಡಿದ ಕೆಲಸಗಳು ಸಿಟ್ಟು ತರಿಸುವ ಮೊದಲು ಬದುಕು ಹೇಳುತ್ತದೆ: “ಮೊದಲು ನೀನು ಬದುಕಿಕೋ.”

ಸಾಲಗಾರರ ಒತ್ತಡ…, ಬಾರದ ಸಂಬಳ…, ಕಡಿಮೆ ಸಂಬಳ…, ಅನಿಶ್ಚಿತ ಭವಿಷ್ಯ…

ಇವೆಲ್ಲ ಒತ್ತಡ ಕೊಡುವ ಕ್ಷಣಗಳಲ್ಲೂ ಒಳಗಿಂದ ಮತ್ತೊಂದು ಧ್ವನಿ ಬರುತ್ತದೆ. “ಇನ್ನೂ ಬದುಕಿದ್ದೀಯಲ್ಲ… ಇವತ್ತಲ್ಲ ನಾಳೆ ದುಡಿದು ತೀರಿಸುವೆ” ಎಂದು.

ಕೆಲಸವಿಲ್ಲದ ದಿನಗಳು ಕೂಡ ಈಗ ನನಗೆ ಖಾಲಿ ದಿನಗಳಂತೆ ಕಾಣುವುದಿಲ್ಲ. ಅವು ಹೊಸ ಕಲಿಕೆಯ ದಿನಗಳಾಗಿ ಕಾಣುತ್ತವೆ. ಯಾರೋ ಕೊಟ್ಟ ನೋವಿನ ಮಾತುಗಳು, ನಡವಳಿಕೆಯ ಹೊಡೆತಗಳು ಎದೆಬಡಿತ ನಿಲ್ಲಿಸುವ ಮೊದಲು, ಅದೇ ಹೃದಯ ನನ್ನನ್ನು ಸಮಾಧಾನಪಡಿಸುತ್ತದೆ “ನಾನಿದ್ದೇನೆ…” ಎಂದು.

ನನಗಿಂತ ಚೆನ್ನಾಗಿ ಬರೆಯುವವರು, ಹೆಚ್ಚು ನಿರಂತರತೆ ಇಟ್ಟುಕೊಂಡಿರುವವರು ಕೆಲವೊಮ್ಮೆ ಹೊಟ್ಟೆಕಿಚ್ಚು ತರಿಸುತ್ತಾರೆ. ಆದರೆ ಈಗ ಆ ಹೊಟ್ಟೆಕಿಚ್ಚಿನಲ್ಲೂ ಒಂದು ವಿವೇಕ ಬಂದಿದೆ. “ಇರಲಿ…ಒಂದು ದಿನ ನಾನೂ ನಿರಂತರವಾಗುತ್ತೇನೆ… ಚೆನ್ನಾಗಿ ಬದುಕಿದ್ದರೆ.”

ಯಾಕೆಂದರೆ ಬದುಕು ಎಲ್ಲಾದಕ್ಕಿಂತ ದೊಡ್ಡದು. ಮನಸ್ಸಿನ ಮೂಲೆಯಲ್ಲಿ ಇರುವ ಸಂಕಟಗಳು ದೇಹವನ್ನು ಆಳುವ ಮೊದಲು, ಅವು ಬುದ್ಧಿಯ ಗೋಡೆಗೆ ತಾಗಬೇಕು. ಅದರಿಗಾಗಿ ಜೀವನದಲ್ಲಿ ಒಮ್ಮೆಯಾದರೂ ಸಾವಿನ ಮನೆಯ ಕದ ತಟ್ಟಬೇಕಾಗುತ್ತದೆ. ಆದರೆ ಬೇಸರದ ಸಂಗತಿ ಏನೆಂದರೆ — ಬದುಕು ಎಲ್ಲರಿಗೂ ಆ ಅವಕಾಶ ಕೊಡುವುದಿಲ್ಲ.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment