The Romance of Tiger and Rose ಹೇಳುವ ಲಿಂಗ ಸಮಾನತೆಯ ಸತ್ಯ

ಕೆಲವು ಕಥೆಗಳು ನಮ್ಮನ್ನು ನಗಿಸುತ್ತಾ ಒಂದು ಗಂಭೀರವಾದ ಪ್ರಶ್ನೆಯನ್ನು ಕೇಳುತ್ತವೆ. ಚೀನಾದ ‘The Romance of Tiger and Rose’ ಅಂತಹ ಒಂದು ಕಥೆ. 2020ರಲ್ಲಿ ಪ್ರಸಾರವಾದ ಈ 24 ಭಾಗಗಳ ನಾಟಕದ ಮೂಲ ಚೀನೀ ಹೆಸರು ‘传闻中的陈芊芊’ (The Rumored Chen Qianqian). ಕಥೆಯ ವಿಶೇಷತೆಯೆಂದರೆ, ಇಲ್ಲಿ ಒಂದು ರಾಜ್ಯದಲ್ಲಿ ಮಹಿಳೆಯರೇ ಅಧಿಕಾರದ ಕೇಂದ್ರವಾಗಿದ್ದರೆ, ಮತ್ತೊಂದು ರಾಜ್ಯದಲ್ಲಿ ಪುರುಷರೇ ಅಧಿಕಾರದ ಕೇಂದ್ರವಾಗಿರುತ್ತಾರೆ.

ಹೀಗಾಗಿ ಪ್ರೇಕ್ಷಕನಿಗೆ ವಿಚಿತ್ರವಾದ ಅನುಭವವಾಗುತ್ತದೆ. ನಾವು ನಿಜ ಜೀವನದಲ್ಲಿ ಮಹಿಳೆಯರ ಮೇಲೆ ಹೇರಲಾಗಿರುವ ಅನೇಕ ನಿಯಮಗಳನ್ನು ಇಲ್ಲಿ ಪುರುಷರ ಮೇಲೆ ಹೇರಿರುವುದನ್ನು ನೋಡುತ್ತೇವೆ. ಮಹಿಳೆಯರು ಆಡಳಿತ ನಡೆಸುವ ಹುವಾಯುವಾನ್ ನಗರದಲ್ಲಿ ಪುರುಷರಿಗೆ ಓದುವ ಅವಕಾಶವಿಲ್ಲ, ಉನ್ನತ ಹುದ್ದೆಗಳಿಗೆ ಹೋಗುವ ಅವಕಾಶವಿಲ್ಲ. ಪುರುಷನ ಮೌಲ್ಯ ಅವನು ಎಷ್ಟು ಒಳ್ಳೆಯ ಕುಟುಂಬಕ್ಕೆ ಮದುವೆಯಾಗುತ್ತಾನೆ ಎಂಬುದರಲ್ಲಿದೆ. ಮಹಿಳೆಯರು ಅಧಿಕಾರದಲ್ಲಿರುತ್ತಾರೆ; ಪುರುಷರು ಅದಕ್ಕೆ ಹೊಂದಿಕೊಳ್ಳಬೇಕಾಗುತ್ತದೆ.

ಮೊದಲಿಗೆ ಇದು ಬಹಳ ತಮಾಷೆಯಾಗಿ ಕಾಣುತ್ತದೆ. ಆದರೆ ಸ್ವಲ್ಪ ಹೊತ್ತಿನ ನಂತರ ನಮ್ಮ ನಗು ನಿಲ್ಲುತ್ತದೆ.

ಏಕೆಂದರೆ, “ಪುರುಷನಾಗಿರುವುದರಿಂದ ನಿನಗೆ ಈ ಹಕ್ಕಿಲ್ಲ” ಎಂಬ ಮಾತು ಕೇಳಿದಾಗ, ನಿಜ ಜೀವನದಲ್ಲಿ “ಮಹಿಳೆಯಾಗಿರುವುದರಿಂದ ನಿನಗೆ ಈ ಹಕ್ಕಿಲ್ಲ” ಎಂದು ಎಷ್ಟು ಬಾರಿ ಹೇಳಲಾಗಿದೆ ಎಂಬುದು ನೆನಪಾಗುತ್ತದೆ.

“ಪುರುಷರು ಓದುವುದೇಕೆ?” “ಪುರುಷರಿಗೆ ರಾಜಕೀಯ ಯಾಕೆ? ” “ಮಹಿಳೆಯರು ಬಳಸಿಕೊಂಡರೆ ಪುರುಷರು ಏಕೆ ಪ್ರಶ್ನಿಸಬೇಕು?” “ಮದುವೆಯಲ್ಲಿ ಹೆಣ್ಣಿನ ಮಾತೇ ಅಂತಿಮ.” ಇಂತಹ ವಾಕ್ಯಗಳು ಆ ರಾಜ್ಯದಲ್ಲಿ ಸಹಜವಾಗಿ ಕೇಳಿಸುತ್ತವೆ. ಆದರೆ ಅದೇ ಕಾರಣಕ್ಕೆ ಅವು ನಮ್ಮ ಸಮಾಜದ ಅನೇಕ ಕಲ್ಪನೆಗಳನ್ನು ಕನ್ನಡಿಯಂತೆ ನಮ್ಮ ಮುಂದೆ ನಿಲ್ಲಿಸುತ್ತವೆ.

ಈ ನಾಟಕದ ದೊಡ್ಡ ಶಕ್ತಿ ಇಲ್ಲಿಯೇ ಇದೆ. ಅದು “ಮಹಿಳೆಯರ ಮೇಲಿನ ಅನ್ಯಾಯವನ್ನು ನೋಡಿ” ಎಂದು ನೇರವಾಗಿ ಉಪದೇಶಿಸುವುದಿಲ್ಲ. ಬದಲಾಗಿ, “ಒಮ್ಮೆ ಇದೇ ನಿಯಮಗಳನ್ನು ಪುರುಷರ ಮೇಲೆ ಹಾಕಿ ನೋಡಿ. ಆಗ ಹೇಗಿರುತ್ತದೆ?” ಎಂದು ಕೇಳುತ್ತದೆ.

ಶ್ರೇಷ್ಠತೆ ಎನ್ನುವುದು ಯಾರದ್ದು?

ಲಿಂಗಭೇದದ ಮೂಲದಲ್ಲಿ ಕೇವಲ ಅಧಿಕಾರದ ಹಂಚಿಕೆ ಇರುವುದಿಲ್ಲ. ಅದರ ಆಳದಲ್ಲಿ ಒಂದು ಅಪಾಯಕಾರಿ ಕಲ್ಪನೆ ಇರುತ್ತದೆ. ಅದೆಂದರೆ “ನಾನು ನಿನಗಿಂತ ಶ್ರೇಷ್ಠ.” ಪುರುಷ ಮಹಿಳೆಗಿಂತ ಶ್ರೇಷ್ಠ ಅಥವಾ ಮಹಿಳೆ ಪುರುಷನಿಗಿಂತ ಶ್ರೇಷ್ಠ ಎನ್ನುವುದು. ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಒಬ್ಬರ ಲಿಂಗವನ್ನು ಅವರ ಸಾಮರ್ಥ್ಯಕ್ಕೆ ಅಳತೆಗೋಲನ್ನಾಗಿ ಮಾಡಿದ ಕ್ಷಣದಿಂದಲೇ ಅನ್ಯಾಯ ಆರಂಭವಾಗುತ್ತದೆ.

‘The Romance of Tiger and Rose’ ಈ ಸಂಗತಿಯನ್ನು ಅತ್ಯಂತ ಸರಳವಾದ ಕಥಾ ತಂತ್ರದಿಂದ ತೋರಿಸುತ್ತದೆ. ನಿಜ ಜೀವನದಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಅನುಭವಿಸುವ ನಿರ್ಬಂಧಗಳನ್ನು ನಾಟಕದ ಮಹಿಳಾ ಪ್ರಧಾನ ಸಮಾಜದಲ್ಲಿ ಪುರುಷರು ಅನುಭವಿಸುತ್ತಾರೆ. ನಂತರ ಕಥೆ ಮತ್ತೊಂದು ದಿಕ್ಕಿಗೆ ಹೋಗುತ್ತದೆ. ಪುರುಷ ಪ್ರಧಾನ ಕ್ಸುವಾನ್ಹು ನಗರವನ್ನು ತೋರಿಸಿದಾಗ, ಅದೇ ವ್ಯವಸ್ಥೆಯ ಮತ್ತೊಂದು ಮುಖ ನಮ್ಮ ಮುಂದೆ ಬರುತ್ತದೆ.

ಅಂದರೆ ಸಮಸ್ಯೆ “ಯಾರು ಅಧಿಕಾರದಲ್ಲಿದ್ದಾರೆ?” ಎಂಬುದಲ್ಲ. ಸಮಸ್ಯೆ “ಅಧಿಕಾರ” ಎನ್ನುವುದು ಯಾರನ್ನಾದರೂ ಇನ್ನೊಬ್ಬರಿಗಿಂತ ಶ್ರೇಷ್ಠ ಎಂದು ಭಾವಿಸುವಂತೆ ಮಾಡುತ್ತದೆಯೇ?” ಎಂಬುದು.

ಹೆಣ್ಣಿನ ಸ್ವಾತಂತ್ರ್ಯ ಎಂದರೆ ಪುರುಷನ ಅಧೀನತೆ ಅಲ್ಲ

ಇಲ್ಲಿ ಅತ್ಯಂತ ಮುಖ್ಯವಾದ ವ್ಯತ್ಯಾಸವೊಂದನ್ನು ಗಮನಿಸಬೇಕು. ಮಹಿಳೆಯರು ಶತಮಾನಗಳ ಕಾಲ ಅನುಭವಿಸಿದ ಅಧೀನತೆಯನ್ನು ತಲೆಕೆಳಗಾಗಿ ಮಾಡಿ ಪುರುಷರನ್ನು ಅಧೀನರನ್ನಾಗಿ ಮಾಡಿದರೆ ಅದು ಸಮಾನತೆ ಆಗುವುದಿಲ್ಲ. ಅದು ಕೇವಲ ಅಧೀನತೆಯ ಸ್ಥಾನ ಬದಲಾವಣೆ.

ನಾಟಕದ ಹುವಾಯುವಾನ್ ನಗರದಲ್ಲಿ ಇದೇ ಅತಿರೇಕವನ್ನು ತೋರಿಸಲಾಗುತ್ತದೆ. ಪುರುಷರು ಶಿಕ್ಷಣದಿಂದ ದೂರ, ಅಧಿಕಾರದಿಂದ ದೂರ, ಸಾಮಾಜಿಕವಾಗಿ ಕೆಳ ಸ್ಥಾನದಲ್ಲಿರುತ್ತಾರೆ. ಈ ವ್ಯವಸ್ಥೆ ನಿಜವಾದ ಮಹಿಳಾ ಮುಕ್ತಿಯ ಮಾದರಿಯಲ್ಲ; ಬದಲಾಗಿ ಪಿತೃಪ್ರಧಾನ ವ್ಯವಸ್ಥೆಯ ವ್ಯಂಗ್ಯಾತ್ಮಕ ಪ್ರತಿಬಿಂಬ.

ಆದ್ದರಿಂದ ಈ ನಾಟಕ “ಮಹಿಳೆಯರು ಪುರುಷರಿಗಿಂತ ಶಕ್ತಿಶಾಲಿಯಾಗಿರುವ ಕತೆ” ಎನ್ನುವುದಲ್ಲ. “ಒಬ್ಬ ಮನುಷ್ಯನ ಸ್ವಾತಂತ್ರ್ಯ ಇನ್ನೊಬ್ಬ ಮನುಷ್ಯನ ಅಧೀನತೆಯ ಮೇಲೆ ನಿರ್ಮಾಣವಾಗಬೇಕೇ?” ಎನ್ನುವ ಪ್ರಶ್ನೆ ಕೇಳುವ ಕ್ಯಾನ್ವಾಸ್.

ನಾಯಕಿ – ತನ್ನನ್ನೇ ಗೆಲ್ಲುವ ಚೆಂದ

ಚೆನ್ ಕಿಯಾನ್ ಕಿಯಾನ್ ಪಾತ್ರವೂ ಈ ಕಾರಣಕ್ಕೆ ಆಸಕ್ತಿದಾಯಕ. ಆಕೆ ಆರಂಭದಲ್ಲೇ ಪರಿಪೂರ್ಣ ನಾಯಕಿಯಲ್ಲ. ಆಕೆಯಲ್ಲಿ ಅಹಂಕಾರವಿದೆ, ಅಜಾಗರೂಕತೆ ಇದೆ, ಅಧಿಕಾರದ ಅರಿವಿಲ್ಲದೆ ಅಧಿಕಾರವನ್ನು ಬಳಸುವ ಸ್ವಭಾವವಿದೆ. ತನ್ನ ಸುತ್ತಲಿನ ವ್ಯವಸ್ಥೆಯ ಅನ್ಯಾಯವನ್ನು ಆಕೆ ಮೊದಲಿಗೆ ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಕಥೆ ಮುಂದುವರಿದಂತೆ ಆಕೆ ತನ್ನನ್ನೇ ಪ್ರಶ್ನಿಸಲು ಆರಂಭಿಸುತ್ತಾಳೆ.

“ನಾನು ಸರಿಯೇ?” “ನನ್ನ ಅಧಿಕಾರದಿಂದ ಇನ್ನೊಬ್ಬರಿಗೆ ಅನ್ಯಾಯವಾಗುತ್ತಿದೆಯೇ?” “ನನ್ನ ಸುತ್ತಲಿನ ವ್ಯವಸ್ಥೆ ನಿಜವಾಗಿಯೂ ನ್ಯಾಯಯುತವೇ?” ಈ ಆತ್ಮಪರಿಶೀಲನೆಯೇ ಆಕೆಯ ನಿಜವಾದ ಬೆಳವಣಿಗೆ.

ನಾಯಕಿಯಾಗುವುದೆಂದರೆ ಎಲ್ಲವನ್ನೂ ತಿಳಿದಿರುವುದಲ್ಲ. ತನ್ನ ತಪ್ಪನ್ನು ಒಪ್ಪಿಕೊಳ್ಳುವ ಸಾಮರ್ಥ್ಯ ಹೊಂದಿರುವುದು, ತನ್ನೊಳಗಿನ ಅದಕ್ಷತೆಯನ್ನು ನೋಡುವ ಧೈರ್ಯ ಹೊಂದಿರುವುದು. ಅಗತ್ಯವಿದ್ದಾಗ ತನ್ನ ನಂಬಿಕೆಯನ್ನು ಬದಲಿಸಿಕೊಳ್ಳುವುದು. ಈ ಅರ್ಥದಲ್ಲಿ ಆಕೆಯ ಪ್ರಯಾಣ ಹೊರಗಿನ ಅಧಿಕಾರದ ಪ್ರಯಾಣಕ್ಕಿಂತ ಹೆಚ್ಚು ಒಳಗಿನ ಪರಿವರ್ತನೆಯ ಪ್ರಯಾಣ.

ನಾಯಕ – ಒಂದು ಶಕ್ತಿಯುತ ಕನಸು

ಈ ಕಥೆಯ ಇನ್ನೊಂದು ಅದ್ಭುತ ಪಾತ್ರ ಹಾನ್ ಶುವೋ. ಆತ ಪುರುಷ ಪ್ರಧಾನ ಸಮಾಜದಿಂದ ಬಂದವನು. ಆರಂಭದಲ್ಲಿ ಆತ ತನ್ನದೇ ಶಕ್ತಿ, ಬುದ್ಧಿವಂತಿಕೆ ಮತ್ತು ಸ್ಥಾನಮಾನವನ್ನು ನಂಬಿಕೊಂಡಿರುತ್ತಾನೆ. ಆದರೆ ಮಹಿಳೆಯರು ಅಧಿಕಾರದಲ್ಲಿರುವ ಹುವಾಯುವಾನ್ ನಗರಕ್ಕೆ ಬಂದಾಗ, ತನ್ನ ಲಿಂಗವೇ ತನ್ನ ವಿರುದ್ಧ ಒಂದು ಸಾಮಾಜಿಕ ಅಡೆತಡೆಯಾಗುತ್ತದೆ. ಇದು ಆತನಿಗೆ ಹೊಸ ಅನುಭವ.

ಆದರೆ ಆತನ ನಿಜವಾದ ನಾಯಕತ್ವ ಆರಂಭವಾಗುವುದು ಇಲ್ಲಿ. ಅವನು ತನ್ನ ಹೆಂಡತಿಯ ಅಸ್ತಿತ್ವವನ್ನು ಕಡಿಮೆ ಮಾಡುವ ಮೂಲಕ ನಾಯಕನಾಗುವುದಿಲ್ಲ. ಅವಳನ್ನು ಮೀರಿಸುವ ಮೂಲಕ ನಾಯಕನಾಗುವುದಿಲ್ಲ. ಅವಳ ನಿರ್ಧಾರಗಳನ್ನು ತನ್ನ ನಿರ್ಧಾರಗಳನ್ನಾಗಿ ಮಾಡುವ ಮೂಲಕವೂ ಅಲ್ಲ. ಅವಳನ್ನು ಅವಳಾಗಿಯೇ ಒಪ್ಪಿಕೊಳ್ಳುವ ಮೂಲಕ ನಾಯಕನಾಗುತ್ತಾನೆ.

ಅವಳ ಸಾಮರ್ಥ್ಯವನ್ನು ಗುರುತಿಸುತ್ತಾನೆ. ಅವಳು ಕುಸಿದಾಗ ಅವಳನ್ನು ಎತ್ತುತ್ತಾನೆ. ಅವಳು ತನ್ನನ್ನು ತಾನೇ ಅನುಮಾನಿಸಿದಾಗ ಅವಳಿಗೆ ಅವಳ ಶಕ್ತಿಯನ್ನು ನೆನಪಿಸುತ್ತಾನೆ. ಅವಳ ಯಶಸ್ಸು ತನ್ನ ಸೋಲು ಎಂದು ಭಾವಿಸುವುದಿಲ್ಲ. ಇಲ್ಲಿಯೇ ಈ ನಾಟಕ ಅತ್ಯಂತ ಸುಂದರವಾದ ಪ್ರಶ್ನೆಯನ್ನು ಕೇಳುತ್ತದೆ –

ಒಬ್ಬ ಪುರುಷ ಹೀರೊ ಆಗುವುದು ಎಂದರೆ ಅವನು ಮಹಿಳೆಯನ್ನು ಗೆಲ್ಲುವುದೇ? ಅಥವಾ ಮಹಿಳೆಯ ಅಸ್ತಿತ್ವವನ್ನು ಗೌರವಿಸುವುದೇ?

“ನಾನು ಪುರುಷ, ಆದ್ದರಿಂದ ನಾನು ಹೀರೊ” ಎಂಬ ಕಲ್ಪನೆ

ನಮ್ಮ ಸಮಾಜದಲ್ಲಿ ಪುರುಷತ್ವವನ್ನು ಕೆಲವೊಮ್ಮೆ ಅಧಿಕಾರದೊಂದಿಗೆ ಬೆರೆಸಲಾಗುತ್ತದೆ. ಹೆಂಡತಿಯ ಮೇಲೆ ಮಾತು ನಡೆಯಬೇಕು. ಕುಟುಂಬದ ಎಲ್ಲ ನಿರ್ಧಾರಗಳನ್ನೂ ತಾನೇ ತೆಗೆದುಕೊಳ್ಳಬೇಕು. ಹೆಂಡತಿ ತನಗಿಂತ ಹೆಚ್ಚು ಯಶಸ್ವಿಯಾದರೆ ಅಸುರಕ್ಷಿತವಾಗಬಾರದು ಎಂದು ಹೇಳಿಕೊಂಡರೂ ಒಳಗೊಳಗೆ ಅದನ್ನು ಸಹಿಸಿಕೊಳ್ಳಲಾಗದ ಸ್ಥಿತಿ.

ಮಹಿಳೆ ತನ್ನದೇ ಆದ ಅಭಿಪ್ರಾಯ ಹೊಂದಿದ್ದರೆ ಅದನ್ನು “ಹಠ” ಎಂದು ಕರೆಯುವುದು. ಆಕೆ ತನ್ನದೇ ಆದ ಬದುಕನ್ನು ಆಯ್ಕೆ ಮಾಡಿಕೊಂಡರೆ ಅದನ್ನು “ಸ್ವಾರ್ಥ” ಎಂದು ಕರೆಯುವುದು. ಇವೆಲ್ಲವೂ ಪುರುಷತ್ವದ ಶಕ್ತಿ ಅಲ್ಲ. ಇವು ಅಸುರಕ್ಷಿತ ಅಹಂಕಾರದ ಲಕ್ಷಣಗಳು.

ಹಾನ್ ಶುವೋನ ಪಾತ್ರ ಇದಕ್ಕೆ ವಿರುದ್ಧವಾದ ಪುರುಷತ್ವವನ್ನು ತೋರಿಸುತ್ತದೆ. ಅವನು ತನ್ನ ಹೆಂಡತಿಯ ಬೆಳವಣಿಗೆಯಿಂದ ಹೆದರುವುದಿಲ್ಲ. ಇದು ಬಹಳ ದೊಡ್ಡ ಗುಣ. ಒಬ್ಬ ಮಹಿಳೆ ಮುಂದೆ ಬಂದಾಗ, ಅವಳ ಹಿಂದೆ ನಿಂತಿರುವ ಪುರುಷ ಚಿಕ್ಕವನಾಗುವುದಿಲ್ಲ. ಬದಲಾಗಿ, ಅವನ ವ್ಯಕ್ತಿತ್ವ ದೊಡ್ಡದಾಗುತ್ತದೆ.

ನಿಜವಾದ ನಾಯಕತ್ವ ಎಂದರೆ ಜಾಗವನ್ನು ಹಂಚಿಕೊಳ್ಳುವುದು

ಇಲ್ಲಿ “ನಾಯಕ” ಎಂಬ ಪದದ ಅರ್ಥವೇ ಬದಲಾಗುತ್ತದೆ. ಸಾಮಾನ್ಯ ಕತೆಗಳಲ್ಲಿ ನಾಯಕ ಎಂದರೆ ಎಲ್ಲರಿಗಿಂತ ಶಕ್ತಿಶಾಲಿ ವ್ಯಕ್ತಿ. ಆದರೆ ಈ ನಾಟಕ ನಿಧಾನವಾಗಿ ಬೇರೆ ಅರ್ಥವನ್ನು ನೀಡುತ್ತದೆ. ನಿಜವಾದ ನಾಯಕನು ಎಲ್ಲರಿಗಿಂತ ಮೇಲೆ ನಿಲ್ಲುವವನಲ್ಲ. ಇತರರೂ ಮೇಲೆ ಬರಲು ಜಾಗ ಮಾಡಿಕೊಡುವವನು.

ನಾಯಕಿ ತನ್ನ ಶಕ್ತಿಯನ್ನು ಕಂಡುಕೊಳ್ಳುವಾಗ ನಾಯಕನು ಅದನ್ನು ಕಸಿದುಕೊಳ್ಳುವುದಿಲ್ಲ. ಅವಳ ಸ್ವಾತಂತ್ರ್ಯ ಅವನ ಪ್ರೀತಿಗೆ ಅಪಾಯವಾಗುವುದಿಲ್ಲ. ಅವಳ ಯಶಸ್ಸು ಅವನ ಪುರುಷತ್ವಕ್ಕೆ ಅವಮಾನವಾಗುವುದಿಲ್ಲ. ಅವಳ ಘನತೆ ಅವನ ಅಧಿಕಾರವನ್ನು ಕಡಿಮೆ ಮಾಡುವುದಿಲ್ಲ. ಇದೇ ಆರೋಗ್ಯಕರ ಸಂಬಂಧದ ಮೂಲ.

ಈ ಕಥೆ ಮಹಿಳೆಯರಿಗಷ್ಟೇ ಅಲ್ಲ

ಈ ನಾಟಕವನ್ನು ಮಹಿಳೆಯರ ಕಥೆ ಎಂದು ಮಾತ್ರ ನೋಡುವುದು ಸರಿಯಲ್ಲ . ಇದು ಪುರುಷರಿಗೂ ಒಂದು ಕನ್ನಡಿ. “ಮಹಿಳೆಯೊಬ್ಬಳು ನಿಮಗಿಂತ ಹೆಚ್ಚು ಸಾಮರ್ಥ್ಯ ಹೊಂದಿದ್ದರೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?” “ನಿಮ್ಮ ಹೆಂಡತಿ ನಿಮಗಿಂತ ಹೆಚ್ಚು ಸಂಪಾದಿಸಿದರೆ?” “ಅವಳಿಗೆ ನಿಮಗಿಂತ ಹೆಚ್ಚು ಸಾಮಾಜಿಕ ಪ್ರಭಾವ ಬಂದರೆ?” “ಅವಳ ನಿರ್ಧಾರವನ್ನು ನೀವು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬಂದರೆ?” ಆ ಕ್ಷಣದಲ್ಲಿ ನಿಮ್ಮ ಪುರುಷತ್ವಕ್ಕೆ ಏನಾಗುತ್ತದೆ? ಅದು ಕುಸಿಯುತ್ತದೆಯೇ? ಅಥವಾ ನೀವು ಹೇಳುತ್ತೀರಾ “ಅವಳು ನನ್ನ ಜೊತೆಯಲ್ಲಿದ್ದಾಳೆ. ಅವಳ ಯಶಸ್ಸು ನನ್ನ ಸೋಲಲ್ಲ.” ಎಂದು!

ಹಾನ್ ಶುವೋನ ಪಾತ್ರದ ಸೌಂದರ್ಯ ಇಲ್ಲಿಯೇ ಇದೆ. ಅವನು “ನಾನು ಹೀರೊ” ಎಂದು ಘೋಷಿಸಿಕೊಳ್ಳುವುದರಿಂದ ಹೀರೊ ಆಗುವುದಿಲ್ಲ. ಅವನು ತನ್ನ ಹೆಂಡತಿಯ ಸಾಮರ್ಥ್ಯವನ್ನು ಗುರುತಿಸಿ ಹೀರೊ ಆಗುತ್ತಾನೆ.

ಈ ನಾಟಕ ಒಂದು ಎಚ್ಚರಿಕೆಯನ್ನೂ ನೀಡುತ್ತದೆ

ಈ ಕಥೆಯನ್ನು ಸಂಪೂರ್ಣ ಸಮಾನತೆಯ ಆದರ್ಶ ಎಂದು ನೋಡುವ ಅಗತ್ಯವಿಲ್ಲ. ಕೆಲವು ವಿಮರ್ಶಕರು ಕೂಡ ಗಮನಿಸಿರುವಂತೆ, ಮಹಿಳಾ ಪ್ರಧಾನ ಸಮಾಜವನ್ನು ತೋರಿಸಿದರೂ ಕಥೆಯ ಕೆಲವು ಭಾಗಗಳಲ್ಲಿ ಹಳೆಯ ಪ್ರೇಮಕಥೆಯ ಮಾದರಿಗಳು ಮತ್ತೆ ಕಾಣಿಸಿಕೊಳ್ಳುತ್ತವೆ; ಅಂದರೆ ಅಧಿಕಾರದ ತಲೆಕೆಳಗು ಮಾತ್ರ ಮಾಡಿದರೆ ಲಿಂಗಸಮಾನತೆ ಸಂಪೂರ್ಣವಾಗಿ ಸಾಧನೆಯಾಗುವುದಿಲ್ಲ. ಅದೇ ಈ ನಾಟಕದ ಮತ್ತೊಂದು ಆಸಕ್ತಿದಾಯಕ ಅಂಶ.

ಏಕೆಂದರೆ ಕಥೆ ಕೊನೆಗೆ ಹೇಳುವುದು ಪುರುಷ ಪ್ರಧಾನ ವ್ಯವಸ್ಥೆಯೂ ಪರಿಹಾರವಲ್ಲ, ಮಹಿಳಾ ಪ್ರಧಾನ ವ್ಯವಸ್ಥೆಯೂ ಪರಿಹಾರವಲ್ಲ. ಪರಿಹಾರವೆಂದರೆ ಒಬ್ಬ ಮನುಷ್ಯನ ಮೌಲ್ಯವನ್ನು ಅವನ ಅಥವಾ ಅವಳ ಲಿಂಗದಿಂದ ನಿರ್ಧರಿಸದ ಸಮಾಜ.

ಶ್ರೇಷ್ಠತೆಯ ಸ್ಪರ್ಧೆಯಿಂದ ಸಮಾನತೆಯ ಸಂಬಂಧದ ಕಡೆಗೆ

ಲಿಂಗಭೇದದ ಬೇರು ಬಹುಶಃ ಇಲ್ಲಿದೆ. “ನಾನು ಶ್ರೇಷ್ಠ.” “ನನ್ನ ಲಿಂಗ ಶ್ರೇಷ್ಠ.” “ನನ್ನ ಮಾತೇ ಅಂತಿಮ.” “ನನಗೆ ಹೆಚ್ಚು ಹಕ್ಕು.” “ನಿನ್ನ ಕೆಲಸ ನನಗಿಂತ ಕೆಳಮಟ್ಟದ್ದು.” ಇಂತಹ ಶ್ರೇಷ್ಠತೆಯ ಭಾವನೆ ಇರುವವರೆಗೆ, ಸ್ಥಾನ ಬದಲಾದರೂ ಅನ್ಯಾಯ ಮುಂದುವರಿಯುತ್ತದೆ.

ನಿನ್ನೆ ಪುರುಷನು ಅಧಿಕಾರದಲ್ಲಿದ್ದ. ಇಂದು ಮಹಿಳೆ ಅಧಿಕಾರಕ್ಕೆ ಬಂದಳು. ಆದರೆ ಮಹಿಳೆ ನಿನ್ನೆ ಪುರುಷನು ಬಳಸಿದ ಅದೇ ಅಧಿಕಾರದ ಭಾಷೆಯನ್ನು ಬಳಸಿದರೆ, ಸಮಾಜ ಬದಲಾಗುವುದಿಲ್ಲ. ಕೇವಲ ಅಧಿಕಾರದ ಕುರ್ಚಿಯ ಮೇಲೆ ಕುಳಿತಿರುವ ವ್ಯಕ್ತಿ ಬದಲಾಗುತ್ತಾನೆ.

ಆದ್ದರಿಂದ ನಿಜವಾದ ಬದಲಾವಣೆ ಎಂದರೆ “ಯಾರು ಮೇಲಿದ್ದಾರೆ?” ಎಂಬ ಪ್ರಶ್ನೆಯಿಂದ “ಯಾರೂ ಯಾರಿಗಿಂತ ಮೇಲಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬಹುದೇ?” ಎಂಬ ಪ್ರಶ್ನೆಯ ಕಡೆಗೆ ಸಾಗುವುದು.

ಕೊನೆಗೆ ಉಳಿಯುವ ಪ್ರಶ್ನೆ

‘The Romance of Tiger and Rose’ ಅನ್ನು ಪ್ರೇಮಕಥೆಯಾಗಿ ನೋಡಬಹುದು. ಹಾಸ್ಯನಾಟಕವಾಗಿ ನೋಡಬಹುದು. ಲಿಂಗಪಾತ್ರಗಳನ್ನು ತಲೆಕೆಳಗಾಗಿ ಮಾಡಿದ ಮನರಂಜನೆಯಾಗಿ ನೋಡಬಹುದು. ಆದರೆ ಅದರೊಳಗೆ ಇನ್ನೊಂದು ಬಹಳ ಗಂಭೀರವಾದ ಕಥೆ.

ಒಬ್ಬ ಮಹಿಳೆ ತನ್ನನ್ನು ತಾನು ಅರಿತುಕೊಳ್ಳುವ ಕಥೆ. ಒಬ್ಬ ಪುರುಷ ತನ್ನ ಪುರುಷತ್ವವನ್ನು ಅಧಿಕಾರದಿಂದ ಬೇರ್ಪಡಿಸಿಕೊಳ್ಳುವ ಕಥೆ. ಒಂದು ಸಮಾಜ ತನ್ನದೇ ನಿಯಮಗಳನ್ನು ಕನ್ನಡಿಯಲ್ಲಿ ನೋಡಿಕೊಳ್ಳುವ ಕಥೆ. ಮತ್ತು ಮುಖ್ಯವಾಗಿ ಮಹಿಳೆಯನ್ನು ಗೌರವಿಸುವುದರಿಂದ ಪುರುಷನ ಘನತೆ ಕಡಿಮೆಯಾಗುವುದಿಲ್ಲ; ಮಹಿಳೆಯ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳುವುದರಿಂದ ಪುರುಷನ ಸ್ಥಾನ ಕುಸಿಯುವುದಿಲ್ಲ ಎಂಬ ಕಥೆ.

ಹಾಗಾದರೆ ನಿಜವಾದ ಹೀರೊ ಯಾರು? ಮಹಿಳೆಯನ್ನು ಗೆದ್ದ ಪುರುಷನೊ? ಅವಳನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡ ಪುರುಷನೊ? ಅಥವಾ “ನೀನು ನೀನಾಗಿಯೇ ಇರು. ನಿನ್ನ ಕನಸುಗಳಿಗೆ ನಾನು ಅಡ್ಡಿಯಾಗುವುದಿಲ್ಲ. ನೀನು ಗೆದ್ದಾಗ ನಾನು ಸೋಲುವುದಿಲ್ಲ” ಎಂದು ಹೇಳಬಲ್ಲ ಪುರುಷನಾ? ಈ ಪ್ರಶ್ನೆಗಳು ಈ ಚೀನಾ ಡ್ರಾಮಾ ನೋಡಿದಾಗ ನಮ್ಮ ಮನಸ್ಸಿನಲ್ಲಿ ಮೂಡುತ್ತವೆ.

ಅದೇ ವೇಳೆ ಉತ್ತರವೂ ಇದೆ – “ಪುರುಷ ಮತ್ತು ಮಹಿಳೆ ಯಾರು ಶ್ರೇಷ್ಠ ಎಂಬುದನ್ನು ಸಾಬೀತುಪಡಿಸುವುದನ್ನು ನಿಲ್ಲಿಸಿ, ಇಬ್ಬರೂ ಮನುಷ್ಯರು ಎಂಬುದನ್ನು ಒಪ್ಪಿಕೊಳ್ಳಬೇಕು. ಆ ದಿನವೇ ನಿಜವಾದ ಸಮಾನತೆಯ ಆರಂಭ.” ಎಂಬುದು.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment