ಅವಲೋಕನ 1: ಪರಿತ್ಯಕ್ತತೆ, ಉಳಿವು ಮತ್ತು ವ್ಯಕ್ತಿತ್ವದ ಹುಟ್ಟು

ಆರಂಭಕ್ಕೂ ಮುನ್ನ….

ಐತಿಹಾಸಿಕ, ರಾಜಕೀಯ ಮತ್ತು ಪ್ರೇಮದ ಸೂಕ್ಷ್ಮ ಹಂತಗಳನ್ನು ಒಂದೇ ಸರಣಿಯಲ್ಲಿ ಜೋಡಿಸಿ ಹೇಳುವ ಅದ್ಭುತ ಪ್ರಯತ್ನವೇ Love Like the Galaxy. 2022ರಲ್ಲಿ ಪ್ರಸಾರಗೊಂಡ ಈ ಚೀನೀ ಸರಣಿ ತನ್ನ ದೃಶ್ಯ ವೈಭವ, ಸೂಕ್ಷ್ಮ ಕಥನಶೈಲಿ ಮತ್ತು ಮಾನವೀಯ ಸ್ಪರ್ಶದಿಂದ ಗಮನ ಸೆಳೆಯುತ್ತದೆ.

ಚೀನಾ ದೇಶದ ಹಳ್ಳಿಗಳ ನಿಶ್ಶಬ್ದ ಜೀವನದಿಂದ ಹಿಡಿದು ಅರಮನೆಗಳ ರಾಜಕೀಯ ಒಳಜಗಳಗಳವರೆಗೆ, ಕಥೆ ಹಲವು ಪದರಗಳಲ್ಲಿ ಸಾಗುತ್ತದೆ. ಆದರೆ ಈ ಎಲ್ಲಾ ಹಿನ್ನೆಲೆ ಮಾತ್ರ, ಮುಖ್ಯ ವೇದಿಕೆಯಲ್ಲ. ಮುನ್ನಲೆಯಲ್ಲಿ ಕಾಣಿಸುವುದು – ಮಾನವ ಸಂಬಂಧಗಳು, ಕುಟುಂಬದ ಬಿಗಿದ ನಂಟುಗಳು, ಮೌಲ್ಯಗಳು, ನಿರೀಕ್ಷೆಗಳು, ಮತ್ತು ವ್ಯಕ್ತಿತ್ವಗಳ ಘರ್ಷಣೆ.

ಈ ಸರಣಿಯ ಅತ್ಯಂತ ತೀವ್ರ ಅಂಶವೆಂದರೆ—
ಹೆಣ್ಣಿನ ಸ್ವಾತಂತ್ರ್ಯಕ್ಕೆ ಹೊರಗಿನ ಸಮಾಜವೇ ದೊಡ್ಡ ಅಡ್ಡಿಯಾಗುವುದಿಲ್ಲ; ಅವಳಿಗೆ ಅತಿ ಹತ್ತಿರದ ಸಂಬಂಧಗಳೇ ಕೆಲವೊಮ್ಮೆ ಅವಳ ಅಸ್ತಿತ್ವವನ್ನು ಕುಗ್ಗಿಸುತ್ತವೆ. ಆದರೆ, ಆ ಒತ್ತಡಗಳ ಮಧ್ಯೆಯೂ ಹೆಣ್ಣು ತನ್ನನ್ನು ತಾನು ಕಾಪಾಡಿಕೊಳ್ಳಬೇಕು, ತನ್ನ ಧ್ವನಿಯನ್ನು ಕಳೆದುಕೊಳ್ಳಬಾರದು ಎಂಬುದೇ ಈ ಸರಣಿಯ ಮೌಲಿಕ ಸಂದೇಶ. “ಸಂಬಂಧಗಳು ನಮ್ಮನ್ನು ಕಟ್ಟುತ್ತವೆಯೇ… ಅಥವಾ ನಮ್ಮನ್ನೇ ಕಿತ್ತುಹಾಕುತ್ತವೆಯೇ? ಅದರ ಉತ್ತರ ಹುಡುಕುವ ಪ್ರಯಾಣವೇ Love Like the Galaxy.”

ಅಧ್ಯಾಯ – ೧

ಅಪ್ಪ-ಅಮ್ಮ ಇಬ್ಬರೂ ರಾಜ್ಯದ ಸೈನಿಕರು. ಹದಿನೈದು ವರ್ಷಗಳ ನಿರಂತರ ಯುದ್ಧದ ಬಳಿಕ ಅವರು ಮನೆಗೆ ಮರಳುತ್ತಾರೆ.
ಆ ಮನೆಗೆ ಹಿರಿಯ ಮಗನಾದ ಅಪ್ಪ ದೂರದಲ್ಲಿದ್ದರೂ ತನ್ನ ತಮ್ಮಂದಿರು ಮತ್ತು ತಾಯಿಯನ್ನು ಹೊತ್ತು ನಿಂತಿದ್ದಾನೆ.

ಆದರೆ, ಈ ಕಥೆಯ ಕೇಂದ್ರದಲ್ಲಿ ಯುದ್ಧವಿಲ್ಲ. ಒಬ್ಬ ಹೆಣ್ಣುಮಗುವಿನ ಒಳಗಿನ ಯುದ್ಧ ಇದೆ. ಯುದ್ಧಕ್ಕೆ ತೆರಳುವಾಗ ಕೌಟುಂಬಿಕ ರಾಜಕೀಯದ ನಡುವೆ ಆಗಷ್ಟೇ ಹುಟ್ಟಿದ ಮಗಳನ್ನು ತಾಯಿಯ ಬಳಿ ಬಿಟ್ಟು ಹೋಗಬೇಕಾಗುತ್ತದೆ. ಇಬ್ಬರು ಅಣ್ಣಂದಿರನ್ನು ಜೊತೆಗೆ ಕರೆದುಕೊಂಡು ಹೋದ ಹೆತ್ತವರು, ತನ್ನನ್ನು ಮಾತ್ರ ಬಿಟ್ಟುಹೋದರು ಎಂಬ ಪರಿತ್ಯಕ್ತ ಭಾವನೆ ಆಕೆಯೊಳಗೆ ಗಾಢವಾಗಿ ನೆಲಸುತ್ತದೆ.

ಅಜ್ಜಿ ಮತ್ತು ಚಿಕ್ಕಮ್ಮನ ದಬ್ಬಾಳಿಕೆಗೆ ವಿರುದ್ಧವಾಗಿ ಆಕೆ ತನ್ನದೇ ರೀತಿಯಲ್ಲಿ ಪ್ರತಿರೋಧಿಸುತ್ತಾಳೆ. ಅದರ ಪ್ರತಿಯಾಗಿ ಆಕೆಯನ್ನು ಹಳ್ಳಿಯ ಮನೆಯೊಂದರಲ್ಲಿ ಉಪವಾಸಕ್ಕೆ ತಳ್ಳಲಾಗುತ್ತದೆ. ಆದರೆ, ಈ “ಶಿಕ್ಷೆ” ಆಕೆಯನ್ನು ಮುರಿಯುವುದಿಲ್ಲ. ಅದು ಆಕೆಯನ್ನು ಇನ್ನಷ್ಟು ತೀಕ್ಷ್ಣಗೊಳಿಸುತ್ತದೆ.

ಮನೆಗೆ ಕರೆತರುತ್ತಿರುವಾಗ, ಯುದ್ಧ ಸಾಮಗ್ರಿಗಳನ್ನು ಕಳ್ಳಸಾಗಣೆ ಮಾಡುತ್ತಿರುವ ವ್ಯಕ್ತಿಯನ್ನು ಹಿಡಿಯಲು ಒಬ್ಬ ಯುವ ಜನರಲ್‌ಗೆ ಆಕೆ ನೆರವಾಗುತ್ತಾಳೆ. ಆಕೆಯ ಬುದ್ಧಿವಂತಿಕೆ ಸ್ಪಷ್ಟವಾಗುತ್ತದೆ. ಆದರೂ ಮನೆಯ ಕಣ್ಣಿಗೆ ಅವಳು ಅಶಿಷ್ಟ, ಉದ್ಧಟ, ಗೌರವವಿಲ್ಲದ ಮಗು. ಯಾಕೆಂದರೆ – ಅವಳು “ಬಿಟ್ಟುಹೋಗಲ್ಪಟ್ಟ ಹೆಣ್ಣುಮಗು”.

ಆಕೆಗೆ ಶಿಕ್ಷಣವಿಲ್ಲ, ಪ್ರೀತಿಯ ಅನುಭವವಿಲ್ಲ, ಬೈಗುಳ ಮತ್ತು ತಿರಸ್ಕಾರ ಮಾತ್ರ ಅವಳ ಶಿಕ್ಷಕರು. ಹೀಗಾಗಿ ಅವಳು ಬದುಕಲು ಕಲಿತದ್ದು – ನಾಟಕ ಮಾಡುವುದು, ಭಾವನೆಗಳನ್ನು ಮರೆಮಾಡುವುದು ಮತ್ತು ತನ್ನಷ್ಟಕ್ಕೆ ಉಳಿಯುವುದು.

ಇದನ್ನೇ ತಾಯಿ ಗಮನಿಸುತ್ತಾಳೆ. ಇಲ್ಲಿ ತಾಯಿಯೊಳಗಿನ ಮೂರು ಭಾರಗಳು ಮುಖಾಮುಖಿಯಾಗುತ್ತವೆ. ಮಗುವನ್ನು ಬಿಟ್ಟುಹೋದ ಪಾಪಪ್ರಜ್ಞೆ, ಸರಿಯಾದ ಶಿಕ್ಷಣ ಕೊಡಲಿಲ್ಲ ಎನ್ನುವ ಭಯ ಮತ್ತು ಮಗಳ ಭವಿಷ್ಯದ ಬಗ್ಗೆ ಕಾಳಜಿ. ಈ ಮೂರೂ ಸೇರಿ
ಮಗಳಿಗೆ ತಾಯಿ ಸಿಕ್ಕ ನಂತರವೂ, ಅವಳು ಇನ್ನೂ ಅನಾಥಳೇ ಆಗಿ ಉಳಿಯುವ ದೌರ್ಭಾಗ್ಯವನ್ನು ಸೃಷ್ಟಿಸುತ್ತವೆ.

ಭಾಷೆಯ ಗಡಿ ಮೀರಿದ ಅವಲೋಕನ – ಹೊಸ ಸರಣಿಗಳ ಆರಂಭ

ಇನ್ನೊಂದು ಕಡೆ ಎರಡನೇ ಅತ್ತಿಗೆಯ ಕಥೆ.

ಹದಿನೈದು ವರ್ಷಗಳ ಹಿಂದೆ ಬಡತನದಲ್ಲಿದ್ದ ಈ ಮನೆಗೆ, ಅವಳ ಕುಟುಂಬವೇ ನೆರವಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ದೊಡ್ಡಣ್ಣ-ಅತ್ತಿಗೆಯ ಸಾಧನೆ, ಸಂಪತ್ತು, ಗೌರವ ಇವುಗಳೆಲ್ಲ ಸೇರಿ, ಎರಡನೇ ಅತ್ತಿಗೆಯ ಅಸ್ತಿತ್ವವೇ ಅಲುಗಾಡುತ್ತದೆ. ಇದು ಮಾನವ ಸಹಜ. ಆದರೆ, ಅಹಂಕಾರ, ನಿಯಂತ್ರಣ ಮತ್ತು ಅತಿಯಾದ ನಿರೀಕ್ಷೆಗಳು ಅವಳಿಂದ ಮದುವೆ ಮತ್ತು ಮಗುವನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಕೊಂಡೊಯ್ಯುತ್ತವೆ.

ಈ ಸರಣಿ ಒಬ್ಬ ಬುದ್ದಿವಂತ, ಆದರೆ ಪರಿತ್ಯಕ್ತ ಹೆಣ್ಣುಮಗುವಿನ ಕಥೆಯಾಗಿದ್ದರೂ ಇದು ಕೇವಲ ಆಕೆಯ ಕಥೆಯಲ್ಲ. ಇದು
ಅಜ್ಜಿ, ತಂದೆ, ತಾಯಿ, ಅಣ್ಣ-ತಮ್ಮ, ಸಂಬಂಧಗಳು, ಪ್ರೇಮ, ರಾಜಕೀಯ, ರಾಜಭವನ ಹೀಗೆ ಹಲವಾರು ಆಯಾಮಗಳಲ್ಲಿ ನಮ್ಮ ಗಮನವನ್ನು ತೆರೆಸುವ ಕಥೆ.

ಈ ಎಲ್ಲಾ ಆಯಾಮಗಳನ್ನು ಒಂದೊಂದಾಗಿ ತೆರೆದು ನೋಡೋಣ ಮುಂದಿನ ಅವಲೋಕನಗಳಲ್ಲಿ.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment