ಮೊಬೈಲ್ ನೋಡಬೇಡ ಎಂದಿದ್ದಕ್ಕೆ ಕೊಲೆ! ಐಫೋನ್ ಕೊಡಿಸದಿದ್ದಕ್ಕೆ ಆತ್ಮಹತ್ಯೆ!!

ತಪ್ಪಿದ್ದೆಲ್ಲಿ? ಮಕ್ಕಳಲ್ಲಾ, ಪೋಷಕರಲ್ಲಾ, ಅಥವಾ ನಮ್ಮ ಇಡೀ ವ್ಯವಸ್ಥೆಯಲ್ಲಾ?

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ನಡೆದ ಘಟನೆ ಬೆಚ್ಚಿಬೀಳಿಸುವಂತದ್ದು. ಮೊಬೈಲ್ ನೋಡಬೇಡ ಎಂದು ಹೇಳಿದ ಕಾರಣಕ್ಕೆ 17 ವರ್ಷದ ಬಾಲಕ ತನ್ನ ಕುಟುಂಬದ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತಂದೆ ಮತ್ತು ಅಕ್ಕ ಮೃತಪಟ್ಟಿದ್ದಾರೆ. ತಾಯಿ ಹಾಗೂ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಐಫೋನ್ ಕೊಡಿಸದಿದ್ದರೆ ಸಾಯುತ್ತೇನೆ ಎಂದ ಬಾಲಕ. 17ರ ಹರೆಯದ ಹುಡುಗನನ್ನು ಸಾವಿನ ಪ್ರಪಾತದಿಂದ ಕರೆತರಲಾಗದೆ ‘ಮಗನ ಜೊತೆಗೇ’ ಜೀವ ತೆತ್ತ ಹೆತ್ತವರು. ಹೀಗೆ ಇತ್ತೀಚೆಗೆ ಈ ಮೊಬೈಲ್ ವ್ಯಸನ ಮಕ್ಕಳು ಮತ್ತು ಅವರ ಪಾಲಕರಿಗೆ ದೊಡ್ಡ ಸವಾಲಾಗಿದೆ.

ಮೊದಲ ನೋಟಕ್ಕೆ ಇದು ಒಬ್ಬ ಬಾಲಕನ ಅಪರಾಧದಂತೆ ಕಾಣಬಹುದು. ಆದರೆ ಸ್ವಲ್ಪ ಆಳಕ್ಕೆ ಇಳಿದರೆ ಇದು ಕೇವಲ ಒಂದು ಕುಟುಂಬದ ದುರಂತವಲ್ಲ. ಇದು ನಮ್ಮ ಕಾಲದ ಸಾಮಾಜಿಕ, ತಾಂತ್ರಿಕ ಮತ್ತು ಮಾನಸಿಕ ಆರೋಗ್ಯದ ಸಂಕಷ್ಟದ ಎಚ್ಚರಿಕೆಯ ಗಂಟೆ.

ಮೊಬೈಲ್ ಕಸಿದುಕೊಂಡಿದ್ದಕ್ಕೊ ಅಥವಾ ಕೊಡಿಸದೇ ಇದ್ದಿದ್ದಕ್ಕೋ ಒಂದು ಮಗು ತನ್ನ ಜೀವವನ್ನೇ ಕೊಂದುಕೊಳ್ಳಲು ಸಿದ್ಧವಾಗುವುದು ಹೇಗೆ? ಅಥವಾ ತನ್ನ ಕುಟುಂಬದವರನ್ನೇ ಶತ್ರುಗಳಂತೆ ಕಾಣುವುದು ಹೇಗೆ? ಈ ಪ್ರಶ್ನೆಗೆ ಉತ್ತರ ಹುಡುಕಬೇಕಾದರೆ ಮಕ್ಕಳಿಂದ ಆರಂಭಿಸಿ, ಪೋಷಕರು ಮತ್ತು ವ್ಯವಸ್ಥೆಯವರೆಗೆ ನೋಡಬೇಕಾಗುತ್ತದೆ.

ಮಕ್ಕಳ ಜಗತ್ತು ಬದಲಾಗಿದೆ

ಇಂದಿನ ಮಕ್ಕಳು ಹಿಂದಿನ ತಲೆಮಾರುಗಳಿಗಿಂತ ಹೆಚ್ಚು ಸ್ವಾತಂತ್ರ್ಯ ಮತ್ತು ಹೆಚ್ಚು ಮಾಹಿತಿಯ ಜಗತ್ತಿನಲ್ಲಿ ಬೆಳೆದಿದ್ದಾರೆ. ಒಂದು ಕಾಲದಲ್ಲಿ ಮಕ್ಕಳ ಮನೋರಂಜನೆ ಎಂದರೆ ಕಥೆ ಪುಸ್ತಕ, ಕಾಮಿಕ್ಸ್, ರೇಡಿಯೋ, ದೂರದರ್ಶನ ಅಥವಾ ಗಲ್ಲಿಯ ಆಟಗಳು. ನಂತರ ವಿಡಿಯೊ ಗೇಮ್‌ಗಳು ಬಂದವು. ಈಗ ಆ ಜಾಗವನ್ನು ಸಂಪೂರ್ಣವಾಗಿ ಮೊಬೈಲ್ ಹಿಡಿದುಕೊಂಡಿದೆ.

ಇಲ್ಲಿ ಸಮಸ್ಯೆ ಮನೋರಂಜನೆಯಲ್ಲ. ಸಮಸ್ಯೆ ಎಂದರೆ ಮನೋರಂಜನೆ ವ್ಯಸನವಾಗುವುದು. ಒಂದು ಮಗುವಿಗೆ ಮೊಬೈಲ್ ಗೇಮ್ ಆರಂಭದಲ್ಲಿ ಕೇವಲ ಆಟ. ಕೆಲವು ವರ್ಷಗಳ ನಂತರ ಅದು ಅವನ ಸ್ನೇಹಿತ, ಅವನ ಸಾಧನೆಯ ಜಾಗ, ಅವನ ಗುರುತು, ಅವನ ಮಾನಸಿಕ ಆಶ್ರಯ ಮತ್ತು ಕೊನೆಗೆ ಅವನ ಜಗತ್ತೇ ಆಗಿಬಿಡುತ್ತದೆ.

ಆನ್‌ಲೈನ್ ಗೇಮ್‌ಗಳು ಸಮಯ ಕಳೆಯಲು ಮಾಡಿರುವ ಉತ್ಪನ್ನಗಳಲ್ಲ. ಅವು ಸಮಯವನ್ನು ಕಬಳಿಸಲು ಮಾಡಿರುವ ಉತ್ಪನ್ನಗಳು. “ಇನ್ನೊಂದು ಲೆವೆಲ್”, “ಇನ್ನೊಂದು ರಿವಾರ್ಡ್”, “ಇನ್ನೊಂದು ಸ್ಕಿನ್”, “ಇನ್ನೊಂದು ಮಿಷನ್” ಎಂದು ಮೆದುಳಿನಲ್ಲಿರುವ ಡೋಪಮಿನ್ ವ್ಯವಸ್ಥೆಯನ್ನು ಕೆದಕುವಂತೆ ಅವುಗಳನ್ನು ವಿನ್ಯಾಸಗೊಳಿಸಲಾಗುತ್ತದೆ.

ಡ್ರಗ್ಸ್ ವ್ಯಸನದಲ್ಲಿ ಹೇಗೆ ಮೆದುಳು ರಾಸಾಯನಿಕ ಪ್ರತಿಫಲಕ್ಕೆ ಬದ್ಧವಾಗುತ್ತದೆಯೋ, ಇದೇ ಮಾದರಿಯ ಪರಿಣಾಮಗಳನ್ನು ಈಗ ಡಿಜಿಟಲ್ ವ್ಯಸನದಲ್ಲೂ ಅನೇಕ ಅಧ್ಯಯನಗಳು ಸೂಚಿಸುತ್ತಿವೆ. ಮಕ್ಕಳಿಗೆ ಇದು ತಪ್ಪು ಎಂಬ ಅರಿವು ಇರಬಹುದು. ಅದೇ ವೇಳೆ ಅದರಿಂದ ಹೊರಬರುವ ಸಾಮರ್ಥ್ಯ ಅವರಲ್ಲಿ ಇಲ್ಲದಿರಬಹುದು.

ಪೋಷಕರು ಕೂಡ ಬಲಿಪಶುಗಳೇ

ಇಂತಹ ಘಟನೆ ನಡೆದಾಗ ಮೊದಲ ಆರೋಪ ಪೋಷಕರ ಮೇಲೆಯೇ ಬೀಳುತ್ತದೆ. “ಏಕೆ ಮೊಬೈಲ್ ಕೊಟ್ಟರು?” “ಏಕೆ ನಿಯಂತ್ರಿಸಲಿಲ್ಲ?” ಮೊಬೈಲ್ ಕೊಟ್ಟು ಆರಾಮಾಗಿರ್ತಾಳೆ ಆ ಹೆಂಗಸು! ಎನ್ನುವವರಿದ್ದಾರೆ. ಆದರೆ ….

ಈ ವಿಷಚಕ್ರಕ್ಕೆ ಕೊರೊನಾ ಕಾಲ ದೊಡ್ಡ ಕೊಡುಗೆ ನೀಡಿತು. ಡಿಜಿಟಲೈಸೇಶನ್ ಗೆ ವೇಗ ತೆಗೆದುಕೊಂಡ ಹೊತ್ತು ಅದು. ಕೊರೊನಾ ಕಾಲದಲ್ಲಿ ಶಿಕ್ಷಣದ ಹೆಸರಿನಲ್ಲಿ ಲಕ್ಷಾಂತರ ಮಕ್ಕಳ ಕೈಗೆ ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ತಲುಪಿತು. ಮನೆಯಲ್ಲಿ ಕುಳಿತ ಹೆತ್ತವರ ಜೊತೆಗೆ ಮೊಬೈಲ್ ಶಾಲೆಯ ಸಾಧನವಾಗಿ ಮನೆಗೆ ಬಂದಿತು. ಆದರೆ ನಂತರ ಅದು ಮನೋರಂಜನೆಯ ಯಂತ್ರವಾಗಿ ಉಳಿಯಿತು.

ಮಗುವನ್ನು ಐದು ನಿಮಿಷ ಶಾಂತವಾಗಿ ಕುಳ್ಳಿರಿಸಬೇಕೆ? ಮೊಬೈಲ್ ಕೊಡಿ.

ಹೋಟೆಲ್‌ನಲ್ಲಿ ಕಾಯಬೇಕೆ? ಮೊಬೈಲ್ ಕೊಡಿ.

ತಾಯಿ-ತಂದೆ ಮಾತನಾಡಬೇಕೆ? ಮೊಬೈಲ್ ಕೊಡಿ.

ಈ ರೀತಿ ಮೊಬೈಲ್ ನಿಧಾನವಾಗಿ “ಡಿಜಿಟಲ್ ಬೇಬಿಸಿಟ್ಟರ್” ಆಗಿಬಿಟ್ಟಿದೆ. ಅದು ಪೋಷಕರ ನಿರ್ಲಕ್ಷ್ಯವಲ್ಲ. ಅದು ಅನೇಕ ಬಾರಿ ಅವರ ಅಸಹಾಯಕತೆ.

ಇಂದಿನ ಕುಟುಂಬಗಳ ವಾಸ್ತವಿಕತೆಯನ್ನು ನೋಡಿದರೆ ಉತ್ತರ ಅಷ್ಟು ಸರಳವಲ್ಲ. ಇಂದಿನ ಬಹುತೇಕ ಕುಟುಂಬಗಳು ವಿಭಕ್ತ ಕುಟುಂಬಗಳು. ಅಜ್ಜ-ಅಜ್ಜಿ ಇಲ್ಲ, ಸಮಯ ಇಲ್ಲ, ಸಾಮಾಜಿಕ ಬೆಂಬಲ ಇಲ್ಲ. ಒಬ್ಬ ತಂದೆ-ತಾಯಿ ಕೆಲಸ, ಮನೆ, ಆರ್ಥಿಕ ಒತ್ತಡ, ಮಕ್ಕಳ ಶಿಕ್ಷಣ, ತಮ್ಮದೇ ವೈಯಕ್ತಿಕ ಸಮಸ್ಯೆಗಳ ನಡುವೆ ದಿನವನ್ನು ಮುಗಿಸುತ್ತಿದ್ದಾರೆ. ಒಬ್ಬ ತಾಯಿಗೆ ಮಗುವಿನ ಮೊಬೈಲ್ ಒಂದು ಡೇ ಕೇರ್ ಕೆಲಸ ಮಾಡುತ್ತದೆ. ತಂದೆಗೆ ಬೆಳೆಯುತ್ತಿರುವ ಮಗುವಿನ ಗಲಾಟೆಯನ್ನು ತಪ್ಪಿಸುತ್ತದೆ. ಒಂಟಿಯಾಗುತ್ತಿರುವ ಪೋಷಕರು ತಮ್ಮ ಜಗತ್ತಿನಲ್ಲಿ ಮಕ್ಕಳನ್ನು ಪೊರೆಯುವ ಸೂಕ್ತ ದಾರಿ ಕಾಣದಾಗಿದ್ದಾರೆ.

ನಿಜವಾದ ಅಪರಾಧಿ ಯಾರು?

ಒಂದು ಪ್ರಶ್ನೆ ಕೇಳೋಣ. ಒಂದು 10 ವರ್ಷದ ಮಗು ಗಂಟೆಗಳ ಕಾಲ ಒಂದು ಗೇಮ್ ಆಡುತ್ತಿರುತ್ತದೆ. ಆ ಗೇಮ್‌ನ ವಿನ್ಯಾಸ ಯಾರು ಮಾಡಿದ್ದಾರೆ? ಆಟೋಮ್ಯಾಟಿಕ್ ರಿವಾರ್ಡ್ ವ್ಯವಸ್ಥೆ ಯಾರು ರೂಪಿಸಿದ್ದಾರೆ? ಪ್ರತಿ ಐದು ನಿಮಿಷಕ್ಕೊಮ್ಮೆ ಆಟಕ್ಕೆ ಮರಳಿ ಬರಿಸುವ ತಂತ್ರಗಳನ್ನು ಯಾರು ನಿರ್ಮಿಸಿದ್ದಾರೆ? ಮಕ್ಕಳ ಮನೋವಿಜ್ಞಾನವನ್ನು ಅಧ್ಯಯನ ಮಾಡಿ ಅವರ ಗಮನವನ್ನು ಹಿಡಿದುಕೊಳ್ಳುವ ಅಲ್ಗಾರಿದಮ್‌ಗಳನ್ನು ಯಾರು ಬರೆದಿದ್ದಾರೆ?

ಉತ್ತರ ಸ್ಪಷ್ಟ. ಅದು ಬಹುಶಃ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ತಂತ್ರಜ್ಞಾನ ಕಂಪನಿಗಳು. ಅವರಿಗೆ ಮಕ್ಕಳ ಸಮಯವೇ ಉತ್ಪನ್ನ. ಅವರ ಗಮನವೇ ಮಾರುಕಟ್ಟೆ. ಅವರ ವ್ಯಸನವೇ ಆದಾಯ. ಆದ್ದರಿಂದ ಸಮಸ್ಯೆಯನ್ನು ಕೇವಲ ಮಕ್ಕಳು ಅಥವಾ ಪೋಷಕರ ವೈಫಲ್ಯ ಎಂದು ನೋಡುವುದು ಅಪೂರ್ಣ ವಿಶ್ಲೇಷಣೆ. ಇದು ಒಂದು ಉದ್ಯಮದ ಪ್ರಶ್ನೆ. ಗಮನವನ್ನು ಮಾರಾಟ ಮಾಡುವ ಉದ್ಯಮದ ಪ್ರಶ್ನೆ.

ನಾವು ಮದ್ಯಕ್ಕೆ ನಿಯಮ ಮಾಡಿದ್ದೇವೆ, ಮೊಬೈಲ್‌ಗೆ ಯಾಕಿಲ್ಲ?

ಮದ್ಯ ಖರೀದಿಸಲು ವಯೋಮಿತಿ ಇದೆ. ಸಿಗರೇಟಿಗೆ ಎಚ್ಚರಿಕೆ ಇದೆ. ಔಷಧಿಗಳಿಗೆ ನಿಯಂತ್ರಣ ಇದೆ. ಆದರೆ ಮಕ್ಕಳಿಗಾಗಿ ವಿನ್ಯಾಸಗೊಂಡಿರುವ ಡಿಜಿಟಲ್ ಉತ್ಪನ್ನಗಳಿಗೆ ಎಷ್ಟು ನಿಯಂತ್ರಣಗಳಿವೆ? ಗೇಮ್‌ನಲ್ಲಿ ಎಷ್ಟು ಸಮಯ ಕಳೆದಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುವ ಕಡ್ಡಾಯ ನಿಯಮಗಳಿವೆಯೇ? ಅತಿಯಾದ ಬಳಕೆಯ ನಂತರ ಸ್ವಯಂ ವಿರಾಮ ವ್ಯವಸ್ಥೆಗಳಿವೆಯೇ? ಮಕ್ಕಳಿಗೆ ಉದ್ದೇಶಿತ ಮನೋವೈಜ್ಞಾನಿಕ ತಂತ್ರಗಳ ಮೇಲೆ ನಿಷೇಧ ಇದೆಯೇ?

ಬಹುತೇಕ ದೇಶಗಳಲ್ಲಿಯೂ ಈ ಚರ್ಚೆ ಇನ್ನೂ ಆರಂಭದ ಹಂತದಲ್ಲಿದೆ. ಭಾರತದಲ್ಲಿ ಈ ಚರ್ಚೆ ಇನ್ನೂ ಹೆಚ್ಚು ಆರಂಭದಲ್ಲಿದೆ.

ಹಾಗಾದರೆ ಪರಿಹಾರ ಎಲ್ಲಿದೆ?

ಮೊಬೈಲ್ ಸಂಪೂರ್ಣ ನಿಷೇಧ ಪರಿಹಾರವಲ್ಲ. ಯಾಕೆಂದರೆ ಇಂದಿನ ಜಗತ್ತಿನಿಂದ ಮಗುವನ್ನು ಕತ್ತರಿಸಿ ಬೇರ್ಪಡಿಸುವುದು ಸಾಧ್ಯವಿಲ್ಲ. ತಂತ್ರಜ್ಞಾನ ಶತ್ರುವೂ ಅಲ್ಲ. ಆದರೆ ತಂತ್ರಜ್ಞಾನದ ಬಳಕೆಯನ್ನು ಮಾರುಕಟ್ಟೆಯ ಕೈಗೆ ಸಂಪೂರ್ಣವಾಗಿ ಬಿಟ್ಟಿರುವುದು ಅಪಾಯಕಾರಿ. ಹಾಗಾಗಿ ಕೆಲವು ದಿಕ್ಕುಗಳಲ್ಲಿ ಮೊಬೈಲ್ ನಿಯಂತ್ರಣದ ಕುರಿತು ಯೋಚಿಸಬೇಕಾಗಿದೆ.

1. ಡಿಜಿಟಲ್ ಸಾಕ್ಷರತೆ ಶಿಕ್ಷಣದ ಭಾಗವಾಗಬೇಕು

ಮಕ್ಕಳಿಗೆ ಮೊಬೈಲ್ ಬಳಸುವುದನ್ನು ಮಾತ್ರವಲ್ಲ, ಅದರ ಅಪಾಯಗಳನ್ನು ಕಲಿಸಬೇಕು. ವ್ಯಸನ ಹೇಗೆ ಹುಟ್ಟುತ್ತದೆ? ಅಲ್ಗಾರಿದಮ್ ಹೇಗೆ ಕೆಲಸ ಮಾಡುತ್ತದೆ? ಗಮನವನ್ನು ಹೇಗೆ ಕದ್ದುಕೊಳ್ಳಲಾಗುತ್ತದೆ? ಇವು ಶಾಲಾ ಶಿಕ್ಷಣದ ಭಾಗವಾಗಬೇಕು.

2. ಪೋಷಕರಿಗೆ ತರಬೇತಿ ಬೇಕು

ಮಕ್ಕಳಿಗೆ ಪೋಷಕರ ತರಬೇತಿ ಸಿಗುತ್ತದೆ. ಆದರೆ ಡಿಜಿಟಲ್ ಯುಗದ ಪೋಷಕರಿಗೆ ತರಬೇತಿ ಇಲ್ಲ. ಶಾಲೆಗಳು ಮತ್ತು ಸರ್ಕಾರಗಳು ಈ ಕುರಿತು ಮಾರ್ಗದರ್ಶನ ಕಾರ್ಯಕ್ರಮಗಳನ್ನು ನಡೆಸಬೇಕು.

3. ಮಕ್ಕಳಿಗಾಗಿ ಗೇಮಿಂಗ್ ನಿಯಂತ್ರಣ ಅಗತ್ಯ

ಅಪ್ರಾಪ್ತ ವಯಸ್ಕರಿಗೆ ಸಮಯ ಮಿತಿ, ರಿವಾರ್ಡ್ ವ್ಯವಸ್ಥೆಗಳ ಮೇಲಿನ ನಿಯಂತ್ರಣ ಮತ್ತು ಕಡ್ಡಾಯ ಪೋಷಕರ ಮೇಲ್ವಿಚಾರಣೆ ವ್ಯವಸ್ಥೆಗಳು ಬರಬೇಕು.

4. ಮಕ್ಕಳಿಗೆ ಪರ್ಯಾಯ ಜಗತ್ತು ನಿರ್ಮಿಸಬೇಕು

ಕ್ರೀಡೆ, ಕಲೆ, ಸಂಗೀತ, ಓದು, ಸಮುದಾಯ ಚಟುವಟಿಕೆಗಳು ಹೀಗೆ ಹತ್ತು ಹಲವು ವಿಷಯಗಳಲ್ಲಿ ಅವರನ್ನು ತೊಡಗಿಸಬೇಕು. ಮಕ್ಕಳ ಜೀವನದಲ್ಲಿ ಇವು ಕಡಿಮೆಯಾಗುತ್ತಿರುವಷ್ಟು ಮೊಬೈಲ್ ಜಾಗ ಹೆಚ್ಚಾಗುತ್ತದೆ. ಖಾಲಿ ಜಾಗವನ್ನು ಮೊಬೈಲ್ ತುಂಬುತ್ತದೆ.

ಗಂಗಾವತಿಯ ಆ ಬಾಲಕ … ಮಹಾರಾಷ್ಟ್ರದ ಆ ಹುಡುಗ… ಅಪರಾಧಿಗಳೆ? ಕಾನೂನಿನ ದೃಷ್ಟಿಯಲ್ಲಿ ಹೌದು.

ಆದರೆ ಅವನು ಮಾತ್ರವೇ ಅಪರಾಧಿಯೇ? ಈ ಪ್ರಶ್ನೆಗೆ ಉತ್ತರ ಹುಡುಕಲು ನಾವು ಸಿದ್ಧರಿದ್ದೇವೆಯೇ? ಯಾಕೆಂದರೆ ನಾಳೆ ಮತ್ತೊಬ್ಬ ಮಗು ಆತ್ಮಹತ್ಯೆ ಮಾಡಿಕೊಳ್ಳಬಹುದು. ಇನ್ನೊಬ್ಬ ಮನೆ ಬಿಟ್ಟು ಓಡಿಹೋಗಬಹುದು. ಮತ್ತೊಬ್ಬ ಇದೇ ರೀತಿಯ ಹಿಂಸಾಚಾರಕ್ಕೆ ಇಳಿಯಬಹುದು. ಪ್ರತಿ ಘಟನೆಯ ನಂತರ “ಇಂದಿನ ಮಕ್ಕಳು ಹಾಳಾಗಿದ್ದಾರೆ” ಎಂದು ಹೇಳುವುದು ಸುಲಭ.

ಆದರೆ ನಿಜವಾದ ಪ್ರಶ್ನೆ ಬೇರೆ. ಮಕ್ಕಳು ಹಾಳಾಗಿಲ್ಲ. ಅವರ ಗಮನ, ಸಮಯ ಮತ್ತು ಮನಸ್ಸನ್ನು ಹಿಡಿಯಲು ನಿರ್ಮಿಸಲಾದ ವ್ಯವಸ್ಥೆಗಳ ಮುಂದೆ ಅವರು ಸೋಲುತ್ತಿದ್ದಾರೆ. ಅವರನ್ನು ರಕ್ಷಿಸಲು ಕುಟುಂಬಗಳು ಒಂಟಿಯಾಗಿವೆ. ಆ ಕುಟುಂಬಗಳನ್ನು ರಕ್ಷಿಸಲು ಸಮಾಜ ಮತ್ತು ಸರ್ಕಾರ ಇನ್ನೂ ಸಿದ್ಧವಾಗಿಲ್ಲ. ಗಂಗಾವತಿ ಮತ್ತು ಮಹಾರಾಷ್ಟ್ರದ ದುರಂತಗಳು ನಮಗೆ ಹೇಳುತ್ತಿರುವುದು ಇದೇ.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment