ನಾನು ಹೆಣ್ಣಾಗಿದ್ದೇ ತಪ್ಪಾ?

ಕೆಲವು ಪ್ರಶ್ನೆಗಳು ಕೋಪದಿಂದ ಹುಟ್ಟುವುದಿಲ್ಲ.
ಅವು ನೋವಿನಿಂದ ಹುಟ್ಟುತ್ತವೆ.

ಜೀವನದ ಅನೇಕ ವರ್ಷಗಳ ಮೌನದ ನಂತರ
ಒಂದು ದಿನ ಮನಸ್ಸಿನೊಳಗೆ ಒಂದು ಪ್ರಶ್ನೆ ನಿಂತುಕೊಳ್ಳುತ್ತದೆ —

“ನಾನು ಹೆಣ್ಣಾಗಿದ್ದೇ ತಪ್ಪಾ?”

ಈ ಪ್ರಶ್ನೆ ಸಮಾಜವನ್ನು ದೂರುವುದಲ್ಲ.
ಇದು ಜೀವನವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ.

ಮನೆಯೊಳಗಿನ ಮೊದಲ ವ್ಯತ್ಯಾಸ

ನಾನು ಹುಟ್ಟಿದೆ, ಚಾಕಲೇಟು ಹಂಚಿದರು.

ತಂಗಿ ಹುಟ್ಟಿದಳು ಸಕ್ಕರೆ ಹಂಚಿದರು.

ತಮ್ಮ ಹುಟ್ಟಿದ, ಪೇಡ ಹಂಚಿದರು!

ಅಕ್ಕ,ತಂಗಿಯರಿಗೆ ಸಿಗದ ಪಾಟೀಚೀಲ, ಹೊಸ ಪುಸ್ತಕ, ಚಪ್ಪಲಿ, ಶೂಗಳು,

ಅಣ್ಣ, ತಮ್ಮರಿಗೆ ವಿಶೇಷವಾಗಿ ಸಿಕ್ಕವು!

ಆಗೆಲ್ಲ ಕೇಳಬೇಕು ಎನಿಸಿತು, ಯಾಕೆ ಹೀಗೆ?

ಕೇಳುವುದಕ್ಕೇನಿತ್ತು, ನಿಮ್ಮ ಓದು, ಮದುವೆ ಎಲ್ಲ ಹೊರೆ!

ಇವರು ಕುಲೋದ್ಧಾರಕರು, ನಾಳೆ ನಮ್ಮನ್ನು ನೋಡಿಕೊಳ್ಳುವವರು!

ಓ, ನಿಮಗೆ ಅವರು ಇಂದಿನ ಹೂಡಿಕೆ!

ಸಮಾಧಾನ ಪಟ್ಟಿತು ಮನಸ್ಸು. ಆದರೆ ಪ್ರತಿದಿನ ಕೇಳುತ್ತಿದ್ದ ಅದೇ ಪ್ರಶ್ನೆ

ನಾನು ಹೆಣ್ಣಾಗಿ ಹುಟ್ಟಿದ್ದೇ ಸರಿಯಿಲ್ಲವಾ?

ಯಾಕೆಂದರೆ,

ಅಣ್ಣ ಹೊರಗೆ ಹೋಗುತ್ತಾನೆ.
ರಾತ್ರಿ ಎಷ್ಟೊತ್ತಿಗೋ ಬರುತ್ತಾನೆ.
ಏನೋ ಕುಡಿಯುತ್ತಾನೆ.
ಏನೋ ತಿನ್ನುತ್ತಾನೆ.
ಯಾರದ್ದೋ ಸ್ನೇಹ ಅವನಿಗೆ.

ಮನೆಯವರು ಏನೂ ಕೇಳುವುದಿಲ್ಲ.

ತಮ್ಮ?

ಅವನು ಪ್ರತಿದಿನ ಏನೇನೋ ಆರ್ಡರ್ ಮಾಡುತ್ತಾನೆ.
ನಿತ್ಯ ಬರುವ ಶಾಪಿಂಗ್ —
ಅವನ ಪ್ರತಿಷ್ಠೆ ಹೆಚ್ಚಿಸಲು ಬೇಕಾದ ವಸ್ತುಗಳು.

ಅದನ್ನು ನೋಡಿ ಮನೆಯವರು ಹೇಳುತ್ತಾರೆ:

“ನಮ್ಮ ಹುಡುಗ ಚೆನ್ನಾಗಿ ಬದುಕುತ್ತಿದ್ದಾನೆ.”

ಆದರೆ…

ಅದೇ ನಾನು?

ನಾನು ಒಂದು ವಸ್ತು ಕೊಂಡರೂ
ಮನೆಯವರ ಕಣ್ಣು ಕೆಂಪಾಗುತ್ತದೆ.

“ಯಾಕೆ ಹಣ ಪೋಲು ಮಾಡುತ್ತೀಯಾ?”

ಎಂದು ಕೇಳುತ್ತಾರೆ.

ಹಳೆಯ, ಹರಕು ಬಟ್ಟೆ ಹಾಕಿಕೊಂಡು
ಕೆಲವೇ ಕಾಸು ಸಂಪಾದಿಸುವ ನಾನು
ದುಡಿದಿದ್ದೆಲ್ಲವನ್ನೂ ಕೊಡು ಎನ್ನುತ್ತದೆ
ತವರು ಅಥವಾ ಗಂಡನ ಮನೆ.

ಅದೇ ನನ್ನ ಅಣ್ಣ, ತಮ್ಮ
ದೊಡ್ಡ ಸಂಪಾದನೆ ಮಾಡಿದರೂ —

ಅವರಿಗೆ ಸಿಗುವ ಬೆಂಬಲ,
ದುಡ್ಡು ಉಳಿಸಿಕೊಳ್ಳುವ ಸ್ವಾತಂತ್ರ್ಯ,
ತನಗಾಗಿ ಖರ್ಚು ಮಾಡಿಕೊಳ್ಳುವ ಅವಕಾಶ

ಯಾಕೆ ನನಗಿಲ್ಲ?

ಹೆಣ್ಣಿನ ದೇಹ — ಒಂದು ಮೌನ ಹೋರಾಟ

ಪ್ರತಿ ತಿಂಗಳು
ರಕ್ತ ಬಸಿದು ಹೋಗುವ ನನ್ನ ಜೀವಕ್ಕೆ
ಕಾಯಿಲೆಗಳು ಆಗಾಗ ಸಾಮಾನ್ಯ.

ಅದಕ್ಕೋ ಏನೋ
ನನ್ನ ಸಣ್ಣ ಔಷಧದ ಖರ್ಚು
ಎಲ್ಲರಿಗೂ ಹೊರೆ.

ಆದರೆ…

ನನ್ನ ಮನೆಯ ಅಪ್ಪ,
ಮಾವ,
ಗಂಡ,
ಅಣ್ಣ,
ತಮ್ಮ —

ಇವರು ತಮ್ಮ

ತಿರುಗಾಟದ ಪೆಟ್ರೊಲ್
ಸಿಗರೇಟು,
ಬೀಡಿ,
ಗುಟ್ಕಾ,
ಸಾರಾಯಿ,
ಇಸ್ಪೀಟು

ಇವುಗಳಿಗೆ ಮಾಡುವ ಖರ್ಚು
ಖರ್ಚೇ ಅಲ್ಲ.

ಅದು ಅವರ ಸ್ವಾತಂತ್ರ್ಯ.

ಆದರೆ ನನ್ನ ಆರೋಗ್ಯ?

ಅದು ಅನಾವಶ್ಯಕ ಖರ್ಚು.

ಸದಾ ಹೊಂದಿಕೊಳ್ಳಬೇಕಾದವಳು

ಯಾಕೆ ನಾನೇ ಯಾವಾಗಲೂ ಹೊಂದಿಕೊಳ್ಳಬೇಕು?

ಮನೆಯ ಆಧಾರ ಸ್ಥಂಭವಾಗಿದ್ದರೂ
ಯಾಕೆ ನನಗೆ ಯಾವಾಗಲೂ
ಭಾರ ತಡೆಯುವ ಒಂದು ಸಣ್ಣ ಕಂಬದ
ಮರ್ಯಾದೆಯೂ ಇಲ್ಲ?

ಮನೆಯಲ್ಲಿ ತಂದೆಗೆ ಇರುವ ಮರ್ಯಾದೆ
ತಾಯಿಯಾಗಿ ನನಗಿಲ್ಲ.

ಇದೇ ಮಕ್ಕಳಿಗಾಗಿ
ನಾನು ಎಷ್ಟು ಕಷ್ಟಪಟ್ಟಿದ್ದೇನೆ.

ರಾತ್ರಿ ನಿದ್ದೆ ಕಳೆದುಕೊಂಡ ದಿನಗಳು.
ತಿನ್ನದೇ ಉಳಿದ ಅನೇಕ ಸಮಯಗಳು.

ಇಡೀ ಮನೆಯನ್ನು
ಒಂದು ಹಂತಕ್ಕೆ ತರಲು

ನನ್ನ ಕೊಡುಗೆ ಏನು?

ಯಾರಾದರೂ ಅಳೆಯುತ್ತಾರಾ?

ಹೆಣ್ಣಿನ ಶ್ರಮ — ಕಾಣದ ಕೆಲಸ

ಹೆಣ್ಣು ಮಾಡುವ ಕೆಲಸ
ಬಹಳಷ್ಟು ಸಮಯ
ಕೆಲಸ ಎಂದು ಲೆಕ್ಕದಲ್ಲೇ ಬರುವುದಿಲ್ಲ.

ಅವಳು ಅಡುಗೆ ಮಾಡುತ್ತಾಳೆ.
ಅವಳು ನೋಡಿಕೊಳ್ಳುತ್ತಾಳೆ.
ಅವಳು ಕಾಳಜಿ ತೋರಿಸುತ್ತಾಳೆ.
ಅವಳು ಮನೆ ಕಟ್ಟುತ್ತಾಳೆ.

ಆದರೆ ಸಮಾಜ ಹೇಳುತ್ತದೆ:

“ಅದು ಅವಳ ಕರ್ತವ್ಯ.”

ಕರ್ತವ್ಯ ಎಂದು ಕರೆಯುವಾಗ
ಅವಳ ಮೌಲ್ಯವನ್ನು ತೆಗೆದುಹಾಕುತ್ತಾರೆ.

ಕೊನೆಗೆ ಉಳಿಯುವ ಪ್ರಶ್ನೆ

ಇಷ್ಟೆಲ್ಲ ವರ್ಷಗಳ ನಂತರ
ಒಂದು ಪ್ರಶ್ನೆ ಮಾತ್ರ ಉಳಿಯುತ್ತದೆ.

ಯಾಕೆ?

ಯಾಕೆ ನನ್ನ ಸ್ವಾತಂತ್ರ್ಯ ಕಡಿಮೆ?
ಯಾಕೆ ನನ್ನ ಪರಿಶ್ರಮ ಕಾಣುವುದಿಲ್ಲ?
ಯಾಕೆ ನನ್ನ ಆರೋಗ್ಯದ ಬೆಲೆ ಕಡಿಮೆ?
ಯಾಕೆ ನನ್ನ ಬದುಕು ಸದಾ ಹೊಂದಿಕೊಳ್ಳಬೇಕಾದದ್ದು?

ಆಗ ಮನಸ್ಸು ಕೇಳುತ್ತದೆ —

ನಾನು ಹೆಣ್ಣಾಗಿದ್ದೇ ತಪ್ಪಾ?

ಅವಲೋಕನ

ಬಹುಶಃ ನಾನು
ಹೆಣ್ಣಾಗಿರುವುದು ನನ್ನ ತಪ್ಪಲ್ಲ.

ತಪ್ಪು
ನನ್ನನ್ನು ಮನುಷ್ಯಳನ್ನಾಗಿ ನೋಡದ ಸಮಾಜದಲ್ಲಿದೆ.

ಹೆಣ್ಣು ಎಂದರೆ
ಒಬ್ಬ ಮಗಳು.
ಒಬ್ಬ ಸಹೋದರಿ.
ಒಬ್ಬ ಹೆಂಡತಿ.
ಒಬ್ಬ ತಾಯಿ.

ಆದರೆ ಎಲ್ಲಕ್ಕಿಂತ ಮೊದಲು —

ಅವಳೂ ಒಬ್ಬ ಮನುಷ್ಯಳು.

ಒಂದು ದಿನ
ಈ ಪ್ರಶ್ನೆ ಪ್ರತಿಯೊಬ್ಬರೂ ಕೇಳಬೇಕು.

ಹೆಣ್ಣು ತಪ್ಪಾ?
ಅಥವಾ
ನಮ್ಮ ದೃಷ್ಟಿಯೇ ತಪ್ಪಾ?

  • ಅವಲೋಕನ – ಶೀಲಾ ಭಟ್

Leave a Comment

error: Content is protected !!