ಮೈಸೂರಿನಲ್ಲಿ ಕಂಬಳ: ಸಂಸ್ಕೃತಿ, ಪರಿಸರ ಮತ್ತು ಕೆರೆಯ ಪ್ರಶ್ನೆ
“ಏನೇ ಆಗಲಿ, ನಾವು ಕಂಬಳ ಮಾಡಿಯೇ ಮಾಡುತ್ತೇವೆ!” — ಈ ಮಾತಿನಲ್ಲಿ ಕಂಬಳದ ಮೇಲಿನ ಉತ್ಸಾಹವೂ ಇದೆ, ಒಂದು ರೀತಿಯ ಹಠವೂ ಇದೆ. ಕರಾವಳಿಯ ಕಂಬಳ ನಮ್ಮ ಮಣ್ಣಿನ, ಜನರ, ಜಾನುವಾರುಗಳ ಮತ್ತು ಅಲ್ಲಿನ ಬದುಕಿನೊಂದಿಗೆ ಬೆಸೆದುಕೊಂಡಿರುವ ವಿಶಿಷ್ಟ ಸಂಸ್ಕೃತಿ. ಕಂಬಳ ಎಂದರೆ ಕೇವಲ ಕೋಣಗಳ ಓಟವಲ್ಲ. ಅದರ ಹಿಂದೆ ಕರಾವಳಿಯ ಕೃಷಿ ಬದುಕು, ಆಹಾರ, ಆಚರಣೆ, ಜಾನಪದ ಸಂಸ್ಕೃತಿ ಮತ್ತು ಜನರ ಭಾವನೆಗಳಿವೆ. ಹಾಗಾಗಿ ಕಂಬಳವನ್ನು ಉಳಿಸಬೇಕು, ಬೆಳೆಸಬೇಕು, ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.
ಆದರೆ ಪ್ರಶ್ನೆ ಇರುವುದು ಕಂಬಳ ನಡೆಯಬೇಕೇ ಬೇಡವೇ ಎನ್ನುವುದರಲ್ಲಿ ಮಾತ್ರವಲ್ಲ. ಮೈಸೂರಿನಲ್ಲಿ ಕಂಬಳ ನಡೆಸಲು ನಾವು ಆಯ್ಕೆ ಮಾಡಿಕೊಳ್ಳುತ್ತಿರುವ ಜಾಗ, ಅದರ ಪರಿಸರದ ಮೇಲೆ ಆಗಬಹುದಾದ ಪರಿಣಾಮ ಮತ್ತು ಅದರ ಭವಿಷ್ಯ ಏನು ಎನ್ನುವುದರ ಬಗ್ಗೆಯೂ ನಾವು ಮಾತನಾಡಬೇಕಾಗಿದೆ.
ಕರಾವಳಿಯ ಮಣ್ಣಿನ ಸೊಗಡು ಮತ್ತು ಸಂಸ್ಕೃತಿಯನ್ನು ಎಲ್ಲೆಡೆ ತೆಗೆದುಕೊಂಡು ಹೋದಾಗ ಅದರ ಮೂಲದೊಂದಿಗೆ ಇರುವ ಸಂಬಂಧ ಕಡಿಮೆಯಾಗುತ್ತದೆಯೇ ಎನ್ನುವ ಪ್ರಶ್ನೆಯೂ ಇದೆ. ಒಂದು ಸಂಸ್ಕೃತಿಯನ್ನು ಅದರ ನೆಲದಿಂದ ಬೇರ್ಪಡಿಸಿ ಬೇರೆ ಪ್ರದೇಶದಲ್ಲಿ ಪ್ರದರ್ಶಿಸಿದಾಗ ಅದರ ಗೌರವ, ಮಹತ್ವ ಮತ್ತು ಸೌಂದರ್ಯಕ್ಕೆ ಏನಾಗುತ್ತದೆ? ಮತ್ತೊಂದೆಡೆ, ಮೈಸೂರಿನಂತಹ ಪಾರಂಪರಿಕ ಪ್ರವಾಸಿ ತಾಣದಲ್ಲಿ ಕಂಬಳ ನಡೆಸುವುದರಿಂದ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಿದೆ. ಕರಾವಳಿಯ ಆಹಾರ, ಉದ್ಯಮ, ಜಾನಪದ ಕಲೆ ಮತ್ತು ಸಂಸ್ಕೃತಿಗೆ ಹೊಸ ಮಾರುಕಟ್ಟೆಯನ್ನೂ ಸೃಷ್ಟಿಸಬಹುದು. ಆ ದೃಷ್ಟಿಯಿಂದ ನೋಡಿದರೆ ಮೈಸೂರಿನಲ್ಲಿ ಕಂಬಳ ನಡೆಸುವುದಕ್ಕೆ ಕೆಲವು ಸಕಾರಾತ್ಮಕ ಸಾಧ್ಯತೆಗಳೂ ಇವೆ.
ಆದರೆ ಅಭಿವೃದ್ಧಿಯ ಲೆಕ್ಕಾಚಾರದಲ್ಲಿ ಪರಿಸರವನ್ನು ಎಲ್ಲಿ ಇಡುತ್ತೇವೆ ಎನ್ನುವುದು ಮುಖ್ಯ.
ಕಂಬಳಕ್ಕಾಗಿ ಬಳಸಲಾಗುತ್ತಿರುವ ಸುಮಾರು 17 ಎಕರೆ ಪ್ರದೇಶದ ವಿಚಾರದಲ್ಲಿ ಕೆರೆ ತುಂಬಿಸುವ ಪ್ರಶ್ನೆ ಎದುರಾಗುತ್ತದೆ. ಒಂದು ಕೆರೆಯನ್ನು ಮುಚ್ಚಿ ಅದರ ಮೇಲೆ ಜಾಗವನ್ನು ಅಭಿವೃದ್ಧಿಪಡಿಸುವುದು ಎಂದರೆ ಕೇವಲ ಒಂದು ಖಾಲಿ ಜಾಗವನ್ನು ಸಮತಟ್ಟು ಮಾಡುವುದು ಅಲ್ಲ. ಒಂದು ಕೆರೆ ಮಳೆನೀರನ್ನು ಸಂಗ್ರಹಿಸುತ್ತದೆ, ಅಂತರ್ಜಲದ ಮರುಪೂರಣಕ್ಕೆ ಸಹಾಯ ಮಾಡುತ್ತದೆ ಮತ್ತು ಸುತ್ತಮುತ್ತಲಿನ ಪರಿಸರ ವ್ಯವಸ್ಥೆಯ ಒಂದು ಭಾಗವಾಗಿರುತ್ತದೆ. ಹಾಗಾಗಿ ಕೆರೆಯೊಂದನ್ನು ಕಳೆದುಕೊಂಡಾಗ ಅದರ ಪರಿಣಾಮ ನಮಗೆ ತಕ್ಷಣ ಕಾಣಿಸದಿದ್ದರೂ, ಅದರ ಪರಿಣಾಮ ಮುಂದಿನ ವರ್ಷಗಳಲ್ಲಿ ಗೋಚರಿಸಬಹುದು.
ಇದರ ಜೊತೆಗೆ ಮರಗಳ ಹನನವೂ ಒಂದು ಕಡೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಕೆರೆಯನ್ನು ತುಂಬಿಸುವುದೂ ನಡೆಯುತ್ತಿದೆ. ನಾವು ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡುವಾಗ ಮರಗಳನ್ನು ಮಾತ್ರ ನೋಡುತ್ತೇವೆಯೇ ಎಂಬ ಪ್ರಶ್ನೆ ಇಲ್ಲಿ ಬರುತ್ತದೆ. ಪರಿಸರ ಎಂದರೆ ಕೇವಲ ಮರಗಳಲ್ಲ. ಮಣ್ಣು, ನೀರು, ಕೆರೆ, ಅಂತರ್ಜಲ, ಸಸ್ಯವರ್ಗ, ಪ್ರಾಣಿ-ಪಕ್ಷಿಗಳು ಮತ್ತು ಮಳೆನೀರಿನ ನೈಸರ್ಗಿಕ ಹರಿವು — ಇವೆಲ್ಲವೂ ಪರಿಸರದ ಭಾಗವೇ.
ನಮ್ಮಲ್ಲಿ ಕೆಲವೊಮ್ಮೆ ಒಂದು ವಿಚಿತ್ರ ಮನಸ್ಥಿತಿ ಕಾಣಿಸುತ್ತದೆ. “ಇಲ್ಲಿ ಹಿಂದೆ ಕಾಡಿತ್ತು, ಈಗ ಸ್ವಚ್ಛವಾಗಿದೆ”, “ಇಲ್ಲಿ ಹಿಂದೆ ಕೆರೆ ಇತ್ತು, ಈಗ ಚೆನ್ನಾಗಿ ಅಭಿವೃದ್ಧಿಪಡಿಸಲಾಗಿದೆ” ಎಂದು ನಾವು ಹೇಳುತ್ತೇವೆ. ಆದರೆ ನಿಜವಾಗಿಯೂ ಸ್ವಚ್ಛ ಎಂದರೆ ಏನು? ನಿಜವಾಗಿಯೂ ಅಭಿವೃದ್ಧಿ ಎಂದರೆ ಏನು? ಒಂದು ನೈಸರ್ಗಿಕ ಪ್ರದೇಶವನ್ನು ತೆಗೆದು ಅದರ ಜಾಗದಲ್ಲಿ ಕಾಂಕ್ರೀಟ್ ಅಥವಾ ಸಮತಟ್ಟಾದ ಮೈದಾನ ನಿರ್ಮಿಸಿದರೆ ಅದನ್ನು ಅಭಿವೃದ್ಧಿ ಎಂದು ಕರೆಯಬಹುದೇ?
ಇಲ್ಲಿ ನಮ್ಮ ಪರಿಸರ ಪ್ರಜ್ಞೆಯ ಬಗ್ಗೆಯೇ ಪ್ರಶ್ನೆ ಮೂಡುತ್ತದೆ. ನಾವು ಪರಿಸರವನ್ನು ಅರ್ಥಮಾಡಿಕೊಳ್ಳುವಲ್ಲಿ ಎಲ್ಲಿ ವಿಫಲರಾಗಿದ್ದೇವೆ?
ಇಂದು ನಮಗೆ ಕಾಣುವ ಲಾಭವೇ ಅಭಿವೃದ್ಧಿಯ ಅಂತಿಮ ಮಾನದಂಡವಾಗಿಬಿಟ್ಟರೆ, ಮುಂದಿನ ಹತ್ತು ಅಥವಾ ಇಪ್ಪತ್ತು ವರ್ಷಗಳ ಪರಿಣಾಮವನ್ನು ಯಾರು ಲೆಕ್ಕ ಹಾಕುತ್ತಾರೆ? ಪಕ್ಕದಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ನೀರಿನ ಬೇಡಿಕೆ ಹೆಚ್ಚಾದಾಗ, ಇಂದು ಕಳೆದುಕೊಂಡಿರುವ ನೈಸರ್ಗಿಕ ಜಲಮೂಲಗಳ ಕೊರತೆ ನಮಗೆ ನೆನಪಾಗುವುದಿಲ್ಲವೇ? ಒಂದು ಕೆರೆ ಕಳೆದುಕೊಂಡ ನಂತರ ಮತ್ತೆ ಅದೇ ಜಾಗದಲ್ಲಿ ಕೆರೆ ನಿರ್ಮಿಸುವುದು ಅಷ್ಟು ಸುಲಭವೇ?
ಇದನ್ನೂ ಓದಿ :
ಗಾಂಧಿ ಎನ್ನುವ ಬೆಳಕು
ಇನ್ನೊಂದು ಪ್ರಶ್ನೆ ಇನ್ನೂ ಮುಖ್ಯವಾಗಿದೆ. ಇಂದು ಕಂಬಳಕ್ಕಾಗಿ ಸಿದ್ಧಪಡಿಸಿರುವ ಜಾಗಕ್ಕೆ ನಾಳೆ ಏನಾಗುತ್ತದೆ?
ಕಂಬಳಕ್ಕೆ ಉತ್ತಮ ಸ್ಪಂದನೆ ಸಿಕ್ಕರೆ, ಈ ಜಾಗದ ಬಳಕೆ ಮುಂದುವರಿಯುತ್ತದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಇನ್ನಷ್ಟು ಚಟುವಟಿಕೆಗಳು ಬರಬಹುದು. ಆದರೆ ಕಂಬಳಕ್ಕೆ ನಿರೀಕ್ಷಿತ ಸ್ಪಂದನೆ ಸಿಗದಿದ್ದರೆ? ಆಗ ಈ ಜಾಗದ ಭವಿಷ್ಯ ಏನು? ಒಮ್ಮೆ ಕೆರೆಯನ್ನು ತುಂಬಿಸಿ, ಜಾಗವನ್ನು ಅಭಿವೃದ್ಧಿಪಡಿಸಿದ ನಂತರ ಅದು ಮುಂದೆ ಬೇರೆ ಉದ್ದೇಶಕ್ಕೆ ಬಳಸಲ್ಪಡುವ ಸಾಧ್ಯತೆಯನ್ನು ನಾವು ಸಂಪೂರ್ಣವಾಗಿ ತಳ್ಳಿಹಾಕಬಹುದೇ? ಇಂದು ಕಂಬಳಕ್ಕಾಗಿ ಸಿದ್ಧಪಡಿಸಿದ ಜಾಗ ನಾಳೆ ಮತ್ತೊಂದು ನಿರ್ಮಾಣಕ್ಕೆ, ಮುಂದೆ ಒಂದು ಲೇಔಟ್ಗೆ ಬದಲಾಗುವುದಿಲ್ಲ ಎನ್ನುವ ಖಾತರಿ ಏನು?
ಆದ್ದರಿಂದ ನನ್ನ ಪ್ರಶ್ನೆ ಕಂಬಳದ ವಿರುದ್ಧವಲ್ಲ. ಕಂಬಳ ನಮ್ಮ ಕರಾವಳಿಯ ಹೆಮ್ಮೆ. ಅದನ್ನು ಉಳಿಸಬೇಕು. ಆದರೆ ಒಂದು ಸಂಸ್ಕೃತಿಯನ್ನು ಉಳಿಸುವ ಹೆಸರಿನಲ್ಲಿ ಮತ್ತೊಂದು ನೈಸರ್ಗಿಕ ಸಂಪನ್ಮೂಲವನ್ನು ಕಳೆದುಕೊಳ್ಳಬೇಕೇ ಎನ್ನುವುದೇ ಪ್ರಶ್ನೆ.
ಮೈಸೂರಿಗೆ ಕಂಬಳವನ್ನು ತರಬೇಕೆಂದಿದ್ದರೆ, ಪರಿಸರದ ಮೇಲೆ ಕನಿಷ್ಠ ಪರಿಣಾಮ ಬೀರುವ ಜಾಗವನ್ನು ಆಯ್ಕೆ ಮಾಡಬಹುದಲ್ಲವೇ? ಕಂಬಳದ ಬದಲು ಕರಾವಳಿಯ ಆಹಾರ, ಕಲೆ, ಸಂಗೀತ, ಜಾನಪದ ಸಂಸ್ಕೃತಿ ಮತ್ತು ಪ್ರವಾಸೋದ್ಯಮವನ್ನು ಸೇರಿಸಿ ಒಂದು ದೊಡ್ಡ ಸಾಂಸ್ಕೃತಿಕ ಉತ್ಸವವಾಗಿ ರೂಪಿಸಬಹುದಲ್ಲವೇ? ಹಾಗೆ ಮಾಡಿದರೆ ಕರಾವಳಿಯ ಸಂಸ್ಕೃತಿಯನ್ನು ಮೈಸೂರಿಗೆ ಪರಿಚಯಿಸುವುದೂ ಆಗುತ್ತದೆ, ಪರಿಸರದ ಮೇಲಿನ ಒತ್ತಡವನ್ನೂ ಕಡಿಮೆ ಮಾಡಬಹುದು.
ಇದು ಕೇವಲ ಕಂಬಳದ ಪ್ರಶ್ನೆಯಲ್ಲ. ನಮ್ಮ ಅಭಿವೃದ್ಧಿಯ ದೃಷ್ಟಿಕೋನದ ಪ್ರಶ್ನೆ. ಒಂದು ಜಾಗದಲ್ಲಿ ಮರಗಳಿದ್ದರೆ ಅದು ಅಭಿವೃದ್ಧಿಗೆ ಅಡ್ಡಿ ಎಂದು, ಕೆರೆ ಇದ್ದರೆ ಅದು ಬಳಸಲಾಗದ ಜಾಗ ಎಂದು, ನೈಸರ್ಗಿಕ ಪ್ರದೇಶವನ್ನು ಬದಲಾಯಿಸಿದರೆ ಮಾತ್ರ ಅದು ಅಭಿವೃದ್ಧಿ ಎಂದು ನಾವು ಭಾವಿಸುತ್ತಿದ್ದೇವೆಯೇ?
ಅಭಿವೃದ್ಧಿ ಎಂದರೆ ಪ್ರಕೃತಿಯನ್ನು ಸೋಲಿಸುವುದೇ? ಅಥವಾ ಪ್ರಕೃತಿಯೊಂದಿಗೆ ಬದುಕಲು ಕಲಿಯುವುದೇ?
ಕಂಬಳ ನಡೆಯಲಿ. ನಮ್ಮ ಸಂಸ್ಕೃತಿ ಉಳಿಯಲಿ. ಪ್ರವಾಸೋದ್ಯಮ ಬೆಳೆಯಲಿ. ಕರಾವಳಿಯ ಆಹಾರೋದ್ಯಮಕ್ಕೆ ಉತ್ತೇಜನ ಸಿಗಲಿ. ಜನರಿಗೆ ಉದ್ಯೋಗ ಮತ್ತು ವ್ಯಾಪಾರದ ಅವಕಾಶಗಳು ಸಿಗಲಿ. ಆದರೆ ಅದರ ಬೆಲೆ ನಮ್ಮ ಕೆರೆ, ಅಂತರ್ಜಲ, ಮರಗಳು ಮತ್ತು ಭವಿಷ್ಯದ ನೀರಿನ ಭದ್ರತೆಯಾಗಬಾರದು.
“ಏನೇ ಆಗಲಿ, ನಾವು ಕಂಬಳ ಮಾಡಿಯೇ ಮಾಡುತ್ತೇವೆ!” ಎನ್ನುವ ಹಠದ ಜೊತೆಗೆ, “ಏನೇ ಆಗಲಿ, ನಮ್ಮ ಪರಿಸರವನ್ನೂ ಉಳಿಸಿಯೇ ಉಳಿಸುತ್ತೇವೆ!” ಎನ್ನುವ ಹಠವೂ ನಮ್ಮಲ್ಲಿ ಇರಬೇಕಲ್ಲವೇ?
ಅದೇ ನಿಜವಾದ ಅಭಿವೃದ್ಧಿ.