ಭೀಮನ ಅಮಾವಾಸ್ಯೆ: ಅಳಿಯನ ಕಾಲು ತೊಳೆಯುವುದರಿಂದ ಚಾಮುಂಡಿಯ ಬೆಟ್ಟದವರೆಗೆ

ಭೀಮನ ಅಮಾವಾಸ್ಯೆಯನ್ನು ನಮ್ಮ ಕಡೆ ‘ಕೊಡೆ ಅಮಾವಾಸ್ಯೆ’ ಅಂತಲೂ ಕರೆಯುತ್ತಾರೆ. ಅವತ್ತು ಅಳಿಯನ ಮೊದಲ ಮಾವನಮನೆ ಊಟ. ನಮ್ಮ ಮನೆಯ ಈ ಆಚರಣೆಯ ನೆನಪು ಬಂದಾಗ ಮೊದಲು ನೆನಪಾಗುವುದು ಸೊಳೆ ಉಂಡ್ಲೆಕಾಳು.

ಹಲಸಿನಕಾಯಿ ತೊಳೆಯನ್ನು ಉಪ್ಪು ನೀರಿನಿಂದ ತೆಗೆದು, ಒರಳಿನಲ್ಲಿ ಕುಟ್ಟಿ, ಅದಕ್ಕೆ ಬೆಲ್ಲ ಮತ್ತು ಏಲಕ್ಕಿ ಹಾಕಿ ಕಾಯಿಸಿ, ಉಂಡೆ ಕಟ್ಟಿ ಎಣ್ಣೆಯಲ್ಲಿ ಕರಿಯುತ್ತಾರೆ. ಅದನ್ನು ಸೊಳೆ ಉಂಡ್ಲೆಕಾಳು ಅಥವಾ ತೊಳೆ ಉಂಡ್ಲೆಕಾಳು ಎನ್ನುತ್ತಾರೆ. ಅದಕ್ಕೆ ತುಪ್ಪ ಹಾಕಿಕೊಂಡು ತಿನ್ನುವುದು ಈ ದಿನದ ವಿಶೇಷ. ಇಷ್ಟೊತ್ತಿಗೆ ಅಲ್ಲೆಲ್ಲೋ ಹಲಸಿನ ಹಣ್ಣು ಸಿಕ್ಕರೆ ಕಡುಬು ಮಾಡಿ ಸಂಭ್ರಮ ಪಡುತ್ತಾರೆ.

ಆದರೆ ಈ ಹಬ್ಬದ ಹಿಂದೆ ಇರುವ ಸಂಬಂಧಗಳ ಭಾವನೆ ಇನ್ನೂ ವಿಶೇಷ.

ಸಾಮಾನ್ಯವಾಗಿ ಅಳಿಯ ಮತ್ತು ಮೊಮ್ಮಕ್ಕಳು ಎಂದರೆ ಅತ್ತೆಗೆ ಅದೇನೋ ವಿಶೇಷ ಪ್ರೀತಿ, ಕಾಳಜಿ. ಭೀಮನ ಅಮಾವಾಸ್ಯೆಯ ದಿನ ಅಳಿಯ ಬರಲಿಲ್ಲವೆಂದರೆ, ‘ಮಗಳ ಬಾಳಲ್ಲಿ ಏನೋ ಸರಿಯಿಲ್ಲವೇ?’ ಎಂಬ ಆತಂಕವೂ ಅವಳನ್ನು ಕಾಡುತ್ತದೆ. ಅಳಿಯ ತನ್ನ ಮಗಳೊಂದಿಗೆ ಚೆನ್ನಾಗಿರಲಿ ಎಂಬ ವಿಶೇಷ ಪ್ರಾರ್ಥನೆ ಅವಳ ಮನಸ್ಸಿನಲ್ಲಿರುತ್ತದೆ.

ಅವಳೊಂದಿಗೆ ಅವಳ ಗಂಡ, ಅಂದರೆ ಅಳಿಯನ ಹೆಣ್ಣು ಕೊಟ್ಟ ಮಾವ, ಮಗಳ ಸಹೋದರರು ಎಲ್ಲರೂ ತಮ್ಮ ಅಳಿಯ, ಭಾವ ಚೆನ್ನಾಗಿರಲಿ ಎಂದು ಹಾರೈಸುವ ದಿನವೂ ಹೌದು.

ಇಂತಹ ವಾತಾವರಣದಿಂದ ಬಂದ ನನಗೆ ಬೆಂಗಳೂರಿನ ಕಡೆ ಭೀಮನ ಅಮಾವಾಸ್ಯೆಯ ಆಚರಣೆ ಮೊದಲು ಸ್ವಲ್ಪ ವಿಚಿತ್ರವೆನಿಸುತ್ತಿತ್ತು. ನಿಧಾನವಾಗಿ ಗಂಡನನ್ನು ಪೂಜಿಸುವುದು, ಕಾಲು ತೊಳೆಯುವುದು ಇವೆಲ್ಲವೂ ಹೆಣ್ಣಿಗೆ ತನ್ನ ಸ್ಥಾನ ತಿಳಿಸುವ ಒಂದು ರೀತಿಯ ಹುನ್ನಾರಗಳಂತೆ ಕಾಣತೊಡಗಿತು. ಆದರೆ ಸ್ವಲ್ಪ ಯೋಚನೆ, ಸ್ವಲ್ಪ ಅನುಭವ ಬಂದ ಮೇಲೆ ಅನ್ನಿಸತೊಡಗಿತು – ಅಬ್ಬಬ್ಬಾ, ಏನು ಪ್ಲಾನ್ ಮಾಡಿದ್ದರು ನಮ್ಮ ಹಿರಿಯರು! 😂

ಗಂಡನ ಮೇಲೆ ಎಷ್ಟೇ ಸಿಟ್ಟಿದ್ದರೂ ಹೊಸ ಸೀರೆಗಾಗಿ ಈ ದಿನ ಕಾಲು ತೊಳೆದು, ಸಂಸಾರ ಸರಿಯಾಗಿರುವಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆಯನ್ನೇ ಸೃಷ್ಟಿಸಿಬಿಟ್ಟರಲ್ಲ ಎಂದು ಅನಿಸತೊಡಗಿತು. ಅಂದರೆ, ಹೆಣ್ಣಿಗೆ ಒಂದು ಕಡೆ ಸಂಸಾರ ಉಳಿಸಿಕೊಳ್ಳುವ ಜವಾಬ್ದಾರಿ. ಮತ್ತೊಂದು ಕಡೆ, ಅವಳಿಗೇ ಒಂದು ದಿನದ ಹಬ್ಬ, ಹೊಸ ಸೀರೆ, ಅಲಂಕಾರ, ಪೂಜೆ, ಗೌರವ! ಹಿರಿಯರ ಮನೋವಿಜ್ಞಾನ ಎಷ್ಟು ದೂರಾಲೋಚನೆ ಹೊಂದಿದೆಯಲ್ಲವೆ?

ಆಮೇಲೆ ಈ ಮೈಸೂರಿಗೆ ಬಂದೆ. ಚಾಮುಂಡಿಯ ಲೀಲೆಯನ್ನು ನೋಡಿದ ಮೇಲೆ ಯಾಕೋ ಈ ದಿನ ಅವಳನ್ನು ಭೇಟಿ ಮಾಡಬಾರದೇ ಅನ್ನಿಸಿತು. ಯಾಕೆಂದರೆ ನನಗೆ ಗಂಡನ ವಿರಹ ತಡೆಯಲಾಗದೆ, ‘ಹಾವಾದರೂ ಕಚ್ಚಬಾರದೇ, ಚೇಳಾದರೂ ಕುಕ್ಕಬಾರದೇ’ ಎನ್ನುವ ಚಾಮುಂಡಿ ಇಷ್ಟ. ನನಗೊಂತರ ಅವಳು ನನ್ನಂತೆಯೇ.

ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಹೋಗುವ ಧೈರ್ಯ ನನಗಿಲ್ಲ. ಅಷ್ಟು ಜನಜಂಗುಳಿ, ಅಷ್ಟು ಅಲಂಕಾರ, ಅಷ್ಟು ಆಚರಣೆ. ಆದರೆ ಜನರಿಲ್ಲದ ಸಮಯದಲ್ಲಿ, ಅಲಂಕಾರ ಕಳಚಿ, ಸ್ನಾನ ಮುಗಿಸಿ, ತಾನೇ ತನ್ನೊಳಗೆ ಕುಳಿತಂತೆ ಕಾಣುವ ಆ ಬೆಟ್ಟ ಮಾತ್ರ ನನಗಾಗಿಯೇ ಕಾದು ಕುಳಿತಿದೆ ಅನ್ನಿಸುತ್ತದೆ.

ನನ್ನ ಪಾಡಿಗೆ ಸದ್ದಿಲ್ಲದೇ ಹೋಗಿ, ಮನೆಯವರಿಗೆ ಒಳ್ಳೆಯದು ಮಾಡಲಿ ಎಂದು ಚಾಮುಂಡಿಗೆ ನಮಸ್ಕರಿಸಿ ಬರುವುದು ನನ್ನ ಖಾಸಗಿ ಕ್ಷಣಕ್ಕೂ, ನನ್ನ ಸ್ವಾತಂತ್ರ್ಯಕ್ಕೂ ಒಟ್ಟಿಗೆ ಗೌರವ ಸಿಕ್ಕಂತಾಗುತ್ತದೆ.

ಆದರೆ ಪ್ರತಿಯೊಂದಕ್ಕೂ exception ಇರುತ್ತದೆ. ಈ ವರ್ಷ ಇನ್ನೂ ಹೋಗಿಲ್ಲ. ನೋಡೋಣ… ಯಾವಾಗ ಬುದ್ಧಿ ಬರುತ್ತೆ ಅಂತ! ಅಲ್ಲಿಯವರೆಗೆ ಅವಳಿಗೆ ಇಲ್ಲಿಂದಲೇ ನಮಸ್ಕಾರ.

Love you, Chamundi. ❤️

ನಿಮ್ಮ ಭೀಮನ ಅಮಾವಾಸ್ಯೆ ಹೇಗಿತ್ತು? ನಿಮ್ಮೂರಿನಲ್ಲಿ ಈ ಹಬ್ಬವನ್ನು ಹೇಗೆ ಆಚರಿಸುತ್ತೀರಿ? ನಿಮ್ಮ ಮನೆಯ ವಿಶೇಷ ಆಚರಣೆ ಅಥವಾ ಅಡುಗೆ ಏನು?

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment