ಇತ್ತೀಚೆಗೆ ದೇಶದಲ್ಲಿ ಸುದ್ದಿಗಳೇ ಬರಗಾಲವಾಗಿರುವಂತಿದೆ. ಹೀಗಾಗಿ ಸಾಮಾಜಿಕ ಮಾಧ್ಯಮಗಳು ಮತ್ತು ಒಂದೆರಡು ಅಂತಾರಾಷ್ಟ್ರೀಯ ಸುದ್ದಿ ವಾಹಿನಿಗಳನ್ನೇ ಹೆಚ್ಚಾಗಿ ಅವಲಂಬಿಸಬೇಕಾಗುತ್ತಿದೆ.
ಇಂದು ಕನ್ನಡ ಸುದ್ದಿ ವಾಹಿನಿಗಳನ್ನು ನೋಡಿದಾಗ ಪ್ರಮುಖ ಸುದ್ದಿಗಳು ಯಾವುವು?
ಅಂತಾರಾಷ್ಟ್ರೀಯ ಮಟ್ಟದ ನಾಯಕ ಎಚ್.ಡಿ. ದೇವೇಗೌಡರ ಕುಟುಂಬದ ಚೆನ್ನಮ್ಮ ಅವರ ಅಂತ್ಯಕ್ರಿಯೆ… ಮತ್ತು ಇನ್ನೂ ಆರಂಭವಾಗದ ಲೋಕಸಭಾ ಅಧಿವೇಶನದ ಊಹಾಪೋಹಗಳು.
ಇದಕ್ಕೆ ವಾಹಿನಿಗಳನ್ನು ಮಾತ್ರ ದೂಷಿಸಲು ಆಗುವುದಿಲ್ಲ. ಅವರು ತಮ್ಮ ಪ್ರೇಕ್ಷಕರನ್ನು ಉಳಿಸಿಕೊಳ್ಳಬೇಕು. ಅವರಿಗೆ ಕೇಂದ್ರ ಸರ್ಕಾರದೊಂದಿಗೆ ಸಂಬಂಧ ಹದಗೆಡಬಾರದು. ಪತ್ರಿಕಾ ಸ್ವಾತಂತ್ರ್ಯದ ಬೆಲೆ ಏನೆಂಬುದು ಇಂದಿನ ಮಾಧ್ಯಮಗಳಿಗೆ ಚೆನ್ನಾಗಿ ಗೊತ್ತಿದೆ. ತನಿಖಾ ಸಂಸ್ಥೆಗಳ ಒತ್ತಡ, ಆರ್ಥಿಕ ಅನಿಶ್ಚಿತತೆ, ಜಾಹೀರಾತಿನ ಅವಲಂಬನೆ—ಇವೆಲ್ಲವೂ ಅವರ ವಾಸ್ತವ.
ನಾವು ಪ್ರಜಾಪ್ರಭುತ್ವ, ಪತ್ರಿಕಾ ಸ್ವಾತಂತ್ರ್ಯ ಮತ್ತು ಜೀವನಗುಣಮಟ್ಟದಲ್ಲಿ ಅತೀ ಹಿಂದೆ ಬಿದ್ದಿದ್ದೇವೆ. ಇಂತಹ ಪರಿಸ್ಥಿತಿಯಲ್ಲೂ “ವಿಶ್ವಗುರು” ಎಂದು ಹೆಮ್ಮೆಪಡುವುದು ಒಂದು ವಿಚಿತ್ರ ವ್ಯಂಗ್ಯ.
ಇದೇ ಸಮಯದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು NEET ಪರೀಕ್ಷೆ ಮತ್ತು ರಾಷ್ಟ್ರೀಯ ಉನ್ನತ ಶಿಕ್ಷಣ ನೀತಿಯ ಸುಧಾರಣೆಗಾಗಿ ಧ್ವನಿ ಎತ್ತುತ್ತಿದ್ದಾರೆ. ಅದು ಕೇವಲ ವಿದ್ಯಾರ್ಥಿಗಳ ಹೋರಾಟವಲ್ಲ; ಅದು ಭಾರತದ ಮುಂದಿನ ತಲೆಮಾರಿನ ಭವಿಷ್ಯದ ಪ್ರಶ್ನೆ.
ನಮ್ಮ ಪ್ರಧಾನಮಂತ್ರಿಯವರನ್ನು ವಿದೇಶಗಳಲ್ಲಿ ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವುದನ್ನು, ಅವರನ್ನು ಎತ್ತಿ ಮುದ್ದಾಡುವುದನ್ನು ಅನೇಕ ಬಾರಿ ನೋಡಿದ್ದೇವೆ. ಆ ದೃಶ್ಯಗಳು ಸಹಜವಾಗಿಯೇ ಮನಸ್ಸು ಗೆಲ್ಲುತ್ತವೆ.
ಆದರೆ ಅದೇ ಆತ್ಮೀಯತೆ, ಅದೇ ಕಾಳಜಿ, ತಮ್ಮ ದೇಶದ ವಿದ್ಯಾರ್ಥಿಗಳ ಆತಂಕ, ನಿರುದ್ಯೋಗ, ಶಿಕ್ಷಣದ ಸವಾಲುಗಳು ಮತ್ತು ಭವಿಷ್ಯದ ಪ್ರಶ್ನೆಗಳ ಎದುರು ಏಕೆ ಕಾಣಿಸುವುದಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ಇದು ನನಗೆ ಹಳೆಯ ಕಾಲದ ತಂದೆಯೊಬ್ಬರನ್ನು ನೆನಪಿಸುತ್ತದೆ.
ಬೇರೆಯವರ ಮಕ್ಕಳನ್ನು ಕಂಡರೆ ಅಪಾರ ಮಮತೆ. ತಮ್ಮ ಮಕ್ಕಳ ವಿಚಾರ ಬಂದರೆ, “ಕಟ್ಟುನಿಟ್ಟು” ಎಂಬ ಹೆಸರಿನಲ್ಲಿ ಭಾವನೆಗಳನ್ನು ದೂರ ಇಡುವ ತಂದೆ.
ಆ ಕಾಲ ಬದಲಾಗಿದೆ.
ಇಂದಿನ ಅಪ್ಪಂದಿರು ಮಕ್ಕಳೊಂದಿಗೆ ಮಾತನಾಡುತ್ತಾರೆ. ಅವರ ಮಾತು ಕೇಳುತ್ತಾರೆ. ತಪ್ಪಿದ್ದರೆ ಗದರಿಸುತ್ತಾರೆ; ಆದರೆ ಕೈ ಹಿಡಿದು ದಾರಿಯನ್ನೂ ತೋರಿಸುತ್ತಾರೆ. ಪ್ರೀತಿ ಮತ್ತು ಶಿಸ್ತು ಎರಡನ್ನೂ ಜೊತೆಯಾಗಿ ಸಾಗಿಸಲು ಪ್ರಯತ್ನಿಸುತ್ತಾರೆ.
ದೇಶದ ಆಡಳಿತವೂ ಇದೇ ರೀತಿಯಾಗಿರಬೇಕಲ್ಲವೇ?
ಪ್ರಧಾನಿ ಎಂದರೆ ಕೇವಲ ಆಡಳಿತದ ಮುಖ್ಯಸ್ಥರಲ್ಲ; ದೇಶದ ಪ್ರತಿಯೊಬ್ಬ ಮಗುವಿನ, ಪ್ರತಿಯೊಬ್ಬ ಯುವಕನ ಮತ್ತು ಪ್ರತಿಯೊಬ್ಬ ಕುಟುಂಬದ ಆಶಾಭರವಸೆ.
ಆದ್ದರಿಂದ ಒಂದು ಪ್ರಶ್ನೆ ಕೇಳಬೇಕೆನಿಸುತ್ತದೆ.
ನಮಗೆ ಹಳೆಯ ಕಾಲದ ಅಪ್ಪನಂತಿರುವ ಪ್ರಧಾನಿಯೇ ಬೇಕೇ? ಅಥವಾ ಮಕ್ಕಳ ಮಾತು ಕೇಳುವ, ಅವರ ಕನಸುಗಳನ್ನು ಅರ್ಥಮಾಡಿಕೊಳ್ಳುವ, ಅವರ ಭವಿಷ್ಯವನ್ನು ತನ್ನ ಹೊಣೆಗಾರಿಕೆ ಎಂದು ನೋಡುವ ಇಂದಿನ ಕಾಲದ ಅಪ್ಪನಂತಿರುವ ಪ್ರಧಾನಿಯೇ ಬೇಕೇ?
ಈ ಪ್ರಶ್ನೆಗೆ ಉತ್ತರವನ್ನು ಪ್ರತಿಯೊಬ್ಬ ಭಾರತೀಯರೂ ತಮ್ಮೊಳಗೆ ಹುಡುಕಿಕೊಳ್ಳಬೇಕಿದೆ.