ಮನುಷ್ಯನ ಮನಸ್ಸಿನಷ್ಟು ನಿಗೂಢ ಮತ್ತು ಸಂಕೀರ್ಣವಾದದ್ದು ಮತ್ತೊಂದಿಲ್ಲ. ಮನಸ್ಸನ್ನು ಮರ್ಕಟಕ್ಕೆ ಹೋಲಿಸಿದರು, ಮರೀಚಿಕೆಗೆ ಹೋಲಿಸಿದರು. “ಮನಸ್ಸನ್ನು ನಿಯಂತ್ರಿಸುವವನು ಜಗತ್ತನ್ನೇ ನಿಯಂತ್ರಿಸಬಲ್ಲ” ಎಂಬ ಮಾತು ಕೂಡ ಇದೆ. ಮನಸ್ಸಿನ ನಿಯಂತ್ರಣ ಎಂದಾಗ, ಅದರೊಳಗೆ ಉಳಿದಿರುವ ನೆನಪುಗಳು, ಸಂಬಂಧಗಳು, ನೋವುಗಳು, ಗುರಿಗಳು, ಆಯ್ಕೆಗಳು—ಇವೆಲ್ಲವೂ ಕಣ್ಣ ಮುಂದೆ ಬರುತ್ತವೆ.
ಅದರಲ್ಲೂ ಮನಸ್ಸಿಗೆ ಹಳೆಯ ನೋವುಗಳನ್ನು ಮೆಲುಕು ಹಾಕುವುದು ಒಣಮೀನಿನ ಸಾರಿನ ರುಚಿಯಂತೆ. ಆ ನೋವುಗಳಿಂದ ತನಗೆ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿದಿದ್ದರೂ, “ಈ ಅವಮಾನಗಳೇ, ಈ ನೋವುಗಳೇ ನನ್ನ ಭವಿಷ್ಯದ ಯಶಸ್ಸಿಗೆ ಇಂಧನ” ಎಂದು ಮನಸ್ಸು ತನ್ನನ್ನು ತಾನು ಸಮಾಧಾನಪಡಿಸಿಕೊಳ್ಳುತ್ತದೆ. ಆದರೆ ನಿಜವಾಗಿಯೂ ನೋವುಗಳೇ ಗುರಿ ತಲುಪುವ ಇಂಧನವಾದರೆ, ಗುರಿ ತಲುಪಿದ ಮೇಲಾದರೂ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂಬ ಖಾತರಿ ಇದೆಯೆ?
ಮನಸ್ಸು ವಿಚಿತ್ರ. ಹಳೆಯ ಸಂಬಂಧಗಳು ಮುಗಿದುಹೋದರೂ, ಕಳಚಿಕೊಂಡರೂ, ಅವುಗಳ ನೆನಪುಗಳನ್ನು ಮತ್ತೆ ಮತ್ತೆ ನೆನೆಸಿ ರೋಧಿಸುತ್ತದೆ. ಈ ರೋಧನದಲ್ಲೇ ಅದಕ್ಕೆ ಒಂದು ಮೌನಾನಂದ ಸಿಗುತ್ತದೆ. ಸ್ವಾನುಕಂಪ ಒಮ್ಮೆ ಅಭ್ಯಾಸವಾಗಿ ಬಿಟ್ಟರೆ, ಅದು ಒಣಮೀನಿನ ವಾಸನೆಯಂತೆ ಮನಸ್ಸಿಗೆ ಅಂಟಿಕೊಂಡೇ ಬಿಡುತ್ತದೆ.
ಇದನ್ನೂ ಓದಿ :
ದೋಸೆ, ಚಿತ್ರಾನ್ನ ಮತ್ತು ಆಹಾರದ ಅಸ್ಪೃಶ್ಯತೆ
ಇಲ್ಲಿ ಸತ್ತ ಸಂಬಂಧಗಳನ್ನು ಒಣಮೀನಿಗೆ ಹೋಲಿಸುವುದು ಯಾವುದಾದರೂ ಆಹಾರವನ್ನು ಹೀಗಳೆಯುವುದಕ್ಕಲ್ಲ. ಅರ್ಥ ಒಂದೇ—ಸತ್ತ ಸಂಬಂಧಗಳು ಮತ್ತು ಹಳೆಯ ನೋವುಗಳನ್ನು ಕೂಡ ಒಮ್ಮೆ ಒಣಮೀನಿನಂತೆ ಚೆನ್ನಾಗಿ ಬೇಯಿಸಿ, ಮನತುಂಬ ಅನುಭವಿಸಿ, ಜೀರ್ಣವಾಗಿಸಿ, ಕೊನೆಗೆ ಮಲವೆಂದು ದೂಡಿಬಿಡಬೇಕು. ಆ ವಾಸನೆಯ ಖುಷಿ ಎಷ್ಟೇ ಇದ್ದರೂ ಅದಕ್ಕೊಂದು ಮಿತಿ ಇರಬೇಕು.
ನಾವು ಮನುಷ್ಯರು ಮೀನುಗಳನ್ನು ಪ್ರೀತಿಸುತ್ತೇವೆ—ಅವುಗಳ ಜೀವಂತಿಕೆಗಾಗಿ, ನೀರಿನೊಳಗಿನ ಆಟಕ್ಕಾಗಿ, ಸಂತಾನೋತ್ಪತ್ತಿಯ ಶಕ್ತಿಗಾಗಿ, ಅವುಗಳ ಲವಲವಿಕೆಗೆಗಾಗಿ. ಹಾಗಿದ್ದಾಗ ಬದುಕನ್ನೂ ಅದೇ ರೀತಿಯಲ್ಲಿ ಪ್ರೀತಿಸಬೇಕಲ್ಲವೆ? ವಿಷಾದವೆಂದರೆ, ಬದುಕಿರುವ ನಾಲ್ಕು ಜೀವಂತ ಮೀನಿಗಿಂತ, ಯಾವತ್ತೋ ಸತ್ತ ಒಣಮೀನುಗಳು ನಮಗೆ ಹೆಚ್ಚು ಖುಷಿ ಕೊಡುತ್ತವೆ.
ಒಣಮೀನು ದೇಹಕ್ಕೆ ಶಕ್ತಿಯನ್ನಾದರೂ ಕೊಡುತ್ತದೆ. ಆದರೆ ಹಳೆಯ ನೋವುಗಳು, ಹಳೆಯ ಸಂಬಂಧಗಳು ನಮಗೆ ಶಕ್ತಿ ಕೊಡುತ್ತವೆ ಎಂದು ನಂಬುವ ಕ್ಷಣದಲ್ಲೇ, ನಾವು ವರ್ತಮಾನದ ಸಂತೋಷವನ್ನೂ ಭವಿಷ್ಯದ ಆನಂದವನ್ನೂ ನಿರಾಕರಿಸುತ್ತೇವೆ.
ಭವಿಷ್ಯದ ಸಂತೋಷದ ಕಲ್ಪನೆಯನ್ನೇ ಅನೇಕ ಬಾರಿ ಮನಸ್ಸು ಒಪ್ಪುವುದಿಲ್ಲ. “ಇದು ಹಾಗಾಗಿಬಿಟ್ಟರೆ?”, “ಅದು ಹೀಗಾದರೆ?” ಎಂಬ ಸಾವಿರ ಅನುಮಾನಗಳು ಮನಸ್ಸಿನ ಗೋಡೆಗೆ ಅಪ್ಪಳಿಸುತ್ತವೆ. ಭರವಸೆಯ ನಡುವೆಯೇ ಈಡೇರದ ಕಲ್ಪನೆಗಳು ಸುತ್ತುತ್ತಿರುತ್ತವೆ. ಹೀಗಾದಾಗ ಅಂತರಾತ್ಮದ ಶಕ್ತಿ ಸಾಕಾರಗೊಳ್ಳಬೇಕಾದ ಕ್ಷಣಗಳು ಮುಂದೂಡಲ್ಪಡುತ್ತವೆ. ಒಳಮನಸ್ಸಿನ ಶಕ್ತಿ, ಹೊರಮನಸ್ಸಿನ ಗೊಂದಲವನ್ನು ಭೇದಿಸಲು ಅಶಕ್ತವಾಗುತ್ತದೆ. ಭರವಸೆ, ಭರವಸೆಯಾಗಿಯೇ ಉಳಿದುಬಿಡುತ್ತದೆ.
ಇದನ್ನೂ ಓದಿ:
ಆದ್ದರಿಂದ ನಮ್ಮ ಮನಸ್ಸಿನೊಳಗೆ ಯಾವುದು “ಸತ್ತ ಮೀನು” ಎಂಬುದನ್ನು ಗುರುತಿಸಲು ಕಲಿಯಬೇಕು. ಗುರುತಿಸಿದ ನಂತರ ಅದನ್ನು ಒಮ್ಮೆ ಸಂಪೂರ್ಣವಾಗಿ ಅನುಭವಿಸಬೇಕು. ಬೇಕಾದರೆ ಅಳಬೇಕು, ಕರೆದಾಡಬೇಕು, ಶೋಕಾಚರಣೆ ಮಾಡಬೇಕು. ನಂತರ ತರ್ಪಣ ಬಿಟ್ಟು ಬಿಡಬೇಕು. ಅಲ್ಲಿಗೆ ಒಂದು ಮೀನುಸಾರು ತಿಂದು ಮುಗಿಸಿದ ತೃಪ್ತಿ.
ಅದಾದಮೇಲೆ ಹೊಸ ಹೊಳಪಿನ ಜೀವಂತ ಮೀನನ್ನು ಹೊಸ ಪಾತ್ರೆಯಲ್ಲಿ ಹಾಕಿ ನೋಡುವ ಖುಷಿ ಶುರುವಾಗುತ್ತದೆ.
ಭೂತಕಾಲದ ನೆಲದ ಮೇಲೆ ವರ್ತಮಾನದ ಕರ್ಮಗಳ ಅಡಿಪಾಯ ಹಾಕಿ, ಅದರ ಮೇಲೆ ಭವಿಷ್ಯವನ್ನು ಕಟ್ಟುವುದು—ಇದೇ ಬದುಕಿನ ಅರ್ಥವಲ್ಲವೆ?
ಒಂದು ಸತ್ತ ಒಣಮೀನು ಮತ್ತು ನೀರಿನಲ್ಲಿ ಈಜುತ್ತಿರುವ ಜೀವಂತ ಮೀನು—ಇವೆರಡೂ ಬದುಕಿನ ಬಗ್ಗೆ ನಮಗೆ ಇದೇ ಪಾಠವನ್ನು ಕಲಿಸುತ್ತವೆ.