ಪ್ರೇಮದ ಊರಲಿ: ಹೆಣ್ಣಿನ ಮೇಲಿನ ಅಪವಾದಗಳನ್ನು ಹಂಚಬಾರದು, ಹೊಟ್ಟೆಯಲ್ಲಿಟ್ಟುಕೊಳ್ಳಬೇಕು!

ಹೆಣ್ಣಿನ ಚಾರಿತ್ರ್ಯದ ಬಗೆಗಿನ ಅನುಮಾನಗಳು, ಗಂಡಿನ ಭಾವನಾತ್ಮಕ ಗಟ್ಟಿತನದ ಪರೀಕ್ಷೆ ಮತ್ತು ಸಂಬಂಧಗಳ ಸೂಕ್ಷ್ಮತೆಯನ್ನು ತೆರೆದಿಡುವ ಸಿನಿಮಾ ‘ಪ್ರೇಮದ ಊರಲಿ’. ಮನುಷ್ಯ ಸಹಜ ಭಾವನೆಗಳಿಗೆ ಮರಳುತ್ತಿರುವ ಕನ್ನಡ ಸಿನಿಮಾಗಳ ಪಯಣದ ಬಗ್ಗೆ ನನ್ನದೊಂದು ಅನಿಸಿಕೆ.

ಸಿನಿಮಾ ಶುರುವಾಗುವ ಮೊದಲೇ ಗಂಟಲುಬ್ಬಿಸಿದ ಕ್ಷಣ!

“ಹೆಣ್ಣಿನ ಮೇಲಿನ ಅಪವಾದಗಳನ್ನು ಹಂಚಬಾರದು, ಹೊಟ್ಟೆಯಲ್ಲಿಟ್ಟುಕೊಳ್ಳಬೇಕು!”

ಈ ಮಾತನ್ನು ಹಿರಿಯ ವ್ಯಕ್ತಿಯೊಬ್ಬರು ತಮ್ಮ ವಯಸ್ಸಿನ ಗೆಳೆಯನಿಗೆ ಹೇಳುತ್ತಾರೆ. ಗೊತ್ತಾಯ್ತಲ್ಲ, ನಾನು ಯಾವ ಸಿನಿಮಾ ಬಗ್ಗೆ ಹೇಳುತ್ತಿದ್ದೇನೆ ಎಂದು!

‘ಪ್ರೇಮದ ಊರಲಿ’ ಸಿನಿಮಾ ನನಗೆ ಅಷ್ಟೊಂದು ಹಿಡಿಸಲಿಕ್ಕಿಲ್ಲ ಎನ್ನುವ ಭಾವನೆಯಿಂದಲೇ ಚಿತ್ರಮಂದಿರಕ್ಕೆ ಹೋಗಿದ್ದೆ. ಆರಂಭದಲ್ಲಿ ಕಥೆ ಏನೆಂದು ತಿಳಿಯದಿದ್ದರೂ, ಹಳ್ಳಿಯ ಕಥೆಯೊಂದನ್ನು ಜನಮಾನಸಕ್ಕೆ ಇಳಿಸಲು ಇಡೀ ಚಿತ್ರತಂಡ ಪಟ್ಟ ಪರಿಶ್ರಮ ಕಣ್ಣಮುಂದೆ ಬಂದು ಗಂಟಲುಬ್ಬಿಬಂತು.

“ಇನ್ನೂ ಸಿನಿಮಾ ಶುರುವಾಗೇ ಇಲ್ಲ. ಹೆಸರು ತೋರಿಸುವಾಗಲೇ ಕತ್ತಲು, ಬೆಳಕಿನ ನಡುವೆ ನಿನಗೇನಾಯ್ತು?” ಎನ್ನುವಂತೆ ಮಗ ನನ್ನನ್ನು ನೋಡುತ್ತಿದ್ದ.

‘ಸಿನಿಮಾ, ಧಾರಾವಾಹಿ ಮಾಡುವವರ ಕಥೆ ನಿಂಗೊತ್ತಿಲ್ಲ ಮಗ’ ಎಂದು ಮನಸ್ಸಿನಲ್ಲೇ ಅಂದುಕೊಂಡು, ಕಣ್ಣು ಒರೆಸಿಕೊಂಡು ಸಿನಿಮಾ ನೋಡಲು ಶುರುಮಾಡಿದೆ.

ಅಪ್ಪ-ಮಗನ ಕಥೆ ನಿರೀಕ್ಷೆ ಹುಟ್ಟಿಸಿತು!

ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಡಾ. ರಾಜ್‌ಕುಮಾರ್ ಅವರ ‘ದೇವತಾ ಮನುಷ್ಯ’ ಸಿನಿಮಾದಲ್ಲಿ ‘ನಿನ್ನಂತ ಅಪ್ಪ ಇಲ್ಲ’ ಎನ್ನುವ ಭಾವವನ್ನು ಕೇಳಿದ್ದೆ. ಏನು ಕೇಳಿದರೂ ‘ಇದು ನನ್ನಪ್ಪಂದು’ ಎನ್ನುತ್ತಿದ್ದ ನನಗೆ, ‘ಎಲ್ಲಾ ನಿನ್ನಪ್ಪಂದೇ’ ಎಂದು ಗೋಳು ಹೊಯ್ದುಕೊಳ್ಳುತ್ತಿದ್ದ ಅಣ್ಣಂದಿರ ಬಾಯಿಂದ ಹಳೆಯ ಸಿನಿಮಾ ಹಾಡುಗಳು ಪರಿಚಯವಾಗಿದ್ದವು.

ನಂತರ ‘ಅಪ್ಪಾ, ಐ ಲವ್ ಯು ಅಪ್ಪ’ ಹಾಡಿನ ಮೂಲಕ ಮತ್ತೊಂದು ಅಪ್ಪನ ಹಾಡು ಕೇಳಿದ್ದೆ. ಆದರೆ ಈ ಸಲ ‘ಅಪ್ಪ-ಮಗನ’ ಕಥೆ! ಸ್ವಲ್ಪ ನಿರೀಕ್ಷೆ ಹುಟ್ಟಿತು.

ಸಿನಿಮಾದ ಆರಂಭದಲ್ಲಿ ನಾಯಕಿಯ ಕಥೆ, ಇತ್ತೀಚೆಗೆ ನೋಡಿದ ಯಾವುದೋ ಚೀನಾ ಅಥವಾ ಎಐ ಡ್ರಾಮಾದ ಆರಂಭದ ಕಥೆಯನ್ನು ನೆನಪಿಸಿತು. ಆದರೆ ಆ ಬೆಡ್‌ರೂಂ ದೃಶ್ಯ ಬೇಕಿತ್ತೇ ಎಂದು ಯೋಚಿಸುತ್ತಿದ್ದಾಗ, ಇರಲಿ, ಏನೂ ಅರಿಯದ ಮುಗ್ಧ ಹುಡುಗಿಯರಿಗೆ ಒಂದು ಪಾಠವಾಗಬಹುದು ಎನಿಸಿತು.

ಸರಿ, ಮುಂದೆ ಏನಾಗುತ್ತದೆ ಎಂದು ನೋಡುತ್ತ ಕುಳಿತಾಗ ನನ್ನನ್ನು ಹೆಚ್ಚು ಆವರಿಸಿಕೊಂಡದ್ದು ವಸಂತಳ ಅಭಿನಯ.

ವಸಂತಳ ಪಾತ್ರಕ್ಕೆ ಜೀವ ತುಂಬಿದ ಅಭಿನಯ

ವಸಂತಳ ಪಾತ್ರಕ್ಕಿದ್ದ ನಟನೆಯ ಸಾಧ್ಯತೆಗಳನ್ನೆಲ್ಲ ಬಳಸಿಕೊಂಡ ಹುಡುಗಿ ಒಳ್ಳೆಯ ಭರವಸೆ ಮೂಡಿಸಿದಳು. ಪಾತ್ರವನ್ನೇ ಆವಾಹನೆ ಮಾಡಿಕೊಂಡು ನಟಿಸುವ ರಂಗಾಯಣ ರಘು ಅವರ ಅಭಿನಯದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಉಳಿದೆಲ್ಲ ಪಾತ್ರಗಳಿಗೂ ಆಯಾ ಪಾತ್ರಧಾರಿಗಳು ಅತ್ಯುತ್ತಮ ಅಭಿನಯವನ್ನೇ ನೀಡಿದ್ದಾರೆ.

ಆದರೆ ವಸಂತಳ ಪಾತ್ರ ಮಾತ್ರ ವಿಶೇಷವಾಗಿ ಮನಸ್ಸಿನಲ್ಲಿ ಉಳಿಯುತ್ತದೆ.

ಒಂದು ಪಾತ್ರದ ಭಾವನೆಗಳನ್ನು ಅರ್ಥಮಾಡಿಕೊಂಡು, ಅದರ ಅಂತರಂಗವನ್ನು ಅಭಿನಯದ ಮೂಲಕ ಪ್ರೇಕ್ಷಕರಿಗೆ ತಲುಪಿಸುವುದು ಸುಲಭದ ಕೆಲಸವಲ್ಲ. ವಸಂತಳ ಅಭಿನಯದಲ್ಲಿ ಆ ಸಾಧ್ಯತೆ ಕಾಣಿಸಿತು.

ಹೆಣ್ಣಿನ ಆಯ್ಕೆಯೇ ಆಕೆಯ ಚಾರಿತ್ರ್ಯದ ಪ್ರಶ್ನೆಯಾಗುವುದೇಕೆ?

ನಗರದ ಹುಡುಗಿಯೊಬ್ಬಳು ಹಳ್ಳಿಯ ಹುಡುಗನನ್ನು ಮದುವೆಯಾಗಿ ಬಂದಾಗ ಎದುರಿಸುವ ಅನುಮಾನದ ಮುಳ್ಳು, ಹಿಂದಿಯ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದ ಮಾತುಗಳನ್ನು ನೆನಪಿಸಿತು.

ಮುಂದೆ ಹೋಗಿದ್ದಾಳೆ ಎಂದುಕೊಂಡ ಹೆಣ್ಣು ಮತ್ತೆ ಹಿಂದೆ ಬಂದಳು ಎಂದಾಗ, ಸಮಾಜ ಕೇಳುವ ಮೊದಲ ಪ್ರಶ್ನೆ ಆಕೆಯ ಚಾರಿತ್ರ್ಯದ ಬಗ್ಗೆಯೇ! ಅದನ್ನು ಸಾಬೀತುಪಡಿಸುತ್ತ ಬದುಕಲು ತನಗೆ ಆಗದು ಎನ್ನುವ ಗಂಗೂಬಾಯಿಯ ನಿಲುವು ನೆನಪಾಯಿತು.

ಹೆಣ್ಣೊಬ್ಬಳು ತನಗಿಂತ ಕಡಿಮೆ ಓದಿದವನನ್ನೋ, ತನಗಿಂತ ಬಡವನನ್ನೋ, ಕಡಿಮೆ ಅಂದದವನನ್ನೋ ಇಷ್ಟಪಟ್ಟಾಗಲೂ ಆಕೆಯ ಆಯ್ಕೆಯ ಬಗ್ಗೆ ಅನುಮಾನ ಹುಟ್ಟುತ್ತದೆ. ಆಕೆ ನಿಜವಾಗಿಯೂ ಅವನನ್ನು ಪ್ರೀತಿಸುತ್ತಿದ್ದಾಳೆಯೇ? ಆಕೆಯ ಉದ್ದೇಶವೇನು? ಇಂತಹ ಪ್ರಶ್ನೆಗಳು ಆಕೆಯ ಆಯ್ಕೆಯನ್ನು ಸಹಜವಾಗಿ ಸ್ವೀಕರಿಸುವುದಕ್ಕಿಂತ ಮೊದಲೇ ಹುಟ್ಟಿಕೊಳ್ಳುತ್ತವೆ.

ಇಂತಹ ಸಂದರ್ಭಗಳಲ್ಲಿ ಆಯ್ಕೆಯಾದ ಗಂಡಿನ ಗಟ್ಟಿತನದ ಪರೀಕ್ಷೆಯೂ ನಿರೀಕ್ಷಿತವೇ.

ಹೆಂಡತಿಯ ಬಗ್ಗೆ ಸಮಾಜ ಏನು ಹೇಳುತ್ತದೆ ಎನ್ನುವುದಕ್ಕಿಂತ, ಆಕೆಯನ್ನು ತಾನು ಎಷ್ಟು ನಂಬುತ್ತೇನೆ ಎನ್ನುವುದು ಮುಖ್ಯವಾಗುತ್ತದೆ. ಇತರರ ಅನುಮಾನಗಳಿಗೆಲ್ಲ ಉತ್ತರಿಸುತ್ತ, ತನ್ನ ಸಂಗಾತಿಯ ಪ್ರೀತಿಯನ್ನು ಸಾಬೀತುಪಡಿಸುವುದಕ್ಕಿಂತ, ಆಕೆಯ ವ್ಯಕ್ತಿತ್ವವನ್ನು ಗೌರವಿಸುವ ಗಟ್ಟಿತನ ಗಂಡಿನಲ್ಲಿರಬೇಕಾಗುತ್ತದೆ.

ಈ ಒಂದು ಗಟ್ಟಿಯಾದ ಒಳನೋಟವೇ ಇಡೀ ಚಿತ್ರವನ್ನು ಸಾಮಾನ್ಯ ಮಗ್ಗುಲಿನಿಂದ ಅಸಾಮಾನ್ಯ ಮಗ್ಗುಲಿಗೆ ಹೊರಳಿಸುತ್ತದೆ.

ಹೆಣ್ಣಿನ ಶೀಲದ ಬಗ್ಗೆ ಸಮಾಜದ ಹಳೆಯ ಕ್ಲೀಷೆಗಳು

ಈ ಸಿನಿಮಾದಲ್ಲಿ ಹೆಣ್ಣಿನ ಅಂತರಂಗದ ಸೂಕ್ಷ್ಮತೆಯ ಜೊತೆಗೆ ಗಂಡಿನ ಅಂತರಂಗದ ಸ್ಥೂಲ, ಒರಟು ಭಾವವನ್ನೂ ಹೇಳಿರುವುದು ಎಷ್ಟೋ ಮನೆಗಳನ್ನು ಉಳಿಸಬಹುದು ಎನಿಸಿತು.

ಹೆಣ್ಣನ್ನು ನಾಯಿ ಮುಟ್ಟಿದ ಮಡಿಕೆಯಂತೆ ನೋಡುವ ಮನೋಭಾವವಿದ್ದ ಸಿನಿಮಾ ಕಾಲದಿಂದ ಹಿಡಿದು, ಹೆಣ್ಣಿನ ಶಿಕ್ಷಣವೂ ಅಳಿಸಲಾಗದ ಹಳೆಯ ಶೀಲದ ಕುರಿತ ಕ್ಲೀಷೆಗಳವರೆಗೆ, ಸಮಾಜದ ವಾಸ್ತವಕ್ಕೆ ಕನ್ನಡಿಯಾದ ಅನೇಕ ಸಂಗತಿಗಳು ನಮ್ಮ ಕಣ್ಣಮುಂದಿವೆ. ಇಂದಿಗೂ ಹೆಣ್ಣಿನ ವ್ಯಕ್ತಿತ್ವವನ್ನು ಆಕೆಯ ಹಿಂದಿನ ಬದುಕಿನ ಆಧಾರದಲ್ಲಿ ಅಳೆಯುವ ಮನೋಭಾವ ಉಳಿದಿರುವುದು ವಿಷಾದನೀಯ.

ಹೆಣ್ಣಿನ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ, ಸಾಮಾಜಿಕ ಸ್ಥಾನಮಾನ ಇವೆಲ್ಲ ಬದಲಾಗಿದ್ದರೂ, ಆಕೆಯ ಚಾರಿತ್ರ್ಯದ ಬಗ್ಗೆ ಅನುಮಾನ ಪಡುವ ಹಳೆಯ ಮನಸ್ಥಿತಿ ಅಷ್ಟು ಸುಲಭವಾಗಿ ಬದಲಾಗಿಲ್ಲ.

ಸಂಬಂಧಗಳಲ್ಲಿ ನಂಬಿಕೆಗಿಂತ ಅನುಮಾನಕ್ಕೆ ಹೆಚ್ಚು ಬೆಲೆ ಕೊಡುವ ಸಮಾಜದಲ್ಲಿ, ಹೆಣ್ಣು ತನ್ನನ್ನು ತಾನು ನಿರಂತರವಾಗಿ ಸಾಬೀತುಪಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆಕೆಯ ಮಾತು, ನಡೆ, ಆಯ್ಕೆ, ಹಿಂದಿನ ಬದುಕು ಎಲ್ಲವೂ ವಿಚಾರಣೆಗೆ ಒಳಗಾಗುತ್ತವೆ.

ಇಂತಹ ಸಂದರ್ಭದಲ್ಲಿ ಹೆಣ್ಣಿನ ಮೇಲಿನ ಅಪವಾದಗಳನ್ನು ಎಲ್ಲೆಡೆ ಹಂಚುವುದಕ್ಕಿಂತ, ಅವುಗಳನ್ನು ಹೊಟ್ಟೆಯಲ್ಲಿಟ್ಟುಕೊಳ್ಳಬೇಕು ಎನ್ನುವ ಮಾತು ಕೇವಲ ಸಂಭಾಷಣೆಯಾಗಿ ಉಳಿಯುವುದಿಲ್ಲ. ಅದು ನಮ್ಮ ಸಾಮಾಜಿಕ ವರ್ತನೆಯನ್ನೇ ಪ್ರಶ್ನಿಸುತ್ತದೆ.

ತಾಂತ್ರಿಕ ಅಂಶಗಳೂ ಕಥೆಯೊಂದಿಗೆ ಸಮರಸಗೊಂಡಿವೆ

ಹಾಸನ ಜಿಲ್ಲೆಯ ಹೊಲಗಳು, ಸೀಗೆಗುಡ್ಡದ ಛಾಯಾಗ್ರಹಣ, ವಸ್ತ್ರವಿನ್ಯಾಸ, ಸಂಗೀತ, ಸಾಹಿತ್ಯ, ಚಿತ್ರಕಥೆ, ಅಭಿನಯ, ಪಾತ್ರಧಾರಿಗಳ ಆಯ್ಕೆ, ಸಂಕಲನ ಮತ್ತು ಕಥೆ—ಎಲ್ಲವೂ ಸಮರಸಗೊಂಡಿರುವುದು ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್.

ಒಂದು ಸಿನಿಮಾ ಪ್ರೇಕ್ಷಕರನ್ನು ತಲುಪಲು ಕಥೆಯೊಂದೇ ಸಾಕಾಗುವುದಿಲ್ಲ. ಆ ಕಥೆ ನಡೆಯುವ ಪರಿಸರ, ಪಾತ್ರಗಳ ಬದುಕು, ಅವರ ಮಾತು, ಮೌನ, ಭಾವನೆ ಮತ್ತು ದೃಶ್ಯಗಳ ನಡುವಿನ ಸಂಬಂಧವೂ ಅಷ್ಟೇ ಮುಖ್ಯ.

‘ಪ್ರೇಮದ ಊರಲಿ’ಯಲ್ಲಿ ಇಂತಹ ಅಂಶಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿರುವುದು ಗಮನ ಸೆಳೆಯುತ್ತದೆ. ತಾಂತ್ರಿಕ ಅಂಶಗಳು ಕಥೆಯಿಂದ ಪ್ರತ್ಯೇಕವಾಗಿ ಕಾಣಿಸಿಕೊಳ್ಳುವುದಕ್ಕಿಂತ, ಕಥೆಯ ಭಾವನೆಗಳನ್ನು ಕಟ್ಟಿಕೊಡುವಲ್ಲಿ ನೆರವಾಗುತ್ತವೆ.

ಎಲ್ಲಕ್ಕಿಂತ ಹೆಚ್ಚಾಗಿ, ಕನ್ನಡ ಸಿನಿಮಾಗಳು ‘ಹೊಡಿ, ಬಡಿ, ಕಡಿ’ ಎನ್ನುವ ಛಾಯೆಯಿಂದ ಹೊರಬಂದು ಮನುಷ್ಯ ಸಹಜ ಭಾವನೆಗಳತ್ತ ಮರಳುತ್ತಿರುವುದು ನನ್ನಂತಹ ಸಿನಿಮಾ ನೋಡುಗರಿಗೆ ಖುಷಿ ಕೊಡುವ ಸಂಗತಿ.

ಎಐ ಕಾಲದಲ್ಲಿ ಮನುಷ್ಯ ಸಹಜ ಭಾವನೆಗಳ ಹುಡುಕಾಟ

ಇಂದು ಕೃತಕ ಬುದ್ಧಿಮತ್ತೆಯ ನೆರವಿನಿಂದ ದೃಶ್ಯಗಳನ್ನು ಸೃಷ್ಟಿಸಬಹುದು. ಕಥೆಗಳನ್ನು ರೂಪಿಸಬಹುದು. ಮನುಷ್ಯರ ಮುಖಭಾವ ಮತ್ತು ಧ್ವನಿಯನ್ನೂ ಅನುಕರಿಸಬಹುದು. ಆದರೆ ಮನುಷ್ಯನ ಅಂತರಂಗದ ನೋವು, ಸಂಬಂಧಗಳಲ್ಲಿನ ಸೂಕ್ಷ್ಮತೆ ಮತ್ತು ಬದುಕಿನ ಅನುಭವಗಳು ಹುಟ್ಟಿಸುವ ಸಹಜ ಸ್ಪಂದನೆಗಳಿಗೆ ಪ್ರೇಕ್ಷಕರು ಯಾವಾಗಲೂ ತೆರೆದುಕೊಳ್ಳುತ್ತಾರೆ.

‘ಪ್ರೇಮದ ಊರಲಿ’ ನೋಡಲು ತುಂಬಿದ್ದ ಚಿತ್ರಮಂದಿರ ನನಗೆ ಅಂತಹ ಸ್ಪಂದನೆಗಳ ಮಹತ್ವವನ್ನು ನೆನಪಿಸಿತು.

ಪ್ರೇಕ್ಷಕನಿಗೆ ತನ್ನದೇ ಬದುಕಿನ ಯಾವುದೋ ಒಂದು ಕ್ಷಣ, ತನ್ನ ಸುತ್ತಲಿನ ಯಾವುದೋ ವ್ಯಕ್ತಿ ಅಥವಾ ತನ್ನ ಮನಸ್ಸಿನಲ್ಲೇ ಉಳಿದುಹೋದ ಯಾವುದೋ ನೋವು ಸಿನಿಮಾದಲ್ಲಿ ಕಾಣಿಸಿದಾಗ, ಆ ಸಿನಿಮಾ ಆತನಿಗೆ ಕೇವಲ ಮನರಂಜನೆಯಾಗಿ ಉಳಿಯುವುದಿಲ್ಲ. ಅದು ತನ್ನ ಬದುಕಿನ ಭಾಗವಾಗುತ್ತದೆ.

ಬಹುಶಃ ಇಂತಹ ಸಿನಿಮಾಗಳು ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಮಾಡಿಕೊಳ್ಳುವುದಕ್ಕೆ ಇದೇ ಕಾರಣ.

‘ಸು ಫ್ರಂ ಸೋ’ ಮತ್ತು ‘ಪ್ರೇಮದ ಊರಲಿ’: ಸಾಮಾನ್ಯ ಮನುಷ್ಯರ ಅಂತರಂಗದ ಕಥೆಗಳು

‘ಸು ಫ್ರಂ ಸೋ’ ಮತ್ತು ‘ಪ್ರೇಮದ ಊರಲಿ’—ಈ ಎರಡೂ ಸಿನಿಮಾಗಳಲ್ಲಿ ನನಗೆ ಒಂದು ಸಾಮಾನ್ಯ ಅಂಶ ಕಾಣಿಸುತ್ತದೆ. ಹೆಣ್ಣಿನ ಅಂತರಾಳದ ನೋವುಗಳು ಮತ್ತು ಹೆಣ್ಣು ಸಿಗದ ಅಥವಾ ಮದುವೆಯಾಗದ ಗಂಡಿನ ಒಂಟಿತನ.

ಇವೆರಡೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಗಮನ ಹರಿಸಬೇಕಾದ ಸಾಮಾಜಿಕ ಮನೋವಿಜ್ಞಾನದ ವಿಷಯಗಳು ಎನ್ನಿಸುತ್ತದೆ.

ಹೆಣ್ಣಿನ ನೋವುಗಳ ಬಗ್ಗೆ ಮಾತನಾಡುವಾಗ ಆಕೆಯ ಅಂತರಂಗವನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಮುಖ್ಯವೋ, ಗಂಡಿನ ಒಂಟಿತನ ಮತ್ತು ಭಾವನಾತ್ಮಕ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳುವುದೂ ಅಷ್ಟೇ ಮುಖ್ಯ. ಆದರೆ ಈ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಎಂದರೆ ವ್ಯಕ್ತಿಯ ತಪ್ಪುಗಳನ್ನು ಸಮರ್ಥಿಸುವುದಲ್ಲ. ಅವರ ವರ್ತನೆಯ ಹಿಂದಿನ ಸಾಮಾಜಿಕ ಮತ್ತು ಭಾವನಾತ್ಮಕ ಕಾರಣಗಳನ್ನು ಅರಿಯುವ ಪ್ರಯತ್ನ.

ಸಿನಿಮಾ ಇಂತಹ ಸಂಕೀರ್ಣ ಭಾವನೆಗಳನ್ನು ಮಾನವೀಯ ನೆಲೆಯಲ್ಲಿ ಕಟ್ಟಿಕೊಟ್ಟಾಗ, ಪ್ರೇಕ್ಷಕರಿಗೆ ತಮ್ಮ ಸುತ್ತಲಿನ ಜನರನ್ನು ಹೊಸ ದೃಷ್ಟಿಯಿಂದ ನೋಡುವ ಅವಕಾಶ ಸಿಗುತ್ತದೆ. ಬಹುಶಃ ಇದೇ ಕಾರಣಕ್ಕೆ ಇಂತಹ ಕಥೆಗಳು ಪ್ರೇಕ್ಷಕರಿಗೆ ಹತ್ತಿರವಾಗುತ್ತವೆ.

ಪ್ರೇಕ್ಷಕ ತನ್ನನ್ನು ತಾನು ಕಂಡುಕೊಂಡಾಗಲೇ ಸಿನಿಮಾ ಗೆಲ್ಲುತ್ತದೆ

ಒಂದು ಸಿನಿಮಾದಲ್ಲಿ ಪ್ರೇಕ್ಷಕ ತನ್ನನ್ನು ತಾನು ಗುರುತಿಸಿಕೊಳ್ಳುವುದು ಬಹಳ ಮುಖ್ಯ. ತೆರೆಯ ಮೇಲೆ ಕಾಣುವ ಪಾತ್ರದಲ್ಲಿ ತನ್ನದೇ ನೋವು, ತನ್ನದೇ ಪ್ರಶ್ನೆ, ತನ್ನದೇ ಅನುಭವ ಅಥವಾ ತನ್ನ ಸುತ್ತಲಿನ ಬದುಕಿನ ಪ್ರತಿಬಿಂಬ ಕಂಡಾಗ, ಆ ಸಿನಿಮಾ ಆತನ ಮನಸ್ಸಿನಲ್ಲಿ ಉಳಿಯುತ್ತದೆ.

ಸಿನಿಮಾದ ಗೆಲುವು ಕೇವಲ ಅದರ ಗಳಿಕೆಯಲ್ಲಿ ಮಾತ್ರವಿಲ್ಲ. ಅದು ಪ್ರೇಕ್ಷಕರ ಮನಸ್ಸಿನಲ್ಲಿ ಎಷ್ಟು ಕಾಲ ಉಳಿಯುತ್ತದೆ, ಅವರ ಯೋಚನೆಗಳನ್ನು ಎಷ್ಟರ ಮಟ್ಟಿಗೆ ಮುಟ್ಟುತ್ತದೆ ಮತ್ತು ಬದುಕನ್ನು ನೋಡುವ ದೃಷ್ಟಿಯಲ್ಲಿ ಎಂತಹ ಬದಲಾವಣೆಗೆ ಪ್ರೇರೇಪಿಸುತ್ತದೆ ಎನ್ನುವುದೂ ಮುಖ್ಯ.

ಹೆಣ್ಣಿನ ಮೇಲಿನ ಅಪವಾದಗಳು, ಸಂಬಂಧಗಳಲ್ಲಿ ನಂಬಿಕೆಯ ಮಹತ್ವ, ಗಂಡಿನ ಭಾವನಾತ್ಮಕ ಗಟ್ಟಿತನ ಮತ್ತು ಒಂಟಿತನದಂತಹ ವಿಷಯಗಳನ್ನು ಸಹಜವಾಗಿ ಕಟ್ಟಿಕೊಡುವ ಸಿನಿಮಾಗಳು ಪ್ರೇಕ್ಷಕರಿಗೆ ತಮ್ಮ ಬದುಕನ್ನು ಮತ್ತೊಮ್ಮೆ ನೋಡುವ ಅವಕಾಶ ನೀಡುತ್ತವೆ. ಎಲ್ಲಿಯವರೆಗೆ ಪ್ರೇಕ್ಷಕ ತನ್ನನ್ನು ತಾನು ಸಿನಿಮಾಗಳಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆಯೋ, ಅಲ್ಲಿಯವರೆಗೆ ಇಂತಹ ಸಿನಿಮಾಗಳು ಎಷ್ಟು ಬಂದರೂ ಗೆಲ್ಲುತ್ತವೆ.

‘ಪ್ರೇಮದ ಊರಲಿ’ ನೋಡಿದ ನಂತರ ನನ್ನ ಮನಸ್ಸಿನಲ್ಲಿ ಉಳಿದದ್ದು ಇದೇ ಭಾವನೆ.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment