ಭಾರತದಲ್ಲಿ ಕ್ರಿಕೆಟ್ ಒಂದು ಆಟದ ಗಡಿಯನ್ನು ದಾಟಿ ಭಾವನೆ ಆಗಿಬಿಟ್ಟಿದೆ. ಒಬ್ಬ ಆಟಗಾರ ಸೆಂಚುರಿ ಹೊಡೆದರೆ ಲಕ್ಷಾಂತರ ಜನ ಹಬ್ಬ ಮಾಡುತ್ತಾರೆ. ಒಂದು ತಂಡ ಗೆದ್ದರೆ ಪಟಾಕಿ ಸಿಡಿಯುತ್ತದೆ. ಸೋತರೆ ಜನ ಕೋಪಗೊಳ್ಳುತ್ತಾರೆ. ಇದು ನೋಡಿದಾಗ ಕೆಲವೊಮ್ಮೆ ಒಂದು ಪ್ರಶ್ನೆ ಕಾಡುತ್ತದೆ. ಯಾಕೆ ಕ್ರಿಕೆಟ್ ಮಾತ್ರ ಆಟವಾ?
ಹಾಕಿ ಆಡೋವವರು ಆಟಗಾರರಲ್ಲವಾ? ಕುಸ್ತಿ, ಕಬಡ್ಡಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಚೆಸ್, ವಾಲಿಬಾಲ್, ಈಜು — ಇವೆಲ್ಲವೂ ಆಟಗಳಲ್ಲವಾ? ಒಲಿಂಪಿಕ್ಸ್ನಲ್ಲಿ ದೇಶಕ್ಕಾಗಿ ಪದಕ ತರುವ ಆಟಗಾರರಿಗೂ ಇದೇ ಮಟ್ಟದ ಸಂಭ್ರಮ ಯಾಕೆ ಸಿಗುವುದಿಲ್ಲ?
ಕ್ರಿಕೆಟ್ ಗೆದ್ದರೆ ದೇಶಭಕ್ತಿ… ಬೇರೆ ಆಟ ಗೆದ್ದರೆ ಸಣ್ಣ ಸುದ್ದಿ?
ಒಂದು ಕ್ರಿಕೆಟ್ ಪಂದ್ಯ ಗೆದ್ದರೆ ಟಿವಿ ಚಾನೆಲ್ಗಳು ದಿನಪೂರ್ತಿ ಚರ್ಚೆ ಮಾಡುತ್ತವೆ. ಸೋಶಿಯಲ್ ಮೀಡಿಯಾ ತುಂಬಿ ಹೋಗುತ್ತದೆ.
ರಾಜಕಾರಣಿಗಳಿಂದ ಸಿನಿಮಾ ನಟರವರೆಗೂ ಅಭಿನಂದನೆಗಳ ಸುರಿಮಳೆ. ಆದರೆ ಒಬ್ಬ ಅಥ್ಲೀಟ್ ವಿಶ್ವ ಮಟ್ಟದಲ್ಲಿ ಪದಕ ಗೆದ್ದರೂ, ಅದು ಎರಡು ದಿನದ ಸುದ್ದಿಯಾಗಿಬಿಡುತ್ತದೆ. ಕೆಲವರು ಅವರ ಹೆಸರನ್ನೇ ಸರಿಯಾಗಿ ನೆನಪಿಡುವುದಿಲ್ಲ. ಇದು ಆಟಗಾರರ ತಪ್ಪಾ?
ಅಥವಾ ನಮ್ಮ ಸಮಾಜದ ಆದ್ಯತೆಯ ತಪ್ಪಾ?
ಹಣ, ಜಾಹೀರಾತು, ಮಾರುಕಟ್ಟೆ…
ನಿಜ ಹೇಳಬೇಕು ಅಂದ್ರೆ, ಇಂದು ಕ್ರಿಕೆಟ್ ದೊಡ್ಡ ಮಟ್ಟದಲ್ಲಿ ಬೆಳೆದಿರುವುದಕ್ಕೆ ಕೇವಲ ಆಟ ಮಾತ್ರ ಕಾರಣವಲ್ಲ. ಅದರ ಹಿಂದೆ ದೊಡ್ಡ ಹಣದ ಜಗತ್ತು ಇದೆ. ಜಾಹೀರಾತುಗಳಿವೆ. ಟಿವಿ ಹಕ್ಕುಗಳಿವೆ. ಬ್ರ್ಯಾಂಡ್ಗಳಿವೆ. ಸಿನಿಮಾ ಮಾದರಿಯ ಪ್ರದರ್ಶನವಿದೆ.
ಒಬ್ಬ ಕ್ರಿಕೆಟಿಗನನ್ನು ದೇಶವೇ ಗುರುತಿಸುತ್ತದೆ. ದರೆ ರಾಷ್ಟ್ರ ಮಟ್ಟದ ಅಥ್ಲೀಟ್ಗೆ ತಮ್ಮ ಬದುಕಿಗಾಗಿ ಉದ್ಯೋಗ ಹುಡುಕಬೇಕಾದ ಪರಿಸ್ಥಿತಿ ಇರುತ್ತದೆ. ಇದು ನೋಡಿದಾಗ ನೋವಾಗುತ್ತದೆ.
ಮಕ್ಕಳ ಕನಸುಗಳೂ ಒಂದೇ ದಿಕ್ಕಿಗೆ
ಇಂದು ಶಾಲೆಯಲ್ಲಿ ಮಕ್ಕಳನ್ನು ಕೇಳಿ — “ಯಾರಾಗಬೇಕು?” ಅರ್ಧ ಮಕ್ಕಳು ಕ್ರಿಕೆಟಿಗ ಎನ್ನಬಹುದು. ಅದು ತಪ್ಪಲ್ಲ. ಆದರೆ ಸಮಸ್ಯೆ ಏನೆಂದರೆ, ಬೇರೆ ಆಟಗಳ ಬಗ್ಗೆ ಅವರಿಗೆ ಪರಿಚಯವೇ ಇಲ್ಲ. ಏಕೆಂದರೆ ಸಮಾಜ ತೋರಿಸುವ ಹೀರೋಗಳು ಒಂದೇ ಆಟದಿಂದ ಬರುತ್ತಿದ್ದಾರೆ.
ನಾವು ಟಿವಿಯಲ್ಲಿ, ಜಾಹೀರಾತುಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಯಾವ ಆಟವನ್ನು ಹೆಚ್ಚು ನೋಡುತ್ತೇವೋ, ಮಕ್ಕಳು ಅದನ್ನೇ ದೊಡ್ಡ ಕನಸು ಎಂದು ನಂಬುತ್ತಾರೆ.
ಗ್ರಾಮಗಳಲ್ಲಿ ಎಷ್ಟೋ ಪ್ರತಿಭೆಗಳು ಮಣ್ಣಾಗುತ್ತಿವೆ
ಕರ್ನಾಟಕದ ಹಳ್ಳಿಗಳಲ್ಲಿ ಓಡಿದರೆ ಎಷ್ಟೋ ಅಥ್ಲೀಟ್ಗಳು ಸಿಗುತ್ತಾರೆ. ಕಬಡ್ಡಿಯಲ್ಲಿ ಅದ್ಭುತ ಆಟಗಾರರು ಸಿಗುತ್ತಾರೆ. ವಾಲಿಬಾಲ್, ಕುಸ್ತಿ, ಓಟ — ಅನೇಕ ಪ್ರತಿಭೆಗಳು ಸಿಗುತ್ತವೆ. ಆದರೆ ಅವರಿಗೆ ಮೈದಾನ ಇಲ್ಲ. ಪ್ರೋತ್ಸಾಹ ಇಲ್ಲ. ಸುದ್ದಿ ಇಲ್ಲ. ಬೆಳಕಿಲ್ಲ.
ಕೆಲವರು ಬದುಕಿನ ಹೊಣೆಗಾರಿಕೆಗೆ ತಮ್ಮ ಕನಸನ್ನೇ ಬಿಟ್ಟುಬಿಡುತ್ತಾರೆ. ಆಮೇಲೆ ನಾವು ಹೇಳುತ್ತೇವೆ — “ಭಾರತಕ್ಕೆ ಪದಕಗಳು ಕಡಿಮೆ ಯಾಕೆ?”
ತಪ್ಪು ಕ್ರಿಕೆಟ್ನದಲ್ಲ
ಇಲ್ಲಿ ಒಂದು ವಿಷಯ ಸ್ಪಷ್ಟವಾಗಿರಬೇಕು. ಕ್ರಿಕೆಟ್ ತಪ್ಪಲ್ಲ. ಕ್ರಿಕೆಟ್ ಆಟಗಾರರ ಯಶಸ್ಸೂ ತಪ್ಪಲ್ಲ. ಸಮಸ್ಯೆ ಏನೆಂದರೆ, ನಾವು ಉಳಿದ ಆಟಗಳನ್ನು ಮರೆತುಬಿಟ್ಟಿದ್ದೇವೆ. ಒಂದು ಸಮಾಜ ಆರೋಗ್ಯವಾಗಿರಬೇಕಾದರೆ, ಎಲ್ಲ ಪ್ರತಿಭೆಗಳಿಗೂ ಅವಕಾಶ ಇರಬೇಕು.
ಒಂದು ಆಟ ಮಾತ್ರ ದೇಶದ ಕ್ರೀಡಾ ಸಂಸ್ಕೃತಿಯಾಗಿಬಿಟ್ಟರೆ, ಉಳಿದ ಕನಸುಗಳು ನಿಧಾನವಾಗಿ ಸಾಯುತ್ತವೆ.
ಸಂಭ್ರಮಕ್ಕೂ ಸಮತೋಲನ ಬೇಕು
ಕ್ರಿಕೆಟ್ ಗೆದ್ದಾಗ ಸಂತೋಷ ಪಡೋಣ. ಆಟಗಾರರನ್ನು ಗೌರವಿಸೋಣ. ಆದರೆ ಅದೇ ಉತ್ಸಾಹವನ್ನು ಒಲಿಂಪಿಕ್ಸ್ ಪದಕ ವಿಜೇತರಿಗೆ ತೋರಿಸೋಣ. ರಾಷ್ಟ್ರೀಯ ಮಟ್ಟದ ಅಥ್ಲೀಟ್ಗಳಿಗೆ ತೋರಿಸೋಣ. ನಮ್ಮ ಜಿಲ್ಲೆಯ ಪ್ರತಿಭೆಗಳಿಗೆ ತೋರಿಸೋಣ. ಅಂದಾಗ ಮಾತ್ರ ಕ್ರೀಡೆ ನಿಜವಾದ ಅರ್ಥದಲ್ಲಿ ಬೆಳೆಯುತ್ತದೆ.
ಕೊನೆಯ ಮಾತು
ಒಂದು ದೇಶದ ಶಕ್ತಿ ಕೇವಲ ಒಂದು ಆಟದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅದು ಅದರ ವೈವಿಧ್ಯದಲ್ಲಿ ಕಾಣಿಸುತ್ತದೆ. ಕ್ರಿಕೆಟ್ ನಮ್ಮ ಭಾವನೆ ಆಗಿರಬಹುದು. ಆದರೆ ಉಳಿದ ಆಟಗಳ ಕನಸುಗಳೂ ಈ ದೇಶದದ್ದೇ. ಪ್ರಶ್ನೆ ಒಂದೇ — ನಾವು ಗೆಲುವನ್ನು ಪ್ರೀತಿಸುತ್ತೇವಾ?
ಅಥವಾ ಕೇವಲ ಹೆಚ್ಚು ಕಾಣಿಸಿಕೊಳ್ಳುವ ಆಟವನ್ನಷ್ಟೇ ಪ್ರೀತಿಸುತ್ತೇವಾ?