ಬೇಸಿಗೆ ಬಂದರೆ ಸಾಕು, ದೇಹಕ್ಕಿಂತ ಮೊದಲು ಮನಸ್ಸೇ ತಂಪನ್ನು ಹುಡುಕಲು ಶುರುಮಾಡುತ್ತದೆ. ಫ್ರಿಡ್ಜ್ ನೀರು, ಜ್ಯೂಸ್, ಕೂಲ್ ಡ್ರಿಂಕ್ಸ್ ಎಲ್ಲ ಇದ್ದರೂ, ರಸ್ತೆಯ ಬದಿಯಲ್ಲಿ ಹಸಿರು ಎಳನೀರು ಕಂಡರೆ ಮಾತ್ರ “ಹೌದು, ಈಗ ಬೇಸಿಗೆ ಬಂದಿದೆ” ಎನ್ನಿಸುವುದು. ಅದರಲ್ಲೂ ಮೈಸೂರು ಬಿಸಿಲಿಗೆ ಎಳನೀರು ಎಂದರೆ ಒಂದು ರೀತಿಯ ಅನಿವಾರ್ಯ ಔಷಧಿಯೇ ಸರಿ. ನಮಗೆಂತೂ ಎಳನೀರು ಜೊತೆ ತಾಟಿನಿಂಗು ಸಿಕ್ಕರೆ ಬೇಸಿಗೆಯ ಸಂತೋಷ ಇನ್ನೂ ಪೂರ್ಣ.
ಈ ವರ್ಷ ಎಳನೀರು ಬೆಲೆ ಸ್ವಲ್ಪ ಜಾಸ್ತಿ. ಆದರೂ ಅದನ್ನು ಕುಡಿಯುವವರು ಕಡಿಮೆಯಾಗಿಲ್ಲ. ಏಕೆಂದರೆ ಇದು ಇನ್ನೂ ಪ್ರಕೃತಿಯ ಕೈಬಿಟ್ಟಿಲ್ಲದ ಕೆಲವೇ ಪಾನೀಯಗಳಲ್ಲಿ ಒಂದು ಎನ್ನುವ ಭಾವನೆ ಜನರಲ್ಲಿದೆ. ಯಾವುದೇ ಕಾರ್ಖಾನೆಯ ಬಣ್ಣ, ವಾಸನೆ, ಜಾಹೀರಾತಿಲ್ಲದೆ, ಮರದ ಮೇಲೆಯೇ ಸಿದ್ಧವಾಗುವ ನೈಸರ್ಗಿಕ energizer. ವೈದ್ಯಕೀಯ ಭಾಷೆಯಲ್ಲಿ electrolyte ಎನ್ನಬಹುದು, ಆದರೆ ಬಿಸಿಲಿನಲ್ಲಿ ಸುಸ್ತಾದ ದೇಹಕ್ಕೆ ಇದು ಕೊಡುವ ಚೈತನ್ಯವನ್ನು ಅನುಭವಿಸಿದವರು ಅದನ್ನು ಬೇರೆ ರೀತಿಯಲ್ಲಿ ಅರ್ಥಮಾಡಿಕೊಳ್ಳುತ್ತಾರೆ.
ನನಗೆ ಎಳನೀರ ಮೇಲೆ ಒಂದು ವೈಯಕ್ತಿಕ ನಂಬಿಕೆಯೂ ಇದೆ. ನನ್ನ ಮಗ ಕೇವಲ ಒಂಬತ್ತು ತಿಂಗಳ ಶಿಶುವಿದ್ದಾಗ ತೀವ್ರ ವಾಂತಿ, ಭೇದಿಯಿಂದ ಬಳಲಿದ್ದ. ಆಗ ದೇಹದಲ್ಲಿ ನೀರಿನ ಪ್ರಮಾಣ ಉಳಿಸಲು ವೈದ್ಯರು ಹೇಳಿದ ಪ್ರಮುಖ ಸಹಾಯಗಳಲ್ಲಿ ಎಳನೀರೂ ಒಂದು. ಆ ಸಂದರ್ಭದ ಆತಂಕದ ನಡುವೆ, ಒಂದು ಸರಳ ಎಳನೀರು ಜೀವ ಉಳಿಸುವ ಮಟ್ಟಿಗೆ ಮುಖ್ಯವಾಗಬಹುದು ಎಂಬ ಅರಿವು ನನಗೆ ಮೊದಲ ಬಾರಿ ಬಂದಿತ್ತು.
ಆದರೆ ಈ ಬಾರಿ ನನ್ನ ಗಮನ ಸೆಳೆದದ್ದು ಎಳನೀರು ಮಾತ್ರವಲ್ಲ, ಅದನ್ನು ಮಾರುತ್ತಿದ್ದ ವ್ಯಕ್ತಿ.
ಮಾತು ಮಾತಿನಲ್ಲಿ ಆತ ತನ್ನ ವ್ಯಾಪಾರದ ಬಗ್ಗೆ ಹೇಳತೊಡಗಿದ. ವರ್ಷಾವಧಿಗೆ ತೆಂಗಿನ ಮರಗಳನ್ನು ಗುತ್ತಿಗೆ ಪಡೆಯುವುದಂತೆ. ಒಂದೊಂದು ಮರದ ಕಾಯಿ ಬೇರೆ ಬೇರೆ ಉಪಯೋಗಕ್ಕೆ ಹೋಗುತ್ತದೆ. ಕೆಲವು ತೆಂಗಿನಕಾಯಿಯಾಗುತ್ತವೆ, ಕೆಲವು ಕೊಬ್ಬರಿಯಾಗುತ್ತವೆ, ದಪ್ಪ ತಿರುಳು ಬರದವು ಎಳನೀರಾಗಿ ಮಾರಾಟವಾಗುತ್ತವೆ. ಒಂದು ಮರದಲ್ಲಿ ನೂರು ಕಾಯಿವರೆಗೆ ಫಸಲು ಸಿಗಬಹುದಂತೆ. ಆದರೆ ಅದು ಮರದ ಆರೈಕೆ, ಹವಾಮಾನ, ನೀರು ಎಲ್ಲದರ ಮೇಲೂ ಅವಲಂಬಿತ. ಒಂದು ಮರದಿಂದ ಸುಮಾರು ಸಾವಿರದೈನೂರು ರೂಪಾಯಿವರೆಗೆ ಆದಾಯ ಬರಬಹುದು ಎಂದು ಹೇಳಿದಾಗ, ಒಂದು ಎಳನೀರಿನ ಹಿಂದೆ ಎಷ್ಟು ದೊಡ್ಡ ಪರಿಶ್ರಮದ ಜಗತ್ತು ಇದೆ ಎನ್ನುವುದು ಅರ್ಥವಾಯಿತು.
ಆದರೆ ನನಗೆ ಹೆಚ್ಚು ಇಷ್ಟವಾದದ್ದು ಅವನ ವ್ಯಾಪಾರ ಮಾಡುವ ರೀತಿ.
ಅದೇ ರಸ್ತೆಯಲ್ಲಿ ಇನ್ನೂ ಹಲವರು ಎಳನೀರು ಮಾರುತ್ತಿದ್ದರು. ಕೆಲವರು ಗ್ರಾಹಕರ ಜೊತೆ ಸಿಡುಕುತ್ತಿದ್ದರು. ಯಾರಿಗೆ ಯಾವ ಕಾಯಿ ಕೊಟ್ಟರೂ ಪರವಾಗಿಲ್ಲ ಎಂಬಂತಿತ್ತು. ಆದರೆ ಈತ ವಿಭಿನ್ನ. ಮುಖದಲ್ಲಿ ನಗು. ಮಾತನಾಡುವಲ್ಲಿ ಆತ್ಮೀಯತೆ. ಗ್ರಾಹಕರ ಅವಶ್ಯಕತೆ ಅರ್ಥಮಾಡಿಕೊಳ್ಳುವ ಚಾಣಾಕ್ಷತನ.
ಗಂಜಿ ಹೆಚ್ಚು ಬೇಕಾದವರಿಗೆ ಒಂದು ತರದ ಕಾಯಿ. ನೀರು ಹೆಚ್ಚು ಬೇಕಾದವರಿಗೆ ಇನ್ನೊಂದು. ಬೆಲೆ ನೋಡಿ ತೆಗೆದುಕೊಳ್ಳುವವರಿಗೆ ಒಂದು ಆಯ್ಕೆ. “ಚೆನ್ನಾಗಿರಲಿ, ಬೆಲೆ ಸಮಸ್ಯೆಯಲ್ಲ” ಎನ್ನುವವರಿಗೆ ಬೇರೆ ಆಯ್ಕೆ. ಅಂದರೆ ಆತ ಕೇವಲ ಎಳನೀರು ಮಾರುತ್ತಿರಲಿಲ್ಲ; ಜನರ ಅಗತ್ಯಗಳನ್ನು ಅರ್ಥಮಾಡಿಕೊಂಡು ಅನುಭವವನ್ನು ಮಾರುತ್ತಿದ್ದ.
ಸಾಲದ್ದಕ್ಕೆ ಹೊಂಗೆ ಮರದ ನೆರಳಿನ ಕೆಳಗೆ ಅಂಗಡಿ. ನಿಲ್ಲಲು ಆಗದವರಿಗೆ ಒಂದು ಕುರ್ಚಿ. ಬೇಸಿಗೆಯಲ್ಲಿ ಎರಡು ನಿಮಿಷ ತಂಪಾಗಿ ನಿಲ್ಲಬೇಕೆನ್ನುವ ಮನಸ್ಸಿಗೂ ಆತ ಜಾಗ ಮಾಡಿಕೊಟ್ಟಿದ್ದ.
ಬೆಳಿಗ್ಗೆ ವ್ಯಾಪಾರ ಆರಂಭಿಸಿದರೆ ಮಧ್ಯಾಹ್ನದೊಳಗೆ ಆ ದಿನದ ಮಾಲು ಖಾಲಿ. ನೋಡಿದರೆ ಕಾರಣ ಸ್ಪಷ್ಟ. ಒಳ್ಳೆಯ ವ್ಯಾಪಾರಕ್ಕೆ ಕೇವಲ ಸರಕು ಸಾಕಾಗುವುದಿಲ್ಲ; ನಡವಳಿಕೆ, ಶಿಸ್ತು, ಸಹಾನುಭೂತಿ ಮತ್ತು ಜನರ ಜೊತೆ ಬೆರೆಯುವ ಗುಣವೂ ಬೇಕು.
ಕೆಲವರು ಎಳನೀರು ಮಾತ್ರ ಮಾರುವುದಿಲ್ಲ. ಮತ್ತೆ ಮತ್ತೆ ಅಲ್ಲಿಗೇ ಹೋಗಬೇಕೆನಿಸುವ ಮನಸ್ಥಿತಿಯನ್ನು ನಿರ್ಮಿಸುತ್ತಾರೆ.
ನಾನು ಆತನ ವ್ಯಾಪಾರ ಬದ್ಧತೆ, ಜಾಣತನ ಮತ್ತು ಮಾನವೀಯ ನಡವಳಿಕೆಗೆ ಮನಸ್ಸಿನಲ್ಲಿ ಶಭಾಷ್ ಹೇಳುತ್ತಾ, “ಇನ್ನೊಂದು ಎಳನೀರು ಕೊಡಿ…” ಎಂದೆ.