ಗಣಪತಿ ಯಾರು? ಪ್ರಶ್ನೆಯಿಂದ ಆರಂಭವಾದ ಹುಡುಕಾಟ
“ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಲಿ…”
ಗಣಪತಿ ಎಂದರೆ ಮೊದಲ ಪೂಜೆ. ನಮ್ಮ ಕುಲದೇವರು ಕೂಡ. ಅಪ್ಪನ ಹೆಸರು ಗಣಪತಿ. ನಮ್ಮ ಊರಿನಲ್ಲಿ ಹೆಚ್ಚಿನವರ ಹೆಸರು ಗಣಪತಿ, ಗಜಾನನ, ಗಣೇಶ, ಹೇರಂಭ, ವಿನಾಯಕ, ವಿಘ್ನೇಶ್ವರ ಹೀಗೆ… ಹಾಗಾದರೆ ಈ ಗಣಪತಿ ಯಾರು? ಬಹುಶಃ ದೇವರ ಕುರಿತಾಗಿ ನನ್ನ ಮನಸ್ಸಿನಲ್ಲಿ ಮೂಡಿದ ಮೊದಲ ಪ್ರಶ್ನೆ ಇದೇ.
ಹಿಂದಿನ ಲೇಖನಕ್ಕಾಗಿ :-
ಹಾಗಿದ್ದರೆ ಗಣಪತಿ ಯಾರು? ಗಣಗಳ ಒಡೆಯ ಗಣಪತಿ. ಯಾವ ಗಣ? ದೇವ, ಅಸುರ, ಮನುಷ್ಯ? ಕುರುಡ ಮನುಷ್ಯನಿಗೆ ತನ್ನ ನೆಲೆಗೆ ಕಂಡ ಆನೆಯಂತೆ!
“ನೀನು ಗುಣಗಳಿಗೆ ನಿಲುಕದವನು, ದೇಹವನ್ನು ಮೀರಿದವನು, ಕಾಲಾತೀತನು…” ಹೀಗೆ ಎಲ್ಲವನ್ನೂ ಮೀರಿದವನಾಗಿ ಗಣಪತಿಯನ್ನು ವರ್ಣಿಸುತ್ತಾ ಹೋಗುತ್ತದೆ ಗಣಪತಿ ಉಪನಿಷತ್. ಸೂರ್ಯ, ಚಂದ್ರ… ಕೊನೆಗೆ ಪರಬ್ರಹ್ಮನೂ ನೀನೇ ಎನ್ನುತ್ತದೆ.
ಇದನ್ನೂ ಓದಿ :
ರಂಗಭೂಮಿ : ನನ್ನೊಳಗೆ ಇನ್ನೂ ಜೀವಂತವಾಗಿರುವ ಒಂದುಲೋಕ
ಅಲ್ಲಿಗೆ, ಒಂದು ಹಂತಕ್ಕೆ, ಪ್ರಶ್ನೆಗಳ ಮಳೆ ನಿಂತಿತು.
ಶಿವ, ಹರಿ, ದೇವಿ — ಹೀಗೆ ಪ್ರತಿಯೊಂದು ಮೂರ್ತ ಭಾವವೂ ಪರಬ್ರಹ್ಮವೇ ಎಂದು ಶ್ರುತಿ, ಸ್ಮೃತಿಗಳು ಆಯಾ ದೇವತೆಗಳ ಸ್ತುತಿ, ಕಥೆಗಳ ಮೂಲಕ ಹೇಳುತ್ತವೆ. ನಮ್ಮ ಹೃದಯ ಯಾವುದನ್ನು ತನ್ನನ್ನು ಮೀರಿದ ಶಕ್ತಿಯೆಂದು ಒಪ್ಪಿಕೊಳ್ಳುತ್ತದೋ, ಆ ಶಕ್ತಿಗೊಂದು ರೂಪ ಕೊಟ್ಟು, ಗುಣಗಳನ್ನು ಆರೋಪಿಸಿ, ಕತೆ ಕಟ್ಟಿ ಸಂತೋಷ ಪಡುವುದು ಮನುಷ್ಯನ ಸಹಜ ಸ್ವಭಾವ. ಇದಕ್ಕೆ ದೇವರು ಮಾತ್ರವಲ್ಲ, ಮನುಷ್ಯರನ್ನೂ ಸೇರಿಸುತ್ತೇವೆ.
ಈಗ ಪೂಜೆ, ಹಬ್ಬಗಳಿಗೆ ಅರ್ಥವೇನು?
ಹಬ್ಬಗಳನ್ನೇ ಆಚರಿಸದ ಒಂದು ಸಮುದಾಯದ ಮಕ್ಕಳು ನನ್ನ ಸಹಪಾಠಿಗಳಾಗಿದ್ದು ಕಾಕತಾಳೀಯ. ಅವರ ಮಟ್ಟಿಗೆ ಹಬ್ಬದ ಸಂಭ್ರಮ ಪಡುವುದು ಪಾಪ. ಸಂಭ್ರಮ ಪಡುವ ಅರ್ಹತೆ ಅವರಿಗಿಲ್ಲ! ನನಗೆ ಇದು ಹೊಸ ನೋಟ.
ಹೌದಾ? ಸಂಭ್ರಮ ಪಡಲೂ ಅರ್ಹತೆ ಬೇಕಾ? ಪಾಪ ಎಂದರೇನು? ಛೆ! ಮನುಷ್ಯ ಪ್ರಶ್ನೆಗಳನ್ನೇ ಕೇಳದಿದ್ದರೆ ಎಷ್ಟು ಚೆನ್ನಾಗಿರುತ್ತೆ? ಆದರೆ ಕೆಲವರು ಹೀಗೇ – ನನ್ನಂತೆ. ಪ್ರಶ್ನೆಗಳೇ ದೌರ್ಬಲ್ಯವೂ, ಶಕ್ತಿಯೂ.
ಹಬ್ಬವೆಂದರೆ ಪೂಜೆ ಮಾತ್ರವಲ್ಲ, ಭಾವನೆಗಳ ಬಿಡುಗಡೆ
ಸಂಭ್ರಮ ಪಡಲು ಈ ಹಬ್ಬಗಳು ಅವಕಾಶ ಕೊಡುತ್ತವೆ. ಮನುಷ್ಯ ಮನುಷ್ಯನಾಗಿ ಇರುವುದು ಸಂಭ್ರಮದಲ್ಲಿ ಮಾತ್ರ. ಅದು ಕೆಲಸ, ಊಟ, ಬಟ್ಟೆ, ವಿಶ್ರಾಂತಿಯಂತಹ ವ್ಯಕ್ತಿಗತ ಸಂತೋಷವಾಗಿರಲಿ; ಅಥವಾ ಹಬ್ಬ-ಹರಿದಿನಗಳ ಸಾಮೂಹಿಕ ಆಚರಣೆಯಾಗಿರಲಿ , ಅಂತರಾಳದಲ್ಲಿ ತುಂಬಿಕೊಂಡಿರುವ ಬೇರೆ ಬೇರೆ ಭಾವನೆಗಳಿಗೆ ಬಿಡುಗಡೆ ಸಿಗಬೇಕಷ್ಟೆ.
ನಿತ್ಯ ಜಗಳ, ಬಡತನ, ಮನೆ-ಹೊರಗೆ ನೆಮ್ಮದಿಯಿಲ್ಲದ ಬದುಕಿನಲ್ಲಿ ಇರುವ ವ್ಯಕ್ತಿಗಳು ತಮ್ಮ ಭಾವನೆಗಳನ್ನು ಹೇಗೆ ಬಿಡುಗಡೆಗೊಳಿಸುತ್ತಾರೆ? ಸಂಭ್ರಮವಿಲ್ಲದ ಮನಸ್ಸು ನಿರಂತರ ದುಃಖದಲ್ಲಿ ಬದುಕಲು ಸಾಧ್ಯವೆ?
ಹಬ್ಬಕ್ಕೆ ಪ್ರೀತಿಯಿಂದ ಸೇರುವುದು, ಒಬ್ಬರಿಗೊಬ್ಬರು ಕೆಲಸ ಹಂಚಿಕೊಂಡು ಊಟ ತಯಾರಿಸುವುದು, ಬಡಿಸುವುದು, ಆಟ ಆಡುವುದು… ಹೊಸ ಬಟ್ಟೆ, ಒಳ್ಳೆಯ ಊಟ, ಅಲಂಕಾರ, ಒಂದು ಫೋಟೋ… ಆಹಾ! ಬದುಕಲು ಒಂದು ದಿನದ ಸಂಭ್ರಮದ ನೆನಪೂ ಸಾಕೆನಿಸುತ್ತದೆ.
ಇದನ್ನೂ ಓದಿ :
ಕೃಷ್ಣನೆಂಬ ಪ್ರೀತಿಯ ಸಾಗರ
ಸಂಭ್ರಮದ ನೆನಪುಗಳಲ್ಲೇ ಬದುಕಿನ ಸಣ್ಣ ಸಂತೋಷಗಳು
ಹೀಗಾಗಿ ಹಿರಿಯರು ಹಾಕಿಕೊಟ್ಟ ಈ ಸಂಭ್ರಮದ ಬುನಾದಿಯ ಮೇಲೆ ನಾನು ಬದುಕಿನ ಸಣ್ಣ ಸಣ್ಣ ಸಂತೋಷಗಳ ಮಹಲು ಕಟ್ಟುತ್ತೇನೆ. ಸನಾತನ ಸಂಸ್ಕೃತಿಯ ಬೇರುಗಳಿಂದ ಹರಿದುಬರುವ ಪ್ರೀತಿಯ ಧಾರೆಯನ್ನು ಉಳಿಸುವ ಅಳಿಲು ಯತ್ನ ಮಾಡುತ್ತೇನೆ.
ಹಬ್ಬವೆಂದರೆ ಕೇವಲ ಪೂಜೆ ಅಲ್ಲ. ಹಬ್ಬವೆಂದರೆ ಕೇವಲ ಆಚರಣೆಯೂ ಅಲ್ಲ. ಹಬ್ಬವೆಂದರೆ ನಮ್ಮೊಳಗೆ ತುಂಬಿಕೊಂಡಿರುವ ಭಾವನೆಗಳಿಗೆ ಸಿಗುವ ಒಂದು ಸುಂದರ ಬಿಡುಗಡೆ. ಅದಕ್ಕಾಗಿಯೇ ಹಬ್ಬ ಬೇಕು. ಸಂಭ್ರಮ ಬೇಕು. ಮನುಷ್ಯನಿಗೆ ಮನುಷ್ಯನಾಗಿರುವ ಅವಕಾಶ ಬೇಕು.