Under the Volcano
ಪೊಲಾಂಡ್ನ ನಿರ್ದೇಶಕ ಡೆಮಿಯನ್ ಕೊಕುರ್ ಅವರ ಈ ಚಿತ್ರ, ದೃಶ್ಯಕಾವ್ಯದ ಮೂಲಕ ಮನುಷ್ಯನ ಅಂತರಂಗದ ಅಗಾಧತೆಯನ್ನು ಅನಾವರಣಗೊಳಿಸುತ್ತದೆ. ಮೂಲತಃ ಸಿನಿಮಾಟೋಗ್ರಾಫರ್ ಆಗಿರುವ ಕೊಕುರ್, ಸಮುದ್ರವನ್ನು ಕೇವಲ ದೃಶ್ಯವಾಗಿ ಅಲ್ಲ, ಮನಸ್ಸಿನ ರೂಪಕವಾಗಿ ಬಳಸುತ್ತಾರೆ. ಅದಕ್ಕೇ ಇಡೀ ಸಿನಿಮಾ ಒಂದು ಮೌನ ಕಾವ್ಯವಾಗಿ ಹರಿಯುತ್ತದೆ.
ಉಕ್ರೇನ್ನ ಕೊವಲೆಂಕೊ ಕುಟುಂಬ ಸ್ಪೇನಿನ ಟೆನೆರಿಫೆ ದ್ವೀಪದಲ್ಲಿ ಪ್ರವಾಸದಲ್ಲಿದೆ. ಊರಿಗೆ ಮರಳುವ ಕ್ಷಣ ಹತ್ತಿರವಾಗಿರುವಾಗಲೇ ರಷ್ಯಾ–ಉಕ್ರೇನ್ ಯುದ್ಧ ಘೋಷಣೆಯಾಗುತ್ತದೆ. ವಿಮಾನಗಳು ಸ್ಥಗಿತಗೊಳ್ಳುತ್ತವೆ. ಹಿಂತಿರುಗಲಾರರು. ಇದ್ದಲ್ಲಿಯೂ ಇರಲಾರರು. ಅನಿಶ್ಚಿತತೆ ಅವರ ನಿಜವಾದ ನೆಲೆ ಆಗುತ್ತದೆ.
ಇದು ಈಗಾಗಲೇ ಒಡೆದ ಮನೆ. ತಂದೆ – ತನ್ನ ಎರಡನೇ ಪ್ರೀತಿಯೊಂದಿಗೆ. ಮಕ್ಕಳು – ಮೊದಲ ಪ್ರೀತಿಯ ನೆನಪುಗಳೊಂದಿಗೆ. ವಿಶೇಷವಾಗಿ ಮಗಳು ಸೋಫಿಯಾ. ಅವಳೊಳಗೆ ತಂದೆಯ ಬಗ್ಗೆ ಸಿಟ್ಟಿದೆ, ಅಸಹನೆ ಇದೆ, ಆದರೆ ಅದಕ್ಕಿಂತ ಹೆಚ್ಚು ಅರ್ಥವಾಗದ ನೋವಿದೆ.
ಮನೆಯೊಳಗಿನ ಈ ಒಡಕಿನ ಜೊತೆಗೆ, ಮನೆಯ ಹೊರಗಡೆ ಯುದ್ಧದ ಭಯ. ಇಲ್ಲಿ ನಿಜವಾದ ಜ್ವಾಲಾಮುಖಿ ಭೂಮಿಯೊಳಗಿಲ್ಲ. ಅದು ಮನುಷ್ಯನ ಮನಸ್ಸಿನೊಳಗಿದೆ. ಹೋಟೆಲ್ನಲ್ಲಿ ತಂಗಿರುವಾಗ ಹಣ ಮುಗಿಯುತ್ತದೆ. ದೂರವಾಣಿ ಕರೆಯನ್ನು ಯಾರೂ ಸ್ವೀಕರಿಸುವುದಿಲ್ಲ. ಸಂಬಂಧಗಳು ತುರ್ತು ಸಮಯದಲ್ಲಿ ಎಷ್ಟು ಖಾಲಿ ಆಗುತ್ತವೆ ಎಂಬುದು ಅರಿವಾಗುತ್ತದೆ. ಅಲ್ಲಿಯೇ ಹೋಟೆಲ್ನವರು ಹೇಳುವ ಮಾತು ಸಿನಿಮಾದ ನೈತಿಕ ಕೇಂದ್ರ:
“ನೀವು ಎಷ್ಟು ದಿನ ಬೇಕಾದರೂ ಇರಬಹುದು. ಊಟ, ವಸತಿ ಉಚಿತ. ನಿಮ್ಮ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ದಿನಗಳು ಹೀಗೇ ಇರುವುದಿಲ್ಲ.” ಇಲ್ಲಿ ಚಿತ್ರ ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನು ಸುಮ್ಮನೆ ಹೇಳುವುದಿಲ್ಲ, ಅನುಭವಿಸಿಸುತ್ತದೆ.
ಹದಿಹರೆಯ ಎಂದರೆ ಈಡಿಪಸ್ ಕಾಂಪ್ಲೆಕ್ಸ್ನಿಂದ ಹೊರಬರುವ ಸಮಯ. ಈ ವಯಸ್ಸಿನಲ್ಲಿ ವಿರುದ್ಧ ಲಿಂಗದ ಪೋಷಕರು ತಮ್ಮ ಜೈವಿಕ ಸಂಬಂಧದ ಹೊರತಾಗಿ ಯಾರನ್ನಾದರೂ ಆಯ್ದುಕೊಂಡರೆ, ಮಕ್ಕಳ ಮನಸ್ಸಿನಲ್ಲಿ ಭೂಕಂಪ. ಸೋಫಿಯಾದೊಳಗಿನ ಜ್ವಾಲಾಮುಖಿ ಅದೇ. ತಂದೆಯನ್ನು ಪ್ರೀತಿಯಿಂದ ನೋಡಿದರೂ ನೋವು. ಜಗಳವಾಡಿದರೂ ನೋವು. ಆ ಭಾವನೆಗಳು ಸಮುದ್ರದೊಳಗೆ ಧುಮ್ಮಿಕ್ಕುತ್ತವೆ.
ಈ ಗಾಢ ರಾತ್ರಿಯಲ್ಲಿ ಮೈಕೆಲ್ ಎಂಬ ಸಮಾನ ವಯಸ್ಸಿನ ಹುಡುಗನ ಪರಿಚಯ. ತಂದೆ–ತಾಯಿ–ಗೆಳೆಯ ಎಲ್ಲರನ್ನೂ ಕಳೆದುಕೊಂಡ ಮೈಕೆಲ್ನ ಬದುಕೂ ಅನಿಶ್ಚಿತವೇ. ಅವನ ಎದುರು ನಿಂತಾಗ, ಸೋಫಿಯಾಗೆ ಮೊದಲ ಬಾರಿಗೆ ಅರಿವಾಗುತ್ತದೆ ; ತನ್ನ ಬಳಿ ಎಷ್ಟೊಂದು ಇದೆ!
ಬಹಳ ಬಾರಿ ಹಾಗೆಯೇ ಅಲ್ಲವೇ? ನಮಗೆ ಇರುವುದನ್ನು ಕಾಣದೆ, ಇಲ್ಲದ್ದನ್ನೇ ಕಲ್ಪಿಸಿಕೊಂಡು, ನಾವು ನಮ್ಮದೇ ಬದುಕನ್ನು ನರಕವಾಗಿಸಿಕೊಳ್ಳುತ್ತೇವೆ. ಚಿತ್ರದ ಕೊನೆಯಲ್ಲಿ ತಂದೆಯನ್ನು ಯುದ್ಧದಲ್ಲಿ ಕಳೆದುಕೊಳ್ಳಬಹುದೇನೋ ಎಂಬ ಭಯ, ಸೋಫಿಯನ್ನು ಮಾತಿಗೆ ತರುತ್ತದೆ. ಅಲ್ಲಿಯವರೆಗೂ ಮಡುಗಟ್ಟಿದ್ದ ದುಃಖ ಅಳುವಾಗಿ ಹೊರಬರುತ್ತದೆ. ಅಂತರಂಗದ ಜ್ವಾಲಾಮುಖಿ ಹೊರಗೆ ಹರಿದು ನಿರುಮ್ಮಳವಾಗುತ್ತದೆ.
ಸಮುದ್ರದ ಆಳ, ಕತ್ತಲೆ, ಮಂಕು ಎಲ್ಲವೂ ಅರಿವಿನ ಬೆಳಕಾಗಿ ಅಲೆಯಂತೆ ಕ್ಯಾಮರಾ ಮುತ್ತಿಕ್ಕುವ ಕ್ಷಣ, ನೋಡುಗನೊಳಗೂ ಒಂದು ಬಿಡುಗಡೆಯ ಖುಷಿ ಕಂಪನ ಹುಟ್ಟಿಸುತ್ತದೆ. ಈ ಚಿತ್ರ ಕೇಳುವ ಪ್ರಶ್ನೆ ಸರಳವಾಗಿದೆ, ಆದರೆ ಕಠಿಣವಾಗಿದೆ: ನಮ್ಮೊಳಗಿನ ಜ್ವಾಲಾಮುಖಿಯನ್ನು ನಾವು ಯುದ್ಧದವರೆಗೆ ಕಾಯಿಸಬೇಕೆ?