ರೇಷ್ಮೆ ಬೆಳೆಯೂ ಮತ್ತು ನಾನು

ರೇಷ್ಮೆ ಬೆಳೆಯ ಪರಿಚಯ: ಬಾಲ್ಯದಲ್ಲೇ ಬಂದ ಜವಾಬ್ದಾರಿ

ನನ್ನ ಹನ್ನೆರಡೂವರೆ ವರ್ಷಕ್ಕೆ ರೇಷ್ಮೆ ಬೆಳೆಯ ಪರಿಚಯ ಆಯಿತು. ಕೇವಲ ಮನೆಯಲ್ಲಿ ದೊಡ್ಡವರು ಕೆಲಸ ಮಾಡುವಾಗ ನೋಡಿ ತಿಳಿಯುವ ಹಾಗಲ್ಲ. ಅಕ್ಷರಶಃ ಚಾಕಿ ಕಟ್ಟುವ ಹಂತದಿಂದ ಚಂದ್ರಿಕೆಯಲ್ಲಿ ಬಿಟ್ಟು, ಕಟ್ಟಿದ ಗೂಡುಗಳನ್ನು ಮಾರುವ ತನಕ ಒಂದು ಪಾಲುದಾರಿಕೆ ಅದು.

ಯಾಕೆ ದೊಡ್ಡವರಿರಲಿಲ್ಲವ? ಕೇಳಬೇಡಿ. ದೊಡ್ಡವರಿಗೆ, ಚಿಕ್ಕವರಿಗೆ ಅವರವರ ಕಷ್ಟಗಳು ದೊಡ್ಡದಿದ್ದವು ಎಂಬುದಷ್ಟನ್ನೇ ಅರ್ಥ ಮಾಡಿಕೊಳ್ಳಿ. ಒಟ್ಟಿನಲ್ಲಿ ರೇಷ್ಮೆ ಬೆಳೆ ನನ್ನ ಬಾಲ್ಯದಲ್ಲೇ ನನ್ನೊಳಗಿನ ಶಕ್ತಿಯನ್ನು ಎಬ್ಬಿಸಿತು. ಕೆಲವೊಮ್ಮೆ ನಾವು ಮಾಡುವ ಕೆಲಸಗಳು ನಮ್ಮ ಮಿತಿಗಳ ಜೊತೆಗೆ ನಮ್ಮೊಳಗಿನ ಸಾಧ್ಯತೆಗಳನ್ನೂ ತೋರಿಸುತ್ತವೆ.

ಮನೆಯ ಜಗುಲಿಯೇ ರೇಷ್ಮೆ ಮನೆ

ಆಗ ರೇಷ್ಮೆ ಮೊಟ್ಟೆಯನ್ನು ರೇಷ್ಮೆ ಇಲಾಖೆ ಕೊಡುತ್ತಿತ್ತು. ಶಿರಸಿ/ಮಾವಿನಕಟ್ಟೆಯಿಂದ ಅಪ್ಪ ರೇಷ್ಮೆ ಮೊಟ್ಟೆ, ಫಾರ್ಮಲಿನ್ ದ್ರಾವಣ, ಫೋಮ್, ಬೆಡ್ ಶಿಟ್ ತರುತ್ತಿದ್ದರು. ನಮ್ಮ ಮನೆಯ ಜಗುಲಿಯೇ ರೇಷ್ಮೆ ಮನೆ.

ಅಮ್ಮ ಮತ್ತು ನಾನು ರೇಷ್ಮೆ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದೆವು. ಅಮ್ಮ, ಮೊದಲು ಒಂದು ಬಾಕ್ಸ್ ಟ್ರೇ ನಲ್ಲಿ ಬ್ರೌನ್ ಕಲರ್ ಕಾಗದ (ಬೆಡ್ ಶೀಟ್ ) ಹರಡುತ್ತಿದ್ದಳು. ನಂತರ ಫಾರ್ಮಾಲಿನ್ ದ್ರಾವಣದಲ್ಲಿ ಸುಮಾರು ಒಂದು ಮಾರು ಇರುತ್ತಿದ್ದ ಸ್ಪಂಜ್ ಫೋಮ್ ಅನ್ನು ಅದ್ದಿ ಅಂಚಿನಲ್ಲಿ ಜೋಡಿಸುತ್ತಿದ್ದಳು. ಮಧ್ಯದಲ್ಲಿ ರೇಷ್ಮೆ ಮೊಟ್ಟೆಗಳು ಒಂದು ಪೇಪರ್ ಗೆ ಅಂಟಿಕೊಂಡಿರುತ್ತಿದ್ದವು. ಅವುಗಳನ್ನು ಮೇಲ್ಮುಖ ಮಾಡಿ ಇಟ್ಟು ಮೇಲಿನಿಂದ ಇನ್ನೊಂದು ಬೆಡ್ ಶೀಟ್ ಮುಚ್ಚಿ ಇಡುತ್ತಿದ್ದಳು. ಈ ಕೆಲಸಕ್ಕೆ ನಾನು, ಕೆಲವೊಮ್ಮೆ ಮನೆಯಲ್ಲಿದ್ದರೆ ಅಪ್ಪ ಸಹಾಯ ಮಾಡುತ್ತಿದ್ದೆವು.

ಪುಟ್ಟ ಹುಳುಗಳಿಂದ ರೇಷ್ಮೆ ಬೆಳೆಯ ಮೊದಲ ಪಾಠ

ಅಲ್ಲಿಂದ 2-3 ದಿನಗಳೊಳಗೆ ಪುಟ್ಟ ಪುಟ್ಟ ಕಪ್ಪು ಹುಳಗಳು ಹೊರಬರುತ್ತಿದ್ದವು. ಆ ಹುಳಗಳ ಪುಟ್ಟ ಬಾಯಿಗೆ ಇಡೀ ರೇಷ್ಮೆ ಎಲೆ ತಿನ್ನಲಾಗದು. ಅದಕ್ಕಾಗಿ ಹಿಪ್ಪುನೇರಳೆ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಹಾಕಬೇಕು. ಈಗ ಅಪ್ಪ, ಅಮ್ಮ ಮತ್ತು ನಾನು ಯಾರು ಲಭ್ಯರೋ ಅವರು ಎಲೆ ಕೊಯ್ಯುವುದು ಮತ್ತು ಅವುಗಳನ್ನು ಕತ್ತರಿಸಿ ಹುಳಗಳ ಮೇಲೆ ದಿನಕ್ಕೆರಡು ಬಾರಿ ಹಾಕುವುದು ಅಮ್ಮನ ಕೆಲಸ.

ರೇಷ್ಮೆ ಹುಳುವಿನ ಜ್ವರ ಎಂದರೆ ಏನು ಎನ್ನುತ್ತೀರಾ? ವಾರಗಟ್ಟಲೆ ತಿನ್ನಲೆಂದೇ ಹುಟ್ಟಿದೆ ಎಂಬಂತೆ ಹಿಪ್ಪುನೇರಳೆ ಸೊಪ್ಪನ್ನು ತಿನ್ನುವ ರೇಷ್ಮೆ ಹುಳು ಎರಡು ದಿನ ವಿಶ್ರಾಂತಿ ತೆಗೆದುಕೊಳ್ಳುವ ಕಾಲ. ಈ ಕಾಲದಲ್ಲಿ ತಿಂದಿದ್ದು ಜೀರ್ಣಿಸಿಕೊಂಡು ತನ್ನ ಬೆಳವಣಿಗೆಯನ್ನು ಖಾತರಿಪಡಿಸಿಕೊಳ್ಳುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ತನ್ನ ಆಕಾರ ದೊಡ್ಡದಾಗಿಸಿಕೊಂಡು, ಮೇಲ್ಮೈ ಪದರವನ್ನು ಹಾವಿನಂತೆ ಕಳಚುತ್ತದೆ. ಇದನ್ನೇ ರೇಷ್ಮೆ ಜ್ವರ ಎನ್ನುತ್ತಾರೆ. ಇದು ನನಗೆ ತಿಂಗಳಿಗೊಮ್ಮೆ ಹೊರಗೆ ಕುಳಿತುಕೊಳ್ಳುವ ನನ್ನ ಮನೆಯ ಹಿರಿಯ ಹೆಂಗಸರಂತೆ ಕಾಣುತ್ತಿತ್ತು!

ರೋಗದೊಂದಿಗೆ ಹೋರಾಡಿ ಉಳಿಸಿಕೊಳ್ಳುವ ಹುಳುಗಳು

ಸುಮಾರು ಎರಡು ವಾರಗಳಲ್ಲಿ ಎರಡು ಜ್ವರ ಪಾಸಾಗಿ ಮೂರನೇ ಜ್ವರದ ಹತ್ತಿರ ಬರಬೇಕು. ಈ ಹಂತದಲ್ಲಿ ಅವುಗಳ ರಕ್ಷಣೆ ಮಾಡಿಕೊಂಡಲ್ಲಿ ರೇಷ್ಮೆ ಬೆಳೆ ಕೈಗೆ ಬಂದಂತೆ. ಆದರೆ ಬಹಳ ಸಲ ಸೂಕ್ಷ್ಮ ರೇಷ್ಮೆ ಹುಳಗಳು ಗಂಟು ರೋಗವೋ, ಇನ್ನೊಂದೊ ಎಂದು ಅರ್ಧ ಸತ್ತು ಬೀಳುವುದೇ ಹೆಚ್ಚು. ಆಗೆಲ್ಲ ಅಮ್ಮ ನೋಡಿ, ಅದಕ್ಕೆ ಔಷಧಿ ಪೌಡರ್ ಹಾಕಿ, ಉಳಿದವನ್ನು ಬದುಕಿಸಿಕೊಳ್ಳುತ್ತಿದ್ದಳು. ಯಾವ ಪೌಡರ್ ಹಾಕುತ್ತಿದ್ದಳು?… ಮರೆತು ಹೋಗಿದೆ. ಇದು ಸುಮಾರು 30 ವರ್ಷಗಳ ಹಿಂದಿನ ಮಾತು.

ಹಿಪ್ಪುನೇರಳೆಯ ಎಲೆಯಲ್ಲೂ ಅಡಗಿದ್ದ ಪಾಠ

ಇಲ್ಲಿ ಹಿಪ್ಪುನೇರಳೆಯ ಗುಣಮಟ್ಟ ಮುಖ್ಯ. ಹದವಾದ ಬಿಸಿಲಿನಲ್ಲಿ ಸಾಕಷ್ಟು ಗೊಬ್ಬರ ತಿಂದು ಬೆಳೆದ ಪೌಷ್ಟಿಕ ಎಲೆಗಳು ಹುಳಗಳ ಆರೋಗ್ಯಕರ ಬೆಳವಣಿಗೆಯನ್ನು ಖಚಿತಪಡಿಸುತ್ತವೆ. ಜೊತೆಗೆ ಹುಳಗಳನ್ನು ಸ್ವಚ್ಛ ಪರಿಸರದಲ್ಲಿ ಜೋಪಾನ ಮಾಡುವುದು ಮುಖ್ಯ.

ಸಿಬಿ ಗಿಂತಲೂ ಬಯೋಲ್ಟಿನ್ ತಳಿ ಹೆಚ್ಚು ಗಟ್ಟಿತಳಿ. ಜೊತೆಗೆ ಹೋಲಿಕೆಯಲ್ಲಿ ಹೆಚ್ಚು ಬೆಲೆ ಬಾಳುವಂತದ್ದು. ಶುದ್ಧ ಬಿಳಿ ಬಣ್ಣದ ಗೂಡು ಬಯೋಲ್ಟಿನ್ ದಾದರೆ, ಚೆಂದನೆಯ ತಿಳಿಹಳದಿ ಸಿಬಿಯದ್ದು.

ನಮ್ಮ ಮನೆಯಲ್ಲಿ ಸ್ವಚ್ಛತೆಯ ತೊಂದರೆ ಇರಲಿಲ್ಲ. ಸಗಣಿ ಸಾರಿಸಿದ ನೆಲ, ಆರಾಮಾಗಿ ಬೀಸುವ ಗಾಳಿ ಇದ್ದವು. ಇಲಿ, ಹೆಗ್ಗಣಗಳ ಕಾಟ ಇರಲಿಲ್ಲ. ಹೇಳಿದ್ದೆನಲ್ಲ, ನಮ್ಮ ಮನೆಯ ಮಾಡಿನಲ್ಲಿ ಯಾವಾಗಲೂ ಒಂದು ಕೇರೆ ಹಾವು ಓಡಾಡಿಕೊಂಡಿರುತ್ತಿತ್ತು ಎಂದು. ಆದರೆ ಹಾಕುತ್ತಿದ್ದ ಎಲೆಗಳಲ್ಲಿ ಸತ್ವ ಕಡಿಮೆ ಮತ್ತು ಮನೆಯಲ್ಲಿ ಸೀಮೆ ಎಣ್ಣೆಯ ಚಿಮಣಿ ದೀಪ, ಒಲೆ ಉರಿಯ ಹೊಗೆ ಅವುಗಳಿಗೆ ಆಗುತ್ತಿರಲಿಲ್ಲ.

ಒಂದಾದರೂ ರೋಗ, ಅದರಲ್ಲೂ ಆ ಪುಟ್ಟ ಮೆತ್ತನೆಯ ಬಿಳಿ ಹುಳಗಳ ಗಂಟಿನ ನಡುವೆ ಕೀವಿನಂತಾ ದ್ರವ ತುಂಬಿ ಗಂಟು ಗಂಟಾಗಿ ಸಾಯುವಾಗ ನನಗೆ ಕರುಳು ಕಿತ್ತು ಬರುತ್ತಿತ್ತು.

ರೇಷ್ಮೆ ಹುಳದ ಬದುಕು ಮತ್ತು ಮಹಾಭಾರತದ ಅನುಭಾವ

ಯಾಕೆ, ರೇಷ್ಮೆ ಹುಳು ಸಾಯಿಸಿಯೇ ಬಟ್ಟೆ ಮಾಡುವುದು, ಆಗ ಬೇಸರ ಇಲ್ಲವೋ ಎಂದು ನೀವು ಕೇಳಬಹುದು. ಈಗಲೇ ನೋಡಿ ನನಗೆ ಭಗವದ್ಗೀತೆ ಹತ್ತಿರ ಆಗಿದ್ದು.

ಆಗ ಭಗವದ್ಗೀತೆ ಕಂಠಪಾಠದ ತೊಂದರೆ ಇರಲಿಲ್ಲ. ವಿದ್ಯಾರ್ಥಿಗಳು ಬೇಕಿದ್ದರೆ ಓದಬಹುದಿತ್ತು. ಅಮ್ಮನಿಗೆ ಓದುವ ಹುಚ್ಚಿತ್ತು. ಅವರು ಕಾದಂಬರಿಗಳ ಜೊತೆಗೆ ಮಹಾಭಾರತವನ್ನೂ ಓದಲು ತರಿಸುತ್ತಿದ್ದರು. ನಾನು ಹೈಸ್ಕೂಲಿನ ಲೈಬ್ರರಿಯಲ್ಲಿ ಅಮ್ಮನ ಅಭಿರುಚಿಗೆ ಒಪ್ಪುವ ಕಾದಂಬರಿಗಳನ್ನು ಹುಡುಕಿ ತರುತ್ತಿದ್ದೆ. ಅವುಗಳ ಜೊತೆಗೆ ಮಹಾಭಾರತವೂ ಸೇರಿತ್ತು. ಹಾಗೆ ಅಮ್ಮನಿಗೆ ಓದಲು ತರುವ ನೆವದಲ್ಲಿ ನಾನು ಎರಡನೆಯ ಬಾರಿ ಮಹಾಭಾರತ ಓದುತ್ತಿದ್ದೆ.

ನನ್ನ ಸೊಂಪಾದ ರಾಶಿ ಕೂದಲಲ್ಲಿ ರೇಶ್ಮೆ ಹುಳಗಳಿಗಿಂತ ಸೋಂಪಾಗಿ ಹೇನುಗಳು ಬೆಳೆದಿರುತ್ತಿದ್ದವು. ಅವುಗಳನ್ನು ಅಮ್ಮ ತಾನು ಮನೆಯಲ್ಲಿದ್ದಾಗ ಹುಡುಕಿ ತೆಗೆದು ಕೂದಲು ಬಾಚಿಕೊಡುತ್ತಿದ್ದರು. ಆಗ ನನಗೆ ಅರ್ಥವಾಗದ ಕಥಾ ಭಾಗವನ್ನು ಅಮ್ಮನಲ್ಲಿ ಕೇಳಿ ತಿಳಿದುಕೊಳ್ಳುತ್ತಿದ್ದೆ. ಹೀಗೆ ಶ್ರವಣ -ಮನನ ಒಟ್ಟಿಗೆ ನಡೆದು ಒಂತರಾ ರಕ್ತಕ್ಕೆ ಅನುಭಾವ ಇಳಿದಿತ್ತು.

ಅದಕ್ಕಾಗಿ ತನ್ನ ಜೀವನ ಪ್ರಯಾಣವನ್ನು ಯಾರನ್ನೋ ಅಲಂಕರಿಸಿ ಖುಷಿ ಪಡುವಲ್ಲಿ ಮುಗಿಸಿಕೊಳ್ಳುವ ರೇಷ್ಮೆ ಹುಳದ ಬಗ್ಗೆ ಪಶ್ಚಾತ್ತಾಪ ಇತ್ತಾದರೂ ಅದರ ಬದುಕು ಸಾರ್ಥಕತೆ ಕಂಡಂತೆ ಅನಿಸುತ್ತಿತ್ತು. ಹೀಗೆ ರೋಗದೊಂದಿಗೆ ಯುದ್ಧ ಮಾಡಿ ಅಂತೂ ಉಳಿದ ಗಟ್ಟಿ ಹುಳಗಳು ಚೆನ್ನಾಗಿ ತಿಂದು ಅಪ್ಪನ ಬೆರಳಿನ ಗಾತ್ರವಾದಾಗ ನಾಲ್ಕನೇ ಜ್ವರ ಬರುತ್ತಿತ್ತು.

ಹಣ್ಣಾಗುವ ಹುಳುಗಳು, ಬದಲಾಗುವ ಬಣ್ಣಗಳು

ಈಗ ಒಂದು ವಾರವಷ್ಟೇ. ಹುಳಗಳು ಹಣ್ಣಾಗುವ ಕಾಲ ಬಂದೇ ಬಿಡುತ್ತಿತ್ತು. ಹುಳಗಳ ಒಳಗೆ ಹಸಿರೆಲ್ಲ ಕರಗಿ ದಾರವಾಗುವ ಪ್ರಕ್ರಿಯೆ ಅದು. ಬೆಳ್ಳನೆಯ ಹುಳಗಳು ಈಗ ಪಾರದರ್ಶಕವಾಗಿ ಜೇನುತುಪ್ಪದ ಬಣ್ಣಕ್ಕೆ ತಿರುಗುತ್ತಿದ್ದವು. ಈಗ ಅವುಗಳನ್ನು ಚಂದ್ರಿಕೆಗೆ ಬಿಡುವ ಕೆಲಸ.

ಚಂದ್ರಿಕೆ ಗುಡಿಸಿ, ಹಿಂದಿನ ಬೆಳೆಯ ಅವಶೇಷಗಳನ್ನು ತೆಗೆದು, ಫಾರ್ಮಾಲಿನ್ ದ್ರಾವಣದಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಬೇಕು. ಬಹಳ ಸಲ ಅಮ್ಮನಿಗೆ ಮನೆಯಲ್ಲಿ ಇರಲು ಆಗುತ್ತಿರಲಿಲ್ಲ. ಒಂದು ಅವಳಿಗೋ, ನನ್ನ ಸಹೋದರನಿಗೋ ಹುಷಾರು ಇರುತ್ತಿರಲಿಲ್ಲ. ಹಾಗಾಗಿ ಶಿರಸಿ ಹತ್ತಿರದ ಅಜ್ಜನ ಮನೆಯಲ್ಲಿ ಹುಷಾರಾಗುವ ತನಕ ಇದ್ದು ಬರಬೇಕಾಗುವುದು ಅನಿವಾರ್ಯವಾಗಿತ್ತು.

ಅಮ್ಮನಿಲ್ಲದಾಗ ಅಮ್ಮನ ಕೆಲಸವೂ ನನ್ನದೇ

ಪಾಪ, ಹೆಚ್ಚಾಗಿ ಇಂತಹ ಅನಿವಾರ್ಯ ಸಂದರ್ಭಗಳಲ್ಲೇ ಅವರಿಗೆ ಹುಷಾರು ತಪ್ಪುತ್ತಿತ್ತು. ಚಂದ್ರಿಕೆಗಳಿಗೆ ನಾನು, ಅಪ್ಪ ಮತ್ತು ನಮ್ಮ ಸಹಾಯಕಿಯ ಸಹಾಯದಿಂದ ಹುಳಗಳನ್ನು ಬಿಡುತ್ತಿದ್ದೆವು. ಅಮ್ಮ ತವರಿಂದ ಬರುವವರೆಗೆ ಗೂಡುಗಳು ಚಂದ್ರಿಕೆ ಬಿಟ್ಟು ಮಾರುಕಟ್ಟೆ ಸೇರಿ ಚಂದ್ರಕಲಾ ಇಷ್ಟಾಯಿತು, ಇಷ್ಟು ಖರ್ಚು ಮಾಡಿದೆ ಎಂಬ ಲೆಕ್ಕವಾಗುತ್ತಿತ್ತು.

ಈ ಮಧ್ಯದಲ್ಲಿ ಅಮ್ಮನಿಲ್ಲದಿದ್ದರೆ ಅಮ್ಮನ ಕೆಲಸವೆಲ್ಲ ನನ್ನದಾಗುತ್ತಿತ್ತು.

ರೇಷ್ಮೆ ಎಲೆ ಕೊಯ್ದು, ಕತ್ತರಿಸಬೇಕಾದರೆ ಕತ್ತರಿಸಿ, ಹಾಗೇ ಇಡೀ ಎಲೆ ಹಾಕಬೇಕಾದಾಗ ಇಡೀ ಎಲೆ ಹಾಕಿ ನೋಡಿಕೊಳ್ಳುವುದು, ಹುಳುಗಳ ಆರೋಗ್ಯ ನೋಡಿಕೊಳ್ಳುವುದು,

ಮನೆಯ ನೆಲವನ್ನು ಸಗಣಿ ಹಾಕಿ ಸಾರಿಸುವುದು,

ಸಾಯಂಕಾಲ, ಬೆಳಿಗ್ಗೆ ಬಾವಿಯಿಂದ ನೀರು ಸೇದಿ ಹಂಡೆ, ಬಕೆಟ್ಟು ಎಲ್ಲಾ ತುಂಬಿಸುವುದು,

ಚಿಮಣಿಗೆ ಸೀಮೆ ಎಣ್ಣೆ ಹಾಕುವುದು, ಅಡುಗೆಗೆ ಕಟ್ಟಿಗೆ ಒಟ್ಟು ಮಾಡಿಕೊಳ್ಳುವುದು,

ಒದ್ದೆ ಬಟ್ಟೆ ಒಣಗಿಸುವುದು,

ಮಧ್ಯರಾತ್ರಿ ಬರುವ ಅಪ್ಪ ಮತ್ತು ಅವರ ಗೆಳೆಯರಿಗೆ ಊಟಕ್ಕೆ ಸಿದ್ಧಪಡಿಸುವುದು,

ಒರಳು ಕಲ್ಲಿನಲ್ಲಿ ದೋಸೆಗೆ ಅಕ್ಕಿ, ಚಟ್ನಿ, ಸಾರು ಇಂತಹವುಗಳನ್ನು ರುಬ್ಬಿಕೊಳ್ಳುವುದು,

ಅಸ್ತ್ರಒಲೆಗೆ ಬೆಂಕಿ ಹೂಡಿ ಕಾಲ ಕಾಲಕ್ಕೆ ಅಡುಗೆ ಮಾಡುವುದು,

ಕೆಲವೊಮ್ಮೆ ಹಸುವಿಗೆ ಹುಲ್ಲು ಕತ್ತರಿಸುವುದು,

ರೇಷ್ಮೆ ಬೆಳೆ ಮುಗಿದ ಕಾಲದಲ್ಲಿ ಕತ್ತರಿಸಿದ ಗಿಡಗಳಿಗೆ ಸಗಣಿ ಗೊಬ್ಬರ ನೀಡುವುದು,

ಹಸುವಿನ ಹಾಲು ಕರೆಯುವುದು,

ದನ-ಕರುಗಳ ಆರೈಕೆ ಮತ್ತು ೩ ಕಿ.ಮೀ ದೂರದ ಶಾಲೆ ಮತ್ತು ಅದರ ಅಭ್ಯಾಸ, ಚಟುವಟಿಕೆಗಳು

ನನ್ನ ದಿನಚರಿಯ ಭಾಗವಾಗಿರುತ್ತಿದ್ದವು.

ಕೋಶದಿಂದ ಆಚೆಗೆ…

ಈ ರೇಷ್ಮೆ ಬೆಳೆಯ ಕಾಲದಲ್ಲಿ ಮೊದಲು ಒಂದೂವರೆ ವರ್ಷ ನನ್ನದು ಹೆಚ್ಚಿನ ಬಾರಿ ಸಹಾಯಕಿ ಪಾತ್ರವೇ. ಆಮೇಲಾಮೇಲೆ ಪೂರ್ತಿ ಜವಾಬ್ದಾರಿ ಬಂದಿದ್ದೂ ಇದೆ.

ಇದರಿಂದ ನಾನು ರೇಷ್ಮೆ ಹುಳುವಿನಂತೆ ಜ್ಞಾನವೆಂಬ ಹಿಪ್ಪುನೇರಳೆಯನ್ನು ಸದ್ದಿಲ್ಲದೇ ಮೇಯುವ ಹಾಗಾದೆ. ನನ್ನೊಳಗಿನ ಕೋಶದಿಂದ ಪ್ರತಿನಿತ್ಯ ನನ್ನ ಸುತ್ತಲೂ ಗೂಡನ್ನು ಹೆಣೆದುಕೊಂಡು ನಾನೇ ನನ್ನೊಳಗೆ ಸತ್ತು ಸದ್ದಿಲ್ಲದೆ ಒಂದೊಂದೇ ಪದರದಿಂದ ಹೊಸ ಪಾತರಗಿತ್ತಿಯಾಗಿ ಹೊರಹೊಮ್ಮಿದೆ. ಬಹುಶಃ ಈಗ ನಾನು ಹೊದ್ದುಕೊಳ್ಳುತ್ತಿರುವ ಹೊಸ ಬಟ್ಟೆ, ಹೊಸ ಜೀವನ ರೇಷ್ಮೆ ಬೆಳೆ ನನಗೆ ನೀಡಿದ ಸದ್ದಿಲ್ಲದ ಮನೋಸ್ಮೃತಿಯ ಕೊಡುಗೆ.

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment