ನಮ್ಮ ಕನ್ನಡ, ಎತ್ತ ಸಾಗುತ್ತಿದೆ?

ಹೀಗೊಂದು ಪ್ರಶ್ನೆ ನನ್ನ ಮಗ ಶಾಲೆಗೆ ಹೊರಟಾಗಿನಿಂದ ನನ್ನನ್ನು ಕೊರೆಯುತ್ತಿದೆ. ಎಲ್‌ಕೆಜಿ, ಯುಕೆಜಿಯಲ್ಲೇ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಪರಿಚಯ ಆರಂಭವಾಗುತ್ತದೆ. ಈಗ ೫ನೇ ತರಗತಿಗೆ ಹೋಗುತ್ತಿರುವವನಿಗೂ “ಬ್ರಿಜ್ ಕೋರ್ಸ್” ಅಂತ ಹೇಳಿಕೊಡುತ್ತಿದ್ದಾರೆ. ಆದರೂ ಮಕ್ಕಳಿಗೆ ಇನ್ನೂ ಕಾಗುಣಿತ ಸರಿಯಾಗಿ ಬರುವುದಿಲ್ಲ. ಏಕೆ?

ಈ ಬಗ್ಗೆ ಒಂದು ವಿಸ್ತೃತ ಲೇಖನ ಬರೆದಿದ್ದೆ. ಎಲ್ಲೋ ಕಳೆದುಹೋಯಿತು. ಇರಲಿ. ಒಮ್ಮೆ ಒಂದನೇ ತರಗತಿಯ “ಸವಿ ಕನ್ನಡ” ಪಠ್ಯ ತೆಗೆದು ನೋಡಿ. ಅಲ್ಲಿ ಅ, ಆ, ಇ, ಈ ಎಂಬ ಸರಳ ಅನುಕ್ರಮದ ಕಲಿಕೆ ಇಲ್ಲ. ಯಾವುದೋ ಅಕ್ಷರಗಳನ್ನು ಎಲ್ಲೆಲ್ಲೋ ಇಟ್ಟು, ಅದನ್ನು ಬರೆದು, ಕಾಪಿ ಮಾಡಿ ಕಲಿಯಬೇಕಂತೆ!

ಈ ಶಿಕ್ಷಣ ತಜ್ಞರು ಮನುಷ್ಯರೋ ಅಥವಾ ಇನ್ನೇನೋ ಎಂದು ಅನಿಸುತ್ತದೆ. ಮನುಷ್ಯನ ನೆನಪಿನ ಶಕ್ತಿ ಇರುವುದೇ ಸುಲಲಿತ ಅನುಕ್ರಮದ ಆಧಾರದ ಮೇಲೆ. ಆದರೆ ಇವರು ಗ, ರ, ಸ, ಣ ಎಂದು ಕನ್ನಡದ ೪೯ ಅಕ್ಷರಗಳನ್ನು ಆ ೬-೭ ವರ್ಷದ ಮಗುವಿನ ತಲೆಗೆ “ನೆನಪಿಡು” ಎಂದು ತುಂಬುತ್ತಾರಲ್ಲ? ಇದು ಶಿಕ್ಷಣವೇ?

ಶಾಲೆಗಳಲ್ಲಂತೂ ಕೇಳುವುದೇ ಬೇಡ. ಕಾಗುಣಿತಗಳನ್ನು ಎಲ್‌ಕೆಜಿ, ಯುಕೆಜಿಯಲ್ಲೇ ಕಲಿತಿರಬೇಕಂತೆ! ಒಂದನೇ ತರಗತಿಗೆ ಒಂದು ವಾಕ್ಯದ ಪ್ರಶ್ನೋತ್ತರಗಳನ್ನು ಬರೆಯಬೇಕಂತೆ! ನಿಜವಾಗಿಯೂ ಆ ಪುಟ್ಟ ಮಕ್ಕಳ ತಲೆಯಲ್ಲಿ ಒಂದೇ ಸಾರಿ ಎಷ್ಟೊಂದು ಕಲಿಯಬೇಕಪ್ಪಾ, ಬರೆಯಬೇಕಪ್ಪಾ ಎಂಬ ಭಯವೇ ನಿಂತಿದೆಯೇ ಹೊರತು, ಕನ್ನಡ ಕಲಿಕೆಯ ಆನಂದ ಹುಟ್ಟಿಲ್ಲ. ಕನ್ನಡದ ಸ್ವಾದ ಅರಿವಿಗೇ ಬರದೆ, “ತಿನ್ನು ತಿನ್ನು” ಎಂದು ಬಾಯಿಗೆ ತುರುಕಿದಂತಾಗಿದೆ.

ನಮ್ಮ ಶಿಕ್ಷಣ ವ್ಯವಸ್ಥೆ ನೋಡಿದರೆ ನನಗೆ ತೀವ್ರ ಕೋಪ ಬರುತ್ತದೆ. ಸ್ವಲ್ಪ ಭಾವುಕಳಾಗಿ ಬರೆಯುತ್ತಿದ್ದೇನೆ, ಕ್ಷಮಿಸಿ. ನನ್ನ ಮಗನ ಒಂದನೇ ತರಗತಿಯ ಪುಸ್ತಕ ತೆಗೆದು ಒಲೆಗೆ ಹಾಕುವಷ್ಟು ಕೋಪ ಬಂದಿತ್ತು. ಮಕ್ಕಳು ಹೂವಿನಂತವರು. ಅವರನ್ನು ಅವರ ವಯಸ್ಸಿಗೆ ಎಷ್ಟು ಬೇಕೋ ಅಷ್ಟೇ ಭಾರ ಹಾಕಿ ಕಾಪಿಟ್ಟು ಬೆಳೆಸಬೇಕು. ಆಗಲೇ ಅವರು ತಮಗೂ, ಬೇರೆಯವರಿಗೂ ಆಶ್ರಯ ಕೊಡುವ ಮರವಾಗಬಲ್ಲರು.

ಆದರೆ ಈ ಭಾಷೆಗಳ, ಅದರಲ್ಲೂ ಕನ್ನಡ ಭಾಷೆಯ ಪಠ್ಯ ಇದೆಯಲ್ಲ, ಅದರ ಭಾರ ವಿಚಿತ್ರ. ಒಂದೆಡೆ ವ್ಯವಸ್ಥಿತವಾಗಿ, ಹಂತ ಹಂತವಾಗಿ, ಅನುಕ್ರಮವಾಗಿ ಆಂಗ್ಲ ಮತ್ತು ಹಿಂದಿ ಭಾಷೆಗಳನ್ನು ಹೇಳಿಕೊಡಲಾಗುತ್ತದೆ. ಇನ್ನೊಂದೆಡೆ “ಮಾತೃಭಾಷೆ” ಎನ್ನುತ್ತಲೇ ಸರಳವಾದ ಭಾಷೆಯನ್ನು ಕಠಿಣವಾಗಿ ಕಲಿಸಲಾಗುತ್ತದೆ.

“ಕನ್ನಡವೆಂದರೆ ಬರಿ ನುಡಿಯಲ್ಲ” ಎನ್ನುತ್ತಲೇ ಅದನ್ನು ಕಬ್ಬಿಣದ ಕಡಲೆಯಾಗಿಸುವ ದೊಡ್ಡ ಹುನ್ನಾರವೇ ನಡೆಯುತ್ತಿರುವಂತೆ ಕಾಣುತ್ತದೆ. ಒಂದನೇ ತರಗತಿಯಲ್ಲಿ ಸರಿಯಾಗಿ ಅಕ್ಷರಗಳನ್ನು ಗುರುತಿಸುವುದು, ಶಬ್ದಗಳನ್ನು ರಚಿಸುವುದು, ಓದಿಸುವುದು, ಕತೆಗಳನ್ನು ಹೇಳುವುದು, ಹಾಡುಗಳನ್ನು ಕಲಿಸುವುದು ಆಗಬೇಕು. ನಾವೆಲ್ಲ ಕಲಿತಿದ್ದು ಹಾಗೆಯೇ. ಪ್ರಶ್ನೋತ್ತರಗಳು ಏನಿದ್ದರೂ ಮೂರನೇ ತರಗತಿ, ನಾಲ್ಕನೇ ತರಗತಿಯ ಹೊತ್ತಿಗೆ ಬಂದಿದ್ದವು.

ನನಗಂತೂ ಈ ಕನ್ನಡ ಅದದೇ ಬರೆದು, ೮ನೇ ತರಗತಿಯ ಹೊತ್ತಿಗೆ ಕನ್ನಡ ಬರೆಯಬೇಕೆಂದರೆ ಸೋಮಾರಿತನ ಕಾಡುತ್ತಿತ್ತು. ೧೦ನೇ ತರಗತಿಯಲ್ಲಿ ಒಳ್ಳೆಯ ಕನ್ನಡ ಮಾಸ್ತರು ಸಿಕ್ಕು, ಹೊಸ ರೀತಿಯಲ್ಲಿ ಪರಿಣಾಮಕಾರಿಯಾಗಿ ಬರೆಯುವುದನ್ನು ಕಲಿಸಿರದಿದ್ದರೆ, ನಾನು ಕನ್ನಡ ಬರೆಯುವುದನ್ನೇ ಬಿಟ್ಟುಬಿಡುತ್ತಿದ್ದೆನೇನೋ!

ಅಪ್ಪಟ ಕನ್ನಡ ಪ್ರೇಮಿಯಾದ ನನಗೇ ಇಷ್ಟು ಹಿಂಸೆಯಾಗುವಾಗ, ಇನ್ನೂ ಕನ್ನಡ ಏನೆಂದು ಸರಿಯಾಗಿ ಅರಿಯದ ಈ “ಝೆನ್ ಆಲ್ಫಾ” ಮಕ್ಕಳ ಕಥೆ ಹೇಳಿ. “ಅಮ್ಮಾ, ನೀನು ಏನಾದರೂ ಹೇಳು, ನನಗೆ ಕನ್ನಡ ಮಾತ್ರ ಹೇಳಬೇಡ” ಎನ್ನುತ್ತಾನೆ ನನ್ನ ಮಗ. ಅವನೊಬ್ಬನೇ ಅಲ್ಲ. ಅವನ ಓರಿಗೆಯವರದ್ದೂ ಇದೇ ಕಥೆ.

ಹೋಗಲಿ, ದೂರದ ನನ್ನ ಮಾವನ ಮಗನನ್ನು ಕೇಳಿದೆ. ಅವನೂ ಅದೇ ಹೇಳಿದ. “ನನಗೆ ಕನ್ನಡ ಪತ್ರಿಕೆಯನ್ನೂ ಓದಲು ಬರುವುದಿಲ್ಲ. ಹೇಗೋ ಮಾಡಿ ಹೈಸ್ಕೂಲಿನಲ್ಲಿ ಪಾಸಾದೆ. ನಂತರ ಕನ್ನಡ ಇರಲಿಲ್ಲ.” ಈಗ ಅವನು ಅಮೆರಿಕದಲ್ಲಿರುವ ಎಂಜಿನಿಯರ್. ಇದು ವಾಸ್ತವ.

ಹೀಗಾದರೆ ಕನ್ನಡ ಹೇಗೆ ಉಳಿಯುತ್ತದೆ?

ಹಳ್ಳಿಗಳ ಶಾಲೆಗಳಲ್ಲಿ ಈಗ ಹಿಂದಿ ಮತ್ತು ಇಂಗ್ಲಿಷ್ ಹವಾ. ಕನ್ನಡ ಮಾತನಾಡುವ ಮಕ್ಕಳು ಏನೋ ಅಪರಾಧ ಮಾಡಿದಂತೆ. ಇನ್ನೂ ಹಿಂದುಳಿದವರಂತೆ ನೋಡುತ್ತಾರೆ. ಮನೆಯಲ್ಲಿ ಹಿಂದಿ ಅಥವಾ ಇಂಗ್ಲಿಷ್ ಮಾತನಾಡುವ ಮಕ್ಕಳ ಬಗ್ಗೆ ಪಾಲಕರಿಗೆ ಏನೋ ಒಂದು ನೆಮ್ಮದಿ, ಸಮಾಧಾನ, ಹೆಮ್ಮೆ ಸಹ!

ಹೀಗಿರುವಾಗ ಕನ್ನಡ ಪ್ರೇಮವನ್ನು ಮಕ್ಕಳಲ್ಲಿ ಬೆಳೆಸುವುದು ಹೇಗೆ? ಮೊದಲು ಅದನ್ನು ಬೆಳೆಸಲೇಬೇಕು ಎಂಬ ನಂಬಿಕೆ ಮನೆಯೊಳಗಿಂದ ಆರಂಭವಾಗಬೇಕು. ಮನೆಯಲ್ಲಿ ಇಂಗ್ಲಿಷ್ ಮಾತನಾಡಿದ ಕೂಡಲೇ “ದೊಡ್ಡ ವ್ಯಕ್ತಿ” ಆಗುವ ಕನಸು ನಿಲ್ಲಬೇಕು. ಕನ್ನಡ ಅಮ್ಮನ ಭಾಷೆಯಾಗುತ್ತಲೇ, ಆ ಭಾಷೆ ಕಲಿಸುವ ರೀತಿ ಸುಲಭವಾಗಿರಬೇಕು.

ಇಂತಹ ಪರಿಸರದಲ್ಲೇ ಬೆಳೆದ ನನ್ನ ಮಗು ಮೂರು ವರ್ಷದಾಗಿದ್ದಾಗ ಅಮ್ಮನ ಕುರಿತು ಹಾಡು ಕಟ್ಟಿ ಹಾಡಿತ್ತು. ಅದನ್ನು ನೀವೂ ಇದೇ ಮುಖಪುಟದಲ್ಲಿ ನೋಡಿರಬಹುದು. ಅಂತಹ ಅಪ್ಪಟ ಕನ್ನಡದ ಮಗು, ಹಿಂದಿ ಮತ್ತು ಇಂಗ್ಲಿಷ್ ವಿಡಿಯೊಗಳನ್ನು ನೋಡಿ ಕನ್ನಡ ಮರೆಯಿತು. ಮೈಸೂರಿಗೆ ಬಂದು ಇಲ್ಲಿಯ ಕನ್ನಡ ಕಲಿಯಿತು. ಆದಾಗ್ಯೂ ಶಾಲೆಗೆ ಹೋದರೆ ಕನ್ನಡ ಎಂದರೆ ಮತ್ತೆ ಟಠಡಢಣ!

ತರ್ಕವಿಲ್ಲದ, ಭಾವನಾತ್ಮಕವಾಗಿ “ತನ್ನದು” ಎಂದುಕೊಂಡ ಭಾಷಾ ಶಿಕ್ಷಣ ಇವತ್ತಿನ ದೊಡ್ಡ ಕೊರತೆ. ಈ ಕೊರತೆಯನ್ನು ಮಕ್ಕಳ ಮನಸ್ಸನ್ನು ಅರಿತಿರುವ, ಮಕ್ಕಳ ಹಂತಕ್ಕೆ ಇಳಿದು ಭಾಷೆಯನ್ನು ಗ್ರಹಿಸಬಲ್ಲ ಶಿಕ್ಷಣ ತಜ್ಞರು ಹೊಸದಾಗಿ ಸರಿಪಡಿಸಬೇಕು. ಅದೇ ವೇಳೆ ಒಮ್ಮೆ ಕಲಿತ ಭಾಷೆಯನ್ನು ಬರೆಸಿ, ಓದಿಸಿ ಬೆಳೆಸಬೇಕೇ ಹೊರತು, ಅದದೇ ಪ್ರಶ್ನೋತ್ತರಗಳನ್ನು ಬಾಯಿಪಾಠ ಮಾಡುವ ಗಿಣಿರಾಮರನ್ನು ತಯಾರು ಮಾಡಬಾರದು.

ಭಾಷಾ ಬುದ್ಧಿವಂತಿಕೆ ಚೆನ್ನಾಗಿರುವ ಮಕ್ಕಳಿಗೆ ಬೇರೆ ಭಾಷೆಗಳನ್ನೂ ಪರಿಚಯಿಸಬೇಕು. ಆ ಭಾಷೆಗಳನ್ನು ತನ್ನ ಮಾತೃಭಾಷೆಯ ಮೂಲಕ ಅರಿಯುವ, ಕಲಿಯುವ ಅವಕಾಶಗಳಿರಬೇಕು. ಆಗ ಮಗು ತನ್ನ ಭಾಷೆಯನ್ನು ಹೆಮ್ಮೆಯಿಂದ ರೂಢಿಯಲ್ಲಿಟ್ಟುಕೊಳ್ಳುತ್ತಲೇ, ಬೇರೆ ಭಾಷೆಗಳನ್ನು ಸೌಹಾರ್ದಯುತವಾಗಿ ಸಂಭಾಷಿಸುವುದನ್ನೂ, ಒಡನಾಟವನ್ನೂ ಕಲಿಯುತ್ತದೆ. ಅಂತಹ ಮಕ್ಕಳು ಭಾಷೆಗಳನ್ನು ಬೆಳೆಸುವವರಾಗುತ್ತಾರೆ.

ಇದೇ ಆಗಬೇಕಲ್ಲವೆ ನಿಜವಾದ ಭಾಷಾ ಶಿಕ್ಷಣ?

ಹಾಗಾಗುತ್ತಿದೆಯೇ?

ನಿಮ್ಮ ಅಭಿಪ್ರಾಯವೇನು?

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment