ಅಳುವ ಹೃದಯವೇ ಮೆತ್ತಗಿರುತ್ತದೆಯೇ? ಗಟ್ಟಿಯಾಗಿರುವುದೇ ನಿಜವಾದ ಶಕ್ತಿಯೇ?

ಇಬ್ಬರು ನಾಯಕರು, ಎರಡು ಉತ್ತರಗಳು, ಒಂದು ಮನುಷ್ಯನ ಸ್ವಭಾವ

ಈ ಇಬ್ಬರು. ಇವರಿಬ್ಬರು ನೀಡಿರುವ ಸಂದರ್ಶನಗಳು ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಇತ್ತೀಚೆಗೆ ನಾನು ನೋಡಿದ್ದು ಬಿಬಿಸಿಯೊಂದರ ಹಳೆಯ ಸಂದರ್ಶನ.

ಅಪ್ಪ ದೇಶದ ಪ್ರಧಾನಿಯಾಗಿ ಇಂಗ್ಲೆಂಡ್‌ಗೆ ಹೋದಾಗ, ಅಲ್ಲಿನ ಪ್ರಮುಖ ನಾಲ್ವರು ಪತ್ರಕರ್ತರು ಅವರಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಅದರಲ್ಲಿ ಒಂದು ಪ್ರಶ್ನೆ ನನಗೆ ಬಹಳ ಇಷ್ಟವಾಯಿತು.

“ನಿಮ್ಮ ಕೆಲಸದ ಬಗ್ಗೆ ನಿಮಗೆ ಎಷ್ಟು ಸಮಾಧಾನವಿದೆ? ಎಷ್ಟು ಬೇಸರವಿದೆ?”

ಜವಾಹರಲಾಲ್ ನೆಹರೂ ಅವರ ಉತ್ತರ ಸರಳವಾಗಿತ್ತು. ಭಾರತದ ಬೆಳವಣಿಗೆಯ ಬಗ್ಗೆ ನನಗೆ ಸಮಾಧಾನವಿದೆ. ಆದರೆ ಆರ್ಥಿಕವಾಗಿ ಭಾರತ ನಾನು ಅಂದುಕೊಂಡಷ್ಟು ವೇಗವಾಗಿ ಬೆಳೆಯಲಿಲ್ಲ ಎಂಬುದು ಬೇಸರ ಎಂದರು.

ಅದೇ ರೀತಿಯ ಮತ್ತೊಂದು ಸಂದರ್ಶನ. ಮಗಳು ಇಂದಿರಾಗಾಂಧಿ. ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಅದಕ್ಕೆ ಇಂದಿರಾಗಾಂಧಿ, “ನಾನು ಶಾಶ್ವತವಲ್ಲ. ಟೀಕೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ” ಎಂಬ ಅರ್ಥದ ಉತ್ತರ ನೀಡುತ್ತಾರೆ.

ಪ್ರಶ್ನೆ ಅವರ ಉತ್ತರಗಳ ಬಗ್ಗೆ ಅಲ್ಲ. ಅವರ ಸ್ವಭಾವದ ಬಗ್ಗೆ.

ಯಾರನ್ನೂ ಮೆಚ್ಚಿಸುವ ಅಗತ್ಯವಿಲ್ಲದ ಸ್ವಭಾವ

ಒಬ್ಬರು ತಮ್ಮ ಕೆಲಸದ ಬಗ್ಗೆ ಸಮಾಧಾನ ಮತ್ತು ಬೇಸರವನ್ನು ನೇರವಾಗಿ ಹೇಳುತ್ತಾರೆ. ಮತ್ತೊಬ್ಬರು ತಮ್ಮ ಬಗ್ಗೆ ಬರುವ ಟೀಕೆಗಳಿಗೆ ಹೆಚ್ಚು ಮಹತ್ವ ಕೊಡುವುದಿಲ್ಲ ಎನ್ನುತ್ತಾರೆ.

ಅಲ್ಲಿ ನನಗೆ ಕಾಣಿಸಿದ್ದು ಒಂದು ರೀತಿಯ ಸಹಜತೆ. ಯಾರನ್ನೂ ಮೆಚ್ಚಿಸಬೇಕು ಎಂಬ ಹಂಬಲವಿಲ್ಲ. ತನ್ನ ಬಗ್ಗೆ ಇತರರು ಏನು ಯೋಚಿಸುತ್ತಾರೆ ಎಂಬುದನ್ನು ನಿರಂತರವಾಗಿ ಅಳೆಯುವ ಅಗತ್ಯವಿಲ್ಲ. ತನ್ನ ಮಾತಿನಿಂದ ಯಾರಾದರೂ ಖುಷಿಯಾಗುತ್ತಾರೆಯೇ, ಬೇಸರವಾಗುತ್ತಾರೆಯೇ ಎಂಬ ಲೆಕ್ಕಾಚಾರವಿಲ್ಲ. ಅವರ ರಾಜಕೀಯವನ್ನು ಬದಿಗಿಟ್ಟು ನೋಡಿದಾಗ, ಅವರ ವ್ಯಕ್ತಿತ್ವದ ಈ ಭಾಗ ಮಾತ್ರ ನನಗೆ ಕುತೂಹಲ ಹುಟ್ಟಿಸುತ್ತದೆ.

“ನೀನು ಇಂದಿರಾಗಾಂಧಿಯಂತೆ ಆಗಬೇಕು”

ನಾನು ಚಿಕ್ಕವಳಿದ್ದಾಗ ನನ್ನ ಅಪ್ಪ ಆಗಾಗ ಹೇಳುತ್ತಿದ್ದರು, “ನಿನ್ನಲ್ಲಿರುವ ಎಲ್ಲಾ ಗುಣಗಳೂ ಓಕೆ. ಆದರೆ ನೀನು ಅಳುವುದು ಯಾಕೆ?”

ನಾನು ಹೇಳುತ್ತಿದ್ದೆ, “ನಾನು ಮೆತ್ತಗಿರಬಹುದು. ಆದರೆ ಮುರಿಯುವುದಿಲ್ಲ.”

ಅದಕ್ಕೆ ಅಪ್ಪ ಹೇಳುತ್ತಿದ್ದರು, “ನೀನು ನೋಡಲು ಮಾತ್ರ ಅಲ್ಲ, ಗುಣದಲ್ಲೂ ಇಂದಿರಾಗಾಂಧಿಯಂತೆ ಆಗಬೇಕು.”

ಆಗ ನನಗೆ ಇಂದಿರಾಗಾಂಧಿ ಎಂಬ ಹೆಸರು ಕೇಳಿದರೆ ಸಾಕು, ಕಿರಿಕಿರಿಯಾಗುತ್ತಿತ್ತು. “ನೀವು ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುತ್ತೀರಿ, ಇಂದಿರಮ್ಮ ಎಂದು ಅದೇ ಕಾಂಗ್ರೆಸ್‌ಗೆ ಓಟು ಹಾಕಿ ಬರುತ್ತೀರಿ” ಎಂದು ಅಪ್ಪನನ್ನೇ ಕೆಣಕುತ್ತಿದ್ದೆ.

ಆ ಮಾತುಗಳ ಹಿಂದೆ ನನ್ನ ಬಾಲ್ಯದ ರಾಜಕೀಯವೂ ಇತ್ತು.

ನಾವು ನಂಬಿದ್ದ ಮಾತುಗಳೂ ನಮ್ಮನ್ನು ರೂಪಿಸುತ್ತವೆ

ನಮ್ಮ ಕಾಲದ ಪಾಠಗಳು, ನಮ್ಮ ಸುತ್ತಲಿನ ಚರ್ಚೆಗಳು, ನಮ್ಮ ಮೇಲೆ ಪ್ರಭಾವ ಬೀರಿದ ವಿಚಾರಗಳು…ಇವೆಲ್ಲವೂ ನಿಧಾನವಾಗಿ ನಮ್ಮ ರಾಜಕೀಯ ದೃಷ್ಟಿಕೋನವನ್ನು ರೂಪಿಸುತ್ತಿದ್ದವು.

ನಾವು ನಿಧಾನವಾಗಿ ಕೇಸರಿ ಕಲಿಗಳ ಮಾತುಗಳನ್ನು ಒಪ್ಪಿಕೊಳ್ಳತೊಡಗಿದ್ದೆವು. ಭಾರತ ಅತ್ಯಂತ ಹಿಂದೆ ಬಿದ್ದಿದೆ. ದೇಶವನ್ನು ಸರಿಪಡಿಸಲು ಒಂದು ಪರ್ಯಾಯ ಬೇಕು. ಆ ಪರ್ಯಾಯ ಕಠಿಣ ಆಡಳಿತವಾಗಬೇಕು. ಸಂವಿಧಾನವನ್ನು ಬದಲಿಸಬೇಕು. ಇಂತಹ ಮಾತುಗಳು ಆಗ ನಮಗೆ ಬಹಳ ಸರಳವಾದ ಸತ್ಯಗಳಂತೆ ಕಾಣಿಸುತ್ತಿದ್ದವು.

ಈಗ 2026ರಲ್ಲಿ ಹಿಂದಿರುಗಿ ನೋಡಿದಾಗ, ನನ್ನನ್ನೂ ಸೇರಿದಂತೆ ಆ ಮಾತುಗಳ ಪ್ರಭಾವಕ್ಕೆ ಒಳಗಾದವರು ಎಷ್ಟು ಮುಗ್ಧರಾಗಿದ್ದೆವು, ಎಷ್ಟು ಕಡಿಮೆ ತಿಳಿದಿದ್ದೆವು ಎಂಬುದು ಅರ್ಥವಾಗುತ್ತದೆ.

ವಯಸ್ಸು ಹೆಚ್ಚಾದಂತೆ ನಾವು ಕೇವಲ ನಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳುವುದಿಲ್ಲ. ನಮ್ಮನ್ನು ರೂಪಿಸಿದ ಅಭಿಪ್ರಾಯಗಳನ್ನೂ ಒಮ್ಮೆ ಹಿಂದಿರುಗಿ ಪ್ರಶ್ನಿಸಲು ಕಲಿಯಬೇಕಾಗುತ್ತದೆ.

ಗಟ್ಟಿಯಾದ ಇಂದಿರಾಗಾಂಧಿಯ ಹಿಂದೆ ಅಡಗಿದ್ದ ನೋವು

ಇಂದಿರಾಗಾಂಧಿಯ ಬಗ್ಗೆ ಯೋಚಿಸುವಾಗ ನನಗೆ ಯಾವಾಗಲೂ ಒಂದು ಪ್ರಶ್ನೆ ಬರುತ್ತದೆ. ನಾವು ನೋಡಿದ ಆ ಗಟ್ಟಿಯಾದ, ನಿರ್ಧಾರ ತೆಗೆದುಕೊಳ್ಳುವ, ಯಾರ ಟೀಕೆಯನ್ನೂ ಲೆಕ್ಕಿಸದ ಇಂದಿರಾಗಾಂಧಿಯ ಹಿಂದೆ ಎಷ್ಟು ಹೇಳಲಾಗದ ನೋವುಗಳಿದ್ದಿರಬಹುದು?

ಹೊರಗೆ ಕಾಣಿಸುವ ಗಟ್ಟಿತನದ ಹಿಂದೆ ಯಾವಾಗಲೂ ಒಂದು ನಿರ್ದಯ ಹೃದಯವೇ ಇರಬೇಕೆಂದಿಲ್ಲ. ಕೆಲವೊಮ್ಮೆ ಜೀವನವೇ ಮನುಷ್ಯನಿಗೆ ತನ್ನ ನೋವನ್ನು ಒಳಗಿಟ್ಟುಕೊಂಡು ನಿಲ್ಲುವುದನ್ನು ಕಲಿಸುತ್ತದೆ.

ಅದಕ್ಕಾಗಿಯೇ ನನಗೆ ಇಂದಿರಾಗಾಂಧಿಯ “ನಾನು ಶಾಶ್ವತವಲ್ಲ” ಎಂಬ ಮಾತು ಕೇವಲ ರಾಜಕೀಯ ಉತ್ತರವಾಗಿ ಕಾಣುವುದಿಲ್ಲ. ಅದು ಜೀವನದ ಅನಿಶ್ಚಿತತೆಯನ್ನು ಬಹಳ ಹತ್ತಿರದಿಂದ ನೋಡಿದ ಒಬ್ಬ ಮನುಷ್ಯನ ಮಾತಿನಂತೆಯೂ ಕಾಣುತ್ತದೆ.

ಅಳುತ್ತಿದ್ದಾಗ ಮನಸ್ಸು ಮೆತ್ತಗಿತ್ತು

ನನಗೆ ಇಂದಿರಾ ಯಾಕೆ ಇಷ್ಟು ಆಪ್ತವಾಗಿ ಈಗ ಕಾಣುತ್ತಾರೆ ಎಂದರೆ ಅನುಭವ. ಜೀವನದ ಅನುಭವ ಹೆಚ್ಚಾದಂತೆ ಅಭಿಪ್ರಾಯಗಳೂ ಬದಲಾಗುತ್ತವೆ. ಮನಸ್ಸು ಮಾಗಿದಂತೆ ಬದುಕಿನೆಡೆಗೆ ಒಂದು ಹೊರದೃಷ್ಟಿ ಬೆಳೆಯುತ್ತದೆ. ಹಾಗೊಮ್ಮೆ ಹಿಂತಿರುಗಿ ನೋಡಿದಾಗ , ನನ್ನೊಳಗೂ ಒಂದು ಅರಿವು ಬರುತ್ತದೆ.

ನಾನು ಅಳುತ್ತಿದ್ದ ಆ ದಿನಗಳಲ್ಲಿ ನನ್ನ ಮನಸ್ಸು ಬಹಳ ಮೆತ್ತಗಿತ್ತು. ವ್ಯಕ್ತಿಗಳಿಂದ ನೋವಾಗುತ್ತಿತ್ತು. ಸಂಬಂಧಗಳಲ್ಲಿ ಸಣ್ಣ ಬಿರುಕು ಬಂದರೂ ಕಣ್ಣೀರು ಬರುತ್ತಿತ್ತು. ಆದರೆ ಮನಸ್ಸು ಬಹಳ ಬೇಗ ಮರಳಿ ಹೊಂದಿಕೊಳ್ಳುತ್ತಿತ್ತು. ಒಂದು ಸಣ್ಣ ಕುಶಾಲು ಮಾತು ಸಾಕಾಗುತ್ತಿತ್ತು. ಒಂದು ನಗು ಸಾಕಾಗುತ್ತಿತ್ತು. ಒಂದು ಮಾತುಕತೆ ಸಾಕಾಗುತ್ತಿತ್ತು. ಮುರಿದ ಸಂಬಂಧ ಮತ್ತೆ ತನ್ನ ಜಾಗಕ್ಕೆ ಬಂದು ನಿಲ್ಲುತ್ತಿತ್ತು.

ಈಗ ಅಳುವೆಲ್ಲ ಬತ್ತಿಹೋದ ಕಾಲ. ಆದರೆ ಮನಸ್ಸು ಗಟ್ಟಿಯಾಗಿದೆಯೇ? ಇಲ್ಲ. ಈಗ ಒಂದು ಸಣ್ಣ ಮಾತು ಸಾಕು. ಒಂದು ನಿಟ್ಟುಸಿರು ಸಾಕು. ಕೆಲವೊಮ್ಮೆ ಯಾರೋ ಏನೂ ಹೇಳದೇ ಇರುವುದೇ ಸಾಕು. ಹೃದಯ ಮುರಿದುಹೋಗುತ್ತದೆ.

ಹಾಗಾದರೆ ನಿಜವಾದ ಗಟ್ಟಿತನ ಯಾವುದು?

ಹೃದಯ ಅಳುತ್ತಿರುವಾಗಲೇ ಮೆತ್ತಗಿರುತ್ತದೆಯೇ? ಅಥವಾ “ನಾನು ಅಳುವುದಿಲ್ಲ, ನಾನು ಗಟ್ಟಿಯಾಗಿದ್ದೇನೆ” ಎಂದು ತನ್ನನ್ನು ತಾನು ನಂಬಿಸಿಕೊಳ್ಳುವಾಗಲೋ? ಬಹುಶಃ ಗಟ್ಟಿಯಾಗುವುದು ಎಂದರೆ ನೋವಾಗದಿರುವುದಲ್ಲ. ನೋವಾದರೂ ಅದನ್ನು ತೋರಿಸದಿರುವುದನ್ನು ಕಲಿಯುವುದಷ್ಟೇ.ಆದರೆ ಮೆತ್ತಗಿರುವ ಹೃದಯಕ್ಕೆ ಒಂದು ಅದ್ಭುತ ಶಕ್ತಿ ಇರುತ್ತದೆ. ಅದು ಅಳುತ್ತದೆ, ಮುರಿಯುತ್ತದೆ, ಮತ್ತೆ ಪ್ರೀತಿಸುತ್ತದೆ.

ಗಟ್ಟಿಗಿತ್ತಿ ಇಂದಿರಮ್ಮನೂ ಇಲ್ಲ. ನೇರವಂತಿಕೆಯ ನೆಹರೂನೂ ಅಲ್ಲ. ಅವರ ಸಂದರ್ಶನಗಳನ್ನು ನೋಡುತ್ತಾ ಇಂದು ನನಗೆ ಅವರ ರಾಜಕೀಯಕ್ಕಿಂತ ಅವರೊಳಗಿನ ಆ ಮನುಷ್ಯತ್ವ, ಆ ಸಹಜತೆ, ಆ ನಿರ್ಲಿಪ್ತತೆ ಹೆಚ್ಚು ಕಾಣಿಸುತ್ತಿದೆ.

ಬಹುಶಃ ಬದುಕಿನ ಒಂದು ಹಂತದಲ್ಲಿ ನಾವು ಎಲ್ಲರೂ ಕಲಿಯಬೇಕಾದ ಪಾಠವೂ ಇದೇ ಇರಬಹುದು. ಮೆತ್ತಗಿರುವುದು ದೌರ್ಬಲ್ಯವಲ್ಲ. ಅಳುವುದು ಮುರಿದುಹೋಗುವುದಲ್ಲ ಮತ್ತು ಗಟ್ಟಿಯಾಗಿರುವುದು ಎಂದರೆ ನೋವಾಗದಿರುವುದೂ ಅಲ್ಲ. ಕೆಲವೊಮ್ಮೆ ಕಣ್ಣೀರು ಬರುವಷ್ಟು ಮೆತ್ತಗಿರುವ ಹೃದಯವೇ, ಮುರಿದ ನಂತರವೂ ಮತ್ತೆ ಸಂಬಂಧಗಳನ್ನು ಕಟ್ಟಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತದೆ.

ಅದು ಅಳುತ್ತದೆ. ಮುರಿಯುತ್ತದೆ. ಮತ್ತೆ ಪ್ರೀತಿಸುತ್ತದೆ.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment