ಔಷಧವೂ ನಕಲಿಯಾಗುವ ಕಾಲ: ನಮ್ಮ ಅಸಹಾಯಕತೆಯ ಬೆಲೆ ಎಷ್ಟು?

ಬಿಡದಿ, ರಾಮನಗರ. ಬೆಂಗಳೂರಿನ ನೈಋತ್ಯ ಭಾಗದಲ್ಲಿರುವ ಕೈಗಾರಿಕಾ ಪ್ರದೇಶ. ಅಲ್ಲೊಂದು ನಕಲಿ ಔಷಧ ದಂಧೆ ನಡೆಯುತ್ತಿರುವುದು ಪತ್ತೆಯಾಗಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಜಾರಿ ವಿಭಾಗ ನಡೆಸಿದ ದೊಡ್ಡ ಪ್ರಮಾಣದ ದಾಳಿಯಲ್ಲಿ, ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಘಟಕವೊಂದರಿಂದ ₹5 ಕೋಟಿಗೂ ಹೆಚ್ಚು ಮೌಲ್ಯದ ನಕಲಿ ಮತ್ತು ಕಳಪೆ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಖ್ಯಾತ ಬಹುರಾಷ್ಟ್ರೀಯ ಔಷಧ ಕಂಪನಿಗಳ ಹೆಸರಿನ ಲೇಬಲ್‌ಗಳನ್ನು ಅಂಟಿಸಿ ನಕಲಿ ಔಷಧಗಳನ್ನು ಮರುಪ್ಯಾಕೇಜ್ ಮಾಡಲಾಗುತ್ತಿತ್ತು ಎಂಬ ಆರೋಪವೂ ಇದೆ.

ಈ ಸುದ್ದಿಯಲ್ಲಿ ಮೊದಲಿಗೆ ಕಣ್ಣಿಗೆ ಬೀಳುವುದು ₹5 ಕೋಟಿ ಎಂಬ ಮೊತ್ತ. ಆದರೆ ನಿಜವಾಗಿ ಭಯ ಹುಟ್ಟಿಸಬೇಕಾದದ್ದು ಆ ಹಣವಲ್ಲ. ಇದನ್ನು ಓದಿದಾಗ ನನಗೆ ಬರುವುದು ಒಂದೇ ಪ್ರಶ್ನೆ – ಎಲ್ಲಿಗೆ ಬಂತು ನಮ್ಮಗಳ ಜೀವನ? ಹಣಕ್ಕಾಗಿ ಇನ್ನೊಬ್ಬರ ಪ್ರಾಣವನ್ನೂ ಲೆಕ್ಕಿಸದಷ್ಟು ನಾವು ಬದಲಾಗಿದ್ದೇವೆಯೇ?

ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನ ನೋವನ್ನು ವ್ಯಾಪಾರದ ಅವಕಾಶವಾಗಿ ನೋಡಲು ಆರಂಭಿಸಿದಾಗ ಸಮಾಜದ ದೊಡ್ಡ ಅಪಾಯ ಆರಂಭವಾಗುತ್ತದೆ. ಕಳ್ಳತನ ಮಾಡುವುದು ತಪ್ಪು. ಮೋಸ ಮಾಡುವುದು ತಪ್ಪು. ನಕಲಿ ವಸ್ತು ಮಾರುವುದು ತಪ್ಪು. ಆದರೆ ನಕಲಿ ಔಷಧ ಮಾರುವುದು ಇವೆಲ್ಲಕ್ಕಿಂತ ಭೀಕರ. ಏಕೆಂದರೆ ಇಲ್ಲಿ ಮೋಸ ಹೋಗುವ ವ್ಯಕ್ತಿಗೆ ಮೋಸ ಹೋಗುತ್ತಿರುವುದೇ ಗೊತ್ತಾಗುವುದಿಲ್ಲ. ಅವನು ತನ್ನ ಬದುಕನ್ನು ಉಳಿಸಿಕೊಳ್ಳಲು ಖರೀದಿಸಿದ ವಸ್ತುವೇ ಅವನ ಬದುಕಿಗೆ ಅಪಾಯವಾಗಬಹುದು.

ಎಲ್ಲರಿಗೂ ‘ಬರ’ ಇಷ್ಟವಾಗಿದ್ದ ಕಾಲ

ಒಂದು ಕಾಲದಲ್ಲಿ ‘ಬರ’ ಎಂಬ ಪದಕ್ಕೆ ಬಹಳ ಬೇಡಿಕೆ ಇತ್ತು. ಬರ ಎಂದರೆ ಕೆಲಸ ಕಡಿಮೆ, ಬೆಲೆ ಏರಿಕೆ, ಕೊರತೆ, ಕಷ್ಟ. ಸರಕಾರಿ ಅಧಿಕಾರಿಗಳು, ದಲ್ಲಾಳಿಗಳು, ವರ್ತಕರು , ಜಮೀನ್ದಾರರು ಬಡವರ ಬಡತನದ ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಅದಕ್ಕಾಗಿಯೇ ‘ಬರ’ ಎಂದರೆ ಇಷ್ಟ ಎನ್ನುವ ಪದ ಬಳಕೆಗೆ ಬಂತು.

ಆದರೆ ಈಗ ನಮಗೆ ಮತ್ತೊಂದು ರೀತಿಯ ಬರ ಕಾಣಿಸುತ್ತಿದೆ. ಅದು ಅಸಹಾಯಕತೆಯ ಬರ ಮತ್ತು ಅಜ್ಞಾನದ ಬರ. ನಮ್ಮ ಅಸಹಾಯಕತೆಯನ್ನು ಬಳಸಿಕೊಳ್ಳಲು ಮಾರುಕಟ್ಟೆಯಲ್ಲಿ ಯಾವಾಗಲೂ ಯಾರಾದರೂ ಸಿದ್ಧರಿರುತ್ತಾರೆ. ನಮಗೆ ಯಾವುದೋ ವಸ್ತು ಬೇಕು. ಅದರ ಗುಣಮಟ್ಟ ನಮಗೆ ಗೊತ್ತಿಲ್ಲ. ಅದರ ಮೂಲ ಗೊತ್ತಿಲ್ಲ. ಅದರ ತಯಾರಿಕಾ ವಿಧಾನ ಗೊತ್ತಿಲ್ಲ. ಅದನ್ನು ಪರೀಕ್ಷಿಸುವ ಸಾಮರ್ಥ್ಯವೂ ಇಲ್ಲ. ಆದರೆ ನಮಗೆ ಅದು ಬೇಕು. ಈ ಒಂದು ಅಗತ್ಯವೇ ಕೆಲವರ ಪಾಲಿಗೆ ದೊಡ್ಡ ವ್ಯಾಪಾರವಾಗುತ್ತದೆ. ಇದು ಔಷಧದಲ್ಲಿ ಮಾತ್ರವಲ್ಲ. ಆಹಾರದಲ್ಲೂ ಇದೆ. ಶಿಕ್ಷಣದಲ್ಲೂ ಇದೆ. ಹಣಕಾಸಿನ ವ್ಯವಹಾರದಲ್ಲೂ ಇದೆ. ಉದ್ಯೋಗದಲ್ಲೂ ಇದೆ. ಆನ್‌ಲೈನ್ ವಂಚನೆಗಳಲ್ಲೂ ಇದೆ. ನಮಗೆ ಎಲ್ಲಿ ಜ್ಞಾನವಿಲ್ಲವೋ, ಎಲ್ಲಿ ಪರಿಶೀಲಿಸುವ ಸಾಮರ್ಥ್ಯವಿಲ್ಲವೋ, ಎಲ್ಲಿ ಪರ್ಯಾಯವಿಲ್ಲವೋ ಅಲ್ಲೆಲ್ಲಾ ನಮ್ಮ ಅಸಹಾಯಕತೆ ಒಂದು ಮಾರುಕಟ್ಟೆಯಾಗುತ್ತದೆ.

ಅಜ್ಞಾನವೂ ಒಂದು ಮಾರುಕಟ್ಟೆ

ಇದು ಬಹಳ ಕಠಿಣವಾದ ಮಾತು. ಆದರೆ ಯೋಚಿಸಬೇಕಾದ ಮಾತು. ಅಜ್ಞಾನದಲ್ಲಿರುವ ಮನುಷ್ಯನನ್ನು ಮೋಸ ಮಾಡುವುದು ಸುಲಭ. ಅಸಹಾಯಕನನ್ನು ನಿಯಂತ್ರಿಸುವುದು ಸುಲಭ. ಭಯದಲ್ಲಿರುವವನಿಗೆ ಏನನ್ನಾದರೂ ಮಾರುವುದು ಸುಲಭ. ಆತುರದಲ್ಲಿರುವವನಿಂದ ನಿರ್ಧಾರ ತೆಗೆಸುವುದು ಸುಲಭ. ಆದ್ದರಿಂದಲೇ ಸಮಾಜದಲ್ಲಿ ಅಜ್ಞಾನವನ್ನು ಕಡಿಮೆ ಮಾಡುವುದು ಕೇವಲ ಶಿಕ್ಷಣದ ಕೆಲಸವಲ್ಲ. ಅದು ಒಂದು ರೀತಿಯ ಜನರ ರಕ್ಷಣೆಯ ಕೆಲಸ.

ಆದರೆ ಇಲ್ಲಿ ಒಂದು ದೊಡ್ಡ ಮಿತಿ ಇದೆ. ನಾನು ಮಾರುಕಟ್ಟೆಯಿಂದ ಒಂದು ಹಣ್ಣು ಖರೀದಿಸಿದರೆ ಅದು ಹಾಳಾಗಿದೆಯೇ ಎಂದು ನೋಡಬಹುದು. ಒಂದು ತರಕಾರಿ ಕೊಳೆತಿದೆಯೇ ಎಂದು ನೋಡಬಹುದು. ಒಂದು ಬಟ್ಟೆಯ ಗುಣಮಟ್ಟವನ್ನು ಕೈಯಲ್ಲಿ ಹಿಡಿದು ಅಂದಾಜಿಸಬಹುದು. ಆದರೆ ಒಂದು ಮಾತ್ರೆಯ ಒಳಗೆ ಏನಿದೆ ಎಂಬುದನ್ನು ನಾನು ಹೇಗೆ ಪರೀಕ್ಷಿಸಲಿ? ಒಂದು ಇಂಜೆಕ್ಷನ್ ನಿಜವೇ, ನಕಲಿಯೇ ಎಂದು ಸಾಮಾನ್ಯ ಮನುಷ್ಯ ಹೇಗೆ ತಿಳಿಯಬೇಕು ? ಕ್ಯಾನ್ಸರ್ ಔಷಧದ ಗುಣಮಟ್ಟವನ್ನು ರೋಗಿಯೊಬ್ಬರು ಹೇಗೆ ಪರಿಶೀಲಿಸಬಹುದು? ಇನ್ಸುಲಿನ್ ಸರಿಯಾಗಿದೆಯೇ ಎಂದು ಮಧುಮೇಹಿ ತನ್ನ ಕಣ್ಣಿನಿಂದ ಹೇಗೆ ಕಂಡುಕೊಳ್ಳಲು ಸಾಧ್ಯ? ರೇಬಿಸ್ ಲಸಿಕೆ ನಿಜವಾಗಿದೆಯೇ ಎಂದು ನಾಯಿಯಿಂದ ಕಚ್ಚಿಸಿಕೊಂಡ ವ್ಯಕ್ತಿ ಹೇಗೆ ಖಚಿತಪಡಿಸಿಕೊಳ್ಳುವುದು? ಇಲ್ಲಿಯೇ ನಮ್ಮ ಅಸಹಾಯಕತೆ ಸಂಪೂರ್ಣವಾಗುತ್ತದೆ.

ಔಷಧದ ವಿಷಯದಲ್ಲಿ ನಾವು ಯಾರನ್ನು ನಂಬಬೇಕು?

ವೈದ್ಯರನ್ನು ನಂಬುತ್ತೇವೆ. ಔಷಧಾಲಯವನ್ನು ನಂಬುತ್ತೇವೆ. ಔಷಧ ಕಂಪನಿಯನ್ನು ನಂಬುತ್ತೇವೆ. ಪ್ಯಾಕೆಟ್ ಮೇಲಿನ ಹೆಸರನ್ನು ನಂಬುತ್ತೇವೆ. ಲೇಬಲ್ ಅನ್ನು ನಂಬುತ್ತೇವೆ. ಸರ್ಕಾರದ ನಿಯಂತ್ರಣ ವ್ಯವಸ್ಥೆಯನ್ನು ನಂಬುತ್ತೇವೆ. ಅಂತಿಮವಾಗಿ, ನಮ್ಮ ಬದುಕನ್ನೇ ಆ ನಂಬಿಕೆಯ ಮೇಲೆ ಇಡುತ್ತೇವೆ. ಅದರಲ್ಲಿ ಯಾವುದಾದರೂ ಒಂದು ಹಂತದಲ್ಲಿ ಮೋಸ ನಡೆದರೆ ಅದರ ಪರಿಣಾಮ ಕೊನೆಯ ವ್ಯಕ್ತಿಯ ದೇಹದ ಮೇಲೆ ಬೀಳುತ್ತದೆ.

ಇದಕ್ಕಾಗಿಯೇ ಔಷಧ ವಲಯದಲ್ಲಿ ನಿಯಂತ್ರಣ, ಪರೀಕ್ಷೆ, ಪೂರೈಕೆ ಸರಪಳಿಯ ಮೇಲ್ವಿಚಾರಣೆ ಮತ್ತು ಕಠಿಣ ಕಾನೂನು ಜಾರಿ ಇಷ್ಟು ಮುಖ್ಯ. ಇಲ್ಲಿ ಕೇವಲ ನಕಲಿ ಔಷಧ ತಯಾರಿಕೆಯ ಪ್ರಶ್ನೆಯಲ್ಲ; ನಂಬಿಕೆಗೆ ಸಂಬಂಧಿಸಿದ ಸಂಪೂರ್ಣ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಳ್ಳುವ ಪ್ರಶ್ನೆ ಇದೆ.

ಹಣದ ಮುಂದೆ ಮನುಷ್ಯನ ಜೀವ ಇಷ್ಟು ಅಗ್ಗವೇ?

ಇಲ್ಲಿ ನಿಂತು ಆ ಆರೋಪಿಗಳ ಮನಸ್ಥಿತಿಯ ಬಗ್ಗೆ ಯೋಚಿಸಿದಾಗ ನನಗೆ ಒಂದು ಪ್ರಶ್ನೆ ಬರುತ್ತದೆ. ಒಬ್ಬ ವ್ಯಕ್ತಿ ನಕಲಿ ಔಷಧ ತಯಾರಿಸುತ್ತಿದ್ದಾನೆ ಎಂದುಕೊಳ್ಳಿ. ಅವನಿಗೆ ಅದು ತೆಗೆದುಕೊಳ್ಳುವ ವ್ಯಕ್ತಿ ಯಾರು ಎಂಬುದು ಗೊತ್ತಿಲ್ಲ. ಅವನ ಕುಟುಂಬ ಗೊತ್ತಿಲ್ಲ. ಅವನ ಮಕ್ಕಳ ಬಗ್ಗೆ ಗೊತ್ತಿಲ್ಲ. ಅವನ ನೋವು ಗೊತ್ತಿಲ್ಲ. ಆದರೆ ಒಂದು ವಿಷಯ ಗೊತ್ತು—ಅದು ಮನುಷ್ಯನ ದೇಹದೊಳಗೆ ಹೋಗುತ್ತದೆ.

ಅಷ್ಟಿದ್ದರೂ ಹಣಕ್ಕಾಗಿ ಆ ವಸ್ತುವನ್ನು ಮಾರುಕಟ್ಟೆಗೆ ಕಳುಹಿಸುತ್ತಾನೆ. ಇದು ಕೇವಲ ಕಾನೂನು ಉಲ್ಲಂಘನೆಯಲ್ಲ. ಇದು ಮನುಷ್ಯನ ಮೇಲಿನ ಮೂಲಭೂತ ಜವಾಬ್ದಾರಿಯ ನಿರಾಕರಣೆ.

ವ್ಯಾಪಾರದಲ್ಲಿ ಲಾಭ ಬೇಕು. ಅದು ತಪ್ಪಲ್ಲ. ಹಣ ಸಂಪಾದಿಸುವುದು ತಪ್ಪಲ್ಲ. ವ್ಯಾಪಾರ ಬೆಳೆಸುವುದು ತಪ್ಪಲ್ಲ. ಆದರೆ ಇನ್ನೊಬ್ಬರ ಅಸಹಾಯಕತೆಯನ್ನು ಬಳಸಿಕೊಂಡು ಹಣ ಸಂಪಾದಿಸುವುದು ಬೇರೆ ವಿಷಯ. ಅದರಲ್ಲೂ ಜೀವ ಉಳಿಸಿಕೊಳ್ಳಲು ಓಡಾಡುತ್ತಿರುವ ವ್ಯಕ್ತಿಯ ಅಸಹಾಯಕತೆಯನ್ನು ಬಳಸಿಕೊಂಡು ಹಣ ಮಾಡುವುದು ಸಮಾಜದ ಅತ್ಯಂತ ಕೆಟ್ಟ ರೂಪಗಳಲ್ಲಿ ಒಂದು.

ಹಾಗಾದರೆ ನಾವು ಏನು ಮಾಡಬಹುದು?

ಇಲ್ಲಿ ಮತ್ತೆ ಸಾಮಾನ್ಯ ಮನುಷ್ಯನ ಅಸಹಾಯಕತೆಯ ಪ್ರಶ್ನೆ ಬರುತ್ತದೆ. ನಾವು ಪ್ರತಿಯೊಂದು ಔಷಧವನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಪ್ರತಿಯೊಂದು ಆಹಾರವನ್ನು ಪರೀಕ್ಷಿಸಲು ಸಾಧ್ಯವಿಲ್ಲ. ಪ್ರತಿಯೊಂದು ಸೇವೆಯ ಗುಣಮಟ್ಟವನ್ನು ಪರಿಶೀಲಿಸಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲವನ್ನೂ ಗ್ರಾಹಕರ ಜವಾಬ್ದಾರಿಯನ್ನಾಗಿ ಮಾಡುವುದು ಸರಿಯಲ್ಲ.

“ನೀವೇ ಎಚ್ಚರಿಕೆಯಿಂದ ಖರೀದಿಸಬೇಕಿತ್ತು” ಎನ್ನುವುದು ಸುಲಭವಾದ ಉತ್ತರ. ಆದರೆ ಸಾಮಾನ್ಯ ಮನುಷ್ಯನಿಗೆ ಸರ್ಕಾರದ ನಿಯಂತ್ರಣ ವ್ಯವಸ್ಥೆ, ಔಷಧ ನಿಯಂತ್ರಣ ಇಲಾಖೆ, ಪ್ರಯೋಗಾಲಯಗಳು, ವೈದ್ಯಕೀಯ ವ್ಯವಸ್ಥೆ ಮತ್ತು ಕಾನೂನು ವ್ಯವಸ್ಥೆ ಇರುವುದೇ ಅವನು ಎಲ್ಲವನ್ನೂ ತಾನೇ ಪರೀಕ್ಷಿಸಬೇಕಾಗಿಲ್ಲ ಎಂಬ ನಂಬಿಕೆಯಿಂದ. ಆ ನಂಬಿಕೆ ಮುರಿದಾಗ ಸಮಾಜದ ಭದ್ರತಾ ವ್ಯವಸ್ಥೆಯೇ ದುರ್ಬಲವಾಗುತ್ತದೆ.

ಹೀಗಾಗಿ ನಕಲಿ ಔಷಧ ಪತ್ತೆಯಾದಾಗ ಕೇವಲ “ಕೆಲವರನ್ನು ಬಂಧಿಸಲಾಗಿದೆ” ಎಂದು ಸುದ್ದಿ ಓದಿ ಮುಂದಕ್ಕೆ ಹೋಗಬಾರದು. ಈ ಜಾಲ ಎಷ್ಟು ದೊಡ್ಡದು? ಔಷಧಗಳು ಎಲ್ಲೆಲ್ಲಿ ಹೋಗಿವೆ? ಯಾರ ಮೂಲಕ ಬಂದವು? ಯಾರಿಗೆ ಮಾರಾಟವಾಗಿದ್ದವು? ಎಷ್ಟು ಜನರ ಆರೋಗ್ಯಕ್ಕೆ ಅಪಾಯ ಉಂಟಾಗಿರಬಹುದು? ಈ ವ್ಯವಸ್ಥೆಯೊಳಗೆ ಇನ್ನೆಷ್ಟು ಜನರಿದ್ದಾರೆ? ಎಂಬ ಪ್ರಶ್ನೆಗಳನ್ನೂ ಕೇಳಬೇಕು. ತನಿಖೆ ಮುಂದುವರಿಯಬೇಕು. ತಪ್ಪಿತಸ್ಥರು ಕಾನೂನಿನ ಪ್ರಕಾರ ಶಿಕ್ಷೆಗೆ ಒಳಗಾಗಬೇಕು. ಮತ್ತು ಇಂತಹ ಜಾಲ ಮತ್ತೆ ರೂಪುಗೊಳ್ಳದಂತೆ ವ್ಯವಸ್ಥೆಯಲ್ಲಿರುವ ದೌರ್ಬಲ್ಯಗಳನ್ನು ಸರಿಪಡಿಸಬೇಕು.

ಆದರೂ ಒಂದು ‘ಧನ್ಯವಾದ’ ಹೇಳಲೇಬೇಕು

ಈ ಎಲ್ಲ ಆತಂಕಗಳ ನಡುವೆ ಒಂದು ಸಣ್ಣ ಸಮಾಧಾನವೂ ಇದೆ. ಕನಿಷ್ಠ ಇಂತಹ ದಾಳಿ ನಡೆದಿದೆ. ಕನಿಷ್ಠ ಕೆಲವು ಜನರು ಸಿಕ್ಕಿಬಿದ್ದಿದ್ದಾರೆ. ಕನಿಷ್ಠ ಇಂತಹ ಜಾಲವೊಂದು ಬೆಳಕಿಗೆ ಬಂದಿದೆ. ಆದ್ದರಿಂದ ಈ ಪ್ರಕರಣವನ್ನು ಪತ್ತೆಹಚ್ಚಿ ಕ್ರಮ ಕೈಗೊಂಡ ಅಧಿಕಾರಿಗಳಿಗೆ ಒಂದು ಧನ್ಯವಾದ ಹೇಳೋಣ.

https://www.ndtv.com/india-news/fake-medicines-in-icus-raids-near-bengaluru-uncover-massive-racket-11927875

ಅದು ಅವರ ಕೆಲಸವೇ ಆಗಿರಬಹುದು. ಆದರೆ ಸಾರ್ವಜನಿಕರ ಪರವಾಗಿ ಆ ಕೆಲಸವನ್ನು ಸರಿಯಾಗಿ ಮಾಡಿದಾಗ ಅದನ್ನು ಗುರುತಿಸುವುದೂ ನಮ್ಮ ಕೆಲಸ. ಏಕೆಂದರೆ ಪ್ರತಿಯೊಂದು ನಕಲಿ ಔಷಧವೂ ಒಂದು ಸಾಧ್ಯವಾದ ಜೀವಹಾನಿ. ಪ್ರತಿಯೊಂದು ಪತ್ತೆಯಾದ ನಕಲಿ ಔಷಧವೂ ಬಹುಶಃ ಯಾರದೋ ಬದುಕನ್ನು ಉಳಿಸಿರಬಹುದು.

ಆದರೆ ಇದರೊಂದಿಗೆ ನಮ್ಮ ಕೆಲಸ ಮುಗಿಯುವುದಿಲ್ಲ. ಕೆಲವರನ್ನು ಹಿಡಿಯುವುದರಿಂದ ನಕಲಿ ವ್ಯವಸ್ಥೆ ಮುಗಿಯುವುದಿಲ್ಲ. ಅದನ್ನು ಸಾಧ್ಯವಾಗಿಸುವ ಅಜ್ಞಾನ, ಅಸಹಾಯಕತೆ, ನಿಯಂತ್ರಣದ ಕೊರತೆ ಮತ್ತು ಹಣದ ಮುಂದೆ ಮಾನವೀಯತೆಯನ್ನು ಸೋಲಿಸುವ ಮನಸ್ಥಿತಿಯನ್ನೂ ನಾವು ಪ್ರಶ್ನಿಸಬೇಕು.

ಕೊನೆಗೆ ಮತ್ತೆ ಅದೇ ಪ್ರಶ್ನೆ. ನಮಗೆ ಅಸಹಾಯಕತೆ ಇಷ್ಟವಾಗಿಬಿಟ್ಟಿದೆಯೇ? ನಮ್ಮ ಅಜ್ಞಾನವನ್ನು ಯಾರಾದರೂ ಬಳಸಿಕೊಳ್ಳುತ್ತಾರೆ ಎಂಬ ಅರಿವಿದ್ದರೂ ಅದನ್ನು ಬದಲಿಸಲು ನಾವು ಪ್ರಯತ್ನಿಸುತ್ತಿಲ್ಲವೇ? ಪ್ರತಿಯೊಂದು ವಿಷಯವನ್ನೂ ನಾವೇ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಪ್ರಶ್ನಿಸುವ ಸಮಾಜವಾಗಬಹುದು. ಅನುಮಾನಿಸಬೇಕಾದಲ್ಲಿ ಅನುಮಾನಿಸಬಹುದು. ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಕೇಳಬಹುದು. ತಪ್ಪು ಕಂಡಾಗ ಧ್ವನಿ ಎತ್ತಬಹುದು.

ಎಲ್ಲಕ್ಕಿಂತ ಮುಖ್ಯವಾಗಿ, ಇನ್ನೊಬ್ಬರ ಅಸಹಾಯಕತೆಯನ್ನು ನಮ್ಮ ಅವಕಾಶವನ್ನಾಗಿ ಮಾಡಿಕೊಳ್ಳದ ಮನುಷ್ಯರಾಗಬಹುದು.

ಔಷಧ ನಕಲಿಯಾಗಿರಬಹುದು. ಆಹಾರ ನಕಲಿಯಾಗಿರಬಹುದು. ಸರ್ಟಿಫಿಕೇಟ್ ನಕಲಿಯಾಗಿರಬಹುದು. ಬ್ರ್ಯಾಂಡ್ ನಕಲಿಯಾಗಿರಬಹುದು. ಆದರೆ ನಮ್ಮ ಮಾನವೀಯತೆ ನಕಲಿಯಾಗಬಾರದು. ಅದೇ ಉಳಿದರೆ, ಬಹುಶಃ ನಮ್ಮ ಜೀವನವೂ ಇನ್ನೂ ಸ್ವಲ್ಪ ಸುರಕ್ಷಿತವಾಗಿರುತ್ತದೆ.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment