ಹೃದಯದ ಮಾತು ಕೇಳಿದಾಗ ನಾನು ಮತ್ತೆ ಬದುಕಿದೆ!

ಐದಾರು ವರ್ಷಗಳಿಂದ ನನ್ನ ಹೃದಯ ನನ್ನನ್ನು ಕರೆಯುತ್ತಲೇ ಇತ್ತು. ನಾನು ಮಾತ್ರ ಕೇಳಿಸಿಕೊಳ್ಳಲಿಲ್ಲ. ಸ್ವಲ್ಪ ಹೆಚ್ಚು ಕೆಲಸ ಮಾಡಿದರೆ, ಹೆಚ್ಚು ನಡೆದರೆ, ಎಲ್ಲಕ್ಕಿಂತ ಮುಖ್ಯವಾಗಿ ಯಾವುದಾದರೂ ಕಾರಣಕ್ಕೆ ಮನಸ್ಸಿಗೆ ನೋವಾದರೆ ನನ್ನ ಗುಂಡಿಗೆಯಲ್ಲಿ ವಿಪರೀತ ನೋವು ಉಂಟಾಗುತ್ತಿತ್ತು. ಮನುಷ್ಯ ದೇಹದ ಬಗ್ಗೆ ನನಗೆ ಸ್ವಲ್ಪ ತಿಳುವಳಿಕೆ ಇರುವುದರಿಂದ, ಅದನ್ನು ವಿಶ್ರಾಂತಿ ತೆಗೆದುಕೊಂಡು ನಿಭಾಯಿಸುತ್ತಿದ್ದೆ. “ದಣಿದಿರಬೇಕು”, “ಸ್ಟ್ರೆಸ್ ಇರಬಹುದು” ಎಂದುಕೊಂಡು ಮುಂದೆ ಹೋಗುತ್ತಿದ್ದೆ. ಆದರೆ ದೇಹದ ಮಾತುಗಳನ್ನು ನಾವು ಎಷ್ಟು ದಿನ ನಿರ್ಲಕ್ಷಿಸಬಹುದು?

ನೋವು ಒಂದೆರಡು ವರ್ಷಗಳದ್ದಾಗಿರಲಿಲ್ಲ

ಸುಮಾರು ಎರಡು ವರ್ಷಗಳ ಹಿಂದೆ, “ಯಾಕೋ ಇದು ಸರಿಹೋಗುತ್ತಿಲ್ಲ” ಎನ್ನಿಸಿತು. ರಕ್ತಪರೀಕ್ಷೆ ಮಾಡಿಸಿದೆ. ಹಿಮೊಗ್ಲೊಬಿನ್ ಮಟ್ಟ ತೀವ್ರವಾಗಿ ಕಡಿಮೆಯಾಗಿತ್ತು. ಅದಕ್ಕಾಗಿ ಮನೆಯಲ್ಲಿ ರಕ್ತವೃದ್ಧಿಗೆ ಸಹಾಯ ಮಾಡುವ ಆಹಾರವನ್ನು ಹೆಚ್ಚಿಸಿಕೊಂಡೆ. ಕಬ್ಬಿಣಾಂಶ, ಫೋಲಿಕ್ ಆಸಿಡ್, ವಿಟಮಿನ್ D3, ವಿಟಮಿನ್ K2 ಮಾತ್ರೆಗಳನ್ನು ಸೇವಿಸಲು ಆರಂಭಿಸಿದೆ. ನಿಧಾನವಾಗಿ ದೇಹ ಚೇತರಿಸಿಕೊಳ್ಳತೊಡಗಿತು. ಚೈತನ್ಯ ಮರಳಿತು. ಹೃದಯವೂ ಸ್ವಲ್ಪ ಸಮಾಧಾನವಾದಂತೆ ಅನಿಸಿತು. ಆದರೆ ಒಳಮನಸ್ಸು ಮಾತ್ರ ಒಂದು ಮಾತನ್ನು ಹೇಳುತ್ತಲೇ ಇತ್ತು. “ಒಮ್ಮೆ ತಜ್ಞ ವೈದ್ಯರನ್ನು ಭೇಟಿಯಾಗು.”

ನಾನು ಮಾತ್ರ ಭಯಪಡುತ್ತಿದ್ದೆ. ಹಿಂದಿನ ಕೆಲವು ಅನುಭವಗಳು ಮನಸ್ಸಿನಲ್ಲಿ ಇದ್ದವು. “ಹೃದಯ” ಎಂದಾಕ್ಷಣ ಐಸಿಯು, ಪರೀಕ್ಷೆಗಳು, ದೊಡ್ಡ ಬಿಲ್‌ಗಳು… ಎಂಬ ಭಯ. ಆ ಭಯದಿಂದಲೇ ವೈದ್ಯರನ್ನು ಭೇಟಿಯಾಗುವುದನ್ನು ಮುಂದೂಡುತ್ತಿದ್ದೆ.

ವೈದ್ಯರನ್ನು ಕಾಣಲು ತೀರ್ಮಾನಿಸಿದೆ! ಯಾಕೆಂದರೆ…

ಕಳೆದ ಮೂರು ತಿಂಗಳ ಹಿಂದೆ, “ಇನ್ನು ಸಾಕು, ಹಿಮೊಗ್ಲೊಬಿನ್ 11ಕ್ಕೆ ಬಂದಿದೆ” ಎಂದುಕೊಂಡು ವಿಟಮಿನ್ ಮಾತ್ರೆಗಳನ್ನು ನಿಲ್ಲಿಸಿದೆ. ಅದಾದ ನಂತರ ದೇಹ ಮತ್ತೊಂದು ಕಥೆ ಹೇಳತೊಡಗಿತು. ಮೊದಲು ನನ್ನ ಎಡತೋಳು ಸ್ತಬ್ಧವಾಗತೊಡಗಿತು. ಒಂದು ರೀತಿಯಲ್ಲಿ ಅದು ನನ್ನ ಮಾತು ಕೇಳದಂತಾಯಿತು. ಟೈಪ್ ಮಾಡಬೇಕಾದರೂ ಎಡಗೈಯನ್ನು ಕೆಲಸಕ್ಕೆ ಕರೆತರಬೇಕಾದ ಪರಿಸ್ಥಿತಿ. ಆಗಲೂ ವೈದ್ಯರಿಗಿಂತ ಅವರ ಬಿಲ್ಲಿನ ಭಯವೇ ದೊಡ್ಡದಾಗಿತ್ತು.

ನಿಧಾನವಾಗಿ ಆ ನೋವು ಬಾಯಿಯ ಕಡೆಗೆ ಬಂತು. ಎಡಗಡೆಯ ಮೇಲಿನ ಹಲ್ಲು ಸೆಳೆಯತೊಡಗಿತು. “ಹಲ್ಲು ಸೆಳೆಯುವುದೆಂದರೆ ಬಾಲ್ಯದಲ್ಲಿಯೇ ಮುಗಿದ ಅಧ್ಯಾಯ” ಎಂದುಕೊಂಡಿದ್ದ ನನಗೆ ಅದು ಮತ್ತೆ ಎದುರು ನಿಂತಿತ್ತು. ನಂಜನಗೂಡಿನ ಹಲ್ಲುಪುಡಿ ಹಾಕಿ ಹಲ್ಲುಜ್ಜಿದೆ. ಸ್ವಲ್ಪ ಸಮಾಧಾನವಾಯಿತು. “ಓಹ್… ಇದು ಹಲ್ಲಿನ ಸಮಸ್ಯೆ ಇರಬೇಕು. ದಂತವೈದ್ಯರನ್ನು ಭೇಟಿಯಾಗಬೇಕು” ಎಂದುಕೊಂಡೆ.

ವೈದ್ಯರಲ್ಲಿಗೆ ಕೊನೆಗೂ ಹೋದೆ! ಆದರೆ ಆಗಿದ್ದೇನು?

ಆದರೆ ಕಥೆ ಅಲ್ಲಿಗೆ ಮುಗಿಯಲಿಲ್ಲ. ಕೆಲವೇ ದಿನಗಳಲ್ಲಿ ಎರಡೂ ಕಿವಿಗಳ ಕೆಳಗೆ ನೋವು ಆರಂಭವಾಯಿತು. ಮಗನಿಗೆ ತೋರಿಸುತ್ತಿದ್ದ ಗಂಟಲು, ಮೂಗು, ಕಿವಿ ತಜ್ಞವೈದ್ಯರನ್ನು ಭೇಟಿಯಾದೆ. ಅವರು ಮಾತನಾಡುವುದು ಮತ್ತು ಅಗಿಯುವುದರಿಂದ ನೋವಾಗಿರಬಹುದು ಎಂದು ಹೇಳಿ ಔಷಧ ಕೊಟ್ಟರು. ಒಂದು ವಾರ ಔಷಧ ಮುಗಿಸಿದೆ. ತಣ್ಣೀರಿಲ್ಲ, ಬಿಸಿನೀರಿಲ್ಲ. ಸಾಧ್ಯವಾದಷ್ಟು ಜಾಗರೂಕತೆ. ಆದರೂ ದೇಹದ ಸಂದೇಶ ಬದಲಾಗಲಿಲ್ಲ.

ಮತ್ತೊಮ್ಮೆ ಹೃದಯಕ್ಕೆ ಸಂಬಂಧಿಸಿದ ರಕ್ತಪರೀಕ್ಷೆ ಮಾಡಿಸಿದೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿರುವುದು ತಿಳಿಯಿತು. ಈಗ ಒಳಗೆ ಏನೋ ಖಚಿತವಾಗತೊಡಗಿತ್ತು. ಆದರೂ ನನ್ನ ಗ್ರಹಚಾರ ಮುಗಿದಿರಲಿಲ್ಲ! ನನ್ನ ಸಂಗಾತಿಯನ್ನು ನೋಡುವ ವೈದ್ಯರಲ್ಲಿಯೇ ತೋರಿಸಿಕೊಂಡೆ. ಅವರಲ್ಲಿ ಬೇಡಿಕೊಂಡು ಒಂದು ECG ಮಾಡಿಸಿಕೊಂಡೆ. ಅದರಲ್ಲೂ ಯಾವುದೇ ಸ್ಪಷ್ಟ ಸೂಚನೆ ಕಂಡುಬರಲಿಲ್ಲ.

ಆದರೆ ನನ್ನ ದೇಹ ಮಾತ್ರ ದಿನದಿಂದ ದಿನಕ್ಕೆ ತನ್ನ ಧ್ವನಿಯನ್ನು ಹೆಚ್ಚಿಸುತ್ತಿತ್ತು. ಕಿವಿಯ ಬುಡದಿಂದ ಇಡೀ ಕೆಳದವಡೆ ಜೋರಾಗಿ ಸೆಳೆಯತೊಡಗಿತು. ಎಡಗೈ ಸ್ತಬ್ಧವಾಗಿ ಹಿಂದೆ ಆತುಕೊಂಡಿತ್ತು. ಸ್ವಿಮ್ಮಿಂಗ್‌ಗೆ ಹೋದಾಗ ಕಾಲು ಬಡಿದ ನೆವದಲ್ಲಿ ಸೊಂಟದ ಬುಡದಲ್ಲಿ ರಕ್ತ ಕಾಣಿಸಿಕೊಂಡಿತು. ಅದನ್ನೂ “ಪೈಲ್ಸ್ ಇರಬಹುದು” ಎಂದುಕೊಂಡೆ. ವಿಶ್ರಾಂತಿ ತೆಗೆದುಕೊಂಡಾಗ ಅದು ಕಡಿಮೆಯಾಗುತ್ತಿತ್ತು. ಆದ್ದರಿಂದ ನಡೆಯುವುದೇ ಸ್ವಲ್ಪ ಕಷ್ಟವಾಗಿದ್ದರೂ, ನನ್ನ ಜೀವನ ನಿಂತಿರಲಿಲ್ಲ. ಸಂಗಾತಿ, ಮನೆ, ಕೆಲಸ, ಮಗ—ಎಲ್ಲವನ್ನೂ ನಿಭಾಯಿಸುತ್ತಲೇ ಇದ್ದೆ.

ಆದರೆ ದೇಹ ಮಾತ್ರ ಹೇಳುತ್ತಿತ್ತು: “ಇನ್ನು ನನ್ನನ್ನು ನಿರ್ಲಕ್ಷಿಸಬೇಡ.”

ನಾನು ವೈದ್ಯರನ್ನು ಭೇಟಿಯಾಗಬೇಕು ಎಂದು ನಿರ್ಧರಿಸಿದ ದಿನವೇ ಊರಿನಿಂದ ಅಮ್ಮ ಬಂದರು. ಅವರಿಗೆ ಗಂಟಲು, ಕೆಮ್ಮು, ಕಿವಿ ಮತ್ತು ಮೂಗಿನ ತುರಿಕೆಯ ಸಮಸ್ಯೆ ಇತ್ತು. ಅವರನ್ನು ತಜ್ಞ ವೈದ್ಯರ ಬಳಿ ಕರೆದುಕೊಂಡು ಹೋಗಿ, ನಂತರ ನಾನು ಹೃದಯ ತಜ್ಞರನ್ನು ಭೇಟಿಯಾಗಬೇಕು ಎಂದುಕೊಂಡಿದ್ದೆ. ಅಮ್ಮನನ್ನು ವೈದ್ಯರಿಗೆ ತೋರಿಸಿ ಮನೆಗೆ ಕರೆತರುವಾಗ ಅಮ್ಮನೇ ಒತ್ತಾಯ ಮಾಡಿದರು. “ನಾನಿರುವಾಗಲೇ ನೀನು ಹೋಗಿ ತೋರಿಸಿಕೊ.”

ಹೃದಯದಲ್ಲಿ ನಿಜಕ್ಕೂ ತೊಂದರೆಯಿರಲಿಲ್ಲ, ಆದರೆ…

ಸರಿ ಎಂದು ಹೃದಯ ತಜ್ಞರನ್ನು ಭೇಟಿಯಾದೆ. ECG ಮಾಡಿದರು. ECHO ಮಾಡಿದರು. ಅದರಲ್ಲೂ ಏನೂ ಸ್ಪಷ್ಟವಾಗಿ ಕಂಡುಬರಲಿಲ್ಲ. ಕೊನೆಗೆ ಟ್ರೆಡ್‌ಮಿಲ್ ಟೆಸ್ಟ್‌ಗೆ ಹೋದೆ. ಮೂರು ನಿಮಿಷವೂ ಆಗಿರಲಿಲ್ಲ. ನಾನು ಕುಸಿದುಬಿಟ್ಟೆ. ವೈದ್ಯರು ತಕ್ಷಣ ಆಂಜಿಯೋಗ್ರಾಮ್ ಮಾಡಲು ಸೂಚಿಸಿದರು.

ತಕ್ಷಣಕ್ಕೆ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧಗಳನ್ನು ನೀಡಿದರು. ಒಂದೇ ರಾತ್ರಿ ನೋವುಗಳನ್ನು ಸ್ವಲ್ಪ ತಡೆದುಕೊಳ್ಳುವಂತಾಯಿತು. ಆದರೆ ಈಗ ವಿಷಯವನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇರಲಿಲ್ಲ. ಮಾರನೇ ದಿನವೇ ಆಂಜಿಯೋಗ್ರಾಮ್ ಮಾಡಿಸಿಕೊಂಡೆ.

ಮತ್ತು ಅಲ್ಲಿ ನನಗೆ ಮತ್ತೊಂದು ಆಶ್ಚರ್ಯ ಕಾದಿತ್ತು.

ಹೃದಯದಲ್ಲಿ ಯಾವುದೇ ಪ್ರಮುಖ ತಡೆ ಕಂಡುಬರಲಿಲ್ಲ. ಆದರೆ ನನ್ನ ರಕ್ತನಾಳಗಳ ರಕ್ತಪ್ರವಾಹದ ಬಗ್ಗೆ ವೈದ್ಯರು ಗಮನಹರಿಸಿದರು. ಹೃದಯಕ್ಕೆ ರಕ್ತ ಸರಾಗವಾಗಿ ತಲುಪುತ್ತಿರಲಿಲ್ಲ. ಆ ಸ್ಥಿತಿಗೆ ನನ್ನ ದೇಹದಲ್ಲಿದ್ದ ಪೌಷ್ಟಿಕಾಂಶದ ಕೊರತೆ ಸೇರಿದಂತೆ ಹಲವು ಅಂಶಗಳು ಕಾರಣವಾಗಿರಬಹುದು ಎಂದು ವೈದ್ಯರು ವಿವರಿಸಿದರು.

ಅಂತೂ ಕುಂತಿ ಮಕ್ಕಳಿಗೆ ರಾಜ್ಯ ಸಿಕ್ಕಿತು!

ರಕ್ತನಾಳಗಳು ಸರಾಗವಾಗಿ ವಿಸ್ತರಿಸಿ, ರಕ್ತಪ್ರವಾಹ ಸುಧಾರಿಸಲು ಔಷಧಗಳನ್ನು ನೀಡಿದರು. ಜೊತೆಗೆ ಅಗತ್ಯವಾದ ವಿಟಮಿನ್‌ಗಳು ಮತ್ತು ಪೌಷ್ಟಿಕಾಂಶದ ಚಿಕಿತ್ಸೆಯನ್ನೂ ಆರಂಭಿಸಿದರು. ಅವುಗಳನ್ನು ತೆಗೆದುಕೊಳ್ಳತೊಡಗಿದ ನಂತರ ನಿಧಾನವಾಗಿ ದವಡೆನೋವು ಕಡಿಮೆಯಾಯಿತು. ಕಾಲಿನ ನೋವು ಕಡಿಮೆಯಾಯಿತು. ಸೊಂಟದ ನೋವೂ ಸುಧಾರಿಸಿತು. ಆದರೆ ನನಗೆ ಅತ್ಯಂತ ಮುಖ್ಯವಾದ ಬದಲಾವಣೆ, ಬೇರೆ. ಸದ್ದಿಲ್ಲದೆ ಹಿಂದೆ ಸರಿದಿದ್ದ ನನ್ನ ಎಡಗೈ ನಿಧಾನವಾಗಿ ಮತ್ತೆ ನನ್ನ ಬಳಿಗೆ ಮರಳತೊಡಗಿತು.

ಈ ತಪ್ಪು ಯಾರೂ ಮಾಡಬಾರದು!

ಇದು ಕೇವಲ ನನ್ನ ಕಥೆಯೇ? ನನಗೆ ಹಾಗೆ ಅನ್ನಿಸುವುದಿಲ್ಲ. ನಮ್ಮ ದೇಶದಲ್ಲಿ, ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿ, ಎಷ್ಟೋ ಮಹಿಳೆಯರು ರಕ್ತಹೀನತೆ, ಪೌಷ್ಟಿಕಾಂಶದ ಕೊರತೆ ಮತ್ತು ನಿರಂತರ ದೈಹಿಕ-ಮಾನಸಿಕ ಒತ್ತಡದ ನಡುವೆ ಬದುಕುತ್ತಿದ್ದಾರೆ. ತಮ್ಮ ದೇಹವನ್ನು ಕೊನೆಯ ಆದ್ಯತೆಯಾಗಿ ಇಟ್ಟುಕೊಂಡು ಕುಟುಂಬವನ್ನು ಮೊದಲ ಆದ್ಯತೆಯಾಗಿ ನೋಡಿಕೊಳ್ಳುತ್ತಿದ್ದಾರೆ.

“ನನಗೇನು ಆಗುವುದಿಲ್ಲ.” “ಇನ್ನೂ ಚಿಕ್ಕ ವಯಸ್ಸು.” “ಮಕ್ಕಳನ್ನು ನೋಡಿಕೊಳ್ಳಬೇಕು.” “ಕೆಲಸ ತುಂಬಾ ಇದೆ.” “ಸ್ವಲ್ಪ ವಿಶ್ರಾಂತಿ ತೆಗೆದುಕೊಂಡರೆ ಸರಿಯಾಗುತ್ತದೆ.” “ಗ್ಯಾಸ್ಟ್ರಿಕ್ ಇರಬಹುದು.” “ಹಲ್ಲಿನ ನೋವು ಇರಬಹುದು.” “ಪೈಲ್ಸ್ ಇರಬಹುದು.” ಹೀಗೆ ಒಂದೊಂದೇ ಕಾರಣ ಹೇಳಿಕೊಂಡು ನಾವು ನಮ್ಮ ದೇಹದ ಎಚ್ಚರಿಕೆಗಳನ್ನು ಮುಂದೂಡುತ್ತೇವೆ.

ವಿಶೇಷವಾಗಿ ಮಹಿಳೆಯರ ಹೃದಯದ ಆರೋಗ್ಯದ ವಿಷಯದಲ್ಲಿ, ವಯಸ್ಸು ಕಡಿಮೆ ಎಂಬ ಕಾರಣಕ್ಕೆ ಹೃದಯದ ಸಮಸ್ಯೆಯ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಬಾರದು. ಮಹಿಳೆಯರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಕೆಲವೊಮ್ಮೆ ಸಾಂಪ್ರದಾಯಿಕ ಎದೆನೋವಿಗಿಂತ ವಿಭಿನ್ನ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳಬಹುದು.

ಆದರೆ ಪ್ರತಿಯೊಂದು ದವಡೆನೋವೂ ಹೃದಯದ ಸಮಸ್ಯೆಯಲ್ಲ. ಪ್ರತಿಯೊಂದು ಕೈನೋವೂ ಹೃದಯಾಘಾತವಲ್ಲ. ಪ್ರತಿಯೊಂದು ಕಾಲು ಊತವೂ ಹೃದಯ ವೈಫಲ್ಯವಲ್ಲ. ಆದ್ದರಿಂದ ಇಂಟರ್ನೆಟ್‌ನಲ್ಲಿ ಓದಿದ ಲಕ್ಷಣಗಳನ್ನು ಆಧರಿಸಿ ಸ್ವತಃ ರೋಗನಿರ್ಣಯ ಮಾಡಿಕೊಳ್ಳುವುದು ಸರಿಯಲ್ಲ.

ಆದರೆ ಹೊಸದಾಗಿ ಕಾಣಿಸಿಕೊಂಡ, ನಿರಂತರವಾಗಿರುವ ಅಥವಾ ಹಲವಾರು ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುವ ನೋವನ್ನು ನಿರ್ಲಕ್ಷಿಸುವುದೂ ಸರಿಯಲ್ಲ. ನನ್ನ ವಿಷಯದಲ್ಲಿ ECG ಮತ್ತು ECHOಯಲ್ಲಿ ಸ್ಪಷ್ಟ ಸೂಚನೆ ಸಿಗದಿದ್ದರೂ, ನನ್ನ ದೇಹ ಹೇಳುತ್ತಿದ್ದ ಮಾತುಗಳನ್ನು ಮುಂದುವರಿಸಿ ಕೇಳಿದ ವೈದ್ಯಕೀಯ ಪರೀಕ್ಷೆಗಳೇ ಕೊನೆಗೆ ಸಮಸ್ಯೆಯತ್ತ ನಮ್ಮನ್ನು ಕರೆದೊಯ್ದವು.

ನಮ್ಮ ಆರೋಗ್ಯವೇ ನಮ್ಮ ಮೊದಲು ಆದ್ಯತೆಯಾಗಬೇಕು! ಯಾಕೆಂದರೆ

ಅದಕ್ಕಾಗಿಯೇ ಇಂದು ನಾನು ಒಂದು ಮಾತನ್ನು ಬಹಳ ಗಟ್ಟಿಯಾಗಿ ಹೇಳಲು ಬಯಸುತ್ತೇನೆ. ನಿಮ್ಮ ನೋವನ್ನು ನೀವೇ ಚಿಕ್ಕದು ಎಂದು ಮಾಡಿಕೊಳ್ಳಬೇಡಿ. ನೀವು ಅನುಭವಿಸುತ್ತಿರುವ ನೋವು ನಿಜ. ನಿಮಗೆ ಅದು ಅಸಹಜ ಎಂದು ಅನ್ನಿಸುತ್ತಿದ್ದರೆ, ಅದನ್ನು ವೈದ್ಯರ ಮುಂದೆ ಸ್ಪಷ್ಟವಾಗಿ ಹೇಳುವ ಹಕ್ಕು ನಿಮಗಿದೆ. ಒಂದು ಪರೀಕ್ಷೆಯಲ್ಲಿ ಏನೂ ಕಂಡುಬರಲಿಲ್ಲವೆಂದರೆ, ನಿಮ್ಮ ಅನುಭವವೇ ಸುಳ್ಳು ಎಂದರ್ಥವಲ್ಲ. ಅಗತ್ಯವಿದ್ದರೆ ಮತ್ತೊಮ್ಮೆ ವೈದ್ಯಕೀಯ ಸಲಹೆ ಪಡೆಯಿರಿ. ಎರಡನೇ ಅಭಿಪ್ರಾಯ ಪಡೆಯಿರಿ. ನಿಮ್ಮ ದೇಹದಲ್ಲಿ ಏನು ಬದಲಾಗಿದೆ ಎಂಬುದನ್ನು ವೈದ್ಯರಿಗೆ ವಿವರವಾಗಿ ತಿಳಿಸಿ.

ವೈದ್ಯರ ಬಿಲ್‌ನ ಭಯ ಇರಬಹುದು. ಆಸ್ಪತ್ರೆಯ ಭಯ ಇರಬಹುದು. ಹಿಂದಿನ ಕೆಟ್ಟ ಅನುಭವಗಳ ನೆನಪು ಇರಬಹುದು. ಆದರೆ ಭಯದಿಂದ ಪರೀಕ್ಷೆಯನ್ನು ಮುಂದೂಡುವ ಬೆಲೆ ಕೆಲವೊಮ್ಮೆ ಇನ್ನೂ ದೊಡ್ಡದಾಗಿರಬಹುದು. ಹೀಗಾಗಿ, ನಿಮ್ಮ ದೇಹವೂ ನಿಮಗೆ ಏನಾದರೂ ಹೇಳುತ್ತಿದ್ದರೆ—ಅದನ್ನು ಕೇಳಿ. ಹೃದಯದ ಮಾತು ಕೇಳಿ. ಯಾಕೆಂದರೆ ಕೆಲವೊಮ್ಮೆ ದೇಹ ನಮ್ಮನ್ನು ಹೆದರಿಸಲು ನೋವು ಕೊಡುವುದಿಲ್ಲ. ನಮ್ಮನ್ನು ಉಳಿಸಿಕೊಳ್ಳಲು ಎಚ್ಚರಿಸುತ್ತದೆ.

ನೆನಪಿಡಿ : ನಾವು ಹೆಣ್ಣುಮಕ್ಕಳು ಮನೆಯ ಆಧಾರ ಸ್ತಂಭ. ನಾವು ಒಂದು ದಿನ ತಲೆನೋವು ಎಂದು ಮಲಗಿದರೂ ಇಡೀ ಮನೆ ಸ್ತಬ್ಧವಾಗುತ್ತದೆ. ಹಾಗೊಂದು ವೇಳೆ ನಮ್ಮ ಉಸಿರು ನಿಂತರೆ! ಬೇರೊಬ್ಬರು ನಮ್ಮ ಜಾಗ ತುಂಬಬಹುದು. ಆದರೆ ನಾವು ನಮ್ಮ ಕೆಲಸ ಬಿಟ್ಟು ಹೋದಂತೆ ಅಲ್ಲವೆ? ನಮ್ಮ ಪ್ರೀತಿ ಮತ್ತು ಜವಾಬ್ದಾರಿಗೆ ಯಾರೂ ಬದಲಿಯಾಗಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಕಾಳಜಿ ಉಳಿದವರ ಕಾಳಜಿಗಿಂತ ಮುಖ್ಯ!

ಸೂಚನೆ: ಇದು ನನ್ನ ವೈಯಕ್ತಿಕ ಆರೋಗ್ಯ ಅನುಭವದ ಬರಹ. ಇಲ್ಲಿ ವಿವರಿಸಿರುವ ಲಕ್ಷಣಗಳು ಅಥವಾ ಚಿಕಿತ್ಸೆಯನ್ನು ಎಲ್ಲರಿಗೂ ಅನ್ವಯಿಸುವ ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು. ಎದೆನೋವು, ಉಸಿರಾಟದ ತೊಂದರೆ, ತಣ್ಣನೆಯ ಬೆವರು, ದವಡೆ ಅಥವಾ ಕೈಗೆ ಹರಡುವ ನೋವು, ತೀವ್ರ ದೌರ್ಬಲ್ಯ, ಮೂರ್ಛೆ ಅಥವಾ ಇತರ ತುರ್ತು ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ. ಯಾವುದೇ ಔಷಧಿ ಅಥವಾ ವಿಟಮಿನ್‌ಗಳನ್ನು ಸ್ವಯಂ ಪ್ರಾರಂಭಿಸುವುದು ಅಥವಾ ನಿಲ್ಲಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸುರಕ್ಷಿತ.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment