ದೇವರು ಮೈಮೇಲೆ ಬರುತ್ತಾನಾ? ನನ್ನ ಕುಂಭಕೋಣಂ ಪ್ರವಾಸ ಕಲಿಸಿದ ವಿಚಿತ್ರ ಪಾಠ

ಜ್ಯೋತಿಷ್ಯದ ಸಂಭ್ರಮ ಯಾಕೆ?

2008-09ರ ಸಮಯ. ಮನೆಯವರಿಗೆ ನನ್ನ ಮದುವೆಯ ಹುಚ್ಚು ಹಿಡಿದಿತ್ತು. ಆದರೆ ನನ್ನ ಮನಸ್ಸಿನಲ್ಲಿ ಮದುವೆಯ ಬಸ್ಸು ಆಗಲೇ ಓಡಿ ಹೋಗಿತ್ತು. ಒಮ್ಮೆ ಪಾಸಾದ ಗುರಿಯ ಬಸ್ಸಿಗೆ ಮತ್ತೆ ಕಾಯುವ ಅಭ್ಯಾಸ ನನಗಿಲ್ಲ. ಈ ಸಣ್ಣ ಸಂಗತಿ ಮನೆಯವರಿಗೆ ಮಾತ್ರ ಅರ್ಥವಾಗುತ್ತಿರಲಿಲ್ಲ. ಅವರದ್ದು ಒಂದೇ ವರಾತ – ಮದುವೆ, ಮದುವೆ, ಮದುವೆ!

ಅದಕ್ಕೆ ಸರಿಯಾಗಿ ಹಿತೈಷಿಗಳೂ ಸಿದ್ಧ. ಇದ್ದಬದ್ದ ಜ್ಯೋತಿಷಿಗಳ ಹತ್ತಿರ ಕರೆದೊಯ್ಯುವುದು ಅಥವಾ ಹೋಗು ಎನ್ನುವುದು, ಅವರು ಯಾವುದಾದರೂ ಪರಿಹಾರ ಹೇಳುವುದು, ಅದನ್ನು ಮನೆಗೆ ಬಂದು ಹೇಳುವುದು. ನಾನೂ ಇವರಿಗೆ “ನನಗೆ ಮದುವೆ ಬೇಡ” ಎಂದು ಅರ್ಥ ಮಾಡಿಸುವುದಕ್ಕಿಂತ ಅವರು ಹೇಳಿದ ಪರಿಹಾರಗಳನ್ನು ಮಾಡಿ ನೋಡುವುದು, ಪರೀಕ್ಷಿಸುವುದು ಸುಲಭ ಎಂದುಕೊಳ್ಳುತ್ತಿದ್ದೆ. ದುಡಿಯುತ್ತಿದ್ದೆ, ಹಣ ನನ್ನದೇ ಇತ್ತು. ಹಾಗಾಗಿ ಪರಿಹಾರಕ್ಕೆ ಹಣ ಖರ್ಚು ಮಾಡುವುದರ ಬಗ್ಗೆ ದೊಡ್ಡದಾಗಿ ಯೋಚಿಸುವ ಸಂದರ್ಭವೂ ಇರಲಿಲ್ಲ.

ಕುಂಭಕೋಣದಲ್ಲಿ ಕಂಡಿದ್ದೇನು?

ಅಂತಹ ಒಂದು ಪರಿಹಾರ ಕಾರ್ಯಕ್ರಮದಲ್ಲಿ ಕುಂಭಕೋಣಂನ ನವಗ್ರಹ ದೇವಾಲಯಗಳ ಭೇಟಿಯೂ ಸೇರಿಕೊಂಡಿತ್ತು. ನಾನು, ನನ್ನ ತಂಗಿ ಮತ್ತು ಒಬ್ಬ ಸ್ನೇಹಿತೆ ಮೂವರೂ ಕಾಚಿಗುಡ ರೈಲಿನಲ್ಲಿ ಬೆಳಗಿನ ಜಾವ ಕುಂಭಕೋಣಂ ತಲುಪಿದೆವು. ಅಲ್ಲಿ ನಮಗಾಗಿ ಆಗಲೇ ಜ್ಯೋತಿಷ್ಯ ಹೇಳಿದವರು ಒಬ್ಬರನ್ನು ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದರು. ಅವರು ಒಂದು ಕಾರು ಬುಕ್ ಮಾಡಿ, ಹೋಟೆಲಿನಲ್ಲಿ ನಮ್ಮ ವಾಸ್ತವ್ಯವನ್ನೂ ವ್ಯವಸ್ಥೆ ಮಾಡಿದ್ದರು. ಎಲ್ಲವೂ ಸುರಕ್ಷಿತವಾಗಿತ್ತು.

ಇದನ್ನೂ ಓದಿ :

ಔಷಧವೂ ನಕಲಿಯಾಗುವ ಕಾಲ: ನಮ್ಮ ಅಸಹಾಯಕತೆಯ ಬೆಲೆ ಎಷ್ಟು?

ಹೀಗೆ ನಾವು ಮೂವರೂ ಎರಡು ದಿನಗಳ ಕಾಲ ಕುಂಭಕೋಣಂ ಸುತ್ತುತ್ತಲೇ ಇದ್ದೆವು. ಸೂರ್ಯನಿಂದ ಹಿಡಿದು ನವಗ್ರಹಗಳ ಪ್ರತಿಯೊಂದು ಗ್ರಹಕ್ಕೂ ಪ್ರತ್ಯೇಕ ದೇವಾಲಯ. ಒಂದೊಂದು ದೇವಾಲಯಕ್ಕೂ ಒಂದೊಂದು ಕಥೆ, ಒಂದೊಂದು ನಂಬಿಕೆ, ಒಂದೊಂದು ಆಚರಣೆ. ಮಹಾಭಾರತದಲ್ಲಿ ನನಗೆ ಬಹಳ ಇಷ್ಟವಾದ ಕಥೆ ನಳ ಮಹಾರಾಜನದ್ದು. ಆ ನಳನಿಗೆ ಕಲಿ ಬಿಟ್ಟ ಜಾಗವೆಂದೂ, ಶನಿ ದೋಷ ಪರಿಹಾರದ ಸ್ಥಳವೆಂದೂ ಗುರುತಿಸಲಾಗಿದ್ದ ಜಾಗವನ್ನೂ ನೋಡಿದೆ.

ಗುರು, ಶುಕ್ರ, ರಾಹು, ಕೇತು, ಚಂದ್ರ, ಮಂಗಳ … ಹೀಗೆ ಒಂದೇ ಸಮನೆ ನವಗ್ರಹಗಳ ದೇವಾಲಯಗಳನ್ನು ನೋಡುತ್ತಾ ಹೋದೆವು. ಒಂದೊಂದು ದೇವಾಲಯವೂ ನನ್ನೊಳಗೆ ಒಂದೊಂದು ಪ್ರಶ್ನೆ ಹುಟ್ಟಿಸುತ್ತಿತ್ತು. ಮೂರೂ ಶಕ್ತಿಯರು ಒಂದೇ ಗರ್ಭಗುಡಿಯಲ್ಲಿರುವ ವಿಸ್ಮಯವೂ ನೋಡಿದೆ. ಆ ದೇವಾಲಯಗಳ ಹೆಸರು ಈಗ ನೆನಪಿಲ್ಲ. ಆದರೆ ಆ ದೃಶ್ಯಗಳು ಮಾತ್ರ ನೆನಪಿನಲ್ಲಿವೆ.

ದೇವರು ಮೈಮೇಲೆ ಬರುತ್ತಾನಾ?

ಆ ದಿನ ಅಮಾವಾಸ್ಯೆ. ರಾಹು ದೇವಾಲಯದಲ್ಲಿ ರಾಹುಕಾಲ. ಭವ್ಯವಾದ ದೇವಾಲಯದೊಳಗೆ ಸರತಿ ಸಾಲಿನಲ್ಲಿ ನಿಂತಿದ್ದೆ. ಅಷ್ಟರಲ್ಲಿ ದೇವಾಲಯದ ಗರ್ಭಗುಡಿಯಲ್ಲಿ ಅಭಿಷೇಕ ಆರಂಭವಾಯಿತು. ಸುಮಾರು ಮಧ್ಯಾಹ್ನ ೧.೩೦ರ ಸಮಯ. ಗರ್ಭಗುಡಿಯ ಹೊರಗೆ ಗಂಟೆ ನಾದದ ಬದಲು ಹಾವಿನ ಸುಂದರ ಶಹನಾಯಿ ನಾದವೂ ಕೇಳಿಸತೊಡಗಿತು. ಆ ಧ್ವನಿಗೆ ವಿಚಿತ್ರವಾದ ಲಯವಿತ್ತು. ನಾನು ಅದನ್ನು ಕೇಳುತ್ತಾ ಕೇಳುತ್ತಾ ಗೊತ್ತಿಲ್ಲದೆ ಹೆಜ್ಜೆ ಹಾಕತೊಡಗಿದ್ದೆ.

ಕೆಲವೇ ಕೆಲವು ಕ್ಷಣ.

ಯಾರಿಗಾದರೂ ಗೊತ್ತಾಗುವ ಮುಂಚೆ ನನ್ನ ಪ್ರಜ್ಞೆ ಜಾಗೃತವಾಯಿತು. ನಾನು ತಕ್ಷಣ ಹೆಜ್ಜೆ ನಿಲ್ಲಿಸಿದೆ. ಅಲ್ಲೇ ನಿಂತು ಶಹನಾಯಿ ವಾದನವನ್ನು ಕೇಳುತ್ತಾ ಒಳಗೊಳಗೇ ಆನಂದಿಸತೊಡಗಿದೆ. ಆದರೆ ಒಂದು ಕ್ಷಣ ಯೋಚಿಸಿ ನೋಡಿ.

ನಾನು ಹಾಗೆಯೇ ಹೆಜ್ಜೆ ಹಾಕುತ್ತಾ ಹೋಗಿದ್ದರೆ?

“ದೇವರು ಮೈಮೇಲೆ ಬಂದಿದ್ದಾನೆ!” ಎಂದು ಯಾರಾದರೂ ಹೇಳುತ್ತಿದ್ದರೇನೋ! ಸುತ್ತಮುತ್ತಲಿನವರು ಅದನ್ನು ದೈವಿಕ ಅನುಭವ ಎಂದು ಭಾವಿಸುತ್ತಿದ್ದರೇನೋ? ನನ್ನ ಸುತ್ತ ಜನ ಸೇರಿ, ನಾನು ಕೂಡ ಆ ವಾತಾವರಣದಲ್ಲಿ ಮತ್ತಷ್ಟು ತಲ್ಲೀನಳಾಗಿದ್ದರೆ? ಬಹುಶಃ ಮತ್ತೊಂದು ‘ಸು ಫ್ರಂ ಸೋ’ ಆಗುತ್ತಿತ್ತು!

ನಮ್ಮ ಮೇಲೆ ನಾವು ನಿಯಂತ್ರಣ ಕಳೆದುಕೊಳ್ಳುವ ಪ್ರಕ್ರಿಯೆ!?

ಅಲ್ಲಿ ನನಗೆ ಪ್ರಶ್ನೆ ಹುಟ್ಟಿತು – ದೇವರು ನಮ್ಮ ಮೈಮೇಲೆ ಬರಬೇಕೋ, ಬಿಡಬೇಕೋ ಎಂಬುದನ್ನು ವ್ಯಕ್ತಿಯೇ ನಿಯಂತ್ರಿಸಬಹುದೇ?

ನನ್ನ ಅನುಭವದ ಮಟ್ಟಿಗೆ, ಬಹುಶಃ ಹೌದು.

ವೈಜ್ಞಾನಿಕ ಸತ್ಯಕ್ಕಾಗಿ ಇಲ್ಲಿ ನೋಡಿ – https://pmc.ncbi.nlm.nih.gov/articles/PMC4735242/

ನಮ್ಮೊಳಗೆ ಸರಿ-ತಪ್ಪಿನ ಪರಿಣಾಮಗಳನ್ನು ವಿವೇಚಿಸುವ ಮನಸ್ಸು ಜಾಗೃತವಾಗಿರಬೇಕು. ಯಾವುದೋ ಒಂದು ಕ್ಷಣದಲ್ಲಿ ನಮ್ಮ ದೇಹ, ಮನಸ್ಸು, ವಾತಾವರಣ, ಸಂಗೀತ, ನಂಬಿಕೆ, ನಿರೀಕ್ಷೆ, ಭಾವನೆ ಇವೆಲ್ಲ ಸೇರಿ ನಮ್ಮನ್ನು ಒಂದು ನಿರ್ದಿಷ್ಟ ಸ್ಥಿತಿಗೆ ಕೊಂಡೊಯ್ಯಬಹುದು. ಅದನ್ನು ತಕ್ಷಣವೇ “ದೇವರು ಮೈಮೇಲೆ ಬಂದಿದ್ದಾನೆ” ಎಂದು ವ್ಯಾಖ್ಯಾನಿಸಬೇಕೇ? ಅಥವಾ ಮೊದಲು ನಮ್ಮೊಳಗೆ ಏನಾಗುತ್ತಿದೆ ಎಂದು ಗಮನಿಸಬೇಕೇ? ಈ ಪ್ರಶ್ನೆ ನನಗೆ ಆ ದಿನದಿಂದ ಕಾಡತೊಡಗಿತು.

ತುಂಬಾ ಸಲ ನಾವು ದೇವರು ನಮ್ಮ ಮೈಮೇಲೆ ಬರುತ್ತಾನೆ ಎಂದು ನಂಬುವುದಕ್ಕಿಂತ, ನಾವೇ ದೇವರಾಗುವ ಹುಂಬತನವನ್ನು ಮೈಮೇಲೆ ಹೊತ್ತುಕೊಳ್ಳುತ್ತೇವೆಯೇನೋ ಅನ್ನಿಸುತ್ತದೆ. ನಮ್ಮ ಮಾತಿಗೆ ವಿಶೇಷ ಶಕ್ತಿ ಇದೆ, ನಮ್ಮ ಅನುಭವ ಸಾಮಾನ್ಯ ಮನುಷ್ಯರಿಗೆ ಸಿಗುವುದಿಲ್ಲ, ನಮ್ಮ ಮೂಲಕ ಯಾವುದೋ ಅತಿಮಾನುಷ ಶಕ್ತಿ ಮಾತನಾಡುತ್ತಿದೆ ಎಂಬ ಭಾವನೆ ನಿಧಾನವಾಗಿ ನಮ್ಮೊಳಗೆ ಶ್ರೇಷ್ಠತೆಯ ಭಾವವನ್ನು ಬೆಳೆಸಬಹುದು. ಅಲ್ಲಿಂದ ಅಹಂಕಾರ ಶುರುವಾಗಬಹುದು. ಕೊನೆಗೆ ನಮ್ಮನ್ನು ನಾವೇ ಶ್ರೇಷ್ಠತೆಯ ವ್ಯಸನದ ಕೂಪಕ್ಕೆ ತಳ್ಳಿಕೊಳ್ಳಬಹುದು.

ಅದರಿಂದ ಆ ದಿನದಿಂದ ನನ್ನ ಮಟ್ಟಿಗೆ “ದೇವರು” ಮತ್ತು “ದೇವರು ಮೈಮೇಲೆ ಬರುವುದು” ಎಂಬ ವಿಷಯವೂ ಅಧ್ಯಯನಕ್ಕೆ ಯೋಗ್ಯವಾದ ವಿಷಯವಾಯಿತು. ಅದನ್ನು ಕೇವಲ ಭಕ್ತಿ ಅಥವಾ ಮೂಢನಂಬಿಕೆ ಎಂಬ ಎರಡು ತುದಿಗಳಲ್ಲಿ ಒಂದಕ್ಕೆ ತಳ್ಳಿಬಿಡುವುದಕ್ಕಿಂತ, ಮನುಷ್ಯನ ಮನಸ್ಸು, ದೇಹ, ನಂಬಿಕೆ, ಸಮೂಹದ ಪ್ರಭಾವ ಮತ್ತು ಭಾವನಾತ್ಮಕ ಸ್ಥಿತಿಗಳ ದೃಷ್ಟಿಯಿಂದ ನೋಡುವ ಕುತೂಹಲ ನನ್ನೊಳಗೆ ಮೂಡಿತು.

ದೇವರು ನಮ್ಮಲ್ಲಿಯೇ ಇದ್ದಾನೆ, ಆದರೂ…!

ವಿಚಿತ್ರವೆಂದರೆ, ನಾವು ದೇವರನ್ನು ಹುಡುಕಲು ಎಷ್ಟು ದೂರ ಹೋಗುತ್ತೇವೆ! ನಮ್ಮೊಳಗೇ ಇರುವ ನಿನ್ನನ್ನು ಎಲ್ಲೆಲ್ಲಿ ಹುಡುಕಿಕೊಂಡು ಹೋಗುವಂತೆ ಮಾಡುತ್ತೀಯಪ್ಪಾ! ನೀನು ನನ್ನೊಳಗೇ ಇರುವಾಗ, ಎಲ್ಲೆಲ್ಲೂ ಇರುವಾಗ, ನಿನ್ನನ್ನು ಹುಡುಕಿಕೊಂಡು ಇಷ್ಟು ದೂರ ಬರಬೇಕೆ? ಎಂದು ನಾನು ಮನಸ್ಸಿನೊಳಗೆ ನಗುತ್ತಾ ದೇವರ ದರ್ಶನ ಮಾಡಿದೆ. ದೇವಾಲಯದ ಸೌಂದರ್ಯವನ್ನು ಕಣ್ಣುತುಂಬಿಕೊಂಡೆ.

ಆ ಪ್ರವಾಸದಲ್ಲಿ ದೇವರನ್ನು ಮಾತ್ರ ನೋಡಲಿಲ್ಲ. ಮನುಷ್ಯರನ್ನೂ ನೋಡಿದೆ.

ನನ್ನೊಂದಿಗೆ ಬಂದ ತಂಗಿ, ಗೆಳತಿ, ಅಲ್ಲಿಯ ಅರ್ಚಕರು, ಭಕ್ತರು, ಪ್ರವಾಸಿ ಮಾರ್ಗದರ್ಶಕರು—ಎಲ್ಲರ ನಡೆ, ನುಡಿ, ಮುಖಭಾವ, ಮನಸ್ಸುಗಳನ್ನು ಸುಮ್ಮನೆ ಗಮನಿಸುತ್ತಿದ್ದೆ. ಯಾರು ಏನನ್ನು ನಂಬುತ್ತಾರೆ? ಏಕೆ ನಂಬುತ್ತಾರೆ? ನಂಬಿಕೆಯ ಮುಂದೆ ಅವರ ವರ್ತನೆ ಹೇಗೆ ಬದಲಾಗುತ್ತದೆ? ಭಕ್ತಿ ಮನುಷ್ಯನನ್ನು ಹೇಗೆ ಮೃದುಗೊಳಿಸುತ್ತದೆ? ಕೆಲವೊಮ್ಮೆ ಅದೇ ಭಕ್ತಿ ಅವನೊಳಗೆ ಹೇಗೆ ಅಧಿಕಾರದ ಭಾವವನ್ನು ತರುತ್ತದೆ? ಇವೆಲ್ಲವೂ ನನಗೆ ದೇವಾಲಯದಷ್ಟೇ ಕುತೂಹಲದ ಸಂಗತಿಗಳಾಗಿದ್ದವು.

ಮನುಷ್ಯನ ಮನಸ್ಸು – ಸಿನಿಮಾಗಿಂತ ರೋಚಕ

ನಿಜ ಹೇಳಬೇಕೆಂದರೆ, ವ್ಯಕ್ತಿಯ ಮನಸ್ಸು ಮತ್ತು ಅವನ ನಡೆ-ನುಡಿಗಳು ತುಂಬಾ ಸಲ ಯಾವುದೇ ಸಿನಿಮಾಗಿಂತ ಹೆಚ್ಚು ಮನರಂಜನೆ ನೀಡುತ್ತವೆ. ಅದಕ್ಕಾಗಿಯೇ ನಾನು ಹೀಗೆ ಹೋಗುತ್ತೇನೆ ಕೆಲವೊಮ್ಮೆ ಏಕಾಂತಕ್ಕೆ, ಮತ್ತೆ ಕೆಲವೊಮ್ಮೆ ಜನರೊಟ್ಟಿಗೆ. ಜನರ ನಡುವೆ ಇದ್ದಾಗಲೂ ನಾನು ಕೇವಲ ಭಾಗಿಯಾಗಿರುವುದಿಲ್ಲ; ಕೆಲವೊಮ್ಮೆ ನೋಡುವವಳೂ ಆಗಿರುತ್ತೇನೆ. ಮನುಷ್ಯರನ್ನು ನೋಡುವುದರಲ್ಲಿ, ಅವರ ಮಾತುಗಳ ಹಿಂದೆ ಇರುವ ಮನಸ್ಸನ್ನು ಅರ್ಥಮಾಡಿಕೊಳ್ಳುವುದರಲ್ಲಿ ಒಂದು ವಿಚಿತ್ರವಾದ ಮಜಾ ಇದೆ.

ಆದರೆ ಆ ಕುಂಭಕೋಣಂ ಪ್ರವಾಸಕ್ಕೆ ಇನ್ನೊಂದು ಹಿನ್ನೆಲೆಯೂ ಇತ್ತು. ಮದುವೆಯಾಗಬೇಕೆಂಬ ಮನೆಯವರ ಆಸೆ, ಜ್ಯೋತಿಷಿಗಳ ಸಲಹೆಗಳು, ಪರಿಹಾರಗಳು, ದೇವಾಲಯಗಳ ಸುತ್ತಾಟ. ನಾನು ಅವನ್ನೆಲ್ಲಾ ಮಾಡುತ್ತಿದ್ದರೂ ನನ್ನೊಳಗೆ ಮಾತ್ರ ಒಂದು ಪ್ರಶ್ನೆ ಸ್ಪಷ್ಟವಾಗಿತ್ತು – ನನ್ನ ಬದುಕಿನ ನಿರ್ಧಾರವನ್ನು ಕೊನೆಗೆ ಮಾಡುವುದು ಯಾರು?

ಬಹುಶಃ ಅದೇ ಪ್ರಶ್ನೆ ನನಗೆ ಆ ದಿನ ದೇವರ ವಿಷಯದಲ್ಲೂ ಎದುರಾಯಿತು. ದೇವರು ನನ್ನ ಮೇಲೆ ಬರುತ್ತಾನೋ ಇಲ್ಲವೋ ಎಂಬುದಕ್ಕಿಂತ, ನನ್ನ ಮೇಲೆ ಏನು ಬರುತ್ತದೆ, ಅದನ್ನು ನಾನು ಹೇಗೆ ಅರ್ಥಮಾಡಿಕೊಳ್ಳುತ್ತೇನೆ, ಅದಕ್ಕೆ ನಾನು ಎಷ್ಟು ಅಧಿಕಾರ ಕೊಡುತ್ತೇನೆ ಎಂಬುದು ನನಗೆ ಹೆಚ್ಚು ಮುಖ್ಯವಾಗಿ ಕಾಣಿಸಿತು.

ಈ ಜ್ಯೋತಿಷ್ಯ ಮತ್ತು ಪರಿಹಾರಗಳ ಅನುಭವಗಳ ಬಗ್ಗೆ ಈಗ ಯೋಚಿಸಿದರೆ, ನನ್ನಲ್ಲಿರುವುದು ಒಂದು ಪುಸ್ತಕಕ್ಕಾಗುವಷ್ಟು ಸರಕು. ಎಷ್ಟೋ ಜನರು, ಎಷ್ಟೋ ಜ್ಯೋತಿಷಿಗಳು, ಎಷ್ಟೋ ಪರಿಹಾರಗಳು, ಎಷ್ಟೋ ನಂಬಿಕೆಗಳು, ಅವುಗಳ ಹಿಂದೆ ಇರುವ ಮನಸ್ಸುಗಳು… ಎಲ್ಲವೂ ನನ್ನ ನೆನಪಿನಲ್ಲಿವೆ. ಯಾವಾಗ ಪುಸ್ತಕ ಹೊರಬರುತ್ತದೆ ಎಂದು ಈಗಲೇ ಹೇಳಲಾಗದು. ಆದರೆ ಒಂದು ದಿನ ಹೊರತರುತ್ತೇನೆ. ಇದನ್ನು ನನಗೆ ನಾನೇ ಸಾರ್ವಜನಿಕವಾಗಿ ಮಾಡಿಕೊಳ್ಳುವ ಒಂದು ಪ್ರಮಾಣ ಎಂದಾದರೂ ಕರೆಯಬಹುದು.

ನೆನಪು “ಸತ್ಯಗಳನ್ನು” ಮನದಟ್ಟು ಮಾಡಿಸುವ ಸಂದರ್ಭ

ಈ ಎಲ್ಲಾ ನೆನಪುಗಳು ಧುತ್ತನೆದ್ದು ಬಂದಿದ್ದು ಒಂದು ಸಾಮಾನ್ಯ ಫೇಸ್‌ಬುಕ್ ಸೂಚನೆಯಿಂದ. “15 ವರ್ಷಗಳ ಹಿಂದೆ” ಎಂದು ಹಳೆಯ ಫೋಟೊವೊಂದು ಎದುರಿಗೆ ಬಂತು.

ಆ ಫೋಟೊ ನೋಡಿದ ಮೇಲೆ ನನಗೆ ಕುಂಭಕೋಣಂ ಮಾತ್ರ ನೆನಪಾಗಲಿಲ್ಲ. ಆ ವಯಸ್ಸು ನೆನಪಾಯಿತು. ಆಗ ನನ್ನ ಸುತ್ತಲಿದ್ದ ಜನರು ನೆನಪಾದರು. ಅವರ ನಿರೀಕ್ಷೆಗಳು, ಅವರ ನಂಬಿಕೆಗಳು, ಅವರ ಪ್ರೀತಿ, ಅವರ ಒತ್ತಾಯಗಳು, ಅವರ ವಿಚಿತ್ರಗಳು ಎಲ್ಲವೂ ಮತ್ತೆ ಕಣ್ಣ ಮುಂದೆ ಬಂದವು, ಮತ್ತು ಒಂದು ಕ್ಷಣ ಆ ಫೋಟೊದಲ್ಲಿದ್ದ ನನ್ನನ್ನೇ ನೋಡಿದೆ.

26-27ರ ವಯಸ್ಸಿನ ನಾನು ಹೇಗಿದ್ದೆ ನೋಡಿ!

26-27 ವಯಸ್ಸಿನ ನಾನು

ಮುಖ ಬದಲಾಗಿದೆ. ಜೀವನ ಬದಲಾಗಿದೆ. ನಂಬಿಕೆಗಳು ಬದಲಾಗಿವೆ. ಪ್ರಶ್ನೆಗಳು ಬದಲಾಗಿವೆ. ಆದರೆ ಆ ಹುಡುಗಿಯೊಳಗಿದ್ದ ಒಂದು ಗುಣ ಮಾತ್ರ ಇನ್ನೂ ಹಾಗೆಯೇ ಇದೆ – ನೋಡುತ್ತಲೇ ಇರುವುದು, ಪ್ರಶ್ನಿಸುತ್ತಲೇ ಇರುವುದು, ಮತ್ತು ಮನುಷ್ಯನೊಳಗಿನ ಮನುಷ್ಯನನ್ನು ಹುಡುಕುತ್ತಲೇ ಇರುವುದು.

ಬಹುಶಃ ಅದೇ ನನ್ನ ನಿಜವಾದ ‘ಪರಿಹಾರ’.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment