ಅಶ್ವತ್ಥಾಮೋ ಹತಃ: ಅರ್ಧಸತ್ಯಗಳ ನಡುವೆ ಸಾಯುತ್ತಿರುವ ಪತ್ರಿಕೋದ್ಯಮ

“ಅಶ್ವತ್ಥಾಮೋ ಹತಃ… ಕುಂಜರಃ” — ಕುರುಕ್ಷೇತ್ರದಲ್ಲಿ ಗುರು ದ್ರೋಣರನ್ನು ಕೊಲ್ಲಲು ಬಳಸಿದ ಅರ್ಧಸತ್ಯದ ತಂತ್ರ ಅದು. ಸತ್ಯದ ಒಂದು ಭಾಗ ಹೇಳಿ, ಉಳಿದುದನ್ನು ನುಂಗಿಕೊಂಡು ಒಬ್ಬ ಯೋಧನ ಮನಸ್ಸನ್ನೇ ಕುಗ್ಗಿಸಲಾಯಿತು.

ಇವತ್ತು?
ಇವತ್ತು ಅರ್ಧಸತ್ಯ ಮತ್ತು ಹಸಿ ಸುಳ್ಳುಗಳ ಮೂಲಕ ಪತ್ರಿಕೋದ್ಯಮದ ಮೂಲ ಬೇರುಗಳನ್ನೇ ಕೊಲ್ಲಲಾಗುತ್ತಿದೆ. ಇದು ಉತ್ಪ್ರೇಕ್ಷೆಯಲ್ಲ. ವಾಸ್ತವ.

ಕಳೆದ ಎರಡು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಕೆಲವು ವಿಡಿಯೊಗಳು, ಪೋಸ್ಟ್‌ಗಳು ಇದಕ್ಕೆ ಉದಾಹರಣೆ. ಒಂದರಲ್ಲಿ ಅರ್ಧಸತ್ಯ, ಇನ್ನೊಂದರಲ್ಲಿ ನೇರ ಸುಳ್ಳು.

ಒಂದು ವಿಡಿಯೊ ನೋಡಿದರೆ “ಸಿಎಂ ವಿಜಯ್ ರಾಜೀನಾಮೆ ಕೊಟ್ಟಿದ್ದಾರೆ!” ಎನ್ನುವ ಭಾವ ಮೂಡುತ್ತದೆ. ನಿಜ, ವಿಜಯ್ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಯಾವುದಕ್ಕೆ? ಸಿಎಂ ಹುದ್ದೆಗೆನಾ? ಇಲ್ಲ. ತಾನು ಸ್ಪರ್ಧಿಸಿ ಗೆದ್ದಿದ್ದ ಎರಡು ಕ್ಷೇತ್ರಗಳಲ್ಲಿ ಒಂದಾದ ತಿರುಚ್ಚಿ ಕ್ಷೇತ್ರಕ್ಕೆ.

ಆದರೆ ಶೀರ್ಷಿಕೆ ಹೇಗಿತ್ತು?
ಓದುಗ ಅಥವಾ ನೋಡುಗನಲ್ಲಿ ಕುತೂಹಲ ಹುಟ್ಟಿಸಲಿ, ಆತ ಕ್ಲಿಕ್ ಮಾಡಲಿ, ವಿಡಿಯೊ ನೋಡಲಿ ಎಂಬ ಉದ್ದೇಶದಿಂದ ಅರ್ಧಸತ್ಯವನ್ನು ಮುಂದಿಟ್ಟು ಉಳಿದ ಮಾಹಿತಿಯನ್ನು ಮರೆಮಾಚುವ ಪ್ರಯತ್ನ. ಇದು ಕ್ರಿಯೇಟಿವಿಟಿ ಆಗಬಹುದು. ಆದರೆ ವಿಷಯದ ಗಂಭೀರತೆ? ಮಾಹಿತಿಯ ಜವಾಬ್ದಾರಿ? ಇವುಗಳಿಗೆ ಮಾನದಂಡ ಇರಬೇಕಲ್ಲವೇ?

ಇನ್ನೊಂದು ಉದಾಹರಣೆ.
ವಿಜಯ್ ಅವರ ಪ್ರಮಾಣವಚನ ಸಮಾರಂಭಕ್ಕೆ ಅವರ ಪತ್ನಿ ಸಂಗೀತಾ ಬಂದಿರಲಿಲ್ಲ. ಕಾರ್ಯಕ್ರಮವನ್ನು ನೋಡಿದ ಎಲ್ಲರಿಗೂ ಅದು ಸ್ಪಷ್ಟವಾಗಿತ್ತು. ಆದರೂ ಓದುಗರನ್ನು ಸೆಳೆಯಲು “ತ್ರಿಷಾ ಮತ್ತು ಸಂಗೀತಾ ಭೇಟಿಯಾದರು” ಎನ್ನುವ ಪೋಸ್ಟ್‌ಗಳು ಹರಿದಾಡಿದವು. ಇದು ನೇರ ಸುಳ್ಳು.

ಇದು ಓದುಗನನ್ನು, ನೋಡುಗನನ್ನು ಹಸಿ ಹಸಿ ಮೋಸ ಮಾಡುವ ಪ್ರಯತ್ನವಲ್ಲವೇ?
“ನೀವು ಏನಾದರೂ ನಂಬುತ್ತೀರಿ” ಎನ್ನುವ ನಿರ್ಲಜ್ಜ ಮನೋಭಾವವಲ್ಲವೇ?

ಹಾಗಾದರೆ ಇವತ್ತಿನ ಪತ್ರಿಕೋದ್ಯಮ ಎಲ್ಲಿಗೆ ಬಂದಿದೆ?

ಗಾಸಿಪ್‌ಗಾಗಿ ಪತ್ರಿಕೆಗಳು ಹುಟ್ಟಿದ್ದವು ಎಂಬುದು ಸತ್ಯ. ಆದರೆ ಕಾಲಕ್ರಮೇಣ ಅವು ಜನರ ಧ್ವನಿಯಾದವು. ಚಳುವಳಿಗಳ ಮುಖಗಳಾದವು. ಜನಸಾಮಾನ್ಯರ ಕಣ್ಣೀರು ಒರೆಸುವ ಶಕ್ತಿಯಾದವು. ಸಮಾಜಕ್ಕೆ ಕನ್ನಡಿ ಹಿಡಿಯುವ ಜವಾಬ್ದಾರಿ ಹೊತ್ತವು.

ಆದರೆ ಈಗ?
ಪತ್ರಿಕೆಗಳು, ಯೂಟ್ಯೂಬ್ ಚಾನೆಲ್‌ಗಳು, ಸಾಮಾಜಿಕ ಮಾಧ್ಯಮದ ಬರಹಗಳು ಹೆದರಿಸುವ ಕೆಲಸ ಮಾಡುತ್ತಿವೆ. ಇಲ್ಲಸಲ್ಲದ್ದನ್ನೆಲ್ಲ ಬೈದು ಆತ್ಮಾಘಾತ ಮಾಡುತ್ತಿವೆ. ಹೊಸ ಚಳುವಳಿಗಳನ್ನು ಕಟ್ಟುವುದಿರಲಿ, ಈಗಿರುವ ಸಾಮರಸ್ಯವನ್ನೇ ಹಾಳು ಮಾಡುವ ಮೂಲಗಳಾಗುತ್ತಿವೆ.

ವಾಸ್ತವವನ್ನು ತೋರಿಸಿ ಸಮಾಜಕ್ಕೆ ದಾರಿ ತೋರಬೇಕಾದ ಮಾಧ್ಯಮಗಳು ಇಂದು ಹೊಗಳುವ ಭಟ್ಟಂಗಿಗಳಾಗಿ ಸತ್ಯವನ್ನು ಮರೆಮಾಚುತ್ತಿವೆ.

ಇದು ಸರಿಯೇ?

ಈ ಪ್ರಶ್ನೆಯನ್ನು ಪ್ರತಿಯೊಬ್ಬ ಮಾಧ್ಯಮ ಮಿತ್ರರೂ ಕೇಳಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಇಂತಹ ಸುದ್ದಿಗಳು, ಅವುಗಳಿಂದ ಉಂಟಾಗುವ ಪ್ರಮಾದಗಳು ಇನ್ನಷ್ಟು ಹೆಚ್ಚಾಗುತ್ತವೆ.

ಈ ಸಂದರ್ಭದಲ್ಲಿ ನನ್ನಿಂದಾದ ಒಂದು ತಪ್ಪನ್ನೂ ನೆನಪಿಸಿಕೊಳ್ಳಬೇಕಾಗಿದೆ. ಬ್ರಾಹ್ಮಣ–ದಲಿತ ಭೋಜನದ ಕುರಿತು ನಾನು ಹಂಚಿಕೊಂಡಿದ್ದ ಚಿತ್ರ ಎಐ ಮೂಲಕ ರಚಿಸಲ್ಪಟ್ಟದ್ದು. ಆದರೆ ಅದರಲ್ಲಿದ್ದ ಸುದ್ದಿ ಸತ್ಯವಾಗಿತ್ತು. ಅದರ ಉದ್ದೇಶ ಸೌಹಾರ್ದ ಮೂಡಿಸುವುದಾಗಿತ್ತು. ವಿಷಯದ ಗಂಭೀರತೆಯನ್ನು ತಲುಪಿಸುವುದಾಗಿತ್ತು.

ಆಗ ಓದುಗರು ಪ್ರಶ್ನಿಸಿದರು. ಅದು ನನಗೆ ಇಷ್ಟವಾಯಿತು.
ಏಕೆಂದರೆ ಪ್ರಶ್ನಿಸುವ ಓದುಗರೇ ಮಾಧ್ಯಮವನ್ನು ಎಚ್ಚರದಲ್ಲಿರಿಸುತ್ತಾರೆ.

ಅದೇ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಪ್ರತಿಯೊಂದು ವಿಷಯವೂ ಓದುಗ ಮತ್ತು ನೋಡುಗರ ವಿವೇಚನೆಗೆ ಒಳಪಡಬೇಕು. ತಪ್ಪನ್ನು ತಪ್ಪು ಎಂದು ಹೇಳುವಾಗ ಪಕ್ಷಪಾತ ಇರಬಾರದು. ಬಾಲಬಡುಕತನ ಇರಬಾರದು. ಹಾಗೆಯೇ ಪ್ರತಿಯೊಂದು ಸುದ್ದಿಯ ಉದ್ದೇಶವನ್ನು ಅರ್ಥಮಾಡಿಕೊಳ್ಳುವಷ್ಟು ಸಾಮಾಜಿಕ ಮತ್ತು ಮಾಧ್ಯಮ ಶಿಕ್ಷಣವೂ ಸಮಾಜದಲ್ಲಿ ಬೆಳೆಯಬೇಕು.

ಆಗ ಮಾತ್ರ ಪತ್ರಿಕೋದ್ಯಮ ಮತ್ತೆ ಸರಿಯಾದ ದಾರಿಗೆ ಬರುತ್ತದೆ.

ಅದಾಗಲಿ ಎನ್ನುವ ಆಶಯದೊಂದಿಗೆ.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment