ಪ್ರತಿದಿನ ಬೆಳಿಗ್ಗೆ ಸುಮಾರು ಆರು ಗಂಟೆಗೆ ನನ್ನ ಮಿತ್ರ ಮಾರುತಿಯೊಂದಿಗೆ ಒಂದು ಸುತ್ತು ಮೈಸೂರಿನ ಸಬರ್ಬ್ ಬಸ್ ನಿಲ್ದಾಣದವರೆಗೆ ಹೋಗಿಬರುವ ಅಭ್ಯಾಸವಿದೆ.
ಆ ಬೆಳಗಿನ ದಿನಚರಿಯಲ್ಲಿ ನನಗೆ ಪ್ರತಿದಿನ ಕಾಣಿಸಿಕೊಳ್ಳುವ ಒಬ್ಬ ವ್ಯಕ್ತಿ ಇದ್ದಾರೆ. ಅವರ ಹೆಸರು ತಿಮ್ಮಯ್ಯ.
ಬೆಳಿಗ್ಗೆ ಐದು ಗಂಟೆಗೆ ಎದ್ದು, ಸುಮಾರು ಮೂವತ್ತು ಕೆಜಿ ತೂಕದ ಕಡ್ಡಿ ಪೊರಕೆಯ ಮೆದೆಯನ್ನು ತಲೆಯ ಮೇಲೆ ಹೊತ್ತು ಇಲವಾಲದಿಂದ ಹೊರಡುತ್ತಾರೆ. ನಂತರ ಇಡೀ ಬೆಳಿಗ್ಗೆ ಮೈಸೂರು ನಗರದ ವಿವಿಧ ಕಡೆಗಳಲ್ಲಿ ತಿರುಗುತ್ತಾ ಆ ಮೆದೆಯನ್ನು ಮಾರುತ್ತಾರೆ.
ಎಲ್ಲಾ ಮಾರಾಟ ಮುಗಿಯುವಷ್ಟರಲ್ಲಿ ಮಧ್ಯಾಹ್ನದ ಊಟದ ಸಮಯವಾಗುತ್ತದೆ.ಒಂದು ದಿನಕ್ಕೆ ಸುಮಾರು ₹1300 ಸಂಪಾದಿಸುತ್ತಾರಂತೆ.
ಇದರಲ್ಲಿ ಆಶ್ಚರ್ಯವೇನಿದೆ ಎಂದು ಕೇಳಬಹುದು.ಆಶ್ಚರ್ಯ ಅವರ ವಯಸ್ಸು.
ತಿಮ್ಮಯ್ಯ ಅವರಿಗೆ ಈಗ 82 ವರ್ಷ!ಆ ವಯಸ್ಸಿನಲ್ಲೂ ಅವರು ಯಾವುದೇ ದೂರುಗಳಿಲ್ಲದೆ, ಯಾರ ಮೇಲೂ ಅವಲಂಬಿತರಾಗದೆ, ತಮ್ಮ ದುಡಿಮೆಯಿಂದ ಬದುಕುತ್ತಿದ್ದಾರೆ.
ಅವರನ್ನು ನೋಡಿದಾಗ ಅವರ ಆರೋಗ್ಯದ ಗುಟ್ಟೇನು ಎಂದು ಕೇಳಿದೆ.ಅವರು ನಗುತ್ತಾ ಹೇಳಿದರು, “ಮನೆಯ ಊಟ. ಪ್ರತಿದಿನ ರಾಗಿ ಮುದ್ದೆ ತಪ್ಪದೇ ತಿನ್ನುತ್ತೇನೆ.”ಅಷ್ಟೇ.
ಯಾವ ದುಬಾರಿ ಡಯಟ್ ಇಲ್ಲ.ಯಾವ ಪ್ರೋಟೀನ್ ಪೌಡರ್ ಇಲ್ಲ.ಯಾವ ಅದ್ಭುತ ಸಪ್ಲಿಮೆಂಟ್ಗಳಿಲ್ಲ.ಯಾವ ಜಿಮ್ ಇಲ್ಲ.ಯಾವ ಫಿಟ್ನೆಸ್ ಅಪ್ಲಿಕೇಶನ್ ಇಲ್ಲ.ಇದ್ದದ್ದು ಸರಳ ಜೀವನ, ಕಠಿಣ ಪರಿಶ್ರಮ ಮತ್ತು ನೈಸರ್ಗಿಕ ಆಹಾರ.
ಅಲ್ಲಿಯೇ ನನ್ನೊಳಗೆ ಕೆಲವು ಪ್ರಶ್ನೆಗಳು ಹುಟ್ಟಿದವು.ನಾವು ಇಂದು ಆರೋಗ್ಯಕ್ಕಾಗಿ ಎಷ್ಟೆಲ್ಲಾ ಪ್ರಯೋಗಗಳನ್ನು ಮಾಡುತ್ತಿದ್ದೇವೆ. ಯಾವ ಎಣ್ಣೆ ಒಳ್ಳೆಯದು? ಯಾವ ಡಯಟ್ ಉತ್ತಮ? ಯಾವ ವಿಟಮಿನ್ ಬೇಕು? ಯಾವ ಜಿಮ್ ಸೇರಬೇಕು? ಯಾವ ಯೋಗ, ಯಾವ ಸಪ್ಲಿಮೆಂಟ್?
ಆದರೆ ನಮ್ಮ ದೇಹಕ್ಕೆ ಬೇಕಾಗಿರುವುದು ಬಹುಶಃ ಇದಕ್ಕಿಂತಲೂ ಸರಳವಾದ ಜೀವನಶೈಲಿಯೇ ಇರಬಹುದೇ?ನಾನು ಎಷ್ಟೆಲ್ಲಾ ತಿಂದು, ಎಷ್ಟೆಲ್ಲಾ ಸರ್ಕಸ್ ಮಾಡಿದರೂ ಈ ವಯಸ್ಸಿನವರೆಗೆ ಆರೋಗ್ಯದಿಂದ ಬದುಕುತ್ತೇನಾ?ಬದುಕಿದರೂ 82ನೇ ವಯಸ್ಸಿನಲ್ಲಿ ಮೂವತ್ತು ಕೆಜಿ ಭಾರ ಹೊತ್ತು ಕೆಲಸ ಮಾಡುವಷ್ಟು ಗಟ್ಟಿಯಾಗಿರುತ್ತೇನಾ?
ಈ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ.ಆದರೆ ಒಂದು ಅನುಮಾನ ಮಾತ್ರ ಇದೆ.
ನಾವು ಆರೋಗ್ಯವನ್ನು ಖರೀದಿಸಲು ಪ್ರಯತ್ನಿಸುತ್ತಿದ್ದೇವೆಯೇ ಹೊರತು, ಆರೋಗ್ಯಕರ ಬದುಕನ್ನು ಬದುಕುವುದನ್ನು ಮರೆತಿದ್ದೇವೆಯೇ?
ಬಹುಶಃ ತಪ್ಪು ಆಹಾರದಲ್ಲಷ್ಟೇ ಇಲ್ಲ.ತಪ್ಪು ನಮ್ಮ ಜೀವನಶೈಲಿಯಲ್ಲಿರಬಹುದು.
ತಪ್ಪು ನಮ್ಮ ದೇಹವನ್ನು ಬಳಸುವ ರೀತಿಯಲ್ಲಿರಬಹುದು.
ತಪ್ಪು ನಮ್ಮ ಅನುಕೂಲಗಳಲ್ಲಿರಬಹುದು.
ತಪ್ಪು ನಮ್ಮ ಆದ್ಯತೆಗಳಲ್ಲಿರಬಹುದು.
ತಿಮ್ಮಯ್ಯ ಅವರು ಕೇವಲ ಕಡ್ಡಿ ಪೊರಕೆ ಮಾರುವ ವ್ಯಕ್ತಿಯಲ್ಲ.ಅವರು ಪ್ರತಿದಿನ ಬೆಳಿಗ್ಗೆ ನಮಗೆ ಒಂದು ಪ್ರಶ್ನೆಯನ್ನು ಮಾರುತ್ತಿದ್ದಾರೆ.”ಆರೋಗ್ಯ ಎನ್ನುವುದು ದುಬಾರಿ ಔಷಧಿಗಳಿಂದ ಬರುತ್ತದೆಯೇ, ಅಥವಾ ಸರಳ ಬದುಕಿನಿಂದ?”ಈ ಪ್ರಶ್ನೆಗೆ ಉತ್ತರವನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲೇ ಹುಡುಕಿಕೊಳ್ಳಬೇಕು.