ಚೆನ್ನಾಗಿ ತಿನ್ನಿ… ಹೃದಯ ಆರೋಗ್ಯವಾಗಿರುತ್ತೆ! | ಹಾರ್ವರ್ಡ್ ಅಧ್ಯಯನ ಹೇಳಿದ ಹೊಸ ಸತ್ಯ

ಇಲ್ಲಿಯವರೆಗೆ ಆರೋಗ್ಯದ ವಿಚಾರ ಬಂದಾಗ ನಾವು ಕೇಳಿದ್ದು ಒಂದೇ ಮಾತು. ಸ್ವಲ್ಪ ತಿನ್ನಿ… ಆಯ್ದು ತಿನ್ನಿ… ಕೊಬ್ಬು ತಿನ್ನಬೇಡಿ… ಅಕ್ಕಿ ಕಡಿಮೆ ಮಾಡಿ… ಎಣ್ಣೆ ಬಿಟ್ಟುಬಿಡಿ… ಡಯೆಟ್ ಮಾಡಿ…!

ಹೃದಯ ಆರೋಗ್ಯವಾಗಿರಬೇಕೆಂದರೆ ಬದುಕಿನ ಸಕಲ ರುಚಿಗಳನ್ನು ಬಿಟ್ಟುಬಿಡಬೇಕೇನೋ ಎನ್ನುವ ಭಯವೇ ಜನರಲ್ಲಿ ಬೆಳೆದಿತ್ತು. ಆದರೆ ಈಗ ಹಾರ್ವರ್ಡ್ ವಿಶ್ವವಿದ್ಯಾಲಯದ ದೀರ್ಘಕಾಲದ ಅಧ್ಯಯನವೊಂದು ಈ ಕಲ್ಪನೆಯನ್ನೇ ಸ್ವಲ್ಪ ತಲೆಕೆಳಗಾಗಿ ಮಾಡಿದೆ.

ಅಧ್ಯಯನದ ತೀರ್ಮಾನ ಏನು ಗೊತ್ತಾ?

“ಏನು ತಿನ್ನುತ್ತಿದ್ದೀರಿ ಎನ್ನುವುದಕ್ಕಿಂತ, ಎಷ್ಟು ಪೌಷ್ಟಿಕವಾದುದನ್ನು ತಿನ್ನುತ್ತಿದ್ದೀರಿ ಎನ್ನುವುದು ಮುಖ್ಯ.”

ಸುಮಾರು ೩೦ ವರ್ಷಗಳ ಕಾಲ ೨ ಲಕ್ಷಕ್ಕೂ ಹೆಚ್ಚು ಜನರನ್ನು ಅಧ್ಯಯನ ಮಾಡಿದ ಸಂಶೋಧಕರು ಆಹಾರ ಮತ್ತು ಹೃದಯದ ಆರೋಗ್ಯದ ನಡುವಿನ ಸಂಬಂಧವನ್ನು ಪರಿಶೀಲಿಸಿದ್ದಾರೆ. ಈ ಅಧ್ಯಯನದಲ್ಲಿ ಕೆಲವರು ಲೋ-ಕಾರ್ಭ್ ಡಯೆಟ್, ಕೆಲವರು ಲೋ-ಫ್ಯಾಟ್ ಡಯೆಟ್, ಇನ್ನೂ ಕೆಲವರು ತಮ್ಮ ಇಷ್ಟದಂತೆ ಸಾಮಾನ್ಯ ಆಹಾರ ಸೇವಿಸುತ್ತಿದ್ದರು.

ಆದರೆ ಆಶ್ಚರ್ಯಕರವಾಗಿ ಕಂಡುಬಂದಿದ್ದು ಏನೆಂದರೆ, ಡಯೆಟ್ ಹೆಸರಿನಲ್ಲಿ ಪೌಷ್ಟಿಕಾಂಶ ಕಡಿಮೆ ಇರುವ ಆಹಾರ ಸೇವಿಸುತ್ತಿದ್ದವರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಎನ್ನಲಾಗುವ ಎಲ್.ಡಿ.ಎಲ್ ಪ್ರಮಾಣ ಹೆಚ್ಚಾಗಿತ್ತು. ಇದು ಹೃದಯದ ರಕ್ತನಾಳಗಳಿಗೆ ಹಾನಿ ಮಾಡಬಲ್ಲ ಅಪಾಯಕಾರಿ ಅಂಶ.

ವಿಶೇಷವಾಗಿ ಪ್ರೊಸೆಸ್ಡ್ ಆಹಾರ, ಜಂಕ್ ಫುಡ್, ರಿಫೈಂಡ್ ಪದಾರ್ಥಗಳನ್ನು “ಲೋ ಕಾರ್ಬ್” ಎಂದು ಆಯ್ದು ತಿನ್ನುತ್ತಿದ್ದವರಲ್ಲೇ ಹೃದಯದ ಅಪಾಯ ಹೆಚ್ಚಾಗಿರುವುದು ಕಂಡುಬಂತು.

ಆದರೆ ಮತ್ತೊಂದೆಡೆ, ಯಾವುದೇ ಫ್ಯಾನ್ಸಿ ಡಯೆಟ್ ಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಹಣ್ಣು, ತರಕಾರಿ, ಕಾಳುಗಳು, ನೈಸರ್ಗಿಕ ಎಣ್ಣೆ, ಧಾನ್ಯಗಳು, ಮೀನು, ಮಾಂಸ, ಮನೆಯ ಅಡುಗೆ — ಹೀಗೆ ಸಮತೋಲನದ ಆಹಾರ ಸೇವಿಸುತ್ತಿದ್ದವರ ಹೃದಯ ಹೆಚ್ಚು ಆರೋಗ್ಯಕರವಾಗಿತ್ತು.

ಅವರ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಎನ್ನಲಾಗುವ ಎಚ್.ಡಿ.ಎಲ್ ಮಟ್ಟ ಉತ್ತಮವಾಗಿತ್ತು. ಇದು ಹೃದಯವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಅಂದರೆ, ಎಲ್ಲಾ ಕೊಬ್ಬೂ ಕೆಟ್ಟದ್ದೇ ಅಲ್ಲ.

ನಮ್ಮ ಅಜ್ಜ-ಅಜ್ಜಿ ಪೀಳಿಗೆಯವರು ಬೆಳಿಗ್ಗೆ ತುಪ್ಪ ತಿಂದರು, ಊಟಕ್ಕೆ ಅನ್ನ ತಿಂದರು, ಸಾರು ಕುಡಿದರು, ಕೆಲಸ ಮಾಡಿದರು, ಚೆನ್ನಾಗಿ ನಿದ್ರೆ ಮಾಡಿದರು. ಅವರಿಗೆ “ಕೀಟೋ ಡಯೆಟ್”, “ಲೋ ಕಾರ್ಬ್”, “ಇಂಟರ್‌ಮಿಟೆಂಟ್ ಫಾಸ್ಟಿಂಗ್” ಎಂಬ ಪದಗಳೇ ಗೊತ್ತಿರಲಿಲ್ಲ. ಆದರೂ ೮೦-೯೦ ವರ್ಷ ದಾಟಿ ಆರೋಗ್ಯವಾಗಿ ಬದುಕಿದ ಉದಾಹರಣೆಗಳು ನಮ್ಮ ಸುತ್ತಲೇ ಸಾಕಷ್ಟಿವೆ.

ಅದರ ಕಾರಣ ಅವರು ಹೆಚ್ಚು ತಿನ್ನುತ್ತಿದ್ದರು ಎಂಬುದಲ್ಲ.
ಅವರು ನೈಸರ್ಗಿಕವಾಗಿ ತಿನ್ನುತ್ತಿದ್ದರು.

ಇಂದಿನ ಸಮಸ್ಯೆ ನಾವು ಎಷ್ಟು ತಿನ್ನುತ್ತೇವೆ ಎನ್ನುವುದಲ್ಲ. ನಾವು ತಿನ್ನುತ್ತಿರುವುದು ಎಷ್ಟು ಕೃತಕವಾಗಿದೆ ಎನ್ನುವುದೇ ದೊಡ್ಡ ಪ್ರಶ್ನೆ.

ಪ್ಯಾಕೆಟ್ ಆಹಾರ, ತಕ್ಷಣ ಸಿದ್ಧವಾಗುವ ತಿಂಡಿಗಳು, ಅತಿಯಾಗಿ ಸಂಸ್ಕರಿಸಿದ ಪದಾರ್ಥಗಳು, ದಿನವೂ ಹೊರಗಿನ ಆಹಾರ — ಇವೆಲ್ಲ ದೇಹಕ್ಕೆ ನಿಧಾನವಾಗಿ ಹೊರೆ ಆಗುತ್ತಿವೆ.

ಆರೋಗ್ಯ ಎಂದರೆ ಕೇವಲ ತೂಕ ಕಡಿಮೆ ಆಗುವುದಲ್ಲ. ಹೃದಯ ನೆಮ್ಮದಿಯಾಗಿ ಕೆಲಸ ಮಾಡುವುದು, ದೇಹಕ್ಕೆ ಶಕ್ತಿ ಇರುವುದು, ಮನಸ್ಸು ಹಗುರವಾಗಿರುವುದು ಕೂಡ ಆರೋಗ್ಯವೇ. ಹಾರ್ವರ್ಡ್ ಅಧ್ಯಯನ ಮತ್ತೆ ನಮಗೆ ನೆನಪಿಸುತ್ತಿದೆ ಬಹಳ ಸರಳ ಸತ್ಯವೊಂದನ್ನು –

ಭಯಪಟ್ಟು ತಿನ್ನಬೇಡಿ. ಬುದ್ಧಿವಂತಿಕೆಯಿಂದ ತಿನ್ನಿ.

ಆಹಾರವನ್ನು ಶತ್ರುವೆಂದು ನೋಡಬೇಡಿ.
ಪೌಷ್ಟಿಕ ಆಹಾರವೇ ದೇಹದ ಗೆಳೆಯ.

ಹೃದಯವನ್ನು ಕಾಪಾಡಿಕೊಳ್ಳಬೇಕಾದರೆ, ಮೊದಲು ನಮ್ಮ ಊಟದ ತಟ್ಟೆಯಲ್ಲಿ ನೈಸರ್ಗಿಕತೆ ಮರಳಿ ಬರಬೇಕು.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment