ಮಗುವೊಂದು ನಿದ್ದೆ ಮಾಡಿದೆ ಎಂದರೆ ತಾಯಿ ಮಾತ್ರವಲ್ಲ, ಇಡೀ ಮನೆಯವರು ಒಮ್ಮೆ ಉಸಿರು ಬಿಡುವ ಕಾಲ. ಒಂದು ತುಂಟ ಮಗು ಇಡೀ ಮನೆಯವರನ್ನು ಒಂದೇ ಸಮನೆ ತುದಿಗಾಲಲ್ಲಿ ನಿಲ್ಲಿಸುತ್ತದೆ. ಅದು ನಿದ್ದೆ ಮಾಡಿದೆ ಎಂದರೆ ಆಹಾ! ನಿಜವಾಗಿಯೂ ಸಮಾಧಾನ!!
ಒಂದು ಮಗು ಸುಮ್ಮನೆ ಮಲಗಿರುತ್ತದೆ ಎಂದರೂ ಸಮಸ್ಯೆಯೇ. ಎದ್ದು ತುಂಟತನ ಮಾಡುತ್ತದೆ ಎಂದರೂ ಸಮಸ್ಯೆಯೇ. ಮಗುವಿನ ನಿದ್ದೆ ಇವೆರಡಕ್ಕೂ ಸಂಬಂಧಿಸಿದೆ — ನನ್ನ ಪ್ರಕಾರವೂ, ಅಧ್ಯಯನಗಳ ಪ್ರಕಾರವೂ. ಅದು ಹೌದೂ ಇರಬಹುದು.
ನನ್ನ ಈ ಮಗ ಹೊಟ್ಟೆಯಲ್ಲಿದ್ದಾಗ, ೧೨ ವಾರದ ಶಿಶು ಬೆಳಿಗ್ಗೆ ೧೦ ಗಂಟೆಯ ವೇಳೆಗೆ ಹೊಟ್ಟೆಯಲ್ಲಿ ಕಾಲು ಬಡಿದು ಆಟವಾಡುತ್ತಿದ್ದ. ಕೈಕಾಲು ಇನ್ನೂ ಸರಿಯಾಗಿ ಮೂಡಿರದ ಮಗು ಅಷ್ಟು ಚಿಕ್ಕ ಜಾಗದಲ್ಲಿ ಆಟವಾಡುವುದನ್ನು ಕಂಡು, ನಾನು ನನ್ನನ್ನೇ ಮರೆತುಹೋಗಿದ್ದೆ. ಸ್ಕ್ಯಾನಿಂಗ್ ಮಾಡಿದ ವೈದ್ಯರು ನನ್ನ ಸಂಭ್ರಮದಲ್ಲಿ ಭಾಗಿಯಾಗಿದ್ದು, “ಮ್ಯಾಡಂ, ನಿಮ್ಮ ಬಟ್ಟೆ!” ಎಂದು ನೆನಪಿಸಿದ ನರ್ಸ್ ಇನ್ನೂ ನೆನಪಿನಲ್ಲಿದ್ದಾರೆ.
ಆಮೇಲೆ ಯಾವಾಗ ಸ್ಕ್ಯಾನಿಂಗ್ಗೆ ಹೋದರೂ ಈ ಮಹಾರಾಜ ಮಲಗಿರುತ್ತಿದ್ದ. ಮೊದಲ ಆಟದ ಕ್ಷಣಗಳು ಮತ್ತೆ ಸಿಗಲೇ ಇಲ್ಲ. ಹುಟ್ಟಿದ ಮೇಲೆ ಸೇಡು ತೀರಿಸಿಕೊಳ್ಳುವ ಹಾಗೆ ನಿದ್ದೆ ಬಹಳ ಕಡಿಮೆ. “ಹುಟ್ಟಿದ ಮಗು ೧೨–೧೪ ಗಂಟೆ ಮಲಗಿರುತ್ತದೆ” ಎನ್ನುತ್ತಾರೆ. ಅದು ಏನು ಎಂಬುದು ನನಗೆ ಇನ್ನೂ ಗೊತ್ತಿಲ್ಲ!
ಇವನು ರಾತ್ರಿ ೧೦ಕ್ಕೆ ಮಲಗಿದರೆ ಬೆಳಿಗ್ಗೆ ೬ಕ್ಕೆಲ್ಲ ಎದ್ದುಬಿಡುತ್ತಿದ್ದ. ಆಗ ಅವನಿಗೆ ಕೇವಲ ೪–೬ ದಿನಗಳ ವಯಸ್ಸು. ಹಗಲಿನಲ್ಲಿ ನಾಲ್ಕು ಬಾರಿ ೪೦ ನಿಮಿಷಗಳ “ಕೋಳಿ ನಿದ್ದೆ” — ಇಷ್ಟೇ. ಹೀಗೆ ಮೂರು ವರ್ಷಗಳು ಕಳೆದವು.
ನಾನು ನನ್ನ ಮಗನಿಗೆ ಹೆಚ್ಚು ಹೊಡೆದಿದ್ದರೆ, ಅದು ನಿದ್ದೆ ಮಾಡಿಸುವ ಕಾರಣಕ್ಕೇ. ಎರಡು ಏಟು ಹಾಕಿ ಮಲಗಿಸುತ್ತಿದ್ದೆ. ಹಾಡುಗಳು ಮುಗಿದು, ಕಥೆಗಳು ಹೊಸ ರೂಪ ಪಡೆಯುತ್ತಿದ್ದಾಗ ಸಾಕಾಗಿ ಹೋಗುತ್ತಿತ್ತು. ಅವನು ನಿದ್ದೆ ಮಾಡಿದರೆ ನನಗೆ ಆರಾಮ ಎಂಬುದಕ್ಕಿಂತ, ನಿದ್ದೆ ಮಾಡದಿದ್ದರೆ ಅವನ ಮೆದುಳಿನ ಬೆಳವಣಿಗೆ ನಿಲ್ಲಬಹುದು, ದೇಹಾರೋಗ್ಯ ಕೆಡಬಹುದು ಎಂಬ ಆತಂಕವೇ ಹೆಚ್ಚಿತ್ತು.
ಸರಿಯಾಗಿ ನಿದ್ದೆ ಮಾಡಿಸಿದ್ದಕ್ಕೋ, ನಿದ್ದೆಯ ಅಭ್ಯಾಸ ರೂಢಿಸಿದ್ದಕ್ಕೋ ಗೊತ್ತಿಲ್ಲ — ಆದರೆ ಆತನ ಜ್ಞಾಪಕಶಕ್ತಿ ಮತ್ತು ಗ್ರಹಿಕೆ ಎರಡೂ ಚೆನ್ನಾಗಿವೆ. ದೇಹಾರೋಗ್ಯಕ್ಕೂ ತೊಂದರೆ ಇಲ್ಲ.
ಇಷ್ಟೆಲ್ಲ ವಿವರ ಕೊಡುವುದಕ್ಕೆ ಕಾರಣವಿದೆ.
ಇವತ್ತು ಮಕ್ಕಳನ್ನು ನಿದ್ದೆ ಮಾಡಿಸಬೇಕು ಎನ್ನುವ ವಿಷಯವನ್ನೇ ಪಾಲಕರು ಮರೆಯುತ್ತಿದ್ದಾರೆ. ಶಿಶುವಿದ್ದಾಗ ಟಿವಿ, ಮೊಬೈಲ್, ಮಾತು, ಸದ್ದು — ಇವುಗಳ ಕಾಟ. ಬೆಳೆಯುತ್ತಿರುವಾಗ “ಏಳು, ಎದ್ದೇಳು ಬೇಗ!” ಎಂದು ಎಬ್ಬಿಸುತ್ತಾರೆಯೇ ಹೊರತು, “ಬೇಗ ಮಲಗು” ಎನ್ನುವ ಚಿಂತೆ ಕಡಿಮೆ. ಅವೇ ಸಾಕಾಗದೆ, ಮಲಗಿದ ಮೇಲೂ ಗಲಾಟೆ ಮಾಡಿ ಎಬ್ಬಿಸುವ ಅಭ್ಯಾಸವೂ ಇದೆ.
ಬೆಳೆದ ಮೇಲೆ ಮಕ್ಕಳ ಜೀವನ ಇನ್ನೂ ಗೊಂದಲ. ಓದು, ಮನೆಪಾಠ, ಈ ಕ್ಲಾಸ್, ಆ ಕ್ಲಾಸ್… ಮಲಗಲು ಸಮಯವೇ ಇಲ್ಲ.
ಚೆನ್ನಾಗಿ ಊಟ ಮಾಡದ, ಸರಿಯಾಗಿ ನಿದ್ದೆ ಮಾಡದ ಮಗುವನ್ನು ನಾವು ರೇಸ್ನಲ್ಲಿ ನಿಲ್ಲಿಸುತ್ತಿದ್ದೇವೆ. ಎಂತಹ ವಿಪರ್ಯಾಸ! ಆ ಮಗು ಗೆಲ್ಲಲೂಬೇಕು ಎಂಬ ನಿರೀಕ್ಷೆ ಬೇರೆ!
ನಿಜವಾಗಿಯೂ ನಮ್ಮ ಮಾನವ ಸಂಪನ್ಮೂಲ ಅಪಾರವಾಗಿದೆ. ಆದರೆ ಆ ಸಂಪನ್ಮೂಲವನ್ನು ನಾವು ಹೇಗೆ ನೋಡಿಕೊಳ್ಳುತ್ತಿದ್ದೇವೆ ಎಂಬ ಪ್ರಶ್ನೆ ಈಗ ಕೇಳಲೇಬೇಕಾಗಿದೆ. ಯಾವುದೇ ಸಂಪನ್ಮೂಲವನ್ನು ಪಡೆಯುವುದು ಎಷ್ಟು ಕಷ್ಟವೋ, ಅದನ್ನು ಸರಿಯಾಗಿ ನೋಡಿಕೊಳ್ಳುವುದು ಮತ್ತು ಬೆಳೆಸುವುದೂ ಅಷ್ಟೇ ಮುಖ್ಯವಲ್ಲವೇ?