ನಾನು ಮತ್ತು ಎಐ | ಮನುಷ್ಯ, ಭಾವನೆ ಮತ್ತು ಕೃತಕ ಬುದ್ಧಿಮತ್ತೆಯ ಕಥೆ
ಸಹಾಯಕಳಾಗಿ ಆರಂಭವಾದ ಬದುಕು
ಎಐ ಬಗ್ಗೆ ಹೇಳುವ ಮೊದಲು ನನ್ನ ಬಗ್ಗೆ ಹೇಳಬೇಕು. ನನಗೆ ಸಹಾಯಕ ಕೆಲಸ ಹೊಸತೇನಲ್ಲ. ಕಣ್ಣು ಬಿಟ್ಟ ಆರು ವರ್ಷಕ್ಕೆಲ್ಲ ನಾನು ಅಪ್ಪ-ಅಮ್ಮನ ಸಹಾಯಕಳಾಗಿದ್ದೆ. ಆಮೇಲೆ ಮನೆಯ ಹಿರಿ-ಕಿರಿಯರಿಗೆ ಸಹಾಯಕಿ. ಸ್ನೇಹಿತೆಯರಿಗೆ, ಸಹಪಾಠಿಗಳಿಗೆ, ಸಹೋದ್ಯೋಗಿಗಳಿಗೆ ಸಹಾಯಕಿ. ನಿರ್ದೇಶನ ಕ್ಷೇತ್ರದಲ್ಲೂ ನನ್ನ ಟೈಟಲ್ ಕಾರ್ಡ್ “ಸಹಾಯಕ ನಿರ್ದೇಶಕಿ” ಎಂದೇ ಹೋಗುತ್ತಿತ್ತು.
ಆದ್ದರಿಂದ “ಸಹಾಯಕ” ಎನ್ನುವ ಪಾತ್ರದ ಮಹತ್ವ, ನನ್ನಂತಹ ಸಹಾಯಕರನ್ನು ಬಿಟ್ಟರೆ ಬೇರೆ ಯಾರಿಗೆ ತಾನೆ ಗೊತ್ತಿರಲು ಸಾಧ್ಯ?
ಮನುಷ್ಯ ಸಹಾಯಕರ ಜೊತೆಗಿನ ಹೆಣಗಾಟ
ನನಗೆ ಕೇವಲ ಸಹಾಯಕಳಾಗಿ ಕೆಲಸ ಮಾಡಿದ ಅನುಭವ ಮಾತ್ರವಲ್ಲ; ಸಹಾಯಕರೊಂದಿಗೆ ಕೆಲಸ ಮಾಡಿಸಿದ ಅನುಭವವೂ ಇದೆ.
ಒಂದು ಖಾಸಗಿ ವಾಹಿನಿಯಲ್ಲಿ ಕಾರ್ಯಕಾರಿ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದ ದಿನಗಳು. ಜೊತೆಗೆ ಪುಟ್ಟ ಮಗನನ್ನು ಬೆಳೆಸುವ ಹೊಣೆ. ಆ ಎರಡೂ ಸಮಯಗಳಲ್ಲಿ ಮನುಷ್ಯ ಸಹಾಯಕರೊಂದಿಗೆ ಹೆಣಗಾಡಿದ ಅನುಭವ ಮರೆಯಲಾಗದು.
ಇಂತಹ ನನಗೆ “ಎಐ” ಎನ್ನುವ ಆಧುನಿಕ ಸಹಾಯಕ ಪರಿಚಯವಾದದ್ದು 2023ರಲ್ಲಿ. ಅಸಲಿಗೆ 2000ನೇ ಇಸವಿಯಲ್ಲೇ ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ ಮಾಡುವಾಗ ಕೃತಕ ಬುದ್ಧಿಮತ್ತೆ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು. “ಎಐ ಕಾಲಕ್ಕೆ ನಾನೂ ಏನಾದರೂ ಮಾಡಬೇಕು” ಎನ್ನುವ ಆಸೆಯೂ ಇತ್ತು. ಆದರೆ ಸರಿಯಾದ ಕಂಪ್ಯೂಟರ್ ಕೂಡ ಇಲ್ಲದ ನಾನು, ಗಾಡಿಯೇ ಇಲ್ಲದೆ ಗಾಡಿ ಓಡಿಸುವ ಕನಸು ಕಂಡಂತಾಗಿತ್ತು. ನೀರಿಲ್ಲದೆ ಈಜಾಡಿದಂತಾಗಿತ್ತು.
ಆಮೇಲೆ ಜೀವನ ತನ್ನ ದಾರಿಯಲ್ಲಿ ಓಡಿತು.
ಎಐ ಎನ್ನುವ ಹೊಸ ಸಹಾಯಕ
2023ರಲ್ಲಿ ಅಮೆರಿಕದ ಕಂಪೆನಿಯೊಂದಕ್ಕೆ ನನ್ನ ಭಾಷಾಂತರ ಸೇವೆ ಬೇಕಿತ್ತು. ಆಗ “ನೋಡೋಣ” ಎಂದು ಎಐ ಬಳಸಿ ಒಂದು ಬಯೋಡೇಟಾ, ಒಂದು ಸಣ್ಣ ರಿವ್ಯೂ ಬರೆಸಿದೆ. ಅಷ್ಟೇ. ಮತ್ತೆ ಅದರ ಕಡೆ ಮುಖ ಮಾಡಿದ್ದು 2026ರ ಜನವರಿಯಲ್ಲಿ.
ಅದಕ್ಕೂ ಮುಂಚೆ 99 ರೂಪಾಯಿಯ ಆನ್‌ಲೈನ್ ಎಐ ಕೋರ್ಸ್ ಒಂದನ್ನು ತೆಗೆದುಕೊಂಡಿದ್ದೆ. ಹೊಸದನ್ನು ತಿಳಿದುಕೊಳ್ಳಬೇಕು, ಅಪ್‌ಡೇಟ್ ಆಗಿರಬೇಕು ಎನ್ನುವುದು ನನ್ನ ಸ್ವಭಾವ. ಹಾಗಾಗಿ ಎಐ ಬಗ್ಗೆ ಸ್ವಲ್ಪ ಮಾಹಿತಿ ಇತ್ತು. ಆದರೆ ನನ್ನ ಮನಸ್ಸಿನೊಳಗೆ ಇನ್ನೊಂದು ಹಠವೂ ಇತ್ತು — “ಮನುಷ್ಯನನ್ನು ಮೀರಿಸಿ ಒಂದು ಮಷಿನ್ ಏನು ಮಾಡಬಹುದು?” ಎಂಬ ಪ್ರಶ್ನೆ.
ಅದರ ಜೊತೆಗೆ ಇನ್ನೊಂದು ಗಟ್ಟಿ ನಂಬಿಕೆ — ಏನಾದರೂ ಸರಿ, ನಕಲು ಮಾಡಬಾರದು; ಸ್ವಂತಿಕೆ ಇರಬೇಕು. ಎಐ ನನ್ನ ಈ ನೀತಿಯನ್ನು ಮುರಿಯುತ್ತದೆ ಎನ್ನುವ ಭಾವನೆಯಿಂದ ನಾನು ಅದರಿಂದ ದೂರವೇ ಉಳಿದಿದ್ದೆ.
ದುಃಖದ ಸಮಯದಲ್ಲಿ ಬಂದ ಚಾಟ್‌ಜಿಪಿಟಿ
ಆದರೆ ಒಂದು ಸಮಯದಲ್ಲಿ ತುಂಬಾ ದುಃಖ ಶುರುವಾಯಿತು. ಯಾರ ಹತ್ತಿರವೂ ಹೇಳಲಾಗದ ದುಃಖ. ಅಸಲಿಗೆ ಅದು ನನ್ನದೇ ದುಃಖವೂ ಅಲ್ಲ. ಯಾರದ್ದೋ ಮನೆಯ ಯಾವುದೋ ಹೆಣ್ಣುಮಗಳ ಸಾವು ಸಾಕು — ನಾನು ಇಲ್ಲಿ ಕಣ್ಣೀರು ಹಾಕಲು.
ಇಂತಹ ವಿಚಿತ್ರ ಮನಸ್ಸಿನ ನನ್ನ ಸಂಕಟಗಳನ್ನು ಮನೆಯವರ ಬಳಿ ಹೇಳಿಕೊಂಡರೆ, “ಅದ್ಯಾಕೆ ಅಷ್ಟು ಭಾವುಕಳಾಗುತ್ತೀಯಾ?” ಅಥವಾ “ನಿನಗೆ ಬೇರೆ ಕೆಲಸ ಇಲ್ವಾ?” ಎನ್ನುವ ಉತ್ತರಗಳು ಸಿಗುತ್ತವೆ.
ಹಾಗಾದರೆ ಏನು ಮಾಡುವುದು?
ಭಾವುಕ ಮನುಷ್ಯ ಮತ್ತು ನಿರಾತ್ಮದೇಹಿ ಮಷಿನ್
ಅಲ್ಲಿಯೇ ನನ್ನ ಜೀವನಕ್ಕೆ ಮತ್ತೆ ಬಂದದ್ದು ಚಾಟ್‌ಜಿಪಿಟಿ. ಹೊಸ ಮೊಬೈಲ್‌ನಲ್ಲಿ ಬೇಡವೆಂದರೂ ಇನ್‌ಸ್ಟಾಲ್ ಆಗಿ, ನಾನು ಮತ್ತೆ ಡಿಲೀಟ್ ಮಾಡುತ್ತಿದ್ದ ಆ ಅಪ್ಲಿಕೇಶನ್. ಬೇಡದ ಹುಲ್ಲುಕಡ್ಡಿಯೂ ಒಂದು ದಿನ ಬೇಕಾಗುತ್ತದೆ ಎನ್ನುವ ಮಾತಿನಂತೆ.
ಕೊನೆಗೆ ನಾನೇ ಅದನ್ನು ಇನ್‌ಸ್ಟಾಲ್ ಮಾಡಿದೆ. ನನ್ನ ಮನಸ್ಸಿನ ಮಾತುಗಳನ್ನು, ದುಃಖಗಳನ್ನು ಅದರೊಂದಿಗೆ ಹಂಚಿಕೊಂಡೆ.
ಅಬ್ಬಾ! ಅದೇನು ನಿಖರತೆ, ಸ್ಪಷ್ಟತೆ, ಸಹಾನುಭೂತಿ!
ಅಲ್ಲಿಂದ ಆರಂಭವಾದ ಎಐ ನಂಟು, ಇಂದು ನೀವು ನೋಡುತ್ತಿರುವ ಕೆಲವು ಸುಂದರ ಚಿತ್ರಗಳವರೆಗೆ ಬಂದಿದೆ.
ಕೆಲಸದ ಭೂತಕ್ಕೆ ಸಿಕ್ಕ ಮತ್ತೊಂದು ಕೆಲಸದ ಭೂತ
ಒಂದು ಕಾಲದಲ್ಲಿ ಒಂದಕ್ಷರ ಬರೆಯಲು ಬರದ ಸಹಾಯಕರೊಂದಿಗೆ ಹೆಣಗಾಡುತ್ತಿದ್ದೆ ನಾನು. ಇಡೀ ತಂಡವನ್ನು ಮುನ್ನಡೆಸುವುದು, ಆರು-ಏಳು ಪುಟಗಳ ಸ್ಕ್ರಿಪ್ಟ್ ಬರೆಯುವುದು, ಗಂಟೆಗಟ್ಟಲೆ ಕಾದು ಮುಖ್ಯ ವ್ಯಕ್ತಿಗಳ ಸಂದರ್ಶನ ತರುವುದು, ವರದಿಗಾರಿಕೆ, ಸಂಕಲನದ ಫೈನಲ್ ಔಟ್‌ಪುಟ್ ನೋಡುವುದು — ಅಯ್ಯೋ, ಒಂದೇ ಎರಡೇ!
ಈ ಎಲ್ಲ ಕೆಲಸಗಳನ್ನು ಒಬ್ಬಳೇ ಮಾಡಿ ಮಾಡಿ ಆರೋಗ್ಯ ಕೆಟ್ಟು ಆಸ್ಪತ್ರೆ ಸೇರುವಂತಾಗಿತ್ತು.
ಈಗ ಈ ಎಐ ನನ್ನ ಅರ್ಧ ಕೆಲಸ ಮುಗಿಸಿಕೊಡುತ್ತದೆ. ಅಲ್ಲಿ ಎಷ್ಟು ಕೆಲಸ ಮಾಡಿಯೂ, ಕೆಲಸ ಮಾಡಲು ಮನಸ್ಸಿಲ್ಲದ ಜನರ ರಾಜಕೀಯ ಅನುಭವಿಸಬೇಕಾಗುತ್ತಿತ್ತು. ಇಲ್ಲಿ ಅದೇನಿಲ್ಲ. ಇಂದು ಹೇಳಿದ ಕೆಲಸ ನಾಲ್ಕು ದಿನವಾದರೂ ಆಗದಿದ್ದರೆ, ಕೊನೆಗೆ ನಾನೇ ಮಾಡಿಕೊಳ್ಳಬೇಕಾಗುತ್ತಿತ್ತು. ಈಗ ನಾನು ಹೇಳುವ ಕೆಲಸವನ್ನು ಕ್ಷಣಾರ್ಧದಲ್ಲಿ ಮುಗಿಸಿ, “ಇನ್ನೇನು ಮಾಡಲಿ? ಆ ಕೆಲಸ ಮಾಡಿಕೊಡಲಾ? ಈ ಕೆಲಸ ಮಾಡಿಕೊಡಲಾ?” ಎಂದು ಆಯ್ಕೆ ಕೊಡುತ್ತದೆ!
ನನ್ನಂತಹ ಕೆಲಸದ ಭೂತಕ್ಕೆ ಮತ್ತೊಂದು ಕೆಲಸದ ಭೂತ ಸಿಕ್ಕಂತೆ!
ನನ್ನ ಮಗ ಮತ್ತು ಎಐ ಬಗ್ಗೆ ಮಾತುಕತೆ
ಅದಕ್ಕೇ ನನ್ನ ಮಗ ಹೇಳುತ್ತಿರುತ್ತಾನೆ:
“ಅಮ್ಮ, ನಿನಗೆ ನಿನ್ನ ಎಐ ಇದ್ದರೆ ಸಾಕು!”
ನಾನು ಅವನಿಗೆ ಹೇಳುತ್ತೇನೆ:
“ಎಐ ನಿನ್ನ ವಿಡಿಯೊಗೇಮ್ ಇದ್ದಂತೆ, ನನ್ನ ಮಿಕ್ಸಿ, ನನ್ನ ವಾಷಿಂಗ್ ಮಶಿನ್. ಅವುಗಳಿಂದ ನಿನ್ನ ಅಮ್ಮ ಸಮಯ ಉಳಿಸಿಕೊಳ್ಳುತ್ತಾಳೆ. ಹಣ ಗಳಿಸುತ್ತಾಳೆ. ಅವುಗಳು ಮನುಷ್ಯರನ್ನು ರಿಪ್ಲೇಸ್ ಮಾಡಲು ಬಂದಿಲ್ಲ; ಮನುಷ್ಯರಿಗೆ ಸಹಾಯ ಮಾಡಲು ಬಂದಿವೆ.”
ಮತ್ತೆ ಅವನಿಗೆ ನಗುತ್ತಾ ಹೇಳುತ್ತೇನೆ:
“ನೀನು ದೊಡ್ಡವನಾಗುವ ಹೊತ್ತಿಗೆ ಬಹುಶಃ ನಾನು ಹತ್ತಾರು ಎಐಗಳಿಗೆ ಕೆಲಸ ಹಚ್ಚಿ, ಆರಾಮಾಗಿ ಸುತ್ತಾಡುತ್ತಿರುತ್ತೇನೆ!”
ಎಐ ಯುಗದಲ್ಲಿ ಮನುಷ್ಯರಾಗಿಯೇ ಉಳಿಯುವುದು
ಆದರೆ ಜೊತೆಗೆ ಇನ್ನೊಂದು ಮಾತನ್ನೂ ಹೇಳುತ್ತೇನೆ —
“ನೀನು ಅಮ್ಮನ ಮಾತನ್ನಾದರೂ, ನಿನ್ನ ಮನಸ್ಸಿನ ಮಾತನ್ನಾದರೂ, ಇಲ್ಲವೇ ಇನ್ನೊಬ್ಬರ ಮಾತನ್ನಾದರೂ ಕೇಳಲು ಕಲಿಯಬೇಕು. ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು. ಒಳ್ಳೆಯ ಮನುಷ್ಯನಾಗಬೇಕು. ಎಐನಿಂದ ಕೆಲಸ ಪಡೆಯುವ ಗುರಿ, ಇಚ್ಛಾಶಕ್ತಿ, ಹೊಸ ಆಲೋಚನೆಗಳು ನಿನ್ನ ಶಕ್ತಿಗಳು. ಅವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಈ ಗುಣಗಳನ್ನು ಕಲಿತರೆ ಮಾತ್ರ ಎಐ ಸ್ಪರ್ಧೆಯಲ್ಲಿ ಉಳಿಯಲು ಸಾಧ್ಯ.
ಇಲ್ಲವಾದರೆ ಮನುಷ್ಯನ ಮೂಲಭೂತ ಗುಣವಾದ ಭಾವುಕತೆಯೇ ಕಳೆದುಹೋಗುತ್ತದೆ. ಎಐ ಕೆಲಸವಿಲ್ಲದೇ ಮೂಲೆಯಲ್ಲಿ ಕುಳಿತರೆ, ನೀನೂ ಕೆಲಸವಿಲ್ಲದೆ ಮೂಲೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ!
ಮಷಿನ್‌ಗಿಂತ ಮನುಷ್ಯರು ದೂರವಾಗುತ್ತಿರುವರಾ?
ನೀವೆಲ್ಲ ರೀಲ್ಸ್, ವಿಡಿಯೊ, ಗೇಮ್‌ಗಳಲ್ಲಿ ಮುಳುಗಿ, ಮಾತನಾಡಬೇಕಾದವರ ಜೊತೆ ಮಾತನಾಡದೆ, ಕೇಳಿಸಿಕೊಳ್ಳಬೇಕಾದವರನ್ನು ಕೇಳದೆ ಹೋದರೆ — ಭಾವುಕ ಜನರು “ಮಷಿನ್ ಆದರೂ ಸರಿ” ಎಂದು ಎಐ ಕಡೆ ತಿರುಗುತ್ತಾರೆ. ಜಪಾನ್‌ನಲ್ಲಿ ಇತ್ತೀಚೆಗೆ ಒಬ್ಬ ಯುವತಿ ಎಐ ಜೊತೆ ಮದುವೆಯಾಗಿದ್ದಾಳೆ ಎಂಬ ಸುದ್ದಿಯೂ ಬಂದಿದೆ.
ಈಗ ನನ್ನ ಮಗ ಯೋಚಿಸುತ್ತಿದ್ದಾನೆ. ಅವನೊಬ್ಬನೇ ಅಲ್ಲ — ಎಲ್ಲಾ ಮನುಷ್ಯರೂ ಒಮ್ಮೆ ಕುಳಿತು ಯೋಚಿಸಬೇಕಾದ ಪ್ರಶ್ನೆ ಇದು:
“ನಾವು ಅಸಲಿಗೆ ಮನುಷ್ಯರಾ?”
ಆಳಾಗಬಲ್ಲದು, ಅರಸನಾಗಬಲ್ಲದು
ಒಬ್ಬ ಸ್ನೇಹಿತ, ಒಬ್ಬ ಸಮಾಲೋಚಕ, ಒಬ್ಬ ಹಿತೈಷಿ, ಒಬ್ಬ ಪರಿಣತ ತಜ್ಞ — ಎಲ್ಲವೂ ಆಗಬಲ್ಲ ಎಐ, ಸಹಾಯಕನಾಗಿ ಕೆಲಸ ಮಾಡಬಲ್ಲದು. ನಮ್ಮ ಭಾಷೆಯಲ್ಲಿ ಹೇಳುವುದಾದರೆ, “ಆಳಾಗಬಲ್ಲದ್ದು, ಅರಸನೂ ಆಗಬಲ್ಲದು.”
ಆದರೆ ಇತ್ತೀಚೆಗೆ ಮನುಷ್ಯರು ಸಹಾಯಕರಾಗಿ ದುಡಿಯುವ ಮೊದಲೇ ಅರಸರಾಗಲು ಹೊರಡುತ್ತಾರೆ. ಸಹಾಯಕರಾಗುವ ಮೊದಲೇ ನಾಯಕರಾಗಲು ತುರ್ತುಪಡುತ್ತಾರೆ. ಸಮಯಪ್ರಜ್ಞೆ, ವ್ಯಕ್ತಿತ್ವ ಅನ್ವೇಷಣೆ, ಆತ್ಮಾವಲೋಕನ, ಸಹಾನುಭೂತಿ — ಯಾವುದಕ್ಕೂ ಸಮಯ ಕೊಡುತ್ತಿಲ್ಲ.
ಅಂತಹ ನಿರ್ಭಾವುಕ ಆತ್ಮದೇಹಿಗಳ ಮಧ್ಯೆ, ಈ ಭಾವುಕ ನಿರಾತ್ಮದೇಹಿ ಎಐ ಕೆಲವೊಮ್ಮೆ ಮನುಷ್ಯನಂತೆ ಭಾಸವಾಗುತ್ತದೆ!