ಅಸ್ಪೃಶ್ಯತೆ ಎಂದಾಗ ನಮ್ಮ ಮನಸ್ಸಿಗೆ ಮೊದಲು ಬರುವುದು ಜಾತಿ ಆಧಾರಿತ ಬೇಧಭಾವ. ಆದರೆ ಬದುಕಿನ ದಾರಿಯಲ್ಲಿ ನಡೆದು ಬಂದ ಅನೇಕ ಅನುಭವಗಳು ನನಗೆ ಕಲಿಸಿದ ಮತ್ತೊಂದು ಸತ್ಯವಿದೆ — ಅಸ್ಪೃಶ್ಯತೆ ಕೇವಲ ಹುಟ್ಟು ಅಥವಾ ಜಾತಿಯಿಂದ ಮಾತ್ರ ಹುಟ್ಟುವುದಿಲ್ಲ. ಅದು ಕೆಲವೊಮ್ಮೆ ಶ್ರೇಷ್ಠತೆಯ ವ್ಯಸನದಿಂದ, ಕೆಲವೊಮ್ಮೆ ಭಿನ್ನತೆಯ ಭಯದಿಂದ, ಮತ್ತೊಮ್ಮೆ ಸಮಾಜದ ಅಸುರಕ್ಷಿತ ಮನಸ್ಥಿತಿಯಿಂದ ಹುಟ್ಟುತ್ತದೆ.
ಇದು ನಾನು ಓದಿದ ಪುಸ್ತಕದ ಮಾತಲ್ಲ. ನಾನು ಅನುಭವಿಸಿದ ಬದುಕಿನ ಮಾತು.
ಮೊದಲ ಅಸ್ಪೃಶ್ಯತೆಯ ಅನುಭವ: ಶಾಲೆಯಲ್ಲೇ ಆರಂಭವಾದ ಏಕಾಂತ
ನನ್ನ ಮೊದಲ ಗಾಢ ಅಸ್ಪೃಶ್ಯತೆಯ ಅನುಭವ ನಾಲ್ಕನೇ ತರಗತಿಯಲ್ಲಿ ಎದುರಾಯಿತು. ಒಂಬತ್ತನೇ ವಯಸ್ಸಿನಲ್ಲಿ ನಾನು ಹೊಸ ಶಾಲೆಗೆ ಸೇರಿದೆ. ಅಲ್ಲಿ ತನಕ ಪ್ರತೀ ತರಗತಿಯಲ್ಲಿ ಮೊದಲ ಸ್ಥಾನ ನನ್ನದೇ ಆಗಿತ್ತು. ಹೊಸ ಶಾಲೆಯಲ್ಲಿಯೂ ಅದೇ ಸಾಧನೆ ಮುಂದುವರಿಯಿತು. ಆದರೆ ಅದರಿಂದ ನಾನು ಗೆದ್ದದ್ದು ಅಂಕಗಳನ್ನು ಮಾತ್ರ; ಜನರನ್ನು ಅಲ್ಲ.
ಇಲ್ಲಿಯವರೆಗೆ ಮೊದಲ ಸ್ಥಾನದಲ್ಲಿದ್ದ ವಿದ್ಯಾರ್ಥಿನಿಯ ಸುತ್ತಲಿದ್ದ ಗುಂಪು, ನನ್ನ ವಿರುದ್ಧ ಒಂದಾಗಿ ನಿಂತಿತು. ಆಟ, ಪಾಠ, ಸ್ನೇಹ — ಎಲ್ಲಿಂದಲೂ ನನ್ನನ್ನು ನಿಧಾನವಾಗಿ ಹೊರಗಿಟ್ಟರು. ಒಂದು ತರಗತಿ ತುಂಬ ಜನರ ಮಧ್ಯೆ ಇದ್ದರೂ, ಒಂಟಿಯಾಗಿರುವ ಅನುಭವವೇ ಅಸ್ಪೃಶ್ಯತೆಯ ಮೊದಲ ಮುಖ.
ಆ ನೋವು ಅಷ್ಟೊಂದು ಆಳವಾಗಿತ್ತು ಎಂದರೆ, ನಂತರ ಹಲವು ವರ್ಷಗಳ ಕಾಲ ಮತ್ತೆ ಮೊದಲ ಸ್ಥಾನ ಪಡೆಯುವ ಧೈರ್ಯವೇ ನನಗಿರಲಿಲ್ಲ. ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಯಲ್ಲಿ ಅಂಕಗಳು ನನ್ನನ್ನು ಮತ್ತೆ ಮೊದಲಿಗರ ಸಾಲಿಗೆ ತಳ್ಳುವವರೆಗೆ, “ಮುಂದೆ ಬರಬೇಕು” ಎಂಬ ಆಸೆಗಿಂತ “ಮತ್ತೆ ಹೊರಗಿಡಲ್ಪಡಬಾರದು” ಎಂಬ ಭಯವೇ ಹೆಚ್ಚು ಬಲವಾಗಿತ್ತು.
ಸಮಾಜದ ಕ್ರೌರ್ಯ: ತಪ್ಪು ಮಾಡದವರಿಗೂ ಶಿಕ್ಷೆ
ಇದೇ ಸಮಯದಲ್ಲಿ ಕುಟುಂಬದಲ್ಲಿ ನಡೆದ ಒಂದು ದುರಂತ ನನ್ನ ಬದುಕಿನ ಮತ್ತೊಂದು ಅಧ್ಯಾಯವನ್ನು ತೆರೆದಿತು. ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ನೀಡುವ ಸಮಾಜ ನಮ್ಮದು. ಸೌಮ್ಯ ಸ್ವಭಾವದ, ಅಸಹಾಯಕ ಹೆಣ್ಣುಮಕ್ಕಳನ್ನು ಸಮಾಜ ಬಹಳ ಸುಲಭವಾಗಿ ಗುರಿಯಾಗಿಸುತ್ತದೆ.
ಕೆಲವೊಮ್ಮೆ ಮಾತುಗಳೇ ಅಸ್ಪೃಶ್ಯತೆಯ ಆಯುಧವಾಗುತ್ತವೆ. ಹೊರಗೆ ನಿಲ್ಲಿಸುವುದಕ್ಕಿಂತಲೂ ಹೆಚ್ಚು ನೋವು ಕೊಡಬಲ್ಲವು ಜನರ ಕಣ್ಣುಗಳು, ಗುಸುಗುಸುಗಳು, ನಿರ್ಲಕ್ಷ್ಯಗಳು.
ಅದಕ್ಕೂ ಮೊದಲು ನಡೆದ ಇನ್ನೊಂದು ಘಟನೆ ನನ್ನ ಬಾಲ ಮನಸ್ಸಿನ ಮೇಲೆ ಆಳವಾದ ಗುರುತು ಬಿಟ್ಟಿತ್ತು. ಶಾಲೆಯಲ್ಲಿ ನಡೆದ ಕಳ್ಳತನಕ್ಕೆ ನನ್ನ ಮೇಲೆ ಆರೋಪ ಬಂತು. ಮಾಡದ ತಪ್ಪಿಗೆ “ಕಳ್ಳ” ಎಂಬ ಮುದ್ರೆ ಬಿದ್ದಾಗ, ಜೊತೆಗೂಡಿ ಬೆಳೆದ ಸಂಬಂಧಿಕರು ಮತ್ತು ಸಹಪಾಠಿಗಳೇ ದೂರ ಸರಿದರು. ಒಬ್ಬ ವ್ಯಕ್ತಿಯನ್ನು ಸಮಾಜ ಕೇವಲ ಅನುಮಾನದಿಂದಲೇ ಅಸ್ಪೃಶ್ಯನನ್ನಾಗಿ ಮಾಡಿಬಿಡಬಹುದು ಎಂಬುದು ಅಂದು ಅರ್ಥವಾಯಿತು.
ಹೆಣ್ಣುಮಗಳ ಮೇಲಿನ ಸಂಶಯದ ಸಮಾಜ
ಹೈಸ್ಕೂಲ್‌ಗೆ ಬಂದಾಗ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದವು. ಗಂಟಲು ನೋವು, ಜ್ವರ — ಆಗಾಗ ವೈದ್ಯರನ್ನು ಸಂಪರ್ಕಿಸಬೇಕಾಗುತ್ತಿತ್ತು. ನಾನು ಹೆಣ್ಣು ವೈದ್ಯರ ಬಳಿಗೇ ಹೋಗುತ್ತಿದ್ದೆ. ಆದರೆ ಅದೂ ಕೆಲವರ ಕಣ್ಣುಗಳಲ್ಲಿ “ವಿಚಿತ್ರ ವರ್ತನೆ”ಯಾಯಿತು.
“ಅವಳು ಯಾವಾಗಲೂ ಹೆಣ್ಣು ವೈದ್ಯರ ಬಳಿಗೇ ಯಾಕೆ ಹೋಗುತ್ತಾಳೆ?” ಎಂಬ ಪ್ರಶ್ನೆಗಳ ಮೂಲಕ ಮತ್ತೊಂದು ಬಗೆಯ ಅಸ್ಪೃಶ್ಯತೆ ನನ್ನ ಸುತ್ತ ಕಟ್ಟಲ್ಪಟ್ಟಿತು.
ಒಬ್ಬ ಹೆಣ್ಣು ತನ್ನ ಅನುಕೂಲ, ತನ್ನ ಭದ್ರತೆ, ತನ್ನ ಸಂಕೋಚದ ಆಧಾರದ ಮೇಲೆ ಆಯ್ಕೆ ಮಾಡಿಕೊಂಡರೂ, ಸಮಾಜ ಅದನ್ನು ಸಹಜವಾಗಿ ನೋಡುವುದಿಲ್ಲ ಎಂಬುದು ಅಲ್ಲಿ ತಿಳಿಯಿತು.
ಭಾಷೆ, ಹಿನ್ನಲೆ, ಬಡತನ: ಹೊಸ ಹೊಸ ಅಸ್ಪೃಶ್ಯತೆಗಳು
ಕಾಲೇಜಿಗೆ ಬಂದಾಗ ಮತ್ತೊಂದು ಲೋಕ ಎದುರಾಯಿತು. ಹಳ್ಳಿಯ ಮೂಲೆಯಿಂದ ಬಂದ, ಅಪ್ಪಟ ಕನ್ನಡ ಮಾತನಾಡುವ ನಾನು, ನಗರೀಕರಣದ ನಡುವೆ ಭಿನ್ನಳಾಗಿ ಕಂಡೆ. ಇಂಗ್ಲಿಷ್ fluency ಇಲ್ಲ, dressing sense ಇಲ್ಲ, ಮುಕ್ತ ಸಾಮಾಜಿಕ ವರ್ತನೆ ಇಲ್ಲ — ಇವೆಲ್ಲವೂ ನನ್ನನ್ನು “ಹಿಂದುಳಿದವಳು” ಎಂದು ಗುರುತಿಸಲು ಸಾಕಾಯಿತು.
ನನ್ನ ಕುಟುಂಬವೂ ಅಷ್ಟೇ ಸರಳ. ಹೆಚ್ಚು ಓದಿಲ್ಲದ, ಆರ್ಥಿಕವಾಗಿ ಹಿಂದುಳಿದ ಅಪ್ಪ-ಅಮ್ಮ. ಸಾವಿರಾರು “ಮುಂದುವರಿದ” ಸಂಬಂಧಿಗಳ ನಡುವೆ ನಾವು ಸ್ವಾಭಾವಿಕವಾಗಿಯೇ ಅಸಹಾಯಕರಾಗಿ ಕಾಣುತ್ತಿದ್ದೆವು.
ಅದರ ಜೊತೆಗೆ “ಬ್ರಾಹ್ಮಣ” ಎಂಬ ಗುರುತು, “ಉತ್ತರ ಕನ್ನಡದವಳು” ಎಂಬ ಗುರುತು — ಇವುಗಳೂ ಕೆಲವೊಮ್ಮೆ ಅಸ್ಪೃಶ್ಯತೆಯ ಕಾರಣಗಳಾಗುತ್ತವೆ ಎಂಬುದನ್ನು ಬದುಕೇ ಕಲಿಸಿತು.
“ನೀನು ಉತ್ತರ ಕನ್ನಡದವಳು, ಭಲೇ ಹುಶಾರು!”
ಡಿಪ್ಲೊಮಾ ಓದುತ್ತಿದ್ದ ಸಮಯದಲ್ಲಿ ನಡೆದ ಒಂದು ಘಟನೆ ಇಂದಿಗೂ ನೆನಪಿದೆ. ಬಸ್ ಪಾಸ್ ಪಡೆಯಲು ಪಾಲಕರ ಸಹಿ ಬೇಕಾಗಿತ್ತು. ಸ್ನೇಹಿತೆಯರು ತಮ್ಮ ಪಾಲಕರ ಸಹಿಯನ್ನು ತಾವೇ ಹಾಕಿಕೊಂಡು ಪಾಸ್ ಪಡೆದುಕೊಂಡರು. ಅವರ ಪ್ರಭಾವಕ್ಕೆ ಒಳಗಾಗಿ ನಾನೂ ಹಾಗೆಯೇ ಮಾಡಿದೆ.
ಆದರೆ ನನ್ನ ಅರ್ಜಿ ಬಂದಾಗ ಪ್ರತಿಕ್ರಿಯೆ ಬೇರೆ.
“ನೀನು ಉತ್ತರ ಕನ್ನಡದವಳು! ಭಲೇ ಹುಶಾರು!”
ನನಗೆ ಆಗ ಆಶ್ಚರ್ಯವಾಯಿತು. ತಪ್ಪು ಮಾಡಿದ ವಿಚಾರಕ್ಕಿಂತ, “ಉತ್ತರ ಕನ್ನಡದವಳು” ಎಂಬ ಗುರುತೇ ಹೆಚ್ಚು ಗಮನ ಸೆಳೆದಿತ್ತು. ಅಂತೂ ಅಳಿಸಿ, ಕಾಡಿಸಿ ಪಾಸ್ ಕೊಟ್ಟರು. ಆದರೆ ಅಂದು ಒಂದು ಹೊಸ ಸತ್ಯ ತಿಳಿಯಿತು — ಈ ಸಮಾಜದಲ್ಲಿ ವ್ಯಕ್ತಿಯ ವರ್ತನೆಗಿಂತ ಅವನ ಹಿನ್ನೆಲೆಯನ್ನೇ ಹೆಚ್ಚು ತೀರ್ಪುಗೊಳಿಸಲಾಗುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ಅಸ್ಪೃಶ್ಯತೆ
ಈ ಅನುಭವಗಳು ನಿಜ ಜೀವನಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿಯೂ ಬೇರೆ ಬೇರೆ ರೀತಿಯ ಅಸ್ಪೃಶ್ಯತೆಗಳು ಜೀವಂತವಾಗಿವೆ.
ಬಲಪಂಥೀಯರ ಅಸಂಬದ್ಧತೆಯನ್ನು ಪ್ರಶ್ನಿಸಿದರೆ “ಎಡಚಿ” ಎಂಬ ಮುದ್ರೆ. ನಮ್ಮ ಸಮುದಾಯದ ಆಚರಣೆಗಳನ್ನು ಹಂಚಿಕೊಂಡರೆ “ಬ್ರಾಹ್ಮಣ ಬುದ್ಧಿ” ಎಂಬ ಟೀಕೆ.
ಅಂದರೆ, ವ್ಯಕ್ತಿಯ ಚಿಂತನೆಗಳನ್ನು ಅರ್ಥಮಾಡಿಕೊಳ್ಳುವುದಕ್ಕಿಂತ, ಅವನನ್ನು ಯಾವುದೋ ಒಂದು ಗುಂಪಿನೊಳಗೆ ತಳ್ಳಿಬಿಡುವ ಸಮಾಜ ನಮಗೆ ಸುತ್ತಲೂ ಇದೆ.
ಅಸ್ಪೃಶ್ಯತೆ: ಮಾನವ ಮನಸ್ಸಿನ ಸಮಸ್ಯೆ
ಈ ಎಲ್ಲ ಅನುಭವಗಳ ನಂತರ ನನಗೆ ಸ್ಪಷ್ಟವಾಗಿ ಅರ್ಥವಾದದ್ದು ಒಂದೇ — ಅಸ್ಪೃಶ್ಯತೆ ಕೇವಲ ದಲಿತರು ಅಥವಾ ಹಿಂದುಳಿದವರು ಮಾತ್ರ ಅನುಭವಿಸುವ ನೋವಲ್ಲ. ಯಾರೇ ಆಗಿರಲಿ, ಅವರು ಇತರರಿಂದ ಭಿನ್ನರಾಗಿದ್ದರೆ, ಅಥವಾ ಸಮಾಜದ ರೂಢಿಗತ ಮಾದರಿಗಳಿಗೆ ಸರಿಹೊಂದದಿದ್ದರೆ, ಯಾವುದೋ ಒಂದು ರೂಪದಲ್ಲಿ ಅಸ್ಪೃಶ್ಯತೆಯನ್ನು ಎದುರಿಸಬೇಕಾಗುತ್ತದೆ.
ಕೆಲವೊಮ್ಮೆ ಪ್ರತಿಭೆ ಅಸ್ಪೃಶ್ಯತೆಯಾಗುತ್ತದೆ. ಕೆಲವೊಮ್ಮೆ ಬಡತನ. ಕೆಲವೊಮ್ಮೆ ಜಾತಿ. ಕೆಲವೊಮ್ಮೆ ಭಾಷೆ. ಮತ್ತೊಮ್ಮೆ ಸ್ವತಂತ್ರ ಚಿಂತನೆ.
ಆದರೆ ಈ ಅಸ್ಪೃಶ್ಯತೆಯೇ ಕೆಲವೊಮ್ಮೆ ಅಜ್ಞಾತ ವರವಾಗುತ್ತದೆ. ಅದು ನಮ್ಮನ್ನು ನಮ್ಮೊಳಗೆ ನೋಡಿಕೊಳ್ಳಲು ಕಲಿಸುತ್ತದೆ. ನಮ್ಮ ಕಾಲಿನ ಮೇಲೆ ನಿಲ್ಲಲು ಕಲಿಸುತ್ತದೆ. ಯಾರ ಅನುಕಂಪವಿಲ್ಲದೇ ಬದುಕುವ ಧೈರ್ಯ ಕೊಡುತ್ತದೆ.
ಒಂದು ಹಂತದ ನಂತರ ಸಮಾಜದ ಒಪ್ಪಿಗೆಯಿಗಿಂತ ಸ್ವಂತ ಸ್ಪಷ್ಟತೆ ದೊಡ್ಡದಾಗಿ ಕಾಣುತ್ತದೆ. ಆಗ ಯಾವ ಮೀಸಲಾತಿ, ಯಾವ ಅನುಕಂಪ, ಯಾವ ಗುಂಪಿನ ಬೆಂಬಲವೂ ಮುಖ್ಯವಾಗುವುದಿಲ್ಲ. ಮುಖ್ಯವಾಗುವುದು — ನಮ್ಮೊಳಗಿನ ಆತ್ಮಗೌರವ ಮತ್ತು ಬದುಕನ್ನು ಎದೆಯುಬ್ಬಿಸಿ ಎದುರಿಸುವ ಧೈರ್ಯ.