ನಾನು ಹೆಣ್ಣಾಗಿದ್ದು ನಿನಗೆಷ್ಟು ಲಾಭ? ಎಷ್ಟು ನಷ್ಟ?

ಒಂದು ಪ್ರಶ್ನೆ ಕೆಲವೊಮ್ಮೆ ಮನಸ್ಸಿನಲ್ಲಿ ಎದ್ದುಕೊಳ್ಳುತ್ತದೆ.

ನಾನು ಹೆಣ್ಣಾಗಿದ್ದು ನಿನಗೆಷ್ಟು ಲಾಭ?
ಎಷ್ಟು ನಷ್ಟ?

ಈ ಪ್ರಶ್ನೆ ಕೋಪದಿಂದ ಕೇಳುವುದಲ್ಲ.

ಇದು
ಜೀವನವನ್ನು ಗಮನಿಸಿ ಕೇಳುವ ಪ್ರಶ್ನೆ.

ನಾನು ಹೆಣ್ಣಾಗಿದ್ದರಿಂದ ನೀನು ಪರಿತಪಿಸಬೇಕಿಲ್ಲ

ನಾನು ಹೆಣ್ಣಾಗಿದ್ದರಿಂದ
ನೀನು ಪರಿತಪಿಸಬೇಕಿಲ್ಲ.

ನಾನು ಓದಿ, ಕೆಲಸ ಮಾಡಿ
ನಿನ್ನನ್ನು ಸಾಕಬಹುದು.

ಅಥವಾ
ಯಾರೋ ದುಡ್ಡಿದ್ದವರನ್ನು ಮದುವೆಯಾಗಿ
ನಿನ್ನ ಕೆಲಸಗಳಿಗೆ, ನಿನ್ನ ಬದುಕಿಗೆ
ಆಧಾರವಾಗಬಹುದು.

ನಾನು ಹೆಣ್ಣಾಗಿದ್ದರಿಂದ
ನಿನ್ನ ಹೊರೆ ಕಡಿಮೆಯಾಗಬಹುದು.

ನಾನು ಹೆಣ್ಣಾಗಿದ್ದರಿಂದ ಮನೆಯ ಕೆಲಸ ನಿಲ್ಲುವುದಿಲ್ಲ

ನಾನು ಹೆಣ್ಣಾಗಿದ್ದುದರಿಂದ
ನೀನು ನಿನ್ನ ಮಕ್ಕಳನ್ನು ಸಾಕಲು
ಬೇರೆ ಜನ ಬೇಕಿಲ್ಲ.

ನಾನು ಅಕ್ಕನಾಗಿ
ನೀನು ಹುಟ್ಟಿಸಿದ ಎಲ್ಲಾ ಮಕ್ಕಳನ್ನೂ
ಪೊರೆಯುತ್ತೇನೆ.

ನಾನು ಹೆಣ್ಣಾಗಿದ್ದುದರಿಂದ
ನೀನು ಬೆಳಗ್ಗಿನಿಂದ ರಾತ್ರಿಯವರೆಗೆ
ಕೆಲಸ ಮಾಡಬೇಕಿಲ್ಲ.

ನಾನಿದ್ದೇನಲ್ಲ.

ನಾನು ಹಂಚಿಕೊಳ್ಳುತ್ತೇನೆ.

ನಿನಗೆ ಸಮಸ್ಯೆಯೇ?

ನಿನಗೆ ಸಾಲವೆ?

ನಿನಗೆ ಅನಾರೋಗ್ಯವೇ?

ನಿನಗೆ ಏನಾದರೂ ಕಷ್ಟವೇ?

ಹೆದರಬೇಡ.

ನಾನಿದ್ದೇನೆ.

ಯಾಕೆಂದರೆ
ನಾನು ಹೆಣ್ಣು.

ಜೀವನದ ಅನೇಕ ಕಷ್ಟಗಳು
ಮೊದಲು ಬಂದು ತಗುಲುವುದು
ನನಗೇ.

ಒಂದರ್ಥದಲ್ಲಿ
ನಾನು ನಿನ್ನ ಡಾಲು.
ನಿನ್ನ ಗುರಾಣಿ.

ಆದರೆ ನಿನಗೆ ನನ್ನಿಂದ ನಷ್ಟವೂ ಇದೆ

ನಾನು ಆಗುವುದಿಲ್ಲ ಇದು
ಎಂದು ಹೇಳಿದ ಕ್ಷಣ —

ಎಲ್ಲಾ ಕೆಲಸಗಳೂ
ನಿನ್ನ ಪಾಲಾಗುತ್ತವೆ.

ನಾನು ಹಿಂದೆ ಸರಿದ ತಕ್ಷಣ
ನೀನೇ ಮೊದಲ ಗುರಿ ಆಗುತ್ತೀಯ.

ಅದಕ್ಕೇ ಅಲ್ಲವೆ?

ನೀನು ಯಾವತ್ತೂ
ನಾನು ಹೆಣ್ಣಾಗಿಯೇ ಇರಬೇಕೆಂದು ಬಯಸುವುದು.

ಹೆಣ್ಣು ಎರಡನೆಯವಳಾಗುವುದು ಎಲ್ಲಿಂದ ಆರಂಭವಾಗುತ್ತದೆ?

ಸಮಾಜ ಎರಡನೆಯದು.

ಮೊದಲು
ಆಕೆಯ ಬದುಕಿನ ಫಲಾನುಭವಿಯೇ
ಆಕೆಯ ಅಸ್ತಿತ್ವವನ್ನು ಕಡೆಗಣಿಸುತ್ತಾನೆ.

ಆಕೆಯ ಪ್ರಾಮುಖ್ಯತೆಯನ್ನು
ಅವನೇ ಕಡಿಮೆ ಮಾಡುತ್ತಾನೆ.

ಉದಾಹರಣೆಗೆ —

ಒಬ್ಬ ಖ್ಯಾತ ಪತ್ರಕರ್ತನ ಸಂದರ್ಶನ.

ಅಲ್ಲಿ ಆತನ ಹೆಂಡತಿ ಕೂಡ ಕುಳಿತಿದ್ದಾಳೆ.
ಆದರೆ ಆಕೆಗೆ ಒಂದು ಅಕ್ಷರ ಮಾತನಾಡಲು
ಆತ ಅವಕಾಶ ಕೊಡುತ್ತಿಲ್ಲ.

ಅವಳು ಯಾರು?

ಆತನ ಅತ್ಯಂತ ಕಷ್ಟದ ದಿನಗಳಲ್ಲಿ
ಆತನ ಕೈ ಹಿಡಿದು ಮುಂದೆ ತಂದ ಹೆಣ್ಣು.

ಆದರೂ
ಆತನ ಮಾತಿನ ನಡುವೆ
ಆಕೆಗೆ ಜಾಗವಿಲ್ಲ.

ಒಬ್ಬ ಸುಶಿಕ್ಷಿತ ಪತ್ರಕರ್ತನೇ
ಹೀಗೆ ನಡೆದುಕೊಳ್ಳಬಹುದಾದರೆ —

ಇನ್ನೊಬ್ಬ ಸಾಮಾನ್ಯ ವ್ಯಕ್ತಿಯ
ನಡತೆ ತನ್ನ ಸಂಗಾತಿಯ ಜೊತೆ
ಹೇಗಿರಬಹುದು?

ಮತ್ತೊಂದು ಉದಾಹರಣೆ

ಒಬ್ಬ ತಂದೆ.

ಮಗಳು ತಾಯಿಯಾಗಿ
ಕಾಯಿಲೆಗಳಲ್ಲಿ ಮನೆಯನ್ನು ನಡೆಸಿದ್ದಾಳೆ.

ಆಸ್ಪತ್ರೆಗೆ ಸೇರಿಸಿ,
ಖರ್ಚು ಭರಿಸಿ,
ಅವನನ್ನು ನೋಡಿಕೊಂಡಿದ್ದಾಳೆ.

ಅವನ ಉಳಿದ ಮಕ್ಕಳನ್ನು
ಒಂದು ಹಂತಕ್ಕೆ ಬೆಳೆಸಿದ್ದಾಳೆ.

ಆದರೆ ಒಂದು ದಿನ
ಅವಳು ಬೆಳೆಸಿದ ತಮ್ಮ
ಸ್ವಲ್ಪ ಹೆಚ್ಚು ದುಡಿಯುತ್ತಾನೆ ಎಂದು ಕಂಡ ತಕ್ಷಣ —

ಅವನು ಹೇಳುತ್ತಾನೆ:

“ನನ್ನ ಮಗನೇ ಹೆಚ್ಚು ದುಡಿಯುತ್ತಾನೆ.”

ಅದೇ ಕ್ಷಣದಲ್ಲಿ
ಮಗಳ ಶ್ರಮವನ್ನು ನಿರಾಕರಿಸುತ್ತಾನೆ.

ಅವಳ ಸಾಮರ್ಥ್ಯವನ್ನು
ಅವಮಾನಿಸುತ್ತಾನೆ.

ಯಾಕೆ ಹೀಗೆ ಆಗುತ್ತದೆ?

ಕೆಲಸ ಬಂದಾಗ
ಮೊದಲು ನೆನಪಾಗುವವರು ನಾವು.

ಜವಾಬ್ದಾರಿ ಬಂದಾಗ
ಮೊದಲು ಕರೆಸಿಕೊಳ್ಳುವವರು ನಾವು.

ಕರ್ತವ್ಯ ಬಂದಾಗ
ಮೊದಲು ಮುಂದಾಗುವವರು ನಾವು.

ಆದರೆ
ಕ್ರೆಡಿಟ್ ಕೊಡುವಾಗ?

ಯಶಸ್ಸಿನ ಪಾಲು ಹಂಚುವಾಗ?

ಅಲ್ಲಿ ನಾವು
ಕಣ್ಣಿಗೆ ಕಾಣಿಸುವುದಿಲ್ಲ.

ನನ್ನನ್ನು ನೀನು ಯಾಕೆ ಎರಡನೇ ದರ್ಜೆಯ ಪ್ರಜೆಯಾಗಿ ನೋಡುತ್ತೀಯಾ?

ಯಾಕೆಂದರೆ
ನಾನು ಸಂಬಂಧಗಳಲ್ಲಿ ನಿಧಾನವಾಗಿ
ಎರಡನೇ ಸ್ಥಾನಕ್ಕೆ ಸರಿಯುತ್ತೇನೆ.

ನಾನು ಆಧಾರವಾಗಿದ್ದರೂ, ನೀನು
ಆಧಾರ ಎಂದು ಒಪ್ಪಿಕೊಳ್ಳಲಾರೆ.

ನಾನು ಕಷ್ಟಗಳನ್ನು ಹೊತ್ತಿದ್ದರೂ
ನನ್ನ ಶ್ರಮಕ್ಕೆ ಬೆಲೆ ಕೊಟ್ಟ ತಕ್ಷಣ ನಿನ್ನ ಮಹತ್ವ ಕಡಿಮೆಯಾಗುತ್ತದೆ.

ಹಾಗೆಂದು ನೀನು ಭಾವಿಸಿದ್ದೀಯ.

ನಾನು ಬದುಕು ಕಟ್ಟಿದ್ದರೂ
ಆ ಕಟ್ಟಡದ ಮೇಲೆ ನೀನು
ಬೇರೆಯವರ ಹೆಸರನ್ನೇ ಬರೆಯುತ್ತೀ.

ಅದು ನಿನ್ನ ತಪ್ಪಲ್ಲ.

ಸಮಾಜ, ನಿನ್ನ ಪೋಷಕರು, ನಿನ್ನ ಸುತ್ತಲಿನವರು

ನಿನ್ನ ಕಣ್ಣಿಗೆ ಕಟ್ಟಿರುವ ಪಟ್ಟಿ ಅದು.

ಕೆಲವೊಮ್ಮೆ ನಿನ್ನ ಅಹಮ್ಮಿನ ಸಮಾಧಾನವೂ ಆಗಿರಬಹುದು.

ಒಟ್ಟಿನಲ್ಲಿ ನಾನು ಏನೇ ಮಾಡಿದರೂ ನಿನ್ನ ಹಿಂದೆ ಹೆಜ್ಜೆ ಹಾಕಬೇಕೇ ಹೊರತು

ಜೊತೆಯಾಗಲ್ಲ!?

ಅವಲೋಕನ

ಹೀಗಾಗಿ
ಒಂದು ಪ್ರಶ್ನೆ ಮತ್ತೆ ಉಳಿಯುತ್ತದೆ.

ನಾನು ಹೆಣ್ಣಾಗಿದ್ದು ನಿನಗೆಷ್ಟು ಲಾಭ?
ಎಷ್ಟು ನಷ್ಟ?

ಬಹುಶಃ
ನಿನಗೆ ಲಾಭಗಳು ಹೆಚ್ಚು.

ನಷ್ಟಗಳು ಕಡಿಮೆ.

ಆದರೆ
ಈ ಲಾಭಗಳ ಮಧ್ಯೆ
ಒಂದು ಮೌನ ಸತ್ಯ ಮರೆಮಾಚಿಕೊಂಡಿದೆ.

ನಾನು ‘ಹೆಣ್ಣು’!
ಅನೇಕರ ಬದುಕಿಗೆ ಆಧಾರವಾಗಿದ್ದರೂ —

ಸಂಬಂಧಗಳೊಳಗೆ
ನನ್ನ ಸ್ಥಾನ

ಎರಡನೇ ಸಾಲು.
ಎರಡನೇ ಮಾತು.
ಎರಡನೇ ಮರ್ಯಾದೆ.

ಅದಕ್ಕೇ
ಒಂದು ಪ್ರಶ್ನೆ ಮತ್ತೆ ಕೇಳಬೇಕು —

ನಾನು ಹೆಣ್ಣು – ಎರಡನೇಯವಳಾ?
ಅಥವಾ
ನೀವು ನನ್ನನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದೀರಾ?

|ಅವಲೋಕನ – ಶೀಲಾ ಭಟ್

Leave a Comment

error: Content is protected !!