ನಮ್ಮೆಲ್ಲರಲ್ಲೂ ನಾಯಕತ್ವ ಇದೆ. ಆದರೆ…

ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಈ ಸುದ್ದಿ ಕೇಳಿದಾಗ, ನನಗೆ ನನ್ನ ಜೀವನದ ಒಂದು ಘಟನೆ ನೆನಪಾಗುತ್ತದೆ.

೨೦೦೭ರ ಕಾಲ.

ಕನ್ನಡದ ಪ್ರಮುಖ ಖಾಸಗಿ ವಾಹಿನಿಯೊಂದರಲ್ಲಿ ವರದಿಗಾರಳಾಗಿ ಸೇರಿದ್ದೆ. ಅದಕ್ಕೂ ಮೊದಲು ಮತ್ತೊಂದು ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ೧೦ ಗಂಟೆಗೆ ಪ್ರಸಾರವಾಗುತ್ತಿದ್ದ “ಭಾನಾಮತಿ” ಕಾರ್ಯಕ್ರಮಕ್ಕೆ ಸಹಾಯಕ ನಿರ್ದೇಶನ ಮಾಡಿದ ಅನುಭವವಿತ್ತು.

ಆ ಅನುಭವಕ್ಕೆ ತಕ್ಕ ಸಂಬಳವಾಗಲಿ, ಹುದ್ದೆಯಾಗಲಿ ಸಿಕ್ಕಿರಲಿಲ್ಲ. ಆದರೆ ಕುಟುಂಬದ ಏಕಮಾತ್ರ ಸಂಪಾದನೆ ನನ್ನ ಮೇಲೆ ಅವಲಂಬಿತವಾಗಿತ್ತು. ಬೇರೆ ಆಯ್ಕೆಗಳಿರಲಿಲ್ಲ. ಒಪ್ಪಿಕೊಂಡು ಸೇರಿಕೊಂಡೆ.

ಇದನ್ನೂ ಓದಿ:

ಆ ಸಮಯದಲ್ಲಿ ವಾಹಿನಿಯಲ್ಲಿ “ಜಾಗೃತಿ” ಎನ್ನುವ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಆರಂಭವಾಗುತ್ತಿತ್ತು. ಅದು ಸುಲಭದ ಕಾರ್ಯಕ್ರಮವಾಗಿರಲಿಲ್ಲ. ಬರೆಯುವುದಾಗಲಿ, ವಿಷಯ ಆಯ್ಕೆ ಮಾಡುವುದು ಆಗಲಿ, ಕಾರ್ಯಕ್ರಮ ನಿರ್ಮಾಣವಾಗಲಿ — ಎಲ್ಲವೂ ಭಾರವಾದ ಜವಾಬ್ದಾರಿಗಳೇ.

ಆ ಕಾರ್ಯಕ್ರಮವನ್ನು ವಿಭಾಗ ಮುಖ್ಯಸ್ಥರ ಖಾಸಗಿ ಸಂಸ್ಥೆಯಿಂದ ಬಂದವರೊಬ್ಬರಿಗೆ ನೀಡಲಾಗಿತ್ತು. ಅವರು ಮುಖ್ಯ ಕಾರ್ಯಕಾರಿ ನಿರ್ಮಾಪಕರಾಗಿದ್ದರು. ಕೆಲಸ ಹೆಚ್ಚು, ಜನ ಕಡಿಮೆ ಇದ್ದ ಕಾರಣ ನನ್ನನ್ನು ಅಲ್ಲಿಗೆ ಹಾಕಲಾಯಿತು.

ಆಮೇಲೆ ನಾನು ಕೇವಲ ವರದಿಗಾರಳಾಗಿಯೇ ಉಳಿಯಲಿಲ್ಲ.

ಸ್ಕ್ರಿಪ್ಟ್ ರೈಟರ್ ಆದೆ. ವರದಿಗಾರಳಾದೆ. ಎಡಿಟರ್ ಪಕ್ಕ ಕುಳಿತು ಕಾರ್ಯಕ್ರಮದ ಅಂತಿಮ ರೂಪವನ್ನೂ ನೋಡಿಕೊಳ್ಳುವಂತಾಯಿತು. ಒಟ್ಟಿನಲ್ಲಿ, ಇಡೀ ಕಾರ್ಯಕ್ರಮದಲ್ಲಿ ನನ್ನ ಭಾರ ಮತ್ತು ಕೊಡುಗೆ ಉಳಿದ ಏಳು ಮಂದಿಗಿಂತ ದೊಡ್ಡದಾಗಿತ್ತು.

ಹೀಗೆ ಎಂಟು ತಿಂಗಳು ಕಳೆಯಿತು.

ನಂತರ ಹೊಸ ವಿಭಾಗ ಮುಖ್ಯಸ್ಥರು ಬಂದರು. ಅವರು ನನ್ನ ಕೆಲಸ, ಹೊಣೆಗಾರಿಕೆ ಮತ್ತು ಕೊಡುಗೆಗಳನ್ನು ಗಮನಿಸಿ ನನ್ನನ್ನು ಮುಖ್ಯ ಕಾರ್ಯಕಾರಿ ನಿರ್ಮಾಪಕಳನ್ನಾಗಿ ಬಡ್ತಿ ನೀಡಿದರು.

ನಾನು ನಿರೀಕ್ಷಿಸದ ಬದಲಾವಣೆ ಅದು.

ಇದನ್ನೂ ಓದಿ :

ಜವಾಬ್ದಾರಿ ಹೊಸತಾಗಿರಲಿಲ್ಲ.
ಕೆಲಸ ಹೊಸತಾಗಿರಲಿಲ್ಲ.
ಗುರುತಿಸುವಿಕೆಯೂ ಹೊಸತಾಗಿರಲಿಲ್ಲ.

ಆದರೆ ಅದನ್ನು ಒಪ್ಪಿಕೊಳ್ಳಲು ನನ್ನ ಮನಸ್ಸು ಸಿದ್ಧವಾಗಿರಲಿಲ್ಲ.

ಕಾರಣ — ನಾನು ಆ ಸ್ಥಾನಕ್ಕೆ ಅರ್ಹಳಲ್ಲ ಎನ್ನುವ ಭಾವನೆ.

ಆ ಭಾವನೆ ನನ್ನೊಳಗೆ ತುಂಬಾ ಆಳವಾಗಿ ಕುಳಿತಿತ್ತು.

ನಾನು ಇನ್ನೊಬ್ಬರನ್ನು ಹಿಂದಿಕ್ಕಿಬಿಟ್ಟೆ ಎನ್ನುವ ಅಪರಾಧ ಪ್ರಜ್ಞೆ ನನ್ನೊಳಗೆ ಹೆಚ್ಚಾಯಿತು. ನಾನು ನನ್ನ ಕೆಲಸದಿಂದ ಆ ಸ್ಥಾನ ಪಡೆದಿದ್ದರೂ, ಅದನ್ನು ಸ್ವೀಕರಿಸುವ ಆತ್ಮವಿಶ್ವಾಸ ನನ್ನೊಳಗೆ ಇರಲಿಲ್ಲ.

ಇದು ಕೇವಲ ನನ್ನ ಕಥೆಯೇ?

ಅಥವಾ ನಮ್ಮಲ್ಲಿ ಅನೇಕರ ಕಥೆಯೇ?

ಬಹಳ ಜನರಲ್ಲಿ ನಾಯಕತ್ವದ ಗುಣ ಇರುತ್ತದೆ.
ಹೊಣೆಗಾರಿಕೆ ಹೊರುವ ಸಾಮರ್ಥ್ಯ ಇರುತ್ತದೆ.
ಕೆಲಸ ಮಾಡುವ ಪ್ರಾಮಾಣಿಕತೆಯೂ ಇರುತ್ತದೆ.

ಆದರೆ ತಮಗೆ ಸಿಗಬೇಕಾದ ಸ್ಥಾನವನ್ನು ಕೇಳಿಕೊಳ್ಳಲು ಮಾತ್ರ ಹಿಂಜರಿಯುತ್ತಾರೆ.

ಯಾಕೆಂದರೆ ಬಾಲ್ಯದಿಂದಲೇ ನಮಗೆ “ತಗ್ಗಿ ಇರು”, “ಮುಂದೆ ಬರಬೇಡ”, “ನಿನ್ನ ಬಗ್ಗೆ ಹೆಚ್ಚು ಯೋಚಿಸಬೇಡ” ಎಂಬ ಮನಸ್ಥಿತಿ ಕಲಿಸಲಾಗುತ್ತದೆ.

ವಿಶೇಷವಾಗಿ ಮಹಿಳೆಯರಲ್ಲಿ ಈ ಭಾವನೆ ಇನ್ನೂ ಗಾಢವಾಗಿರುತ್ತದೆ.

ಒಂದು ವೇಳೆ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಸ್ಥಾನ ಪಡೆಯಲು ಯತ್ನಿಸಿದರೆ?
ಅವರನ್ನು “ಮಹತ್ವಾಕಾಂಕ್ಷಿ” ಎಂದು ಕರೆಯಲಾಗುತ್ತದೆ.

ಇನ್ನೊಬ್ಬರಿಗೆ ಕಡಿಮೆ ಅಥವಾ ಸಮಾನ ಕೊಡುಗೆ ಕೊಟ್ಟ ವ್ಯಕ್ತಿಯನ್ನು ಹಿಂದೆ ಸರಿಸಿ ಅವರು ಆ ಸ್ಥಾನ ಪಡೆದಾಗ?
ಅವರನ್ನು ಅಪರಾಧಿಯಂತೆ ನೋಡಲಾಗುತ್ತದೆ.

ಹಾಗಾಗಿ ಹಲವರು ನಾಯಕತ್ವದಿಂದ ಹಿಂದೆ ಸರಿಯುತ್ತಾರೆ.
ಸಾಮರ್ಥ್ಯ ಇಲ್ಲದ ಕಾರಣಕ್ಕೆ ಅಲ್ಲ.
ಸ್ವಗೌರವ ಮತ್ತು ಆತ್ಮವಿಶ್ವಾಸದ ಕೊರತೆಯಿಂದ.

ಆದರೆ ಒಂದು ಪ್ರಶ್ನೆ ನಾವು ನಮ್ಮನ್ನೇ ಕೇಳಿಕೊಳ್ಳಬೇಕು.

ನಮಗೆ ಒಂದು ಜವಾಬ್ದಾರಿ ಸಿಕ್ಕಾಗ ಅದನ್ನು ಸ್ವೀಕರಿಸುವುದು ತಪ್ಪೇ?
ನಮ್ಮ ಸಾಮರ್ಥ್ಯವನ್ನು ಗುರುತಿಸಿದಾಗ ಅದನ್ನು ಒಪ್ಪಿಕೊಳ್ಳುವುದು ಅಹಂಕಾರವೆ?

ಇಲ್ಲ.

ನಾಯಕತ್ವ ಎಂದರೆ ಯಾರನ್ನಾದರೂ ತುಳಿದು ಮೇಲೆ ಹೋಗುವುದು ಅಲ್ಲ.
ತಮಗೆ ಬಂದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಹೊರುವುದು.

ಹಾಗಾದರೆ ಈ ಕೀಳರಿಮೆಯ ಭಾವನೆಯಿಂದ ಹೊರಬರುವುದು ಹೇಗೆ?

ಮೊದಲಿಗೆ —
ನಮ್ಮ ಕೊಡುಗೆಯನ್ನು ನಾವು ತಗ್ಗಿಸಿ ನೋಡುವುದನ್ನು ನಿಲ್ಲಿಸಬೇಕು.

ಬಹಳ ಸಲ ನಾವು ಮಾಡಿದ ಕೆಲಸವನ್ನು ಸಾಮಾನ್ಯವೆಂದುಕೊಳ್ಳುತ್ತೇವೆ. ಆದರೆ ಅದೇ ಕೆಲಸವನ್ನು ಮತ್ತೊಬ್ಬರು ಮಾಡಲಾರದೇ ಇರಬಹುದು.

ಎರಡನೆಯದಾಗಿ —
“ನಾನು ಅರ್ಹಳಲ್ಲ/ಅರ್ಹನಲ್ಲ” ಎನ್ನುವ ಭಾವನೆ ಬಂದಾಗ, ಭಾವನೆ ಮತ್ತು ವಾಸ್ತವವನ್ನು ಬೇರ್ಪಡಿಸಿ ನೋಡಬೇಕು.

ಭಾವನೆ ಸುಳ್ಳಾಗಿರಬಹುದು.
ಆದರೆ ನಮ್ಮ ಕೆಲಸ, ಶ್ರಮ ಮತ್ತು ಕೊಡುಗೆಗಳು ನಿಜವಾಗಿರುತ್ತವೆ.

ಮೂರನೆಯದಾಗಿ —
ಹೊಸ ಪಾತ್ರವನ್ನು ನಿಧಾನವಾಗಿ ಒಪ್ಪಿಕೊಳ್ಳಲು ನಮ್ಮ ಮನಸ್ಸಿಗೆ ಸಮಯ ಕೊಡಬೇಕು.

ನಾಯಕತ್ವ ಒಂದು ದಿನದಲ್ಲಿ ಒಳಗಿನಿಂದ ಬರುವುದಿಲ್ಲ.
ಕೆಲವೊಮ್ಮೆ ಜವಾಬ್ದಾರಿ ಮೊದಲು ಬರುತ್ತದೆ.
ಆತ್ಮವಿಶ್ವಾಸ ನಂತರ ಬೆಳೆಯುತ್ತದೆ.

ಮತ್ತೊಂದು ಮುಖ್ಯ ವಿಷಯ —
ಸಮಾಜವೂ ಯಾರಾದರೂ ಮುಂದೆ ಬಂದಾಗ ಅವರನ್ನು ಅಪರಾಧಿಯಂತೆ ನೋಡುವುದನ್ನು ನಿಲ್ಲಿಸಬೇಕು.

ಯಾರಿಗಾದರೂ ಗುರುತು ಸಿಕ್ಕರೆ, ಅದಕ್ಕೆ ಹಿಂದೆ ಕಾಣದ ಶ್ರಮ, ಹೊಣೆಗಾರಿಕೆ ಮತ್ತು ಮೌನದ ಹೋರಾಟಗಳಿರುತ್ತವೆ.

ಪ್ರತಿ ಬಡ್ತಿಯೂ ರಾಜಕೀಯ ಅಲ್ಲ.
ಪ್ರತಿ ನಾಯಕತ್ವವೂ ಅಹಂಕಾರ ಅಲ್ಲ.
ಪ್ರತಿ ಮಹತ್ವಾಕಾಂಕ್ಷೆಯೂ ಕೆಟ್ಟದ್ದಲ್ಲ.

ಕೆಲವೊಮ್ಮೆ ಅದು ಕೇವಲ ಒಬ್ಬ ಮನುಷ್ಯ ತನ್ನ ಸಾಮರ್ಥ್ಯವನ್ನು ಕೊನೆಗೂ ಒಪ್ಪಿಕೊಳ್ಳುತ್ತಿರುವ ಕ್ಷಣವಾಗಿರುತ್ತದೆ.

ನಿಜ ಹೇಳಬೇಕೆಂದರೆ —
ನಮ್ಮೆಲ್ಲರಲ್ಲೂ ನಾಯಕತ್ವ ಇದೆ.

ಆದರೆ ಅದನ್ನು ಸ್ವೀಕರಿಸುವ ಧೈರ್ಯ ಮಾತ್ರ ಎಲ್ಲರಲ್ಲಿಲ್ಲ.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment