80ರ ಟ್ರೆಂಡ್ ಅಲೆ
ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ 80ರ ದಶಕದ ಮರುಸೃಷ್ಟಿಯೇ ನಡೆದಿದೆ. ಇದ್ದಕ್ಕಿದ್ದಂತೆ ಫೇಸ್ಬುಕ್, ಇನ್ಸ್ಟಾಗ್ರಾಂಗಳಲ್ಲಿ ದೊಡ್ಡ ಕೂದಲು, ಬಣ್ಣಬಣ್ಣದ ಬಟ್ಟೆಗಳು, ಅಗಲವಾದ ಕಾಲರ್ಗಳು, ಹಳೆಯ ಕಾಲದ ಆಭರಣಗಳು, ಫಿಲ್ಮ್ ಕ್ಯಾಮೆರಾದ ಬೆಳಕು, ಸ್ಟುಡಿಯೋ ಹಿನ್ನೆಲೆ, ಅನಲಾಗ್ ಗ್ರೇನ್, ಹಳೆಯ ಬೆಂಗಳೂರಿನ ರಸ್ತೆಗಳು, ಬಾಲಿವುಡ್ ಶೈಲಿಯ ಭಂಗಿಗಳು…ಹೀಗೆ ಒಂದು ಇಡೀ ಕಾಲವೇ ಮತ್ತೆ ನಮ್ಮ ಮೊಬೈಲ್ ಪರದೆಗೆ ಬಂದಿಳಿದಂತಾಯಿತು. ಇದಕ್ಕೆ ನಾನೂ ಹೊರತಾಗಿರಲಿಲ್ಲ. ನನ್ನ ಫೋಟೋವನ್ನು 80ರ ದಶಕದ ಶೈಲಿಯಲ್ಲಿ ನೋಡಿಕೊಳ್ಳುವ ಕುತೂಹಲ ನನಗೂ ಬಂತು.
ಮೊದಲ ನೋಟಕ್ಕೆ ಇದು ಮತ್ತೊಂದು ಸಾಮಾಜಿಕ ಮಾಧ್ಯಮದ ಟ್ರೆಂಡ್ನಂತೆ ಕಾಣುತ್ತದೆ. ಒಂದು ಹೊಸ AI ಸಾಧನ ಬಂದಿದೆ, ಜನರು ತಮ್ಮ ಫೋಟೋಗಳನ್ನು ಅದಕ್ಕೆ ಕೊಟ್ಟು ಹಳೆಯ ಕಾಲದ ಚಿತ್ರಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ, ನಂತರ ಅದನ್ನು ಫೇಸ್ಬುಕ್ನಲ್ಲಿ ಹಾಕುತ್ತಿದ್ದಾರೆ. ಕೆಲವರು ತಮ್ಮ ನಿಜವಾದ ಬಾಲ್ಯದ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ; ಕೆಲವರು ತಾವು ಆ ಕಾಲದಲ್ಲಿ ಹೇಗಿರುತ್ತಿದ್ದೆವು ಎಂದು ಕಲ್ಪಿಸಿಕೊಂಡು ಚಿತ್ರ ಮಾಡಿಸಿಕೊಳ್ಳುತ್ತಿದ್ದಾರೆ. ಕೆಲವರು ತಮ್ಮ ತಂದೆ-ತಾಯಿ ಅಥವಾ ಅಜ್ಜ-ಅಜ್ಜಿಯ ಯೌವನವನ್ನು ಮರುಸೃಷ್ಟಿಸುತ್ತಿದ್ದಾರೆ. ಮತ್ತಷ್ಟು ಜನ ಸಿನಿಮಾ, ಫ್ಯಾಷನ್ ಮತ್ತು ಹಳೆಯ ಕಾಲದ ಸಾಂಸ್ಕೃತಿಕ ನೆನಪುಗಳನ್ನು ತಮ್ಮ ಚಿತ್ರಗಳಲ್ಲಿ ಬೆರೆಸುತ್ತಿದ್ದಾರೆ.
ಆದರೆ ಈ ಟ್ರೆಂಡ್ನ್ನು ಕೇವಲ AIಯ ಹೊಸ ಆಟ ಎಂದು ನೋಡುವುದು ನನಗೆ ಅಪೂರ್ಣವಾಗಿ ಕಾಣುತ್ತದೆ. ಏಕೆಂದರೆ 80ರ ದಶಕವನ್ನು ನಾವು ಏಕೆ ಇಷ್ಟು ಸುಲಭವಾಗಿ ಸ್ವೀಕರಿಸುತ್ತೇವೆ ಎನ್ನುವುದರ ಹಿಂದೆ ಒಂದು ದೊಡ್ಡ ಸಾಂಸ್ಕೃತಿಕ ಹಿನ್ನೆಲೆ ಇದೆ.
80ರ ದಶಕದ ಕಾಲ ಹೇಗಿತ್ತು?
80ರ ದಶಕವೆಂದರೆ ಕೇವಲ ಒಂದು ಕ್ಯಾಲೆಂಡರ್ ಅವಧಿಯಲ್ಲ. ಭಾರತದಲ್ಲಿ, ವಿಶೇಷವಾಗಿ ಮಧ್ಯಮವರ್ಗದ ಕುಟುಂಬಗಳ ನೆನಪಿನಲ್ಲಿ ಅದೊಂದು ಬದಲಾವಣೆಯ ಕಾಲ. ದೂರದರ್ಶನ ಮನೆಮನೆಗೆ ಪ್ರವೇಶಿಸುತ್ತಿದ್ದ ಕಾಲ. ರೇಡಿಯೋ ಇನ್ನೂ ದಿನನಿತ್ಯದ ಸಂಗಾತಿಯಾಗಿದ್ದ ಕಾಲ. ಕ್ಯಾಸೆಟ್ಗಳಲ್ಲಿ ಹಾಡು ಕೇಳುತ್ತಿದ್ದ ಕಾಲ. ಪತ್ರ ಬರೆಯುವುದು, ಫೋಟೋ ತೆಗೆಸಿಕೊಳ್ಳುವುದು, ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗುವುದು, ಸ್ನೇಹಿತರನ್ನು ಭೇಟಿ ಮಾಡಲು ನೇರವಾಗಿ ಹೋಗುವುದು ಇವೆಲ್ಲವೂ ಜೀವನದ ಸಹಜ ಭಾಗವಾಗಿದ್ದ ಕಾಲ. ಮೊಬೈಲ್ ಇರಲಿಲ್ಲ. ಸಾಮಾಜಿಕ ಮಾಧ್ಯಮ ಇರಲಿಲ್ಲ. ಪ್ರತಿಯೊಂದು ಕ್ಷಣವನ್ನೂ ಛಾಯಾಚಿತ್ರವಾಗಿ ದಾಖಲಿಸುವ ಅಭ್ಯಾಸ ಇರಲಿಲ್ಲ. ಒಂದು ಮನೆಯಲ್ಲಿ ಒಂದು ದೂರವಾಣಿ ಇದ್ದರೂ ಅದು ಐಶ್ವರ್ಯದ ಸಂಕೇತವಾಗಿದ್ದ ಕಾಲ. ಒಂದು ಫೋಟೋ ತೆಗೆಸಿಕೊಳ್ಳುವುದೇ ಒಂದು ಸಂದರ್ಭವಾಗಿದ್ದ ಕಾಲ.
ಆ ದಶಕದ ಫೋಟೊ ಕತೆ ಹೀಗಿತ್ತು
ಆ ಕಾಲದ ಫೋಟೋಗಳಿಗೂ ಒಂದು ವಿಶಿಷ್ಟ ಸ್ವರೂಪವಿತ್ತು. ಇಂದಿನಂತೆ ಪ್ರತಿಯೊಂದು ಚಿತ್ರವನ್ನು ತಕ್ಷಣ ತೆಗೆದು, ತಕ್ಷಣ ನೋಡಿ, ಬೇಕಾದರೆ ಅಳಿಸಿ, ಮತ್ತೆ ತೆಗೆದುಕೊಳ್ಳುವ ಅವಕಾಶ ಇರಲಿಲ್ಲ. ಫಿಲ್ಮ್ ಕ್ಯಾಮೆರಾದಲ್ಲಿ ತೆಗೆದ ಚಿತ್ರವನ್ನು ಮೊದಲು ಫಿಲ್ಮ್ ಡೆವಲಪ್ ಮಾಡಿಸಬೇಕು. ಎಷ್ಟು ಚಿತ್ರಗಳು ಚೆನ್ನಾಗಿ ಬಂದಿವೆ ಎಂಬುದು ನಂತರವೇ ಗೊತ್ತಾಗುತ್ತಿತ್ತು. ಆದ್ದರಿಂದ ಒಂದೊಂದು ಫೋಟೋಗೂ ಒಂದು ವಿಶೇಷ ಮೌಲ್ಯವಿತ್ತು. ಆ ಚಿತ್ರದಲ್ಲಿ ಬೆಳಕು ಸರಿಯಾಗಿರದಿರಬಹುದು, ಮುಖದ ಭಂಗಿ ಪರಿಪೂರ್ಣವಾಗಿರದಿರಬಹುದು, ಕಣ್ಣು ಸ್ವಲ್ಪ ಮುಚ್ಚಿರಬಹುದು; ಆದರೂ ಅದು ನಿಜವಾಗಿಯೂ ನಡೆದ ಒಂದು ಕ್ಷಣದ ದಾಖಲೆ.
ಇಂದಿನ ಡಿಜಿಟಲ್ ಜಗತ್ತಿನಲ್ಲಿ ಇದೇ ಅಂಶ ನಮಗೆ ವಿಚಿತ್ರವಾಗಿ ಆಕರ್ಷಕವಾಗುತ್ತಿದೆ. ಇಂದು ನಮ್ಮ ಫೋನ್ನಲ್ಲಿ ಸಾವಿರಾರು ಫೋಟೋಗಳಿರಬಹುದು. ಆದರೆ ಅವುಗಳಲ್ಲಿ ಎಷ್ಟು ಚಿತ್ರಗಳನ್ನು ನಾವು ನಿಜವಾಗಿಯೂ ನೆನಪಾಗಿ ಉಳಿಸಿಕೊಳ್ಳುತ್ತೇವೆ? ಹಿಂದೆ ಹತ್ತು ಫೋಟೋಗಳಿದ್ದರೆ ಅವುಗಳಲ್ಲಿ ಪ್ರತಿಯೊಂದಕ್ಕೂ ಒಂದು ಕಥೆ ಇರುತ್ತಿತ್ತು. ಇಂದು ಸಾವಿರಾರು ಚಿತ್ರಗಳಿದ್ದರೂ ಅವುಗಳಲ್ಲಿ ಬಹಳಷ್ಟು ಕೇವಲ ಡಿಜಿಟಲ್ ಸಂಗ್ರಹವಾಗಿಯೇ ಉಳಿಯುತ್ತವೆ. ಬಹುಶಃ ಇದೇ ಕಾರಣಕ್ಕೆ ಅನಲಾಗ್ ಫೋಟೋದ ಅಪೂರ್ಣತೆಯೂ ಇಂದು ಸುಂದರವಾಗಿ ಕಾಣುತ್ತಿದೆ.
80ರ ದಶಕದ ದೃಶ್ಯ ಭಾಷೆಯ ವೈಶಿಷ್ಟ್ಯ
ಇದರ ಜೊತೆಗೆ 80ರ ದಶಕದ ದೃಶ್ಯಭಾಷೆಯೂ ಬಹಳ ವಿಶಿಷ್ಟ. ದೊಡ್ಡ ಕೂದಲು, ದಪ್ಪ ಮೀಸೆ, ಬಣ್ಣದ ಶರ್ಟ್ಗಳು, ಸೀರೆಗಳ ವಿಭಿನ್ನ ವಿನ್ಯಾಸಗಳು, ದೊಡ್ಡ ಕಿವಿಯೋಲೆಗಳು, ಚಪ್ಪಟೆ ಚಪ್ಪಲಿಗಳು, ಸ್ಟುಡಿಯೋ ಲೈಟಿಂಗ್, ಫಿಲ್ಮ್ನ ಬಣ್ಣ, ಹಳೆಯ ಕಾರುಗಳು, ಸ್ಕೂಟರ್ಗಳು, ಸಿನಿಮಾ ಪೋಸ್ಟರ್ಗಳು … ಇವೆಲ್ಲವೂ ಇಂದಿನ ಮಿನಿಮಲಿಸ್ಟ್ ಮತ್ತು ಡಿಜಿಟಲ್ ಸೌಂದರ್ಯಕ್ಕೆ ಸಂಪೂರ್ಣ ವಿರುದ್ಧ. ಆದ್ದರಿಂದ 80ರ ದಶಕದ ಚಿತ್ರವನ್ನು ನೋಡಿದಾಗ ನಮಗೆ ತಕ್ಷಣವೇ “ಇದು ಬೇರೆ ಕಾಲ” ಎಂಬ ಅನುಭವ ಬರುತ್ತದೆ.
ಆದರೆ ಅತ್ಯಂತ ಮುಖ್ಯವಾದದ್ದು ಅದರ ಮನೋವೈಜ್ಞಾನಿಕ ಹಿನ್ನೆಲೆ. ಇಂದು ನಾವು ಅತಿಯಾದ ವೇಗದ ಡಿಜಿಟಲ್ ಜೀವನದಲ್ಲಿ ಬದುಕುತ್ತಿದ್ದೇವೆ. ಪ್ರತಿಯೊಂದು ಕ್ಷಣವೂ ದಾಖಲೆಯಾಗುತ್ತಿದೆ. ಪ್ರತಿಯೊಂದು ಚಿತ್ರಕ್ಕೂ ತಕ್ಷಣ ಪ್ರತಿಕ್ರಿಯೆ ಬೇಕು. ಪ್ರತಿಯೊಂದು ಪೋಸ್ಟ್ಗೆ ಮೆಚ್ಚುಗೆ, ಕಾಮೆಂಟ್, ಹಂಚಿಕೆ, ವೀಕ್ಷಣೆ ಎಂಬ ಅಂಕಿಗಳು ಬರುತ್ತಿವೆ. ಮನುಷ್ಯ ತನ್ನ ಜೀವನವನ್ನು ಬದುಕುವುದಕ್ಕಿಂತ, ಅದನ್ನು ಹೇಗೆ ತೋರಿಸಬೇಕು ಎಂಬುದರ ಬಗ್ಗೆಯೂ ಯೋಚಿಸಬೇಕಾದ ಸ್ಥಿತಿ ಬಂದಿದೆ. ಇಂತಹ ಸಮಯದಲ್ಲಿ ತಂತ್ರಜ್ಞಾನ ಕಡಿಮೆ ಇದ್ದ ಕಾಲದ ಕಲ್ಪನೆ ಸಹಜವಾಗಿಯೇ ಆಕರ್ಷಕವಾಗುತ್ತದೆ.
ಅದಕ್ಕಾಗಿಯೇ ಬಹುಶಃ 80ರ ದಶಕದ ಟ್ರೆಂಡ್ ನಿಜವಾದ 80ರ ದಶಕದ ಬಗ್ಗೆ ಮಾತ್ರ ಅಲ್ಲ. ಅದು ಇಂದಿನ ಮನುಷ್ಯನ ಮನಸ್ಥಿತಿಯ ಬಗ್ಗೆಯೂ ಇದೆ. ನಾವು ಭೂತಕಾಲವನ್ನು ನೆನಪಿಸಿಕೊಳ್ಳುವುದಕ್ಕಿಂತ, ವರ್ತಮಾನದಲ್ಲಿ ನಮಗೆ ಕಾಣೆಯಾಗಿರುವ ಯಾವುದೋ ಒಂದು ಅನುಭವವನ್ನು ಭೂತಕಾಲದಲ್ಲಿ ಹುಡುಕುತ್ತಿದ್ದೇವೆ. ಸರಳತೆ, ನಿಧಾನ, ನೇರ ಸಂಬಂಧ, ವೈಯಕ್ತಿಕತೆ, ಅಪೂರ್ಣತೆಯ ಸೌಂದರ್ಯ ಇವೆಲ್ಲವೂ 80ರ ದಶಕದ ದೃಶ್ಯಗಳಲ್ಲಿ ನಮಗೆ ಮತ್ತೆ ಕಾಣಿಸುತ್ತಿವೆ.
ಇದನ್ನೂ ಓದಿ :
AI ಎನ್ನುವ ಗುಮ್ಮ
ವರ್ತಮಾನ ಮತ್ತು ಭೂತಕಾಲದ ಸಂಧಿ ಸಮಯ
ಆದರೆ ಈ ಬಾರಿ ಒಂದು ದೊಡ್ಡ ವ್ಯತ್ಯಾಸವಿದೆ. ಹಿಂದೆ ಭೂತಕಾಲವನ್ನು ನೆನಪಿಸಿಕೊಳ್ಳಲು ಹಳೆಯ ಫೋಟೋ ಬೇಕಿತ್ತು. ಈಗ AI ನಮಗೆ ನಮ್ಮದೇ ಭೂತಕಾಲವನ್ನು ಕಲ್ಪಿಸಿ ಕೊಡಬಲ್ಲದು. ನಾವು 1985ರಲ್ಲಿ ಹುಟ್ಟಿರದಿದ್ದರೂ, 1985ರ ನಮ್ಮ ಚಿತ್ರವನ್ನು ನೋಡಬಹುದು. ನಾವು ಆ ಕಾಲದಲ್ಲಿ ಕಾಲೇಜಿನಲ್ಲಿ ಇರದಿದ್ದರೂ, AI ನಮ್ಮನ್ನು ಆ ಕಾಲದ ಕಾಲೇಜು ವಿದ್ಯಾರ್ಥಿಯಾಗಿ ತೋರಿಸಬಹುದು. ನಾವು ಆ ಕಾಲದ ನಟರಾಗಿರದಿದ್ದರೂ, ನಮ್ಮನ್ನು ಆ ಕಾಲದ ಸಿನಿಮಾ ಪೋಸ್ಟರ್ನೊಳಗೆ ನಿಲ್ಲಿಸಬಹುದು. ಅಂದರೆ AI ನಮಗೆ ಕೇವಲ ಭೂತಕಾಲವನ್ನು ನೆನಪಿಸುವುದಿಲ್ಲ; ಅದು ನಮಗೆ ಒಂದು “ಕಲ್ಪಿತ ಭೂತಕಾಲ”ವನ್ನು ಸೃಷ್ಟಿಸಿಕೊಡುತ್ತದೆ.
ಇಲ್ಲಿಯೇ ನನಗೆ ಈ ಟ್ರೆಂಡ್ನ ಇನ್ನೊಂದು ಸಾಧ್ಯತೆ ಕಾಣುತ್ತದೆ.
AI ಎಂಬ ಕಾಲ ಭೂತ
ತುಂಬಾ ಜನ, ತುಂಬಾ ವೆಬ್ಸೈಟ್ಗಳು ಹೇಳಿದ್ದು ಒಂದೇ – ನಿಮ್ಮ ಡೇಟಾ ಕಳುವಾಗಬಹುದು, ನಿಮ್ಮ ಫೋಟೋಗಳ ಸುರಕ್ಷತೆಯ ಬಗ್ಗೆ ಎಚ್ಚರವಾಗಿರಿ, AI ಬಳಕೆಯಿಂದ ನೀರಿನ ಬಳಕೆ ಮತ್ತು ವಿದ್ಯುತ್ ಬಳಕೆ ಹೆಚ್ಚುತ್ತಿದೆ, ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಹೌದು, ಇದು ನಿಜ. AIಯ ಸಾಮೂಹಿಕ ಬಳಕೆಯ ಪರಿಸರದ ಬೆಲೆಯನ್ನು ನಾವು ಪ್ರಶ್ನಿಸಲೇಬೇಕು. ವೈಯಕ್ತಿಕ ಮಾಹಿತಿಯ ಸುರಕ್ಷತೆಯನ್ನೂ ನಿರ್ಲಕ್ಷಿಸಬಾರದು.
ಕಾಲ ಭೂತ ತೋರಿಸುವ ಹೊಸ ಕನ್ನಡಿ
ಆದರೆ ಇದರಾಚೆಗೆ ನನಗೆ ಇನ್ನೊಂದು ಸಾಧ್ಯತೆ ಇದೆ. ಅದೆಂದರೆ ವ್ಯಕ್ತಿಯ ಆತ್ಮವಿಶ್ವಾಸ ಮತ್ತು ಆತ್ಮಗೌರವಕ್ಕೆ ಸಂಬಂಧಿಸಿದ್ದು.
ನನ್ನನ್ನೇ ತೆಗೆದುಕೊಳ್ಳಿ. 2021ರಿಂದ ಬಹುಶಃ ನಾನು ಸಾಮಾಜಿಕ ಮಾಧ್ಯಮವನ್ನು ಗಂಭೀರವಾಗಿ ತೆಗೆದುಕೊಂಡು ಒಂದು ರೀತಿಯ ಅಧ್ಯಯನವನ್ನೇ ಮಾಡಿದ್ದೇನೆ. ಮೊದಲು ಫೇಸ್ಬುಕ್ನಿಂದ ಆರಂಭವಾಗಿದ್ದು ಬರಹದಿಂದ. ನಾನು ಬರೆಯುವುದು ಬಹಳ ಬಾರಿ ಮೆಚ್ಚುಗೆ ಪಡೆದಿದೆ. ಬಹುಮಾನಗಳನ್ನು ಪಡೆದಿದೆ. ಕೆಲಸವನ್ನು ಒದಗಿಸಿದೆ. ಊಟವನ್ನು ಕೊಟ್ಟಿದೆ. ಮುಖ್ಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇವೆಲ್ಲವೂ ನಿಜವಾಗಿತ್ತು. ಆದರೂ ಯಾವಾಗಲೋ ಯಾರೋ ನನ್ನ ಕೆಲಸವನ್ನು ತಮ್ಮದೆಂದು ಕ್ರೆಡಿಟ್ ಕದ್ದಿದ್ದು, “ನೀನು ನಕಲು ಮಾಡಿ ಆಶುಕವಿತೆ ಬರೆಯುತ್ತೀಯೆ, ಅದರಿಂದ ಪ್ರಥಮ ಪ್ರಶಸ್ತಿ ಬರುತ್ತದೆ” ಎಂದು ಯಾರೋ ಹೇಳಿದ್ದು ನನ್ನನ್ನು ಕಾಡುತ್ತಿತ್ತು. ಒಂದು ಮಾತು ಕೆಲವೊಮ್ಮೆ ನಮ್ಮ ನೂರಾರು ಯಶಸ್ಸುಗಳಿಗಿಂತ ಹೆಚ್ಚು ಜಾಗವನ್ನು ನಮ್ಮೊಳಗೆ ಆಕ್ರಮಿಸಿಕೊಳ್ಳುತ್ತದೆ.
ತಂತ್ರಜ್ಞಾನ ನಮ್ಮೊಳಗೆ ತೋರಿಸುವ ಸಾಧ್ಯತೆಗಳು
ಆ ಅವಿಶ್ವಾಸ ಹೋಗಿದ್ದು ನಾನು ಫೇಸ್ಬುಕ್ನಲ್ಲಿ ಬರೆಯತೊಡಗಿದಾಗ. ಅಲ್ಲಿ ಬೇರೆಯವರಲ್ಲ, ನನ್ನದೇ ಬರವಣಿಗೆ ನನ್ನ ಸಾಮರ್ಥ್ಯ ಏನು, ದೌರ್ಬಲ್ಯವೇನು ಎಂಬುದನ್ನು ನನಗೆ ಕನ್ನಡಿಯಂತೆ ತೋರಿಸಿತು. ನಾನು ನನ್ನದೇ ಬರಹಗಳನ್ನು ಓದಲು ಆರಂಭಿಸಿದೆ. ನನ್ನ ಧ್ವನಿಯನ್ನು ಗುರುತಿಸಲು ಆರಂಭಿಸಿದೆ. ನನ್ನ ಕೆಲಸವೇ ನನ್ನ ಪರವಾಗಿ ಮಾತನಾಡತೊಡಗಿತು. ಆಗ ನಿಧಾನವಾಗಿ ಬೇರೆಯವರು ನನ್ನ ಬಗ್ಗೆ ಕಟ್ಟಿದ ಕಥೆಗಿಂತ, ನಾನು ಮಾಡಬಲ್ಲ ಕೆಲಸವೇ ಮುಖ್ಯ ಎನ್ನುವುದು ನನಗೆ ಅರ್ಥವಾಯಿತು.
ಸ್ಟಾರ್ಮೇಕರ್ಗೆ ಹೋಗಿ ಮೊದಲ ಹಾಡು ಹಾಡಿದಾಗ ಬಂದ ಪ್ರತಿಕ್ರಿಯೆಯೂ ನನ್ನೊಳಗೆ ಯಾರೋ ಮೂಡಿಸಿದ್ದ ಧ್ವನಿಕಂಪನದ ಕೀಳರಿಮೆಯನ್ನು ಹೋಗಲಾಡಿಸಿತು. ವರ್ಷಗಳ ಕಾಲ ನಮ್ಮ ಬಗ್ಗೆ ಕೇಳಿದ ಒಂದು ಮಾತು ನಮ್ಮದೇ ಸತ್ಯವೆಂದು ನಂಬಿಬಿಡುತ್ತೇವೆ. “ನಿನ್ನ ಧ್ವನಿ ಚೆನ್ನಾಗಿಲ್ಲ”, “ನೀನು ಹಾಡಲಾರೆ” ಎಂಬ ಮಾತುಗಳು ಒಳಗೆ ನೆಲೆಯೂರಿಬಿಡುತ್ತವೆ. ಆದರೆ ನಾವು ಹಾಡಿದಾಗ, ಯಾರೋ ಕೇಳಿ ಮೆಚ್ಚಿದಾಗ, ನಮ್ಮೊಳಗೆ ವರ್ಷಗಳಿಂದ ಕಟ್ಟಿಕೊಂಡಿದ್ದ ಒಂದು ಗೋಡೆ ಕುಸಿಯುತ್ತದೆ.
ವೀಡಿಯೊ ಒಂದನ್ನು ಯೂಟ್ಯೂಬ್ಗೆ ಹಾಕಿದಾಗಲೂ ಇದೇ ಅನುಭವವಾಯಿತು. ಎಷ್ಟೋ ವರ್ಷಗಳ ನಂತರವೂ ಯಾರಾದರೂ “ನಿಮ್ಮ ವೀಡಿಯೊ ನೋಡಿ ನನ್ನ ಟೂ ವೀಲರ್ ಕಲಿಯುವ ಭಯ ಹೋಯಿತು”, “ನಾನು ನಿಮ್ಮ ವೀಡಿಯೊ ನೋಡಿ ಸ್ಕೂಟರ್ ಕಲಿತೆ” ಎಂದು ಹೇಳಿದಾಗ ನನ್ನೊಳಗೊಂದು ಹೊಸ ಕಂಪನ ಮೂಡುತ್ತದೆ. ಆಗ ನಮ್ಮ ಕೆಲಸದ ಮೌಲ್ಯವನ್ನು ನಾವು ಅದರ ತಕ್ಷಣದ ಜನಪ್ರಿಯತೆಯಿಂದ ಮಾತ್ರ ಅಳೆಯಬಾರದು ಎನ್ನುವುದು ಅರ್ಥವಾಗುತ್ತದೆ. ಕೆಲವೊಮ್ಮೆ ನಮ್ಮ ಕೆಲಸ ನಮಗೆ ಗೊತ್ತಿಲ್ಲದೆಯೇ ಯಾರೋ ಒಬ್ಬರ ಭಯವನ್ನು ಹೋಗಲಾಡಿಸಿರುತ್ತದೆ.
AI ಟ್ರೆಂಡ್ ಬರುವ ಮೊದಲು ನಾನು PhotoLab ಆಪ್ನಲ್ಲಿ ನನ್ನ ಫೋಟೋ ಮಾಡಿಸಿದ್ದೆ. ಅದು ನನ್ನ ರೂಪದ ಸಾಧ್ಯತೆಗಳನ್ನು ನನಗೆ ತೆರೆದಿಟ್ಟಿತ್ತು. ನನ್ನನ್ನು ಆಂಕರಿಂಗ್, ನಟನೆ ಇವುಗಳಿಗೆಲ್ಲ ಅರ್ಹತೆಯಿಲ್ಲ ಎಂದಿದ್ದವರ ಮಾತುಗಳ ಹಿಂದೆ ನನ್ನ ಬಗ್ಗೆ ಇದ್ದ ವಾಸ್ತವಕ್ಕಿಂತ ಅವರವರ ಮನಸ್ಸಿನ ಕುರೂಪವೇ ಹೆಚ್ಚು ಇರಬಹುದೆಂಬುದು ನನಗೆ ನಿಧಾನವಾಗಿ ಅರಿವಾಯಿತು.
ಈಗ ರಾಗದ್ವೇಷಗಳಿಲ್ಲದ AI ನನ್ನ ರೂಪಕ್ಕೊಂದು ಸಾಧ್ಯತೆಯನ್ನು ತೋರಿಸುವಾಗ ನನಗೆ ಸಾವಿರ ಪ್ರಶ್ನೆಗಳಿಗೆ ಉತ್ತರ ದೊರೆತಂತಾಗುತ್ತದೆ.
ನಮಗೆ ನಾವೇ ಅರ್ಥವಾಗುವ ಜೀವಕಟ್ಟು
ಯಾಕೆ ನನ್ನನ್ನು “ಸೆರಗಿನಲ್ಲಿ ಕಟ್ಟಿಕೊಂಡ ಬೆಂಕಿಕೆಂಡ” ಎಂದು ನನ್ನಜ್ಜಿ ಹೇಳುತ್ತಿದ್ದರು? ಯಾಕೆ ನನ್ನ ಮನೆಯಲ್ಲಿ ಯಾವಾಗಲೂ ಸೌಂದರ್ಯದ ಅಪಾಯದ ಸಾಧ್ಯತೆಗಳನ್ನು ಹೇಳಿ ಹೇಳಿ ನನ್ನನ್ನು ಕನ್ನಡಿಗೇ ಹೆದರುವಂತೆ ಮಾಡಿದ್ದರು? ಯಾಕೆ ಹಲವು ವರ್ಷಗಳ ಕಾಲ ಕನ್ನಡಿ ನನ್ನ ಶತ್ರುವಾಗಿತ್ತು? ನನ್ನನ್ನು ಯಾಕೆ ದೊಡ್ಡವರು ಸದಾ ಬೈಯುತ್ತಿದ್ದರು? ನನ್ನ ವೃತ್ತಿಯಲ್ಲಿ ಯಾಕೆ ಅಷ್ಟು ಮತ್ಸರ? ನಾನು ಒಬ್ಬ ಗಂಡಸಿನ ಹತ್ತಿರ ಸುಮ್ಮನೆ ಮಾತನಾಡಿದರೂ ಯಾಕೆ ನನ್ನನ್ನು ಆ ವ್ಯಕ್ತಿಯ ಹಾಸಿಗೆಯಲ್ಲಿ ಮಲಗಿಸಿ, ಆಗಬಹುದಾದ ಸಾಧ್ಯತೆಗಳನ್ನೆಲ್ಲಾ ಅವರವರ ಮನಸ್ಸಿನಲ್ಲೇ, ಗಾಳಿಮಾತಿನಲ್ಲೇ ಸಾಧ್ಯವಾಗಿಸುತ್ತಿದ್ದರು?
ಈಗ ನನಗೆ ಅರ್ಥವಾಗುತ್ತಿರುವುದು ಏನೆಂದರೆ, ಕೆಲವೊಮ್ಮೆ ಒಬ್ಬ ಹೆಣ್ಣಿನ ಆತ್ಮವಿಶ್ವಾಸವನ್ನು ಮುರಿಯಲು “ನೀನು ಅಸಮರ್ಥೆ” ಎಂದು ನೇರವಾಗಿ ಹೇಳಬೇಕಾಗಿಲ್ಲ. ಅವಳ ರೂಪದ ಬಗ್ಗೆ ಭಯ ಹುಟ್ಟಿಸಿದರೆ ಸಾಕು. ಅವಳ ಧ್ವನಿಯ ಬಗ್ಗೆ ಅನುಮಾನ ಮೂಡಿಸಿದರೆ ಸಾಕು. ಅವಳ ಪ್ರತಿಭೆಯನ್ನು ಪ್ರಶ್ನಿಸಿದರೆ ಸಾಕು. ಅವಳ ಯಶಸ್ಸಿಗೆ ಬೇರೆ ಕಾರಣ ಹುಡುಕಿದರೆ ಸಾಕು. ಅವಳ ಪುರುಷ ಸ್ನೇಹವನ್ನೇ ಅವಳ ವ್ಯಕ್ತಿತ್ವದ ವಿರುದ್ಧದ ಸಾಕ್ಷಿಯನ್ನಾಗಿ ಮಾಡಿದರೆ ಸಾಕು. ಹೀಗೆ ವರ್ಷಗಳ ಕಾಲ ಕೇಳುತ್ತಾ ಹೋದರೆ ಒಂದು ಹಂತದಲ್ಲಿ ಆಕೆ ತನ್ನನ್ನೇ ಅನುಮಾನಿಸಲು ಆರಂಭಿಸುತ್ತಾಳೆ.
ಬಹುಶಃ ನನ್ನೊಳಗೂ ಇದೇ ಆಗಿರಬಹುದು.
ನನ್ನೊಳಗೆ ನಾನೇ ಉದ್ದೇಶಪೂರ್ವಕವಾಗಿ ಕಳೆದುಕೊಂಡಿದ್ದ ಆತ್ಮವಿಶ್ವಾಸ, ಆತ್ಮಗೌರವ ನನಗೆ ನಿಧಾನವಾಗಿ ಮರಳಿ ಸಿಕ್ಕಿದೆ. ಬರಹ ನನ್ನ ಧ್ವನಿಯನ್ನು ನನಗೆ ಮರಳಿ ಕೊಟ್ಟಿತು. ಹಾಡು ನನ್ನ ಕಂಠದ ಮೇಲಿನ ಭಯವನ್ನು ಕಡಿಮೆ ಮಾಡಿತು. ವೀಡಿಯೊ ನನ್ನ ಸಾಮರ್ಥ್ಯ ಇನ್ನೊಬ್ಬರ ಬದುಕಿನಲ್ಲಿ ಉಪಯೋಗವಾಗಬಹುದು ಎಂದು ತೋರಿಸಿತು. ಈಗ AI ನನ್ನನ್ನು ನಾನು ನೋಡುವ ಇನ್ನೊಂದು ಸಾಧ್ಯತೆಯನ್ನು ತೋರಿಸುತ್ತಿದೆ.
ಯಾರ ಮಾತೂ ನಿಲ್ಲಿಸಲಾಗದ ಸತ್ಯದ ಬಿರುಗಾಳಿ
ಆದರೆ ಇದೇ ಅನುಭವ ಎಲ್ಲರಿಗೂ ಒಂದೇ ರೀತಿಯಾಗಿ ಇರಬೇಕೆಂದಿಲ್ಲ. AI ಚಿತ್ರ ನಿಜವಾದ ಆತ್ಮವಿಶ್ವಾಸಕ್ಕೆ ಪರ್ಯಾಯವಲ್ಲ. ಸುಂದರವಾದ AI ಚಿತ್ರದಿಂದ ಜೀವನದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಆದರೂ ಒಬ್ಬ ವ್ಯಕ್ತಿಯೊಳಗೆ ವರ್ಷಗಳಿಂದ ಮುಚ್ಚಿಹೋಗಿದ್ದ “ನನ್ನಲ್ಲೂ ಒಂದು ಸಾಧ್ಯತೆ ಇದೆ” ಎನ್ನುವ ಭಾವನೆಯನ್ನು ಅದು ಎಬ್ಬಿಸಬಹುದಾದರೆ, ಅದರ ಮಾನವೀಯ ಮೌಲ್ಯವನ್ನು ನಾವು ನಿರ್ಲಕ್ಷಿಸಬಾರದು.
ಒಬ್ಬ ಹುಡುಗಿಗೆ “ನಾನು ಸುಂದರವಾಗಿಲ್ಲ” ಎನ್ನುವ ಭಾವನೆಯಿಂದ ಹೊರಬರಲು ಒಂದು AI ಚಿತ್ರ ನೆರವಾಗಬಹುದೇ? ಬಹುಶಃ ಹೌದು. ಅದು ಅವಳಿಗೆ ಸುಳ್ಳು ಸೌಂದರ್ಯವನ್ನು ಕೊಡುವುದರಿಂದಲ್ಲ; ಅವಳು ತನ್ನ ಬಗ್ಗೆ ನಂಬಿಕೊಂಡಿರುವ ಒಂದೇ ಒಂದು ಚಿತ್ರವೇ ಅಂತಿಮ ಸತ್ಯವಲ್ಲ ಎಂದು ತೋರಿಸುವುದರಿಂದ.
ಒಬ್ಬ ಯುವಕನಿಗೆ “ನಾನು ಏನನ್ನೂ ಸಾಧಿಸಲಾರೆ” ಎನ್ನುವ ಮನೋಭಾವದಿಂದ ಹೊರಬರಲು ತನ್ನದೇ ಒಂದು ಹೊಸ ರೂಪ ಸಹಾಯ ಮಾಡಬಹುದೇ? ಬಹುಶಃ ಹೌದು. ಏಕೆಂದರೆ ಕೆಲವೊಮ್ಮೆ ನಾವು ಭವಿಷ್ಯವನ್ನು ಕಲ್ಪಿಸಿಕೊಳ್ಳುವ ಮೊದಲು, ನಮ್ಮ ಸಾಧ್ಯತೆಯನ್ನು ನೋಡಬೇಕಾಗುತ್ತದೆ.
ಒಬ್ಬ ವೃದ್ಧನಿಗೆ ತನ್ನ ಯೌವನವನ್ನು ಮತ್ತೊಮ್ಮೆ ಕಲ್ಪಿಸಿಕೊಳ್ಳುವ ಸಂತೋಷ ಸಿಗಬಹುದೇ? ಖಂಡಿತ. ಕಳೆದುಹೋದ ವಯಸ್ಸನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದರೆ ತನ್ನ ಯೌವನದ ಮುಖವನ್ನು ಮತ್ತೊಮ್ಮೆ ನೋಡಿಕೊಳ್ಳುವ ಅವಕಾಶ ಅವನಿಗೆ ತನ್ನೊಳಗಿನ ಆ ವ್ಯಕ್ತಿಯನ್ನು ಮತ್ತೆ ನೆನಪಿಸಬಹುದು.
ಒಬ್ಬ ಕಲಾವಿದನಿಗೆ ತನ್ನೊಳಗೆ ಇದ್ದರೂ ಹೊರಗೆ ತರಲಾಗದ ಕಲ್ಪನೆಗೆ ರೂಪ ಸಿಗಬಹುದೇ? ಖಂಡಿತವಾಗಿಯೂ ಸಾಧ್ಯ. ಕೈಯಲ್ಲಿ ತಾಂತ್ರಿಕ ಕೌಶಲ್ಯ ಇಲ್ಲದಿದ್ದರೂ ಮನಸ್ಸಿನಲ್ಲಿ ದೃಶ್ಯವಿರುವವನಿಗೆ AI ಒಂದು ಪ್ರಾಥಮಿಕ ಕ್ಯಾನ್ವಾಸ್ ಆಗಬಹುದು.
ಮತ್ತು ಒಬ್ಬ ಸಾಮಾನ್ಯ ವ್ಯಕ್ತಿಗೆ “ನನ್ನಲ್ಲೂ ಒಂದು ಸಾಧ್ಯತೆ ಇದೆ” ಎನ್ನುವ ಭಾವನೆ ಮೂಡಬಹುದೇ? ಬಹುಶಃ ಇದೇ AIಯ ಅತ್ಯಂತ ಆಸಕ್ತಿದಾಯಕ ಮಾನವೀಯ ಸಾಧ್ಯತೆ.
ಏಕೆಂದರೆ ನಮ್ಮಲ್ಲಿ ಬಹಳಷ್ಟು ಜನರ ಜೀವನವನ್ನು ತಡೆದು ನಿಲ್ಲಿಸುವುದು ಸಾಮರ್ಥ್ಯದ ಕೊರತೆಯಲ್ಲ. ಕೆಲವೊಮ್ಮೆ ನಮ್ಮ ಬಗ್ಗೆ ಇತರರು ಹೇಳಿದ ಮಾತುಗಳನ್ನು ನಾವೇ ಸತ್ಯವೆಂದು ನಂಬಿಕೊಂಡಿರುವುದು.
“ನಿನ್ನಿಂದ ಆಗುವುದಿಲ್ಲ.” ,“ನೀನು ಅದಕ್ಕೆ ಸೂಕ್ತನಲ್ಲ.”, “ನೀನು ಅಷ್ಟು ಚೆನ್ನಾಗಿ ಕಾಣುವುದಿಲ್ಲ.”,“ನಿನ್ನ ಧ್ವನಿ ಚೆನ್ನಾಗಿಲ್ಲ.” , “ನಿನ್ನ ಬರಹದಲ್ಲಿ ಏನಿದೆ?”,“ನೀನು ಇದನ್ನು ಮಾಡಬಲ್ಲೆ ಎಂದುಕೊಂಡೆಯಾ?” ಇಂತಹ ಮಾತುಗಳು ಹೊರಗಿನಿಂದ ಬರುತ್ತವೆ. ಆದರೆ ಒಂದು ಹಂತದ ನಂತರ ಅವು ನಮ್ಮದೇ ಒಳಗಿನ ಧ್ವನಿಯಾಗಿಬಿಡುತ್ತವೆ.
AI ಆ ಒಳಗಿನ ಧ್ವನಿಯನ್ನು ಅಳಿಸುವುದಿಲ್ಲ. ಆದರೆ ಅದರ ಪಕ್ಕದಲ್ಲಿ ಇನ್ನೊಂದು ಧ್ವನಿಯನ್ನು ಇಡಬಹುದು. “ನೀನು ಹೀಗೆ ಕೂಡ ಇರಬಹುದು.” ಅದು ಒಂದು ಸಣ್ಣ ವಾಕ್ಯ. ಆದರೆ ಒಬ್ಬ ಮನುಷ್ಯನ ಜೀವನದಲ್ಲಿ ಕೆಲವೊಮ್ಮೆ ಇಂತಹ ಸಣ್ಣ ಸಾಧ್ಯತೆಯೇ ದೊಡ್ಡ ತಿರುವಾಗುತ್ತದೆ.
ಹೀಗಾಗಿ ಈ 80ರ ದಶಕದ AI ಟ್ರೆಂಡ್ ನನಗೆ ಕೇವಲ ಹಳೆಯ ಕಾಲದ ಫ್ಯಾಷನ್ ಅಲ್ಲ. ಜನರು 80ರ ದಶಕಕ್ಕೆ ಹಿಂದಿರುಗುತ್ತಿಲ್ಲ. ಅವರು ತಮ್ಮೊಳಗೆ ಕಳೆದುಹೋದ ಯಾವುದನ್ನೋ ಹುಡುಕುತ್ತಿದ್ದಾರೆ. ಯಾರಿಗೋ ಯೌವನ, ಯಾರಿಗೋ ಸೌಂದರ್ಯ, ಯಾರಿಗೋ ಪ್ರೀತಿ, ಯಾರಿಗೋ ಸೃಜನಶೀಲತೆ, ಯಾರಿಗೋ ಒಂದು ಪರ್ಯಾಯ ಜೀವನದ ಕಲ್ಪನೆ ಮತ್ತು ಬಹುಶಃ ಯಾರಿಗೋ ತಮ್ಮ ಬಗ್ಗೆ ತಾವೇ ಹೊಂದಿದ್ದ ನಂಬಿಕೆ.
ನನ್ನ ಮಟ್ಟಿಗೆ ಈ AI ಚಿತ್ರಗಳು ನನ್ನ ರೂಪವನ್ನು ಮಾತ್ರ ಬದಲಿಸಿಲ್ಲ. ನನ್ನ ಬಗ್ಗೆ ನಾನು ಕಟ್ಟಿಕೊಂಡಿದ್ದ ಕಥೆಯನ್ನು ಮತ್ತೆ ಓದಲು ಅವಕಾಶ ಕೊಟ್ಟಿವೆ. ನನ್ನನ್ನು ನಾನು ನೋಡುವ ಕಣ್ಣು ಬದಲಾಗಿದೆ. ಅದಕ್ಕಾಗಿಯೇ ಬಹುಶಃ ಇನ್ನು ಯಾವ ಮಾತೂ ನನ್ನನ್ನು ನಿಲ್ಲಿಸಲಾರದು.
ಯಾರೂ ನನ್ನ ವಿರುದ್ಧ ಷಡ್ಯಂತ್ರ ಮಾಡಲಾರರು ಎಂದು ನಾನು ಹೇಳುವುದಿಲ್ಲ. ಮಾಡಬಹುದು. ಯಾರಾದರೂ ನನ್ನ ಕೆಲಸದ ಕ್ರೆಡಿಟ್ ಕದಿಯಲು ಪ್ರಯತ್ನಿಸಬಹುದು. ಯಾರಾದರೂ ನನ್ನ ಬಗ್ಗೆ ಗಾಳಿಮಾತುಗಳನ್ನು ಹರಡಬಹುದು. ಆದರೆ ಈಗ ಅವು ನನ್ನೊಳಗಿನ ನನ್ನ ಮೌಲ್ಯವನ್ನು ನಿರ್ಧರಿಸಲಾರವು.
ಏಕೆಂದರೆ ಈಗ ನನ್ನ ಬಳಿ ಸಾಕ್ಷಿಗಳಿವೆ. ನನ್ನ ಬರಹ , ನನ್ನ ಧ್ವನಿ, ನನ್ನ ಕೆಲಸ, ನನ್ನಿಂದ ಯಾರಿಗಾದರೂ ಬಂದ ಉಪಯೋಗ ಮತ್ತು ನನ್ನನ್ನು ನಾನು ನೋಡುವ ಬದಲಾಗಿರುವ ಕಣ್ಣು ಕೂಡ ನನ್ನ ಸಾಕ್ಷಿಯಾಗಿ ನಿಂತಿವೆ. ಇದೇ ನನಗೆ ತಂತ್ರಜ್ಞಾನದ ಇನ್ನೊಂದು ಮುಖ.
AIಯಿಂದ ಒಂದು ಚಿತ್ರ ಸೃಷ್ಟಿಯಾಗುತ್ತದೆ. ಆದರೆ ಆ ಚಿತ್ರದಾಚೆಗೆ, ಕೆಲವೊಮ್ಮೆ ಒಬ್ಬ ಮನುಷ್ಯ ತನ್ನೊಳಗೆ ಕಳೆದುಕೊಂಡಿದ್ದ ಒಂದು ಸಾಧ್ಯತೆಯನ್ನು ಮತ್ತೆ ನೋಡುತ್ತಾನೆ.
ಬಹುಶಃ ತಂತ್ರಜ್ಞಾನದ ನಿಜವಾದ ಶಕ್ತಿ ನಮ್ಮನ್ನು ನಾವು ಇನ್ನಷ್ಟು ಸುಂದರವಾಗಿ ತೋರಿಸುವುದರಲ್ಲಿಲ್ಲ. ನಮ್ಮೊಳಗೆ ಇಷ್ಟು ವರ್ಷಗಳಿಂದ ಯಾರೋ ಮುಚ್ಚಿಟ್ಟಿದ್ದ “ನನಗೂ ಕೂಡ ಸಾಧ್ಯ” ಎನ್ನುವ ಭಾವನೆಯನ್ನು ಮತ್ತೆ ಎಬ್ಬಿಸುವುದರಲ್ಲಿ ದೆ. 80ರ ದಶಕದ ಚಿತ್ರಗಳು ನನಗೆ ಆ ಭಾವನೆಯನ್ನು ಮತ್ತೆ ನೆನಪಿಸಿವೆ. ಆದ್ದರಿಂದ ಈ ಟ್ರೆಂಡ್ನ್ನು ನಾನು ಕೇವಲ “AI ಫೋಟೋ ಟ್ರೆಂಡ್” ಎಂದು ನೋಡುವುದಿಲ್ಲ. ಇದು ಕೆಲವರಿಗೆ ತಮ್ಮನ್ನೇ ಮತ್ತೆ ಕಂಡುಕೊಳ್ಳುವ ಒಂದು ಡಿಜಿಟಲ್ ಕನ್ನಡಿ.
ಆ ಕನ್ನಡಿಯಲ್ಲಿ ಕಾಣಿಸುವ ಮುಖಕ್ಕಿಂತ ಮುಖ್ಯವಾದುದು – ಅದನ್ನು ನೋಡುತ್ತಿರುವಾಗ ನಮ್ಮೊಳಗೆ ಮೂಡುವ “ನಾನು ಇಷ್ಟು ವರ್ಷ ನನ್ನ ಬಗ್ಗೆ ತಪ್ಪಾಗಿ ನಂಬಿಕೊಂಡಿದ್ದೇನೆಯೇ?” ಎಂಬ ಹೊಸ ಪ್ರಶ್ನೆ. ಬಹುಶಃ, ಅಲ್ಲಿಂದಲೇ ಆತ್ಮವಿಶ್ವಾಸ ಮತ್ತೆ ಹುಟ್ಟಬಲ್ಲದು.