ಮತದಾರ ಪರಿಷ್ಕರಣೆ ಏಕೆ ಮುಖ್ಯ?

ಮತದಾರರ ಪಟ್ಟಿ ಪರಿಷ್ಕರಣೆ (SIR) ಅಥವಾ ಜಾತಿ, ಜನಸಂಖ್ಯೆ, ಸಾಮಾಜಿಕ-ಆರ್ಥಿಕ ಗಣತಿಗಳಂತಹ ಯಾವುದೇ ಮಾಹಿತಿ ಸಂಗ್ರಹ ಪ್ರಕ್ರಿಯೆಗಳ ಬಗ್ಗೆ ನನಗಂತೂ ಮೂಲಭೂತವಾಗಿ ಯಾವುದೇ ಅಭ್ಯಂತರವಿಲ್ಲ. ಕಾರಣ, ಯಾವುದೇ ವ್ಯವಸ್ಥೆ ಕಾಲಕಾಲಕ್ಕೆ ಪರಿಶೀಲನೆಗೆ ಒಳಗಾಗುವುದು ಒಂದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣ.

ಯಾವುದೇ ಆಡಳಿತ ವ್ಯವಸ್ಥೆ ತನ್ನ ನಿರ್ಧಾರಗಳನ್ನು ಸರಿಯಾದ ಮಾಹಿತಿಯ ಆಧಾರದ ಮೇಲೆ ತೆಗೆದುಕೊಳ್ಳಬೇಕು. ಸಮಾಜದಲ್ಲಿ ಯಾರು ಯಾವ ಸ್ಥಿತಿಯಲ್ಲಿದ್ದಾರೆ? ಯಾರಿಗೆ ಸರ್ಕಾರದ ನೆರವು ತಲುಪಿದೆ? ಯಾರು ಇನ್ನೂ ವಂಚಿತರಾಗಿದ್ದಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾದರೆ ನಿಖರವಾದ ಮಾಹಿತಿ ಅಗತ್ಯ.

ಒಂದು ಸಮುದಾಯ ಒಂದು ಕಾಲಘಟ್ಟದಲ್ಲಿ ಹಿಂದುಳಿದಿರಬಹುದು ಅಥವಾ ಅಲ್ಪಸಂಖ್ಯಾತವಾಗಿರಬಹುದು. ಆದರೆ ಕೆಲವು ದಶಕಗಳ ಸರ್ಕಾರಿ ಬೆಂಬಲ, ಶಿಕ್ಷಣ ಮತ್ತು ಅವಕಾಶಗಳಿಂದ ಮುಂದೆ ಬಂದಿರಬಹುದು. ಆಗಲೂ ಹಳೆಯ ಮಾಹಿತಿಯನ್ನೇ ಆಧರಿಸಿ ನೀತಿಗಳನ್ನು ಮುಂದುವರಿಸುವುದು ಆಡಳಿತಾತ್ಮಕವಾಗಿಯೂ, ಸಾಮಾಜಿಕ ನ್ಯಾಯದ ದೃಷ್ಟಿಯಿಂದಲೂ ಸಮಂಜಸವಲ್ಲ.

ಅದೇ ರೀತಿ ಆರ್ಥಿಕವಾಗಿ ಮುಂದೆ ಬಂದವರೂ ಇನ್ನೂ ಹಿಂದುಳಿದವರ ಹೆಸರಿನಲ್ಲಿ ಸೌಲಭ್ಯ ಪಡೆಯುವುದು ನ್ಯಾಯವಲ್ಲ. ಬೆಳವಣಿಗೆ ಹೊಂದಿದವರು ಅವಕಾಶವನ್ನು ಇನ್ನೂ ಅಗತ್ಯವಿರುವವರಿಗೆ ಬಿಟ್ಟುಕೊಡುವುದು ಸಮಾಜದ ಆರೋಗ್ಯಕರ ಬೆಳವಣಿಗೆಯ ಸಂಕೇತ.

ಇದರ ಜೊತೆಗೆ, ಕಾಲಕಾಲಕ್ಕೆ ನಡೆಯುವ ಪರಿಶೀಲನೆ ಆಡಳಿತದ ಮೇಲೆ ಒಂದು ರೀತಿಯ ನಿಯಂತ್ರಣವನ್ನೂ ಉಂಟುಮಾಡುತ್ತದೆ. ಯಾವ ಯೋಜನೆಗಳು ಫಲ ನೀಡುತ್ತಿವೆ? ಯಾವುದು ವಿಫಲವಾಗುತ್ತಿದೆ? ಯಾವ ವರ್ಗದ ಜನರಿಗೆ ಇನ್ನಷ್ಟು ಗಮನ ಬೇಕು? ಎಂಬುದನ್ನು ಅರ್ಥಮಾಡಿಕೊಳ್ಳಲು ಇಂತಹ ಗಣತಿಗಳು ಸಹಕಾರಿಯಾಗುತ್ತವೆ.

ಇನ್ನೊಂದು ಮಹತ್ವದ ಅಂಶವೆಂದರೆ, ನಾಗರಿಕರಲ್ಲಿ ತಮ್ಮ ಅಸ್ತಿತ್ವ, ಅಸ್ಮಿತೆ ಮತ್ತು ಅಧಿಕೃತ ದಾಖಲೆಗಳ ಬಗ್ಗೆ ಜಾಗೃತಿ ಹೆಚ್ಚುತ್ತದೆ. ಸರಿಯಾದ ದಾಖಲೆಗಳನ್ನು ಹೊಂದಿರುವುದು ಕೇವಲ ಆಡಳಿತಾತ್ಮಕ ಅಗತ್ಯವಲ್ಲ; ಅದು ನಾಗರಿಕನ ಹಕ್ಕು ಮತ್ತು ಜವಾಬ್ದಾರಿಯೂ ಹೌದು.

ದೇಶದ ಆಂತರಿಕ ಭದ್ರತೆಯ ದೃಷ್ಟಿಯಿಂದಲೂ ಇಂತಹ ದಾಖಲೆಗಳು ಮತ್ತು ಮಾಹಿತಿ ಸಂಗ್ರಹ ಪ್ರಕ್ರಿಯೆಗಳು ಸಹಕಾರಿಯಾಗಬಹುದು.

ಆದರೆ ಪ್ರಶ್ನೆ ಇಲ್ಲಿಯೇ ಆರಂಭವಾಗುತ್ತದೆ.

ಇಷ್ಟೆಲ್ಲಾ ಪ್ರಯೋಜನಗಳಿರುವಾಗ ಇಂತಹ ಗಣತಿಗಳ ಬಗ್ಗೆ ಜನರಲ್ಲಿ ಅನುಮಾನ ಏಕೆ ಮೂಡುತ್ತದೆ?

ಇದರ ಉತ್ತರ ಗಣತಿಯಲ್ಲಿಲ್ಲ; ಅದನ್ನು ನಡೆಸುವ ಆಡಳಿತದ ಉದ್ದೇಶ ಮತ್ತು ಮಾಹಿತಿಯ ಬಳಕೆಯ ಪ್ರಾಮಾಣಿಕತೆಯಲ್ಲಿದೆ.

ಮೊದಲನೆಯದಾಗಿ, ಮಾಹಿತಿ ಸಂಗ್ರಹದ ಪ್ರಕ್ರಿಯೆಯಲ್ಲಿಯೇ ಪಕ್ಷಪಾತ ನಡೆಯುವ ಸಾಧ್ಯತೆ ಇದೆ. ಕೆಲವು ಸಮುದಾಯಗಳನ್ನು ಕಡೆಗಣಿಸುವುದು, ಕೆಲವೇ ಮಾಹಿತಿಗಳನ್ನು ಆಯ್ದುಕೊಂಡು ಸಂಗ್ರಹಿಸುವುದು, ಅಗತ್ಯವಿಲ್ಲದ ದಾಖಲೆಗಳನ್ನು ಕೇಳುವುದು ಅಥವಾ ಇಲ್ಲದ ದಾಖಲೆಗಳನ್ನು ಒದಗಿಸುವಂತೆ ಒತ್ತಡ ಹೇರುವುದು ಇಂತಹ ಆತಂಕಗಳಿಗೆ ಕಾರಣವಾಗಬಹುದು.

ಎರಡನೆಯದಾಗಿ, ಸಂಗ್ರಹಿಸಿದ ಮಾಹಿತಿಯ ದುರ್ಬಳಕೆ.ಸರಿಯಾದ ರೀತಿಯಲ್ಲಿ ಬಳಸಿದರೆ ಇದೇ ಮಾಹಿತಿ ಒಂದು ರಾಜ್ಯ ಅಥವಾ ದೇಶದಲ್ಲಿ ಅಸಾಮಾನ್ಯ ಬದಲಾವಣೆ ತರಬಲ್ಲದು.

ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಲಾಭಕ್ಕಾಗಿ ಮಾಹಿತಿಯ ಬಳಕೆಯಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಕ್ಷೇತ್ರ ಪುನರ್ವಿಂಗಡಣೆ, ಮತಗಳ ಲೆಕ್ಕಾಚಾರ, ಸಮುದಾಯಗಳ ರಾಜಕೀಯ ಪ್ರಭಾವದ ಲೆಕ್ಕಾಚಾರ ಮುಂತಾದ ವಿಚಾರಗಳಲ್ಲಿ ಮಾಹಿತಿ ದುರ್ಬಳಕೆಯ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.

ಅಷ್ಟೇ ಅಲ್ಲ, ಸಾಮಾನ್ಯ ನಾಗರಿಕರ ವೈಯಕ್ತಿಕ ಮಾಹಿತಿಯನ್ನೇ ಅವರ ವಿರುದ್ಧ ಬಳಸುವ ಅಪಾಯವೂ ಇದೆ. ಒಬ್ಬ ವ್ಯಕ್ತಿಯ ಖಾಸಗಿ ವಿವರಗಳನ್ನು ಸಂಗ್ರಹಿಸಿ, ಅವನ ದೌರ್ಬಲ್ಯಗಳನ್ನು ಗುರುತಿಸಿ, ಆತ ಪ್ರಶ್ನಿಸಿದಾಗ ಅಥವಾ ವಿರೋಧ ವ್ಯಕ್ತಪಡಿಸಿದಾಗ ಅದನ್ನೇ ಒತ್ತಡದ ಸಾಧನವನ್ನಾಗಿ ಬಳಸುವ ಸಾಧ್ಯತೆಗಳನ್ನು ನಾವು ಈಗಾಗಲೇ ಹಲವು ರೂಪಗಳಲ್ಲಿ ನೋಡುತ್ತಿದ್ದೇವೆ.

ಆದ್ದರಿಂದ SIR ಆಗಿರಲಿ ಅಥವಾ ಯಾವುದೇ ಮಾಹಿತಿ ಸಂಗ್ರಹ ಪ್ರಕ್ರಿಯೆಯಾಗಿರಲಿ, ಅದರ ಹಿಂದಿನ ಉದ್ದೇಶದ ಬಗ್ಗೆ ನಾಗರಿಕರಿಗೆ ಅನುಮಾನ ಮೂಡುವುದು ಸಹಜ. ಆ ಅನುಮಾನವನ್ನು ತಪ್ಪು ಎಂದು ಹೇಳುವುದಕ್ಕಿಂತ, ತಮ್ಮ ಉದ್ದೇಶ ಜನಪರವಾಗಿದೆ ಮತ್ತು ಸಂಗ್ರಹಿಸಿದ ಮಾಹಿತಿಯನ್ನು ನ್ಯಾಯಯುತವಾಗಿ ಬಳಸಲಾಗುತ್ತದೆ ಎಂಬ ವಿಶ್ವಾಸವನ್ನು ನಿರ್ಮಿಸುವ ಜವಾಬ್ದಾರಿ ಆಡಳಿತದ ಮೇಲಿದೆ.

ಪ್ರಜಾಪ್ರಭುತ್ವದಲ್ಲಿ ನಾಗರಿಕರ ವಿಶ್ವಾಸವೇ ದೊಡ್ಡ ಬಂಡವಾಳ.

ಹಾಗಾದರೆ ನಿಮ್ಮ ಅಭಿಪ್ರಾಯವೇನು? ಮತದಾರರ ಪರಿಷ್ಕರಣೆ ಮತ್ತು ಇಂತಹ ಮಾಹಿತಿ ಸಂಗ್ರಹ ಪ್ರಕ್ರಿಯೆಗಳು ದೇಶಕ್ಕೆ ಅಗತ್ಯವೇ? ಅಥವಾ ಅವುಗಳ ಅನುಷ್ಠಾನ ಮತ್ತು ಬಳಕೆಯಲ್ಲೇ ಮೂಲ ಸಮಸ್ಯೆ ಇದೆಯೇ?

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment