ರಾಷ್ಟ್ರಗೀತೆಗೇಕೆ ಈ ಸಹನೆಯ ಪರೀಕ್ಷೆ? ವಂದೇ ಮಾತರಂ ಕಡ್ಡಾಯದ ಕುರಿತು ಒಂದು ಪ್ರಶ್ನೆ

ಇಂದು ಲೋಕಸಭೆಯಲ್ಲಿ ವಂದೇಮಾತರಂ ಹಾಡನ್ನು ಕಡ್ಡಾಯ ಮಾಡುವ ಮಸೂದೆ ಅಂಗೀಕಾರಕ್ಕೆ ಸಿದ್ಧವಾಗಿದೆ. ಹಾಗೊಂದು ವೇಳೆ ಅಂಗೀಕಾರವಾದರೆ ಕಾರ್ಯಕ್ರಮದ ಆರಂಭದಲ್ಲೇ ಕನಿಷ್ಟ ೨ ನಿಮಿಷ ತೆಗೆದುಕೊಳ್ಳುವ ಬಗ್ಗೆ ಯಾರೂ ಚಕಾರ ಎತ್ತುವಂತಿಲ್ಲ. ಧ್ವನಿ ಎತ್ತಿದರೆ ದೇಶದ್ರೋಹದ ಆರೋಪ ಹೊರಿಸಲಾಗುತ್ತದೆ. ಇಂತಹ ಹೊತ್ತಿನಲ್ಲಿ ನಾನು ಭಾರತೀಯಳಾಗಿ ನನ್ನ ಅಭಿಪ್ರಾಯ ದಾಖಲಿಸಿದ್ದೇನೆ. – >

ಗಾಂಧಿ, ನೆಹರು ಹೆಸರಿನ ಸಂಸ್ಥೆಗಳ ಹೆಸರು ಬದಲಾಯಿಸಲಾಯಿತು. ಹಲವು ಯೋಜನೆಗಳ ಹೆಸರುಗಳನ್ನೂ ಬದಲಿಸಲಾಯಿತು. ಈಗ ದೇಶದ ರಾಷ್ಟ್ರಗೀತೆಗೂ ಪರ್ಯಾಯವೋ, ಸ್ಪರ್ಧಿಯೋ ಸೃಷ್ಟಿಸುವ ಪ್ರಯತ್ನ ನಡೆಯುತ್ತಿರುವಂತೆ ಕಾಣುತ್ತಿದೆ.

ತಮಿಳುನಾಡು ಮುಖ್ಯಮಂತ್ರಿಯವರ ಅಧಿಕಾರ ಸ್ವೀಕಾರ ಸಮಾರಂಭದಲ್ಲೇ ಈ ಬೆಳವಣಿಗೆಯ ಮುನ್ಸೂಚನೆ ಸಿಕ್ಕಂತಾಯಿತು. ಹಿಂದೆ ಕಾರ್ಯಕ್ರಮಗಳು ಸಾಮಾನ್ಯವಾಗಿ ಪ್ರಾರ್ಥನೆಯಿಂದ ಆರಂಭವಾಗಿ, ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಗುತ್ತಿದ್ದವು. ನಂತರ ನಾಡಗೀತೆ, ರಾಷ್ಟ್ರಗೀತೆ, ಪ್ರಾರ್ಥನೆ ಎಂಬ ಕ್ರಮ ಬಂತು. ಆಮೇಲೆ ಪ್ರಾರ್ಥನೆ ಕೈಬಿಡಲಾಯಿತು; ನಾಡಗೀತೆಯಲ್ಲೂ ಕೊನೆಯ ಚರಣವನ್ನು ಮಾತ್ರ ಹಾಡುವ ಪದ್ಧತಿ ಆರಂಭವಾಯಿತು. ಈಗ ನಾಡಗೀತೆ, ವಂದೇ ಮಾತರಂ ಮತ್ತು ರಾಷ್ಟ್ರಗೀತೆ—ಮೂರಕ್ಕೂ ಕಾರ್ಯಕ್ರಮದಲ್ಲಿ ಪ್ರತ್ಯೇಕ ಸಮಯ ಮೀಸಲಿಡುವ ಸ್ಥಿತಿ ಬಂದಿದೆ.

ಧರ್ಮದ ಹೆಸರಿನ ರಾಜಕಾರಣ ನನಗೆ ಹಳೆಯ ಕಾಲದ ನನ್ನ ಪೂಜೆಯನ್ನು ನೆನಪಿಸುತ್ತದೆ. ಎಷ್ಟು ಹೊತ್ತು ಪೂಜೆ ಮಾಡಿದೆ ಎನ್ನುವುದಕ್ಕಿಂತ, ಬದುಕಿನಲ್ಲಿ ಮಾಡುವ ಕೆಲಸವೇ ಮುಖ್ಯ. ಮಾಡುವ ಕೆಲಸ ಕಡಿಮೆಯಾದಾಗಲೇ ಇಂತಹ ಸಂಕೇತಗಳ ರಾಜಕಾರಣಕ್ಕೆ ಹೆಚ್ಚು ಸಮಯ ಸಿಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ.

ಅದೇ ವೇಳೆ ನಮ್ಮ ರಾಷ್ಟ್ರಗೀತೆ ಜನ ಗಣ ಮನ ವಿಶ್ವದಲ್ಲೇ ಅನನ್ಯವಾದ ಕೃತಿ. ಸಂಸ್ಕೃತವಾಗಲಿ, ಬಂಗಾಳಿಯಾಗಲಿ ತಿಳಿಯದವರಿಗೂ ಅದರ ಭಾವ ಅರ್ಥವಾಗುತ್ತದೆ. ಅದು ಸಂಕ್ಷಿಪ್ತ, ಸಮಗ್ರ, ಸುಂದರ, ಸರಳ, ಸುಶ್ರಾವ್ಯ ಮತ್ತು ಸರ್ವಮಾನ್ಯ. ಕೇಳಿದವರ ಎದೆಯಲ್ಲಿ ರೋಮಾಂಚನ ಮೂಡಿಸಿ, ದೇಶಪ್ರೇಮವನ್ನು ಉಕ್ಕಿಸುವ ಅದ್ಭುತ ಕಾವ್ಯ.

ಅದರ ಎದುರು ಅತಿಯಾದ ಸಂಸ್ಕೃತ ಪದಗಳು, ನಿರ್ದಿಷ್ಟ ಧಾರ್ಮಿಕ ಸಂಕೇತಗಳು, ಸಂಕೀರ್ಣ ರಚನೆ ಮತ್ತು ದೀರ್ಘವಾದ ಸಾಹಿತ್ಯವನ್ನು ಹೊಂದಿರುವ ಮತ್ತೊಂದು ಗೀತೆಯನ್ನು ರಾಷ್ಟ್ರಗೀತೆಯ ಸಮಾನ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಯಾಕೆ?

ಇದು ಸಹನೆಯ ಪರೀಕ್ಷೆಯೇ?

ಅಥವಾ ನಮ್ಮದೇ ರಾಷ್ಟ್ರಗೀತೆಯ ಗೌರವವನ್ನು ಕ್ರಮೇಣ ಕುಗ್ಗಿಸುವ ಪ್ರಯತ್ನವೇ?

ಯಾಕೆ ಈ ಸಹನೆಯ ಪರೀಕ್ಷೆ? ಯಾಕಿಷ್ಟು ಅವಮಾನ ನಮ್ಮದೇ ರಾಷ್ಟ್ರಗೀತೆಗೆ?

ಶೀಲಾ ಎಸ್ ಭಟ್

ಶೀಲಾ ಎಸ್ ಭಟ್

ಪತ್ರಕರ್ತೆ | ಲೇಖಕಿ |

ಅನುಭವ, ಅಧ್ಯಯನ ಮತ್ತು ಒಳನೋಟಗಳ ಅಭಿವ್ಯಕ್ತಿ

━ ✦ ━

ಕಂಡ ಸತ್ಯಗಳ ದಾರಿದೀಪ — ಜೀವನಪ್ರಣತಿ

ಇವರ ಪ್ರಸ್ತುತಿ : ಶೀಲಾ ಭಟ್

Leave a Comment