ದೋಸೆ, ಚಿತ್ರಾನ್ನ ಮತ್ತು ಆಹಾರದ ಅಸ್ಪೃಶ್ಯತೆ

ಆಹಾರದಲ್ಲೂ ಅಸ್ಪೃಶ್ಯತೆ ಇದೆಯೇ? | ದೋಸೆ, ಚಿತ್ರಾನ್ನ ಮತ್ತು ಸಂಸ್ಕೃತಿಯ ಕಥೆ

ಲೋಕೋ ಭಿನ್ನರುಚಿಃ ಎನ್ನುವುದರ ನಿಜ ಅರ್ಥ

ನಾವು ಉತ್ತರ ಕನ್ನಡದ ಹವ್ಯಕರಿಗೆ ದೋಸೆಯೇ ಸರ್ವಸ್ವ. ದೋಸೆ ತಿಂದು ತಿಂದು ಬೇಸರ ಬರದ ಏಕೈಕ ಸಮುದಾಯ ಇದ್ದರೆ ಅದು ನಾವೇ. ಅದು ಬರೇ ಉದ್ದಿನಬೇಳೆ, ಅವಲಕ್ಕಿ, ಮೆಂತೆ ಹಾಕಿ ಮಾಡುವ ದೋಸೆ ಮಾತ್ರವಲ್ಲ. ಸೌತೆಕಾಯಿ, ಮೊಗೆಕಾಯಿ, ಮಂಗಳೂರು ಸೌತೆ, ಕುಂಬಳಕಾಯಿ, ಹಾಲುಗುಂಬಳಕಾಯಿ, ಮೆಂತೆಸೊಪ್ಪು, ತರಕಾರಿ, ಈರುಳ್ಳಿ, ಟೊಮ್ಯಾಟೊ, ಮಸಾಲೆ, ಚಟ್ನಿಪುಡಿ, ಸಿರಿಧಾನ್ಯ, ಪ್ರೊಟೀನ್, ತೆಳ್ಳೆವು, ನೀರುದೋಸೆ ಹೀಗೆ ಹತ್ತು ಹಲವು ದೋಸೆಗಳನ್ನು ಚಟ್ನಿ, ಜೋನಿಬೆಲ್ಲ, ತುಪ್ಪ, ಬೆಣ್ಣೆ, ಚಟ್ನಿಪುಡಿಗಳು, ಪಲ್ಯಗಳು, ಜುಣಕ, ಪಾಯಸ, ಶ್ರೀಖಂಡ ಇವುಗಳೊಂದಿಗೆ ಮೆಲ್ಲುವುದೆಂದರೆ ಭೂಮಿ ಮೇಲಿನ ಸ್ವರ್ಗ ಇಲ್ಲಿಯೇ.

ದೋಸೆ ತಿಂದು ಬೆಳೆದ ಮಗ

ಇಂತಿಪ್ಪ ನಮ್ಮ ಮನೆಯಲ್ಲಿ ದೋಸೆಗೆ ಬರವಿಲ್ಲ. ಈ ನನ್ನ ಮಗನನ್ನು ಹೆತ್ತಿದ್ದು ಬರೀ ದೋಸೆ ತಿಂದೇ. ಅದೂ ಖಾರ ಸ್ವಲ್ಪ ತಿಂದರೂ ಗೊಳ್ಳೆನ್ನುತ್ತಿತ್ತು. ಬರೀ ಜೇನುತುಪ್ಪ, ಬೆಲ್ಲ, ತುಪ್ಪ, ಬೆಣ್ಣೆಯಲ್ಲಿ ಸಪ್ಪೆ ದೋಸೆ ತಿಂದು ಬೇಸರವಾಗದೆ ಈ ಮಗ ಹುಟ್ಟಿದ್ದ.

ಬೆಂಗಳೂರಿನಲ್ಲಿ ಸಹ ಅಪ್ಪ-ಮಗ ಮನೆಯಲ್ಲಿ ಮಾತ್ರವಲ್ಲದೆ ಹೋಟೆಲ್ಲಿಗೆ ಹೋಗಿ ಸಹ ಪ್ರತಿದಿನ ಮಸಾಲೆದೋಸೆ ತಿನ್ನುತ್ತಿದ್ದರು!

ಮೈಸೂರಿನಲ್ಲಿ ಆರಂಭವಾದ ಚಿತ್ರಾನ್ನ ಪ್ರೀತಿ

ಮೈಸೂರಿಗೆ ಬಂದೆವು ನೋಡಿ. ಮೈಸೂರಿನ ಸಂಸ್ಕೃತಿಯೇ ಬೇರೆ. ಒಂದು ದಿನ ನಮ್ಮ ಮನೆಯ ಕೈತೋಟ ಸ್ವಚ್ಛ ಮಾಡಲು ಸಿದ್ಧನನ್ನು ಕರೆದೆ. ಇಷ್ಟವಾಗಬಹುದು ಎಂದು ಚಪಾತಿ, ಪಲ್ಯ ಕೊಟ್ಟೆ. ವಾಕರಿಸಿಕೊಂಡು ತಿಂದ! ಮತ್ತೊಂದು ದಿನ ಅಯ್ಯೋ, ಚಿತ್ರಾನ್ನ ಉಳಿದಿದೆ. ಇದನ್ನು ಹೇಗೆ ಅವನಿಗೆ ಕೊಡೋದು ಎಂದು ಹಿಂಜರಿಯುತ್ತಲೇ ಕೊಟ್ಟೆ. ಚಪ್ಪರಿಸಿಕೊಂಡು ತಿಂದ!

ನನಗೆ ಇದೆಂತದಪ್ಪಾ! ಎಂದು.

ಈ ಊಟವಿದೆಯಲ್ಲಾ, ಲೋಕೋ ಭಿನ್ನರುಚಿಃ ಎನ್ನುವುದಕ್ಕೆ ಮತ್ತೊಂದು ಹೆಸರು.

ಎಣ್ಣೆಯಲ್ಲೂ ಸಂಸ್ಕೃತಿಯ ಭೇದ

ಕಾಲೇಜು ದಿನಗಳಲ್ಲಿ ಕೊಬ್ಬರಿ ಎಣ್ಣೆಯಲ್ಲಿ ಕರಿದ ತಿಂಡಿಗಳು, ಗೊಜ್ಜುಗಳನ್ನು ತಂದರೆ ಗೆಳತಿಯರು ಯಾರೂ ತಿನ್ನುತ್ತಿರಲಿಲ್ಲ.

“ಅಯ್ಯೋ ಕೊಬ್ಬರಿ ಎಣ್ಣೆ ಬೇಡ!”

ನಮ್ಮೂರಿನಲ್ಲಿ ಅಯ್ಯೋ, ಒಳ್ಳೆಣ್ಣೆ! ಅಯ್ಯೋ! ಶೇಂಗಾ ಎಣ್ಣೆ! ಬೇಡ.

ಸುಮ್ಮನೆ ಬೇಡ ಎನ್ನುವುದಲ್ಲ, ಅದಕ್ಕೆ ಮುಖ, ಮೂತಿ, ಕಣ್ಣು ಎಲ್ಲಾ ಸೇರಿಸಿ ಹೇಳುವುದನ್ನು ನೋಡಿದರೆ ತಿನ್ನುವವರೂ ಮತ್ತೊಮ್ಮೆ ತಿನ್ನಬಾರದು ಎನ್ನಿಸಿಬಿಡುತ್ತದೆ. ಎಂತಹ ಹಣೆಬರಹವಪ್ಪ ಈ ಊಟದ್ದು?

ಶಾಲೆಯ ಡಬ್ಬಿಯೊಳಗಿನ ಪ್ರತ್ಯೇಕತೆ

ಸರಿ, ಈಗ ವಿಷಯಕ್ಕೆ ಬರೋಣ.

ನಮ್ಮ ಶಿಶಿರ ಮೈಸೂರಿಗೆ ಬಂದಾಗ ಇನ್ನೂ ಕೊರೊನದ ಎರಡನೇ ಆವೃತ್ತಿಯ ಕಾಲ. ಹಾಗಾಗಿ ಶಾಲೆ ಇರಲಿಲ್ಲ. ನಡೆದರೂ ಎಲ್ಲೋ ಒಂದು ತಿಂಗಳು ಮಾತ್ರ. ನೇರವಾಗಿ ಒಂದನೇ ತರಗತಿ ಪ್ರವೇಶ.

ಇವನು ಸುಮಾರು ಎರಡು-ಮೂರು ತಿಂಗಳು ದೋಸೆ, ಚಪಾತಿ ತೆಗೆದುಕೊಂಡು ಹೋದ. ಆಮೇಲೆ “ನನಗೆ ದೋಸೆ ಬೇಡವೇ ಬೇಡ. ಚಿತ್ರಾನ್ನ ಬೇಕು” ಎಂದು ಹಠ ಮಾಡತೊಡಗಿದ.

ಅಂಗಡಿ ಮುಂದೆ ಬಿಟ್ಟರೆ ಯಾವುದಕ್ಕೂ ಹಠ ಮಾಡದ ಮಗನಿಗೆ ಇದೇನಾಯಿತಪ್ಪ ಎಂದು ನನಗೆ.

ಸರಿಯಪ್ಪ, ಎಂದು ಬೇರೆ ಬೇರೆ ರೀತಿಯ ಚಿತ್ರಾನ್ನ ಮಾಡಿ ಕಳಿಸತೊಡಗಿದೆ. ಡಬ್ಬಿ ಖಾಲಿಯಾಗಿ ಮನೆ ಸೇರತೊಡಗಿತು. ಇಷ್ಟಕ್ಕೂ ದೋಸೆ ಕೊಡುವಾಗಲೂ ಏನೂ ಹಾಗೇ ಬರುತ್ತಿರಲಿಲ್ಲ ಎನ್ನಿ! ಆ ವಿಷಯದಲ್ಲಿ ನಾನು ಪುಣ್ಯವಂತೆ. ಮನೆಯಲ್ಲಿ ಎಲ್ಲರೂ ನನ್ನ ಅಡುಗೆಯನ್ನು ಇಷ್ಟಪಟ್ಟು ತಿನ್ನುತ್ತಾರೆ.

ಚಿತ್ರಾನ್ನದಲ್ಲಿ ನನ್ನ ಪ್ರಯೋಗಗಳು

ಈಗ ನನ್ನ ಕ್ರಿಯೇಟಿವಿಟಿಗೆ ಸವಾಲು.

ಒಂದೇ ರೀತಿಯ ಚಿತ್ರಾನ್ನ ಅವನು ತಿಂದಾನು, ನನಗೆ ಆಗದು. ನನಗೆ ಒಂದೇ ರೀತಿಯ ಅಡುಗೆ ದಿನಾ ತಿಂದರೆ ಸತ್ತೇ ಹೋದೇನು. ಈ ನನ್ನ ಮಗ ಮಾತ್ರ ದಿನಾ ಒಂದೇ ರೀತಿಯ ಚಿತ್ರಾನ್ನವಾದರೂ ಸರಿ, ತಿನ್ನಬಲ್ಲ.

ನನಗೆ ಹೇರಳೆಕಾಯಿ, ಮಾವಿನಕಾಯಿ, ಲಿಂಬೆಹಣ್ಣು, ವಾಟೆಪುಡಿ ಹಾಕಿ ಹುಳಿಯ ಮೂಲ ಬದಲಾಯಿಸಿ ಒಂದಷ್ಟು ದಿನ ಬೋರು ಕಳೆದೆ. ಇನ್ನೊಂದಿಷ್ಟು ದಿನ ಬಟಾಣಿ, ಮೆಂತೆಸೊಪ್ಪು, ಕೊತ್ತಂಬರಿ ಸೊಪ್ಪು, ತರಕಾರಿ, ಗರಂ ಮಸಾಲೆ, ಶೇಂಗಾ, ಪುಟಾಣಿ ಇವುಗಳಲ್ಲಿ ಪ್ರಯೋಗ.

ಒಟ್ಟಿನಲ್ಲಿ ನಾನಾದರೂ ಸರಿ, ಅವನಾದರೂ ಸರಿ ಇವತ್ತಿಗೂ ಚಿತ್ರಾನ್ನ ಮಾಡಿದರೆ ಬೇರೆ ಊಟ ಬೇಡ. ರುಚಿಯಾಗುತ್ತದೆ. ಮಾತ್ರವಲ್ಲ, ಅವನ ಶಾಲೆಯಲ್ಲಿ ಅವನು ಪ್ರತ್ಯೇಕವಾಗುವುದಿಲ್ಲ!

ಆಹಾರದಲ್ಲೂ ಅಸ್ಪೃಶ್ಯತೆ ಇದೆಯೇ?

ಮೊನ್ನೆಯಷ್ಟೇ ಹೇಳಿದ್ದೆನಲ್ಲ, ಅಸ್ಪೃಶ್ಯತೆ, ಪ್ರತ್ಯೇಕ ಮನೋಭಾವ. ಅದೇ ಇದು.

ಆಹಾರದಲ್ಲಿ ಆರಂಭವಾಗುವ ಪ್ರತ್ಯೇಕತೆ, ಒಂಟಿತನ ಇಡೀ ಸಮಾಜವನ್ನು ಬೇರೆ ಬೇರೆ ರೀತಿ ವ್ಯಾಪಿಸುವುದು ಮಾನವ ಸಮುದಾಯದ ದೊಡ್ಡ ದುರಂತ! ಅದರಲ್ಲೂ ಭಾರತದಂತಹ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ.

“ಅಯ್ಯೋ ಶಿಶಿರ, ಇವತ್ತೂ ದೋಸೆನಪ್ಪ!”

ಇಷ್ಟು ಕೇಳುವ ಆ ಮಾತಿನಲ್ಲಿ ಆತ ಇನ್ನೆಂದೂ ದೋಸೆ ಕಣ್ಣೆತ್ತಿ ನೋಡದಾದ ಎನ್ನಬಹುದು.

ಮತ್ತೆ ಮೂಲ ಸಂಸ್ಕೃತಿಯತ್ತ

ಈ ವರ್ಷದ ಬೇಸಿಗೆ ರಜದಲ್ಲಿ ಮೈಸೂರಿನಲ್ಲಿಯೇ ಈಜು ಕಲಿಸಿ, ಯಾವ ಬೇಸಿಗೆ ಶಿಬಿರಗಳಿಗೂ ಕಳಿಸಲಿಲ್ಲ. ಬದಲಿಗೆ ಊರಿಗೆ ಹೋಗುತ್ತೇನೆ ಎಂದ. ಖುಷಿಯಿಂದ ಬಿಟ್ಟು ಬಂದೆವು.

ಎಂಟು ದಿನಗಳ ಕಾಲ ಅಜ್ಜಿಯ ಊಟ ತಿಂದ ಶಿಶಿರ, ಮತ್ತೆ ನಮ್ಮ ಮೂಲ ಸಂಸ್ಕೃತಿಗೆ ಮರಳಿದ. ಈಗ ನಿಧಾನವಾಗಿ ಮನೆಯ ಸಾರು, ಪಲ್ಯ, ಗೊಜ್ಜು, ತಂಬಳಿ ಎಲ್ಲಾ ಹಾಕಿಕೊಂಡು ಥೇಟು ನಮ್ಮಂತೆಯೇ ಊಟ ಕಲಿತಿದ್ದಾನೆ.

ಜನ ಮತ್ತು ಜನರನ್ನು ಇಷ್ಟಪಡುವ ಮಗು ಇದು. ಪಂಕ್ತಿಯಲ್ಲಿ ಕುಳಿತು ಊಟ ಮಾಡುವ ಸಂಸ್ಕೃತಿ ಅವನಿಗೆ ಎಲ್ಲಿಲ್ಲದ ಖುಷಿ.

ಪಂಕ್ತಿ ಊಟದ ಸೌಂದರ್ಯ

ಮೂರು ವರ್ಷದ ಹಿಂದೆ ಸ್ವರ್ಣವಲ್ಲೀ ಮಠಕ್ಕೆ ಹೋಗಿದ್ದೆವು. ಅಲ್ಲಿ ಮಧ್ಯಾಹ್ನ ಮೂರುವರೆಯಾಗಿತ್ತು ಊಟಕ್ಕೆ. ಆದರೂ ಅಲ್ಲಿ ಪಂಕ್ತಿಯಲ್ಲಿ ಕುಳಿತು ಮಾಡಿದ ಊಟ ಇನ್ನೂ ಮರೆತಿಲ್ಲ.

ಊರಿಗೆ ಹೋದರೆ ಸಾಕು, ಅಲ್ಲಿಗೆ ಕರೆದುಕೊಂಡು ಹೋಗು ಎನ್ನುತ್ತಾನೆ.

ಅದಕ್ಕಾಗಿಯೇ ಮೈಸೂರಿನ ಬ್ರಾಹ್ಮಣ ಸಭೆಯವರು ಊಟಕ್ಕೆ ಕರೆದಾಗ ಇಲ್ಲ ಎನ್ನದೆ ಮಗನನ್ನು ಕರೆದುಕೊಂಡು ಹೋಗಿದ್ದೆ. ಯಾವುದೋ ಮದುವೆಗೆ ನನಗೆ ಆಗದಿದ್ದರೂ ಕರೆದೊಯ್ದಿದ್ದೆ.

ಒಂದು ಚೂರು ಖುಷಿ ಪಡದೆ, “ಇದೆಂತದಪ್ಪಾ!” ಎಂದು ಒಟ್ಟು ರಾಶಿ ತಿಂದುಬಂದ.

ಆಹಾರವನ್ನು ತೀರ್ಪು ಮಾಡುವ ಸಮಾಜ

ಯಾಕೆ ಇವನ್ನೆಲ್ಲ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದರೆ, ಇವತ್ತು ಆಹಾರ ಸಂಸ್ಕೃತಿ ವಿಜ್ಞಾನವನ್ನು ಮೂಲೆಗಟ್ಟಿದೆ. ಶ್ರೇಷ್ಠತೆಯ ವ್ಯಸನದಲ್ಲಿ ವ್ಯಕ್ತಿಯ ವ್ಯಕ್ತಿತ್ವ, ಅಸ್ಮಿತೆ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ನಾಶ ಮಾಡುವ ಮೂಲವಾಗಿದೆ.

ನಾವು ನಮ್ಮ ಆಹಾರ ಸಂಸ್ಕೃತಿಯನ್ನು ಉಳಿಸಿಕೊಳ್ಳುತ್ತಲೇ, ಬೇರೆಯವರ ಆಹಾರ ಸಂಸ್ಕೃತಿಯನ್ನು ನಿಕೃಷ್ಟವಾಗಿ ನೋಡುವ ಪರಿಪಾಠವನ್ನು ಬಿಡಬೇಕಾಗಿದೆ.

ತೀರ ಗೌರವ ಕೊಡಲಾಗದಿದ್ದರೂ ಪರವಾಗಿಲ್ಲ. ಆದರೆ ಮುಖ, ಮೂತಿ, ಕಣ್ಣು ಭಾವಗಳಲ್ಲಿ ಎದುರಿರುವ ವ್ಯಕ್ತಿಯ ಆಹಾರದ ಅಭಿರುಚಿಯನ್ನೇ ಕೊಲ್ಲುವುದು ಎಷ್ಟು ಸರಿ?

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment