ವಯಸ್ಸು ಮತ್ತು ಸ್ವಾಭಿಮಾನ: ‘ಅಯ್ಯೋ ಪಾಪ’ ಎನ್ನುವ ಮಾತಿನ ಹಿಂದಿನ ಸತ್ಯ

82 ವರ್ಷದ ತಿಮ್ಮಯ್ಯ ಅವರ ಬಗ್ಗೆ ನಾನು ಬರೆದ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದವು. ಹೆಚ್ಚಿನವರು ಅವರ ಪರಿಶ್ರಮವನ್ನು ಮೆಚ್ಚಿದರು. ಆದರೆ ಕೆಲವು ಪ್ರತಿಕ್ರಿಯೆಗಳು ನನ್ನನ್ನು ಹೆಚ್ಚು ಯೋಚಿಸುವಂತೆ ಮಾಡಿದವು. “ಅಯ್ಯೋ ಪಾಪ… ಈ ವಯಸ್ಸಿನಲ್ಲೂ ಇನ್ನೂ ದುಡಿಯುತ್ತಿದ್ದಾರಲ್ಲ!” ಎಂಬ ಮಾತು ಹಲವರಿಂದ ಕೇಳಿಬಂತು.

ಈ ಒಂದು ಮಾತು ನನಗೆ ಒಪ್ಪುವುದಿಲ್ಲ. ಯಾಕೆಂದರೆ ಈ ಮಾತಿನಲ್ಲಿ ಕಾಳಜಿ ಇರಬಹುದು, ಸಹಾನುಭೂತಿ ಇರಬಹುದು. ಆದರೆ ಅದರೊಳಗೆ ಅರಿವಿಲ್ಲದೆ ಒಬ್ಬ ವ್ಯಕ್ತಿಯ ಆತ್ಮಸ್ಥೈರ್ಯ ಮತ್ತು ಆತ್ಮಗೌರವವನ್ನು ಕುಗ್ಗಿಸುವ ಶಕ್ತಿಯೂ ಅಡಗಿದೆ. ಕೆಲಸ ಮಾಡುತ್ತಿರುವ ವ್ಯಕ್ತಿಯನ್ನು ಅವರ ಪರಿಶ್ರಮಕ್ಕಿಂತ ಮೊದಲು ಅವರ ವಯಸ್ಸಿನ ಆಧಾರದ ಮೇಲೆ ನೋಡುವ ದೃಷ್ಟಿಯೇ ನನಗೆ ಪ್ರಶ್ನೆಯಾಗುತ್ತದೆ.

ತಿಮ್ಮಯ್ಯ ಅವರನ್ನು ನಾನು ನೋಡಿದಾಗ ನನಗೆ ಅವರ ವಯಸ್ಸು ಕಾಣಿಸಲಿಲ್ಲ. ಅವರ ಆತ್ಮವಿಶ್ವಾಸ ಕಾಣಿಸಿತು. ಯಾರ ಮೇಲೂ ಅವಲಂಬಿತರಾಗದೆ ತಮ್ಮ ದುಡಿಮೆಯಿಂದ ಬದುಕುತ್ತಿರುವ ಸ್ವಾಭಿಮಾನ ಕಾಣಿಸಿತು. ತಮ್ಮ ಬದುಕಿನ ಜವಾಬ್ದಾರಿಯನ್ನು ತಾವೇ ಹೊತ್ತಿರುವ ವ್ಯಕ್ತಿಯ ಗೌರವ ಕಾಣಿಸಿತು. ಆ ಗೌರವದ ಮುಂದೆ “ಅಯ್ಯೋ ಪಾಪ” ಎಂಬ ಮಾತು ತುಂಬಾ ಚಿಕ್ಕದಾಗಿ ಕಾಣಿಸಿತು.

ವಯಸ್ಸಾದ ಮಾತ್ರಕ್ಕೆ ಕೆಲಸ ಮಾಡಬಾರದು ಎನ್ನುವುದನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಏಕೆಂದರೆ ಕೆಲಸ ಎನ್ನುವುದು ಕೇವಲ ಹೊಟ್ಟೆಪಾಡಿಗಾಗಿ ಮಾಡುವ ಕ್ರಿಯೆಯಲ್ಲ. ಅದು ನಮ್ಮ ಅಸ್ತಿತ್ವದ ಒಂದು ಭಾಗ. ಬೆಳಿಗ್ಗೆ ಎದ್ದೇಳಲು ಒಂದು ಕಾರಣ. ನಾವು ಇನ್ನೂ ಸಮಾಜಕ್ಕೆ ಉಪಯೋಗವಾಗುತ್ತಿದ್ದೇವೆ ಎನ್ನುವ ಆತ್ಮತೃಪ್ತಿ. ಜೀವನಕ್ಕೆ ಅರ್ಥ ಕೊಡುವ ಒಂದು ಮಾರ್ಗ.

ಒಬ್ಬ ವ್ಯಕ್ತಿಗೆ, “ಈಗ ಸಾಕು, ಸುಮ್ಮನೆ ಕುಳಿತುಕೊಳ್ಳಿ,” ಎಂದು ಹೇಳುವುದು ಕೆಲವೊಮ್ಮೆ ಪರೋಕ್ಷವಾಗಿ, “ನಿಮ್ಮ ಕೆಲಸ ಮುಗಿಯಿತು. ಈಗ ಜೀವನದ ವೇದಿಕೆಯಿಂದ ಇಳಿಯುವ ಸಮಯ ಬಂದಿದೆ,” ಎಂದು ಹೇಳಿದಂತೆಯೇ ಆಗಬಹುದು. ಎಲ್ಲರಿಗೂ ಅದು ಸ್ವೀಕಾರಾರ್ಹವಾಗುವುದಿಲ್ಲ.

ನಾನು ಗಮನಿಸಿದ ಮತ್ತೊಂದು ಸಂಗತಿಯೂ ಇದೆ. ತುಂಬಾ ಸಲ ವಯಸ್ಸು ಮೊದಲು ದೇಹಕ್ಕೆ ಬರುವುದಿಲ್ಲ. ಮನಸ್ಸಿಗೆ ಬರುತ್ತದೆ. ಇನ್ನೂ 40 ಅಥವಾ 50 ವರ್ಷವೂ ಆಗಿಲ್ಲ. ಆದರೆ, “ಅಯ್ಯೋ… ನನಗೆ ವಯಸ್ಸಾಯಿತು. ಇನ್ನೂ ದುಡಿಯಬೇಕಾಗಿದೆ,” ಎಂದು ಹೇಳುವವರನ್ನು ನೋಡುತ್ತೇವೆ. ಅದೇ ಸಮಯದಲ್ಲಿ 80 ವರ್ಷ ದಾಟಿದವರೂ ಉತ್ಸಾಹದಿಂದ, ಸಂತೋಷದಿಂದ ಕೆಲಸ ಮಾಡುತ್ತಿರುವುದನ್ನು ಕಾಣುತ್ತೇವೆ.

ಇನ್ನೊಂದು ವಿಚಿತ್ರ ವಿರೋಧಾಭಾಸವೂ ಸಮಾಜದಲ್ಲಿ ಕಾಣಿಸುತ್ತದೆ. ಮಕ್ಕಳೊಂದಿಗೆ, ಕುಟುಂಬದೊಂದಿಗೆ ಜೀವನದ ಸುಂದರ ಕ್ಷಣಗಳನ್ನು ಕಳೆಯಬೇಕಾದ ವಯಸ್ಸಿನಲ್ಲಿ ಕೆಲವರು 40ರಲ್ಲೇ ನಿವೃತ್ತಿಯಾಗಬೇಕೆಂಬ ಗುರಿಯಿಂದ ಹಗಲಿರುಳು ದುಡಿಯುತ್ತಿದ್ದಾರೆ. ಮತ್ತೊಂದೆಡೆ, 80 ವರ್ಷದ ವ್ಯಕ್ತಿಯೊಬ್ಬ ತನ್ನ ಇಚ್ಛೆಯಿಂದ ಕೆಲಸ ಮಾಡುತ್ತಿದ್ದರೆ, ಸಮಾಜ ಅವನನ್ನು ಕರುಣೆಯಿಂದ ನೋಡುತ್ತದೆ.

ಇದನ್ನು ನೋಡಿದಾಗ ನನಗೆ ಯಾವಾಗಲೂ ಒಂದು ಪ್ರಶ್ನೆ ಮೂಡುತ್ತದೆ. ಯಾಕೆ ನಾವು ಪ್ರತಿಯೊಬ್ಬರ ಜೀವನವನ್ನು ಒಂದೇ ಮಾಪಕದಲ್ಲಿ ಅಳೆಯಲು ಪ್ರಯತ್ನಿಸುತ್ತೇವೆ?

ಕೆಲವರಿಗೆ ನಿವೃತ್ತಿಯೇ ಸಂತೋಷ. ಪುಸ್ತಕ ಓದುವುದು, ಪ್ರವಾಸ ಮಾಡುವುದು, ಮೊಮ್ಮಕ್ಕಳೊಂದಿಗೆ ಸಮಯ ಕಳೆಯುವುದು ಅವರ ಕನಸಿನ ಜೀವನ. ಇನ್ನೂ ಕೆಲವರಿಗೆ ಕೊನೆಯ ಉಸಿರಿನವರೆಗೂ ಕೆಲಸ ಮಾಡುವುದು ನೆಮ್ಮದಿ. ಅವರ ಸಂತೋಷವೇ ದುಡಿಮೆಯಲ್ಲಿ ಇರುತ್ತದೆ. ಎರಡೂ ಸರಿಯಾದ ಆಯ್ಕೆಗಳು. ಯಾವುದು ಉತ್ತಮ ಎಂದು ತೀರ್ಮಾನಿಸುವ ಹಕ್ಕು ನಮಗಿಲ್ಲ.

ನಾವು ಹೆಚ್ಚಾಗಿ ನಮ್ಮ ಆಯ್ಕೆಯ ಕನ್ನಡಕದಿಂದ ಇನ್ನೊಬ್ಬರ ಜೀವನವನ್ನು ನೋಡುತ್ತೇವೆ. ಅದಕ್ಕಾಗಿಯೇ ಕೆಲಸ ಮಾಡುತ್ತಿರುವ ವೃದ್ಧರನ್ನು ನೋಡಿ, “ಅಯ್ಯೋ ಪಾಪ” ಎಂದು ಹೇಳಿಬಿಡುತ್ತೇವೆ. ಆದರೆ ಆ ಮಾತು ಅವರ ಪರಿಸ್ಥಿತಿಯ ಬಗ್ಗೆ ಹೇಳುವುದಕ್ಕಿಂತ ನಮ್ಮ ದೃಷ್ಟಿಕೋನದ ಬಗ್ಗೆ ಹೆಚ್ಚು ಹೇಳುತ್ತದೆ.

ಕರುಣೆ ಮತ್ತು ಗೌರವದ ನಡುವೆ ಒಂದು ಸೂಕ್ಷ್ಮ ವ್ಯತ್ಯಾಸವಿದೆ. ಕರುಣೆ ಕೆಲವೊಮ್ಮೆ ವ್ಯಕ್ತಿಯನ್ನು ದುರ್ಬಲನನ್ನಾಗಿ ಮಾಡಬಹುದು. ಆದರೆ ಗೌರವ ಅವನನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಆದ್ದರಿಂದ ಆರೋಗ್ಯದಿಂದ, ಆತ್ಮವಿಶ್ವಾಸದಿಂದ ಕೆಲಸ ಮಾಡುತ್ತಿರುವ ವ್ಯಕ್ತಿಯನ್ನು ನೋಡಿ “ಅಯ್ಯೋ ಪಾಪ” ಎನ್ನುವ ಬದಲು, “ಇಷ್ಟು ವಯಸ್ಸಿನಲ್ಲೂ ಇಂತಹ ಆತ್ಮಗೌರವ! ಇಂತಹ ಆತ್ಮವಿಶ್ವಾಸ!” ಎಂದು ಹೇಳಲು ನಾವು ಕಲಿಯಬೇಕು.

ತಿಮ್ಮಯ್ಯ ಅವರನ್ನು ನೋಡಿದಾಗ ನನಗೆ ಅವರ ವಯಸ್ಸು ಕಾಣಿಸಲಿಲ್ಲ. ಅವರ ಬದುಕುವ ವಿಧಾನ ಕಾಣಿಸಿತು. ಅವರ ಪರಿಶ್ರಮ ಕಾಣಿಸಿತು. ಅವರ ಸ್ವಾಭಿಮಾನ ಕಾಣಿಸಿತು.

ಬಹುಶಃ ಒಬ್ಬ ವ್ಯಕ್ತಿಗೆ ನಾವು ಕೊಡಬಹುದಾದ ಅತ್ಯಂತ ದೊಡ್ಡ ಗೌರವವೆಂದರೆ ಅವರ ವಯಸ್ಸನ್ನು ನೋಡುವುದಲ್ಲ, ಅವರ ಆಯ್ಕೆಯನ್ನು ಗೌರವಿಸುವುದು.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment