ಭಾರ ಎನ್ನುವುದು ಸುಲಭವಲ್ಲ!

ನಿನ್ನೆ ನಾನು ಹಂಚಿಕೊಂಡಿದ್ದ ಒಂದು ರೀಲ್ ಸಾಕಷ್ಟು ಚರ್ಚೆಗೆ ಕಾರಣವಾಯಿತು.

82 ವರ್ಷದ ತಿಮ್ಮಯ್ಯ ಅವರು ಸುಮಾರು 30 ಕೆಜಿ ಕಡ್ಡಿ ಪೊರಕೆಯ ಹೊರೆ ಹೊತ್ತು ಸಾಗುತ್ತಿರುವ ದೃಶ್ಯ ಹಲವರ ಮನಸ್ಸನ್ನು ಮುಟ್ಟಿತು. ಆದರೆ ಕೆಲವರು, “ಅವರನ್ನು ಹೊರೆ ಇಳಿಸಿ ಮಾತನಾಡಿಸಬಹುದಿತ್ತಲ್ಲ!” ಎಂದೂ ಪ್ರಶ್ನಿಸಿದರು.

ಆ ಪ್ರಶ್ನೆ ಕೇಳಿದವರ ಮೇಲೆ ನನಗೆ ಬೇಸರವಾಗಲಿಲ್ಲ. ಆದರೆ ಒಂದು ವಿಷಯ ಅರ್ಥವಾಯಿತು. ಹೊರೆ ಎಂದರೆ ಏನು ಎಂಬ ಅನುಭವ ಎಲ್ಲರಿಗೂ ಇರುವುದಿಲ್ಲ.ಭಾರವನ್ನು ನೋಡಿದರೆ ಅದರ ತೂಕ ಗೊತ್ತಾಗಬಹುದು. ಆದರೆ ಅದನ್ನು ಹೊತ್ತವರಿಗೆ ಮಾತ್ರ ಅದರ ನಿಜವಾದ ಭಾರ ಅರ್ಥವಾಗುತ್ತದೆ.

ನನಗೆ ಈ ಮಾತು ಯಾಕೆ ಇಷ್ಟು ಸ್ಪಷ್ಟವಾಗಿ ಗೊತ್ತಿದೆ ಎಂದರೆ, ನನ್ನ ಬಾಲ್ಯವೇ ಹೊರೆಗಳ ನಡುವೆ ಬೆಳೆದದ್ದು.

ನಾನು ಒಂದೋ ಎರಡೋ ತರಗತಿಯಲ್ಲಿ ಓದುತ್ತಿದ್ದಾಗ ಅಜ್ಜನ ಮನೆಗೆ ಹೋಗಿದ್ದೆ. ಮಲೆನಾಡಿನ ಹಳ್ಳಿ.

ಅಜ್ಜಿ ಹೇಳಿದರು , “ಪಕ್ಕದ ಮನೆಯಿಂದ ಸ್ವಲ್ಪ ಮಜ್ಜಿಗೆ ತೆಗೆದುಕೊಂಡು ಬಾ.”ನಗರದಂತೆ ಪಕ್ಕದ ಮನೆ ಅಂದರೆ ಗೋಡೆಯ ಆಚೆ ಅಲ್ಲ. ಒಂದು ತೋಟ ದಾಟಬೇಕು. ಎರಡು ಸಣ್ಣ ಕಾಲುವೆಗಳನ್ನು ದಾಟಬೇಕು. Batch ಮೇಲೆ ಇದ್ದ ಕಿರಿದಾದ ಸಂಕಗಳ ಮೇಲೆ ನಡೆದು ಹೋಗಬೇಕು.

ಅರ್ಧ ಲೀಟರ್ ಮಜ್ಜಿಗೆ ತುಂಬಿದ ಸ್ಟೀಲ್ ಗಿಂಡಿಯನ್ನು ಹಿಡಿದು ಬರುತ್ತಿದ್ದೆ. ಒಂದು ಸಂಕದ ಮೇಲೆ ಕಾಲಿಟ್ಟ ತಕ್ಷಣ ಕಾಲಿನ ಕೆಳಗಿನ ಮಣ್ಣು ಜರ್ರನೆ ಜಾರಿತು.ನಾನು ಗಿಂಡಿಯ ಸಮೇತ ಕಾಲುವೆಗೆ ಬಿದ್ದೆ.ಮಜ್ಜಿಗೆ ತಲೆಯ ಮೇಲೆಯೇ ಸುರಿಯಿತು.ಕೈಯಲ್ಲಿ ಖಾಲಿ ಗಿಂಡಿ, ಕಣ್ಣಲ್ಲಿ ನೀರು. ಅಳುತ್ತಾ ಮನೆಗೆ ಹಿಂದಿರುಗಿದ್ದೆ.

ಆ ಘಟನೆ ಇಂದಿಗೂ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.

ಅಮ್ಮನಿಗೂ ತನ್ನದೇ ಅನುಭವಗಳಿದ್ದವು. “ನಾನು ಅನುಭವಿಸಿದ ಕಷ್ಟ ನನ್ನ ಮಗಳು ಅನುಭವಿಸಬಾರದು” ಎಂಬುದು ಪ್ರತಿಯೊಬ್ಬ ತಾಯಿಯ ಮನಸ್ಸು.

ಅವರು ನನ್ನನ್ನು ಪುಟ್ಟ ವಯಸ್ಸಿನಿಂದಲೇ ಭಾರ ಹೊರುವ ಅಭ್ಯಾಸ ಮಾಡಿಸುತ್ತಿದ್ದರು. ಅವುಗಳಲ್ಲಿ ಒಂದು ಕೆಲಸ –

ಮನೆಯ ಹತ್ತಿರದ ಸೊಸೈಟಿಯಿಂದ ಪ್ರತಿದಿನ ಹಾಲು ಮತ್ತು ಪತ್ರಿಕೆ ತರುವುದು. ಒಂದು ದಿನ, ಎಲ್ಲಿಂದಲೋ ಒಂದು ಪುಟ್ಟ ಹೋರಿ ಹಿಂದಿನಿಂದ ಬಂದು ನನ್ನನ್ನು ಗುದ್ದಿ ಕೆಳಗೆ ಬೀಳಿಸಿತು!ಒಂದು ವಾರ ಅಮ್ಮ ನನ್ನ ಬೆನ್ನಿಗೆ ಔಷಧಿ ಹಚ್ಚುತ್ತಿದ್ದರು.ಈಗ ನೆನಪಿಸಿಕೊಂಡರೆ ನಗು ಬರುತ್ತದೆ.ಆಗ ಅಳುವೇ ಬರುತ್ತಿತ್ತು!

ಇನ್ನೊಂದು ಘಟನೆ ನನ್ನ ಜೀವನದಲ್ಲಿ ಇನ್ನೂ ಆಳವಾಗಿ ಉಳಿದಿದೆ.ನಾನು ಆರನೇ ತರಗತಿಯಲ್ಲಿ ಓದುತ್ತಿದ್ದೆ.ಮನೆಯಲ್ಲಿ ಆಲೆಮನೆ ಇತ್ತು. ಒಂದು ಸಂಜೆ ಅಪ್ಪ ತಮ್ಮ ಸ್ನೇಹಿತರೊಂದಿಗೆ ಇಸ್ಪೀಟ್ ಆಡಬೇಕಿತ್ತು. ಅವರು ನನಗೆ ಒಂದು ಕೆಲಸ ಹೇಳಿದರು.

ಸುಮಾರು ಎರಡು ಲೀಟರ್ ಕಬ್ಬಿನ ಹಾಲನ್ನು ಅಪ್ಪನ ಅಣ್ಣನ ಮನೆಗೆ ಕೊಡಬೇಕು. ಅಲ್ಲಿಂದ ಇಸ್ಪೀಟ್ ಪಟ್ಟು ತೆಗೆದುಕೊಂಡು ಮರಳಿ ಬರಬೇಕು.ಕೈಯಲ್ಲಿ ಕಬ್ಬಿನ ಹಾಲಿನ ಕ್ಯಾನ್.ಮುಂದೆ ಬಿದಿರಿನ ಕಿರಿದಾದ ಸಂಕ.ನಾನು ಸಂಕದ ಮೇಲೆ ಕಾಲಿಟ್ಟೆ.ಆ ಕ್ಷಣದಲ್ಲೇ ಎರಡೂ ಬಿದಿರುಗಳು ಎರಡು ದಿಕ್ಕಿಗೆ ಸರಿದವು.ನಾನು ಸುಮಾರು ಆರು ಅಡಿ ಆಳದ ಕಾಲುವೆಗೆ ಬೀಳಬೇಕಾಗಿತ್ತು.ಅದೃಷ್ಟವಶಾತ್, ಒಂದು ಬಿದಿರಿನ ಮೇಲೆಯೇ ಸಿಕ್ಕಿಕೊಂಡೆ.

ದೈಹಿಕ ಗಾಯಗಳು ಕೆಲವು ದಿನಗಳಲ್ಲಿ ಗುಣವಾದವು.ಆದರೆ ಆ ಬಿದ್ದುಕೊಳ್ಳುವಾಗ ಆದ ಆಘಾತವನ್ನು ನನ್ನ ದೇಹ ಸಂಪೂರ್ಣವಾಗಿ ಮರೆಯಲಿಲ್ಲ.ಇಂದು ನನ್ನ ಮೊದಲ ಮಗುವಿನ ಜನನದ ಸಮಯದಲ್ಲಿ ವೈದ್ಯರು ಸಿಸೇರಿಯನ್ ಮಾಡಬೇಕಾಯಿತು. ಕಾರಣಗಳಲ್ಲಿ ಒಂದು, ನನ್ನ ದೇಹದ ಆ ಹಳೆಯ ಗಾಯಗಳ ಪರಿಣಾಮವೂ ಇರಬಹುದೆಂಬ ಅನುಮಾನವನ್ನು ನಾನು ಹಲವು ಬಾರಿ ಯೋಚಿಸಿದ್ದೇನೆ.

ಜೀವನದಲ್ಲಿ ನಾನು ಹೊತ್ತ ಭಾರಗಳು ಇವುಗಳಷ್ಟೇ ಅಲ್ಲ.ಹಲಸಿನಕಾಯಿ ಹೊತ್ತಿದ್ದೇನೆ.ಹಾಲಿನ ಕ್ಯಾನ್ ಹೊತ್ತಿದ್ದೇನೆ.ಅಕ್ಕಿಯ ಚೀಲ ಹೊತ್ತಿದ್ದೇನೆ.ಕಟ್ಟಿಗೆಯ ಹೊರೆ ಹೊತ್ತಿದ್ದೇನೆ.ನೀರಿನ ಕ್ಯಾನ್ ಹೊತ್ತಿದ್ದೇನೆ.ಅದು ಒಂದು ದಿನದ ಅನುಭವಗಳಲ್ಲ.ವರ್ಷಗಳ ಕಾಲ ಬದುಕಿನ ಭಾಗವಾಗಿದ್ದ ಕೆಲಸಗಳು.

ಆದ್ದರಿಂದಲೇ, 82 ವರ್ಷದ ತಿಮ್ಮಯ್ಯ ಅವರು ಹೊರೆ ಹೊತ್ತು ನಿಂತಿದ್ದಾಗ ನಾನು ಅವರನ್ನು ಮಾತನಾಡಿಸಲು ಅವರ ಹೊರೆ ಇಳಿಸಲಿಲ್ಲ.ಏಕೆಂದರೆ ಹೊರೆ ಹೊತ್ತು ನಿಲ್ಲುವುದಕ್ಕಿಂತ, ಅದನ್ನು ತಲೆಯಿಂದ ಇಳಿಸುವುದು ಮತ್ತು ಮತ್ತೆ ಏರಿಸುವುದೇ ಹೆಚ್ಚು ಕಷ್ಟ ಎಂಬುದು ನನಗೆ ಗೊತ್ತು.

ಅದಕ್ಕೆ ಇಬ್ಬರ ಸಹಾಯ ಬೇಕಾಗಬಹುದು.ಸ್ವಲ್ಪ ಬ್ಯಾಲೆನ್ಸ್ ತಪ್ಪಿದರೂ ಸಾಕು.ಹೊರುವವರಿಗೂ, ಹೊರೆ ಏರಿಸುವವರಿಗೂ ಸೊಂಟ, ಬೆನ್ನು, ಕುತ್ತಿಗೆಗಳಿಗೆ ತೀವ್ರ ಪೆಟ್ಟು ಬೀಳಬಹುದು.ದುರ್ಬಲ ದೇಹವಾಗಿದ್ದರೆ ಮೂಳೆ ಮುರಿಯುವ ಅಪಾಯವೂ ಇರುತ್ತದೆ.

ಅನುಭವವಿಲ್ಲದವರಿಗೆ ಇದು ಸಣ್ಣ ವಿಷಯವಾಗಿ ಕಾಣಬಹುದು.ಆದರೆ ಅನುಭವವೇ ಜೀವನದ ದೊಡ್ಡ ವಿಶ್ವವಿದ್ಯಾಲಯ.ಅದರಲ್ಲೇ ಕಲಿತ ಪಾಠಗಳು ಪುಸ್ತಕಗಳಲ್ಲಿ ಸಿಗುವುದಿಲ್ಲ.

ಆದ್ದರಿಂದ ಯಾರಾದರೂ ಸುಲಭವಾಗಿ, “ಹೊರೆ ಇಳಿಸಿ ಮಾತನಾಡಿಸಬೇಕಿತ್ತಲ್ಲ!” ಎಂದು ಹೇಳಿದಾಗ ನನಗೆ ಕೋಪ ಬರುವುದಿಲ್ಲ.ಕರುಣೆ ಬರುತ್ತದೆ.ಏಕೆಂದರೆ ಅವರು ಹೊರೆ ನೋಡಿದ್ದಾರೆ.ಆದರೆ ಭಾರದ ಅರ್ಥವನ್ನು ಇನ್ನೂ ಅನುಭವಿಸಿಲ್ಲ.

ಕೆಲವು ಭಾರಗಳು ತಲೆಯ ಮೇಲಿರುತ್ತವೆ.ಕೆಲವು ಭಾರಗಳು ಭುಜಗಳ ಮೇಲಿರುತ್ತವೆ.ಇನ್ನೂ ಕೆಲವು ಭಾರಗಳು ಮನಸ್ಸಿನೊಳಗೆ ಇಡೀ ಜೀವನವನ್ನೇ ಜೊತೆಯಾಗಿರುತ್ತವೆ.ಅವುಗಳ ತೂಕವನ್ನು ಅಳೆಯುವ ತಕ್ಕಡಿ ಇನ್ನೂ ಯಾರೂ ಕಂಡುಹಿಡಿದಿಲ್ಲ.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment