ಬದುಕು ದೇವರ ಸಹನೆಯ ಸೃಷ್ಟಿ
ಈಜುವಾಗ ನಾನು ನನ್ನ ದೇಹವನ್ನು ನೋಡಿ, ಎಷ್ಟೋ ಸಾರಿ ಅಂದುಕೊಳ್ಳುತ್ತೇನೆ. ಎಂತಹ ಅದ್ಭುತ ದೇಹವಿದು! ಆ ಮಹಾಮಹಿಮ, ಮನುಷ್ಯನ ಒಂದೊಂದು ಅಂಗಾಂಗಗಳನ್ನು, ಜೀವಕೋಶಗಳನ್ನು ಎಷ್ಟು ಸುಂದರವಾಗಿ ರಚಿಸಿದ್ದಾನೆ. ಒಂದೊಂದು ಜೀವಕೋಶದಿಂದ ಹಿಡಿದು ಒಂದೊಂದು ಅಂಗಾಂಗದ ವರೆಗೆ ಈ ಪ್ರಪಂಚವನ್ನು ಕಾಪಾಡುವ ಮತ್ತು ತನ್ನಿಷ್ಟದಂತೆ ನಾಶಮಾಡುವ ಶಕ್ತಿ ಎಷ್ಟು ಸಹನೆಯಿಂದ, ಶ್ರದ್ಧೆಯಿಂದ ಸೃಷ್ಟಿಸಿದೆ. ಅದೇ ರೀತಿ ಜೀವನವೂ.
ಯಾರ ಬದುಕಿಗೂ ತೀರ್ಪು ನೀಡುವ ಮೊದಲು
ಇವತ್ತು ತ್ರಿಶಾ ಮತ್ತು ವಿಜಯ್ ಕತೆಯಾಗಿದ್ದಾರೆ. ಜನ ಅವರಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನನಗೆ ನೆನಪಾಗುತ್ತೆ – ಹಿಂದೊಮ್ಮೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಂದರ್ಶನವೊಂದರಲ್ಲಿ ಹೇಳಿದ್ದರು. ವಿಧಿ! ಅಲ್ಲವೆ ಮತ್ತೆ? ಎಷ್ಟು ಓದಿಕೊಂಡು, ಎಷ್ಟು ಕಷ್ಟಬಿದ್ದ ಹೆಣ್ಣುಮಗಳು. ಸಿನಿಮಾಗಳಲ್ಲಿ ದುಡಿದ ಹಣವೇ ಸಾಕಿತ್ತು. ಆದರೂ ಆಕೆಯ ಜೀವನ ವಿಧಿಲಿಖಿತದಂತೆ ನಡೆಯಿತು. ಯಾರು ಯಾರನ್ನೋ, ಹೇಗೊ ಹೇಗೋ ಗಂಟು ಹಾಕುವ ವಿಧಿ, ಇನ್ನೇನು ಭವಿಷ್ಯಗರ್ಭದಲ್ಲಿ ಇಟ್ಟಿದೆಯೋ ಸ್ವತಃ ಆ ವ್ಯಕ್ತಿಗೇ ಗೊತ್ತಿರುವುದಿಲ್ಲ. ಸುಮ್ಮನೆ ನಾನು ಮಾಡಿದೆ, ನನಗೆ ಹೀಗಾಯಿತು ಎಂದುಕೊಳ್ಳುತ್ತೇವೆ. ಅವರು ಹಾಗೆ ಮಾಡಿದರು, ಹೀಗೆ ಮಾಡಬೇಕಿತ್ತು, ತೀರ್ಮಾನದ ಶರಾ ಬರೆಯುತ್ತೇವೆ. “ನಾನು” ಎನ್ನುವ ಮೂರ್ಖ ಅಹಂಕಾರವನ್ನೂ ಆ ಶಕ್ತಿಯೇ ಕೊಟ್ಟಿರುತ್ತದೆ. ಅದಿಲ್ಲದಿದ್ದರೆ ಆ ಶಕ್ತಿಯ ಆಟಕ್ಕೆ ಮಜವೆಲ್ಲಿ?
ಯಾಕೆಂದರೆ ಜೀವನ ಒಂದು ಆಟ
ಹಾಂ! ಆಟವೆಂದ ಕೂಡಲೇ ಈ ಚದುರಂಗ ಮನಸ್ಸಿಗೆ ಬರುತ್ತದೆ. ನನಗಂತೂ ಆಟಗಳು ಇಷ್ಟ. ಯಾವುದೇ ಆಟವಾದರೂ ಈ ೪೦ರ ಹರೆಯದಲ್ಲೂ ಆಡಬಯಸುತ್ತೇನೆ. ಒಂದು ವರುಷದ ಹಿಂದೆ ನನ್ನ ೩೩ ವರ್ಷದ ತಮ್ಮನೊಂದಿಗೆ ಚಿನ್ನಿ-ದಾಂಡು ಆಡಿದ್ದೆ! ಆಟವೆಂದರೆ ಅವನಿಗೂ ಇಷ್ಟ. ಈಗಲೂ ಕ್ರಿಕೆಟ್, ಬ್ಯಾಡ್ಮಿಂಟನ್ ಎಂದು ಆಡಲು ಹೋಗುತ್ತಾನೆ. ನನಗೆ ಫಾರ್ಮಲ್ ಆದ ಆಟಗಳಿಗಿಂತ ಗ್ರಾಮೀಣ ಆಟಗಳು, ಅದರಲ್ಲೂ ಚಿನ್ನಿದಾಂಡು, ಲಗೋರಿ, ಕಡ್ಡಿಆಟ ಬಹಳ ಇಷ್ಟ. ಇವುಗಳಿಂದಲೇ ನಾನು ಮಗ್ಗಿ, ಲೆಕ್ಕ , ತಂತ್ರಗಳನ್ನು ಕಲಿತಿದ್ದು.
ಬಾಲ್ಯದ ಆಟ ಎಂದಿಗೂ ಜೀವಂತ!
ಇರಲಿ; ಈ ಆಟಗಳನ್ನು ಆಡಿಸಲು ಹಿರಿಯ ಮಕ್ಕಳು ಈಗಿಲ್ಲ. ಹಿರಿ-ಕಿರಿಯರಿಂದ ಮೊಬೈಲ್ ಆಟವೇ ಆದರ್ಶವಾಗಿದೆ. ಅದಕ್ಕಾಗಿ ನಾನು ನನ್ನ ಮಗನೊಂದಿಗೆ ಅವನ ಸ್ನೇಹಿತರನ್ನೂ ಕೂಡಿಕೊಂಡು ಈ ಆಟಗಳನ್ನು ಅವರಿಗೆ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ. ಆದರೆ ನೋಡಿ, ಜನ ಮೂಗು ಮುರಿಯುತ್ತಾರೆ, ಇಷ್ಟು ದೊಡ್ಡವಳಾಗಿ ಆಟವಾಡುತ್ತಾಳೆ ಎಂದು! ಸಣ್ಣವಳಿದ್ದಾಗಿನಿಂದಲೂ ನನಗೊಂದು ಪಟಾಲಮ್ಮು ಇತ್ತು. ನನಗಿಂತ ಎರಡ್ಮೂರು ವರ್ಷ ಚಿಕ್ಕ ಮಕ್ಕಳ ಪಟಾಲಂ. ಅವರನ್ನು ಸೇರಿಸಿಕೊಂಡು ರಸ್ತೆಗಿಳಿದರೆ ಮುಗಿದುಹೋಯಿತು, ಆಟವೇ ಆಟ. ಈ ಪಟಾಲಂ ನಲ್ಲಿ ನನಗಿಂತ ಬಹಳ ಬುದ್ದಿವಂತ ಹುಡುಗನಿದ್ದ. ಅವನೊಂದಿಗೆ ಮೊದಲ ಬಾರಿ ಈ ಚದುರಂಗ ಆಡಿದ ನೆನಪು. ನಾನು ಗೊತ್ತಲ್ಲ, ಅಷ್ಟು ಬುದ್ದಿವಂತೆಯಲ್ಲ. ಕುದುರೆ, ಆನೆ, ಒಂಟೆಗಳನ್ನು ಸರಿಯಾಗಿ ನಡೆಸಲು ಒದ್ದಾಡುತ್ತಿದ್ದೆ.
ಇದನ್ನೂ ಓದಿ :
ಕೃಷ್ಣನೆಂಬ ಪ್ರೀತಿಯ ಸಾಗರ
ಕೃಷ್ಣನ ಚದುರಂಗದ ಆಟ
ಚದುರಂಗ ಆಡಲು ಒಂದು ಸಹನೆ ಬೇಕು, ಶ್ರದ್ಧೆ ಬೇಕು. ಥೇಟು ದೇವರ ಹಾಗೆ. ಇಲ್ಲಿ ದೇವರು ಎಂದರೆ ನನಗೆ ಶ್ರೀಕೃಷ್ಣನ ನೆನಪಾಗುತ್ತದೆ. ಆತನಂತಹ ಚದುರಂಗ ಪ್ರವೀಣ ಈ ಜಗತ್ತಿನಲ್ಲಿ ಯಾರಿದ್ದಾರೆ? ಯಾರ ಮನಸ್ಸಿನಲ್ಲಿ ಯಾವಾಗ ದ್ವೇಷ, ಪ್ರೀತಿ ಏನೇನೆಲ್ಲ ಭಾವನೆಗಳನ್ನು ಹುಟ್ಟಿಸುತ್ತಾನೋ, ಯಾವ ಯಾವ ಕಾಯಿಗಳನ್ನು ಯಾವ ಯಾವಾಗ ಹೊಡೆದುರುಳಿಸುತ್ತಾನೋ ಅವನಿಗೇ ಗೊತ್ತು. ಭೌತಿಕವಾಗಿ ಆತ ಭೂಮಿಯಲ್ಲಿದ್ದಾಗ ನನ್ನಂತೆ ವಯಸ್ಸಾದರೂ ಆಡುತ್ತಾನೆ. ಬಹಳ ವಿಷಯಗಳಲ್ಲಿ ನನ್ನಂತೆ ಇರುವ ಈ ಮಹಾನುಭಾವ ನನಗೆ ಬಹಳ ಇಷ್ಟ. ನಮಗೆ ನಮ್ಮಂತೆ ಎನಿಸುವ ಮಂದಿ ಹೆಚ್ಚು ಇಷ್ಟವಾಗುತ್ತಾರೆ ಅಲ್ಲವೆ?
ಆಟದ ರುಚಿ ಗೆಲುವಿನಲ್ಲಿ ಮಾತ್ರ ಇಲ್ಲ
ಈಗ ಮಗನೊಂದಿಗೆ ಸರಿಯಾಗಿ ಆಡಲು ಕಲಿತಿದ್ದೇನೆ. ನನಗೆ ಆಟದಲ್ಲಿ ಸೋಲುವುದೆಂದರೆ ಇಷ್ಟ. ಗೆಲುವು ಅಹಂಕಾರ ಕೊಡುತ್ತೆ. ಸೋಲು ಖುಷಿ ಕೊಡುತ್ತೆ. ಸುಮ್ಮನೇ ಒಂದು ಕಾಯಿಯಿಂದ ಚೆಕ್ ಮೇಟ್ ಆದಾಗ ಅಮ್ಮನನ್ನು ಸೋಲಿಸಿಬಿಟ್ಟೇ ಎಂದು ಮಗ ಕುಣಿದಾಡುವ ಖುಷಿ, ಹತ್ತರಕಿ, ನೀನು ನೋಡು , ಇನ್ನೂ ಹಿಂದೆಯೇ ಉಳಿದಿರುವೆ, ನಾನು ಮುಂದೆ ಹೋದೆ ಎಂದು ನನ್ನ ಹತ್ತಿರದವರು ಪಡುವ ಖುಷಿ, ಅಖಾಡದಲ್ಲಿ ಕುಸ್ತಿಯಾಡಲು ಬಿಟ್ಟು, ನಾನು ಪ್ರೇಕ್ಷಕರ ಮಧ್ಯದಲ್ಲಿ ಕುಳಿತು ಅನಾಮಿಕಳಾಗಿ ಚಪ್ಪಾಳೆ ತಟ್ಟುವ, ಆಟ ಆನಂದಿಸುವ ಖುಷಿ ಇವನ್ನೆಲ್ಲ ಬಿಡಲು ಸಾಧ್ಯವೆ?
ಆಟದಲ್ಲಿ ಭಾಗಿಯಾಗುವ ಅಹಂಕಾರ ಮಾತ್ರ ನಮ್ಮದು
ಆದರೂ ಕೆಲವೊಮ್ಮೆ “ನಾನು” ಎನ್ನುವ ಅಹಂಕಾರವೂ ಮುಖ್ಯ. ಅದು ನನ್ನ ಜೀವನಾನುಭವ ಕಲಿಸಿದೆ. ಆದ್ದರಿಂದ ಈಗ ಮಗನನ್ನು ಗೆಲ್ಲಿಸಿ ಮಾತ್ರ, ನಾನು ಸೋಲುವ ಖುಷಿಯನ್ನು ಸೀಮಿತಗೊಳಿಸಿದ್ದೇನೆ. ಸೋಲಾದರೂ ನನ್ನ ಆಯ್ಕೆ, ಗೆಲುವಾದರೂ ನನ್ನ ಆಯ್ಕೆ. ನನ್ನ ಮಟ್ಟಿಗೆ ಈ ನನ್ನ ಜೀವನದ ಆಟಗಾರ ಶ್ರೀಕೃಷ್ಣ ನನಗೆ ಹೀಗೆ ಬುದ್ದಿಯನ್ನು ಕೊಟ್ಟಿದ್ದಾನೆ. ನಾನು “ಚದುರಂಗದ ಕಾಯಿಯಂತೆ ನಾನು ನಡೆಯುತ್ತಿದ್ದೇನೆ” ಎಂಬ ಅಹಂನ್ನು ಹೊತ್ತು ಹೆಜ್ಜೆ ಇಡುತ್ತೇನೆ. ಅವನು ಆಟ ಹೇಗೆ ನಡೆಸಬೇಕು, ಹೇಗೆ ಮುಗಿಸಬೇಕು ಎಂದು ಆಟ ಶುರುವಾದಾಗಲೇ ನಿರ್ಧರಿಸಿದ್ದಾನೆ. ಈ ಅರಿವಿನಿಂದ ಆಟ ಮುಗಿದಾಗ ನನಗೆ ಆಟದಲ್ಲಿ ಭಾಗಿಯಾದ ಖುಷಿ ಇರಲಿ, ಮತ್ತೊಂದು ಆಟಕ್ಕೆ ನನ್ನನ್ನು ಸೇರಿಸಿಕೊಳ್ಳಲಿ. ಅದೊಂದು ದೊಡ್ಡ ಆಶೆಯಿದೆ, ಬೇಡಿಕೆಯಿದೆ ಅವನಲ್ಲಿ ನನಗೆ.
ಜೀವನ, ನಾಟಕ ಎಂದ ಶೇಕ್ಸ್ ಫಿಯರ್. ನಾನು ಹೇಳುತ್ತೇನೆ, ಜೀವನ ಆಟ. ನನಗೆ ಮುಕ್ತಿ-ಗಿಕ್ತಿ ಬೇಕಿಲ್ಲ. ಸುಮ್ಮನೆ ಆಟದಲ್ಲಿ ಅವನಿಚ್ಛೆಯಂತೆ ಆಡಬೇಕು. ಆಟದ ಮಜ, ಅವನ ಇರುವಿಕೆಯನ್ನು ಅನುಭವಿಸಬೇಕು.